ಕಡಲು ಹಾಡು ಹೇಳುತ್ತಿದೆ ಗೆಳೆತಿ..
ಅಮ್ಮ ಎಂದೋಡಿ ಬರುವ
ತಬ್ಬಲಿ ನದಿಗಳ ಮಡಿಲಿಗೇರಿಸಿ
ಜೋಗುಳ ಹಾಡುತ್ತಿದೆ
ಎದೆಗಪ್ಪಿ ಮುದ್ದಾಡಿ
ಒಡಲು ತುಂಬಿಸುತ್ತಿದೆ...!
ಕಡಲಿಗೆ ಕಣ್ಣೀರಿದೆ ಗೆಳತಿ...!
ನಿರಂತರ ಬಿಕ್ಕಳಿಸುವ ಅಲೆಗಳಲಿ
ನನ್ನ-ನಿನ್ನ ಕಣ್ಣೀರಿದೆ
ಅಂತರಂಗದ ದುಃಖ್ಖಗಳಿದೆ
ಹೇಳಲಾಗದ ಕಥೆಗಳನು
ಕಿನಾರೆಯಲಿ ಬಿಚ್ಚಿಡುತ್ತಿದೆ
ಕಡಲು ಕವಿತೆಯಾಗುತ್ತಿದೆ ಗೆಳತಿ..!
ಸಂಜೆ ಬಸವಳಿದ ಸೂರ್ಯನಿಗೆ
ಮಂಚವಾಗುತ್ತಿದೆ
ಕತ್ತಲು ಕಂಬಳಿ ಹಾಸುತ್ತಿದೆ
ಕುಣಿದು ಕುಪ್ಪಳಿಸುವ ಅಲೆಗಳು
ಗಾಳಿ ಛಾಮರವಾಗುತ್ತಿದೆ
ಕಡಲಿಗೆ ಕೋಪವಿದೆ ಗೆಳತಿ..!
ಶುದ್ಧ ನೀರಲೆಗಳ ಮೇಲೆ
ಮಾನವನ ದಾಳಿಗೆ ಮುನಿದು
ಮೌನ ಮುರಿಯುತ್ತಿದೆ
ಒಡಲ ಉರಿ ಭುಗಿಲೆದ್ದು
ರುಂಡ-ಮುಂಡಗಳ ನುಂಗುತ್ತಿದೆ.
ಕಡಲಿಗೆ ಮಮತೆಯಿದೆ ಗೆಳತಿ.
ಒಡಲೊಳಗೆ ಉಸಿರಾದ
ಕೋಟಿ ಕಣ ಜೀವಗಳಿಗೆ
ಮೊಲೆ ಹಾಲುಣಿಸುತ್ತಿದೆ
ಕಿರಿದು ನೆಲವ ನುಂಗದೆ
ಜೀವಗಳ ಕಾಪಿಡುತ್ತಿದೆ
---------------------------------------------------------------------
-ರವಿ ಮೂರ್ನಾಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ