ಶುಕ್ರವಾರ, ಜನವರಿ 4, 2013

ಜೀತಕ್ಕೆ ಬಿದ್ದ ಸಂಗೀತದ ಸ್ವರಗಳು!

("ಸಂಗೀತ ಕಲಿಸಿ ಕೊಡಿ ಎಂದ ಬಾಲಕ" ಅಂತಿಮ ಭಾಗ-೫)
ರಂಗನ ಮುಖದಲ್ಲಿ ಅವನ ಐವತ್ತು ಪೈಸೆ ಸಿಕ್ಕಿದ ತೃಪ್ತಿಯಿದೆ. ಅಂಗಿಯ ಒಂದು ತುದಿಯನ್ನು ಎತ್ತಿ ಎಣ್ಣೆ ಜಿಡ್ದಿನ ಸುವಾಸನೆಯನ್ನು ಮತ್ತೊಮ್ಮೆ ಮೂಸಿ ನೋಡುತ್ತಿದ್ದ. ಮೆಟ್ಟಿಲಿಳಿಯುತ್ತಿದ್ದ ಹೆಜ್ಜೆಗಳು ಎರಡೆರಡು ಬಾರಿ ಕತ್ತು ತಿರುಗಿಸಿದವು. ರಸ್ತೆಗೆ ಅಳತೆ ಮಾಡುತ್ತ ಕಂಗಳು ಉದ್ದವಾಗ ತೊಡಗಿದವು. ಮನಸ್ಸು ಕಾಲೊಳಗೆ ನುಸುಳಿ ರಸ್ತೆಗೆ ಪಲ್ಲಟಗೊಳ್ಳುತ್ತಲೇ ಇದೆ. ಸಂಗೀತ ಮೇಷ್ಟ್ರ ಒಂದು ತಿಂಗಳ ಮೂವತ್ತು ರೂಪಾಯಿಗಳ ಕನಸುಗಳು ಇಕ್ಕೆಲೆಗಳಲ್ಲಿ ಗಿರಾಕಿಗಳನ್ನು ಕರೆಯುತ್ತಿದ್ದ ವ್ಯಾಪಾರಿಗಳ ಕೈಯೊಳಗೆ ಮಿರಮಿರನೇ ಬೆಳಗ್ಗಿನ ಬಿಸಿಲಿಗೆ ಮಿಂಚಿ ಮಾರಾಟಕ್ಕೆ ಕರೆಯುತ್ತಿವೆ. ಜೇಬೊಳಗೆ ಸೊಂಟ ಮಡಚಿದ ಹತ್ತು ರೂಪಾಯಿಗೆ ಮುಟ್ಟಿ ನೋಡಬೇಕೆನಿಸಿತು. ಕೈ ನೋಡಿದ ಒದ್ದೆಯಿದೆ. ಚಡ್ದಿಗೆ ಒರೆಸಿಕೊಂಡಾಗ ಬೆವರು ಸ್ವಚ್ಚವಾಯಿತು. ಆಚೆ ಬದಿಯಲ್ಲಿ ಹಿಂದೆ, ಈಚೆ ಬದಿಯಲ್ಲಿ ಮುಂದೆ ಸಾಲು ಸಾಲಾಗಿ ಹಾದು ಹೋಗುತ್ತಿದ್ದವು ವಾಹನಗಳು. ರಸ್ತೆ ಬದಿಗೆ ನಿಂತು  ಹಿಂದೆ ಮುಂದೆ ನೋಡಿದ. ತೂರಿಕೊಳ್ಳಲು ಇಕ್ಕಟ್ಟಿನ ಸಂದುಗಳು ಬಿರಿದಾಗುತ್ತಿವೆ. ಸಂದು ಸಿಕ್ಕಿದ ರಸ್ತೆಗೆ ಧೈರ್ಯ ಮಾಡಿ ಒಂದೇ ಓಟ. ಅಬ್ಬಾ ! ಅಂಗಡಿಯ ಮುಂದೆ ತಲೆ ಎತ್ತಿದ. 
ಇದೇ ಕನಸು ಕಟ್ಟಿದ ಗೂಡು. ಎಲ್ಲವನ್ನೂ ತೊರೆದು ಬಂದ ಬೀದಿ ಹಕ್ಕಿ ಹೊರಗಿನಿಂದ ಮತ್ತೆ ಮತ್ತೆ ಕತ್ತು ಕೊರಳಿಸಿ ನೋಡುತ್ತಿತ್ತು. ಗೂಡಿಗೆ ಮೆಟ್ಟಿಲಿದೆ. ಮೆಲ್ಲೆನೆ ಹೆಜ್ಜೆಯಿಕ್ಕಿ ಒಳ ಹೊಕ್ಕಿತು. ಹೊಲಿಗೆ ಯಂತ್ರದ ಗಾಲಿ ಚಕ್ರಗಳು ವೇಗವಾಗಿ ತಿರುಗುತ್ತಿದೆ. ಅದರ ತಿರುಗಾಟವನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿದ. ಗುಂಡಿ ಬಿಟ್ಟ ಅಂಗಿಗೆ ಎಡದ ಕೈ ಎತ್ತಿ ಮತ್ತೆ ಮತ್ತೆ ಬೆತ್ತಲೆ ಎದೆ ಮುಚ್ಚಿ ಅವನ ಮುಂದೆ ನಿಂತ. ಚಕ್ರದ ವೇಗಕ್ಕೆ ಸ್ಪರ್ಧಿಸಿ ತನ್ನೆರಡು ಕಾಲುಗಳನ್ನು ಮತ್ತಷ್ಟು ಹೊಲಿಗೆ ಯಂತ್ರದ ಬುಡಕ್ಕೆ ಒದೆಯುತ್ತಾ ವೇಗ ಹೆಚ್ಚಿಸಿ ಆ ಮನುಷ್ಯ ಕತ್ತೆತ್ತಿದ. ಆ ಕಣ್ಣುಗಳಲಿ ಅಸ್ಪಷ್ಟ ಚಲನೆಗಳಿವೆ. ರೆಪ್ಪೆ ಮಿಟುಕಿಸಿದ ಕಣ್ಣಂಗಳದ  ಮಧ್ಯೆ ಗೊಂಬೆಗಳು ಕಪ್ಪಾಗಿ ಚಲಿಸುತ್ತಿವೆ. ಅದಾಗಲೇ, ಮೂಗಿನ ಕೆಳಗೆ ಪೊದರು ಮೀಸೆ ಮುಚ್ಚಿದ ತುಟಿಗಳು ಬಿಚ್ಚಿ ಗಂಟಲಿಂದ ಒಂದು ಗಡಸು ಸ್ವರ ಹೊರಡುತ್ತಿದೆ . ಕನಸುಗಳು ಮಾತಾಡುತ್ತಿವೆಯೋ? ಹೌದು ಮಾತಾಡುತ್ತಿವೆ...

"ಅಹಾ ! ನಿನ್ನನ್ನೇ ಕಾಯುತ್ತಿದ್ದೆ, ಬಾ ’
ಆ ಅಂಗಡಿಯ ಮೂಲೆಗೆ ಕುಳಿತ ಮರದ ಖುರ್ಚಿಯನ್ನು ಮತ್ತೊಮ್ಮೆ ನೋಡುತ್ತಿದ್ದವು ಇವನ ಕಂಗಳು. ಕನಸು ತೆರೆದ ಅದರ ರೆಪ್ಪೆ ಮತ್ತೆ ತೆರೆದು ಅವನನ್ನೇ ನೋಡುತ್ತಿದ್ದವು. ರಸ್ತೆ ತೊರೆದ ಅಂಗಡಿಯಿಂದ ಹೊರಟ ಆ ವ್ಯಕ್ತಿಯ ಹಿಂದೆಯೇ ಹಾಕಿದ ಹೆಜ್ಜೆಗೆ ಹೆಗಲ ಚೀಲ ಹಿಂದೆ ಮುಂದೆ ಅಲ್ಲಾಡುತ್ತಿದ್ದವು. ಅರುಣಾ ಸ್ಟೋರಿನ ಮುಂಭಾಗ ಏಲಕ್ಕಿ ಮಾರಾಟದ ಅಂಗಡಿ. ಏಲಕ್ಕಿ ಸುವಾಸನೆ, ಕರಿಮೆಣಸು,ಶುಂಠಿಯ ಖಾರ ಹಸಿಹಸಿಯಾಗಿಯೇ ಮೂಗಿಗೆ ಬಡಿಯುತ್ತಿವೆ . ಹರಟೆ ಹೊಡೆಯುತ್ತಿದ್ದಾರೆ ಕೆಲವರು . ಅಂಗಡಿಯ ಪಕ್ಕದ ಸಂದಿನ ಇಕ್ಕಟ್ಟಿನ ಏಣಿ ಮೆಟ್ಟಲಿಗೆ ಅವನು ಹತ್ತುತ್ತಿದ್ದ. ಮತ್ತೆ ತಿರುಗಿ ನೋಡಿದ.  ಸವೆದ ಹವಾಯಿ ಚಪ್ಪಲಿನಲ್ಲಿ ಹೆಜ್ಜೆಗೆಗಳು ಸ್ವಲ್ಪ ಸ್ವಲ್ಪವೇ ಕಾಣುತ್ತಿದೆ. ಅದನ್ನೇ ಹಿಂಬಾಲಿಸಿ ಏಣಿ ಮೆಟ್ಟಲಿಗೆ ಹೆಜ್ಜೆಯಿಡುತ್ತಿದ್ದಂತೆಯೇ ಅಲ್ಲೆಲ್ಲಾ  ಕತ್ತಲೇ. ಅವನೆಲ್ಲಿ ?. ಸ್ವಲ್ಪ ನಿಂತ. ಮತ್ತೆ ಹಿಂದೆ ನೋಡಿದ. ಇದ್ದ ಧೈರ್ಯವನ್ನು ಒಟ್ಟುಗೂಡಿಸಿ ಮುಂದೆ ನೋಡಿದ. ಮತ್ತಷ್ಟು ಹೆಜ್ಜೆ ಸೇರಿಸಿ ಹತ್ತುತ್ತಲೇ ಇದ್ದ. ಅಹಾ ! ಸ್ವಲ್ಪ ಬೆಳಕಿದೆ. ಬಟ್ಟೆ ಹೊಲಿಯುತ್ತಿದ್ದ ಇನ್ನೊಬ್ಬ ಮನುಷ್ಯನ ಮುಂದೆ ನಿಂತಿದ್ದಾನೆ. ನಾಲ್ಕು ತುಟಿಗಳು ಅಲುಗಾಡುತ್ತಿದ್ದವು. ಕೇಳಿಯೂ ಕೇಳಿಸದಂತಹ ಸ್ವರಗಳು. ಹೌದು ಕೇಳಿಸುತ್ತಿವೆ...!
ಅಸ್ಪಷ್ಟತೆಗಳು ತೆರೆಯುತ್ತಾ ಸಾಗಿದವು. ಅವುಗಳ ದಾರಿಯಲಿ ಕಪ್ಪು ಆಕೃತಿಗಳು ತೆರೆದುಕೊಳ್ಳುತ್ತಿವೆ. ಮತ್ತೊಬ್ಬನ ಮುಖದಲ್ಲಿ ಕಿಟಕಿಯಿಂದ ತೂರಿಬಂದ ಬೆಳಕಿನ ಮಂದವಿದೆ. ಬಟ್ಟೆಗೆ ಗುಂಡಿ ಹೊಲಿಯುತ್ತಿದ್ದಾನೆ. ಮತ್ತೊಮ್ಮೆ ಚೀಲ ಮುಟ್ಟಿ ನೋಡಿದ. ಅಹಾ! ತುಂಬಿಯೇ ಇದೆ.. ಸ್ವಲ್ಪ ಬೆವರಿದೆ. ಇಲ್ಲಿ ಒದ್ದೆಯಾಗಿದೆ. ಕೈಯೆತ್ತಿ ನೋಡಿದ, ಹೌದು ಅಲ್ಲಿ ಒದ್ದೆಯೇ ಇದೆ.

ಇಕ್ಕಟ್ಟಿನ ಅಂಗಡಿಯಲ್ಲಿ ಕಿಟಕಿ ಇಣುಕಿದರೂ ರಸ್ತೆ ಕಾಣದಂತಹ ಅಡ್ಡಲಾದ ಸರಳುಗಳು. ತಲೆಯಿಂದ ಪಾದದವರೆಗೆ ನೋಡಿದ ಅವನು ಗುಂಡಿ ಬಿಟ್ಟ ಅಂಗಿಗೆ ಮತ್ತಷ್ಟು ಅಲ್ಲಿಯೇ ದಿಟ್ಟಿಸಿಯೇ ನೊಡುತ್ತಿದ್ದ. ಎರಡು ಗುಂಡಿಯಿಲ್ಲದ ಬೆತ್ತಲೆ ಎಲುಬಿನ ಎದೆಗೆ ಕೈ ಮುಚ್ಚಿದ . ಮಸಿ ಇದೆ. ಪಾಪ್ಯುಲರ್ ಹೋಟೆಲಿನ ಹಿಂಭಾಗದ ಕಲ್ಲುಹಾಸಿಗೆ ಸೀಗೇ ಕಾಯಿ ಹಾಕಿ ಒಗೆದರೂ ಹೋಗದ ಕಪ್ಪುಗಳು. ಅದನ್ನೇ ಇನ್ನಷ್ಟು ಎವೆಯಿಕ್ಕದೆ ನೋಡಿದ. ಮತ್ತೆ ರೆಪ್ಪೆ ಅಲುಗಾಡಿಸಿ ತುಟಿಗಳು ತೆರೆಯತೊಡಗಿದವು. ಸ್ವರಗಳು ಕಿವಿಗೆ ಕೇಳುತ್ತಿದ್ದವು....
" ಓಹೋ ಈ ಹುಡುಗನೋ. ಎಲ್ಲಿಯವನಪ್ಪಾ ನೀನು?"
"ಮೂರ್ನಾಡಿನ ಕೊಂಡಂಗೇರಿಯವನು"
ಸುಳ್ಳು ಹೇಳುತ್ತಿದ್ದಿಯೇನೋ? ಇಲ್ಲ ಸತ್ಯವಿದ್ದರೂ ಹೇಳಲಾಗದ ಸುಳ್ಳಿಗೆ ನೈತಿಕತೆ ತುಂಬಿಸುತ್ತಿದ್ದೇನೆ. ಮಾಮನ ಪರಿಚಯವಿದ್ದರೋ? ಹೇಳಿದ ದಾಟಿಯ ಗಡಸು-ವೇಗದಲ್ಲಿ ಪ್ರಶ್ನೆ ಕೇಳಿದವನು ಸುಮ್ಮನಾದ. ಆ ಕತ್ತಲೆ ಓಣಿಯಲ್ಲಿ ದಡ-ಬಡ ಸದ್ದುಗಳು ಕೇಳುತ್ತಿವೆ. ಮೆಲ್ಲೆಗೆ ಕತ್ತು ತಿರುಗಿಸಿದ್ದಾನೆ. ಒಬ್ಬಾತ ಮೂರು ಕಪ್ ಕಾಫಿ ತರುತ್ತಿದ್ದ ಜೀನತ್ ಹೋಟೆಲಿನಿಂದ.  ಇವನ ಹಾಗೆಯೇ ಇದ್ದಾನೆ ಮೂಗಲ್ಲಿ ಗೊಣ್ಣೆ ಸುರಿಸುತ್ತಾ. ಅಂಗಿಯಲ್ಲಿ ಮೂರು ಗುಂಡಿಗಳು ಕಳಚಿ ಎದೆ-ಹೊಟ್ಟೆ ಒಂದಾಗಿದೆ. ಎದುರುಬದುರು ಕುಳಿತ ಅವರು ತಮ್ಮತಮ್ಮೋಳಗೇ ನೋಡುತ್ತಾ  ಅವರವರ ಕಾಫಿ ಕಪ್ ತೆಗೆದುಕೊಂಡರು. ಮತ್ತೊಂದೋ ? ಆ ಅವನಂತಹ ಗೊಣ್ಣೆ ಸುರುಕ ಅವರನ್ನೇ ಕೇಳುವಂತೆ ನೋಡುತ್ತಿದ್ದಾನೆ.
" ಆ ಹುಡುಗನಿಗೆ ಕೊಡು. ಕಾಫಿ ಕುಡಿಯಪ್ಪಾ"
ಚೀಲ ಬಿಡದ ಕೈಗಳನ್ನು ಬಗಲಿಗೆ ಒತ್ತಿ ಹಿಡಿದು, ಕಾಫಿ ತುಂಬಿದ ಇಪ್ಪತ್ತು ಗ್ರಾಂ. ತೂಕದ ಸ್ಟೀಲ್ ಕಪ್ ಹಿಡಿಯಲು ಮುಂದೆ ಹೋಯಿತು ಇಷ್ಟಗಲದ ಪುಟ್ಟ ಎದೆ.  ಬೆರಳು ಮಡಚಿ ಭದ್ರವಾಗಿ ಪಕ್ಕಕ್ಕೆ ಎಳೆದುಕೊಂಡ.  ಖಾಲಿ ಹೊಟ್ಟೆ ಅದೇ ಹಗುರಕ್ಕೆ ಭಾರದ ಶಬ್ದ ಹೊರಡಿಸುತ್ತಿದೆ. ಬಿಸಿ ಹಗುರವಾಗಿದೆ. ಆ ಗೊಣ್ಣೇ ಸುರುಕ ಅವನನ್ನೇ ಎಲ್ಲೋ ಪರಿಚಯದ ಮುಖದಂತೆ ನೋಡುತ್ತಿದ್ದ. ಇವನು ತಲೆ ಕೆಳಗಾನಿಸಿ ಕಾಫಿ ಕಪ್ಪಿನ ಬಾಯಿಗೆ ತುಟಿಯಿಟ್ಟು ಎಳೆ ಎಳೆಯಾಗಿ ಗಂಟಲಿಗೆ ಇಳಿಸತೊಡಗಿದ. ಬಿಸಿಯಿದೆಯೇ ? ಆಹಾ ! ಇದೆ. ಕಣ್ಣುಗಳು ಸಿಪ್ಪೆ ಬಿಟ್ಟ ಮಣ್ಣಿನ ನೆಲವನ್ನೇ ನೋಡುತ್ತಿವೆ. ರೆಪ್ಪೆಗಳು ಮತ್ತೆ ತೆರೆ ತೆರೆಯುತ್ತಾ ಮುಚ್ಚುತ್ತಾ ಮಣ್ಣಿನ ಸಿಪ್ಪೆಗಳ ಶೂನ್ಯವನ್ನೇ ತುಂಬಿಸ ತೊಡಗಿದವು.
"ಟೈಲರಿಂಗ್ ಕೆಲಸ ಬರುತ್ತದೆ..ಬಟ್ಟೆಗೆ ಗುಂಡಿ ಹಾಕುತ್ತಾನೆ. ಸಂಗೀತ ಕಲಿಯಬೇಕಂತೆ"
ಸಂಗೀತ ಕಲಿಯಬೇಕು.ಈ ಇಕ್ಕಟ್ಟಿನ ಕೋಣೆಯನು ಸ್ವರಗಳು ದೊಡ್ಡದು ಮಾಡಬೇಕು. ದಿನಕ್ಕೆ ಒಂದು ರೂಪಾಯಿ ಕೊಟ್ಟರೆ ಸಾಕು. ಸ್ವರಗಳು ಮೂವತ್ತು ದಿನಗಳಿಗೆ ಮೂವತ್ತಾಗುವುದು. ಪಾಪ್ಯುಲರ್ ಹೋಟೆಲಿನಿಂದ ಹೆಜ್ಜೆಯಿಕ್ಕಿದಾಗ ಎಲ್ಲೆಲ್ಲೂ ಜನಗಳೇ. ಯಾರಲ್ಲಿ ಸಂಗೀತ ಮೇಷ್ಟ್ರು ? ಮೂರ್ನಾಡಿನ ಬಾಬಣ್ಣ ಹಾರ್ಮೋನಿಯಂ ಮೀಟಿದರು. ತಬಲ ಚಂದ್ರಣ್ಣ ತಬಲ ಹಿಡಿದರು. ಸುತ್ತಲೂ ಎವೆಯಿಕ್ಕದೇ ನೋಡುತ್ತಿದ್ದ ಮತ್ತಷ್ಟು ಜನರು. ಪಕ್ಕನೇ ಒಂದು ಹಾಡು ಮನದೊಳಗೆ ಮೆಲುಕು ಹಾಕಿದ . " ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ,ಚಂದ್ರ ಮೇಲೆ ಬಂದ".

ಆ ಸಂಜೆಗತ್ತಲೆಯಲ್ಲಿ ಮಿನುಗು ನಕ್ಷತ್ರಗಳ ಹಿಂಡಿನಿಂದ ಒಂದು ನಕ್ಷತ್ರದ ತುಣುಕಿನ ಹೊಳಪು ಜಾರಿ ಬಿದ್ದ ನೆನಪು !. ಅಯ್ಯೋ..ಕಪ್ಪು ನಕ್ಷತ್ರ !. ರಾಶಿ ಬಟ್ಟೆಗಳೆಡೆಯಲ್ಲಿ ಕತ್ತರಿ ಸಿಕ್ಕಿಸಿದ ಕತ್ತಿಯಲಗಿನ ಬಾಯಿಗಳು. ಬಟ್ಟೆ ಗುಂಡಿಗಳಿಗೆ ಚೂಪು ಸೂಜಿ ಚುಚ್ಚಿ ನಕ್ಷತ್ರ ಬಿಡಿಸುತ್ತಿದ್ದ ಬೆರಳುಗಳು. ಅಂಗೈಯೊಳಗೆ ಪ್ರಶ್ನೆ ಕೇಳುತ್ತಿವೆ ಗೀಚಿ ಕುಳಿತ ನಕ್ಷತ್ರ ರೇಖೆಗಳು . ಯಾರು ಈ ಚಿತ್ರ ಬಿಡಿಸಿದ ಕಲೆಗಾರ ?!
ಹೊತ್ತು ತಂದ ಹೆಜ್ಜೆಗಳನ್ನು ನೆನಪು ಬಿಡದಂತೆ ಹೊಸಕಿ ನಡೆದು ಹೋಗುತ್ತಿದ್ದಾನೆ  ಆ ಮನುಷ್ಯ. ಕತ್ತಲೆಯ ಕಂಗಳಲ್ಲಿ ಕನಸು ಕರೆದ ಅಂಗಡಿಯ ಮರದ ಕುರ್ಚಿಗೆ ಮೆಲ್ಲೆನೆ ತೆರೆದ ಕಣ್ಣುಗಳು ಮುಚ್ಚಿಕೊಳ್ಳುತ್ತಿವೆ. ಏಣಿ ಮೆಟ್ಟಲಿನಲ್ಲಿ ಅವನು ಕತ್ತಲೇ ಸೀಳುತ್ತಾ ಇಳಿದು ಹೋಗುತ್ತಾ ಇದ್ದ. ಮತ್ತೆ ಅಲ್ಲೆಲ್ಲಾ ಕತ್ತಲೆ !. ಹೌದು! ಕಣ್ಣು ಮುಚ್ಚಿದ ಕುರ್ಚಿ ಮಬ್ಬಾಗಿದೆ. . ಕತ್ತಲೆಗೆ ಬಣ್ಣ ಎರಚಿ ಬೆಳ್ಳಗೆ ಬೆಳಗಿದ ಬೆಳಕಿನ ಹಗಲುಗಾರ. ಅಲ್ಲೆಲ್ಲಾ ಕತ್ತಲೆ-ಬೆಳಕಿನ ನಾಯಕನ ಹುಡುಕಾಟ ! ಯಾರು ಯಾರು ...?!
ಹಾಗಂತ ಪ್ರಶ್ನೆಗಳು ನೂರಾಗುತ್ತಿದ್ದಂತೆ ಹೊಟ್ಟೆ "ಹಸಿವು" ಎನ್ನುತ್ತಿದೆ ಮತ್ತೊಂದು ಉತ್ತರ. ಮಧ್ಯಾಹ್ಯ ಎರಡು ಗಂಟೆ.! ಗಡಿಯಾರದ ಶಬ್ಧಕೆ ಕಿವಿಯ ಕಣ್ಣು ತೆರೆದ . ಮತ್ತೆ  ಕೆಳಬಿಟ್ಟ ಕಣ್ಣುಗಳಲ್ಲಿ ಅಂಗಿ ಗುಂಡಿಗೆ ನಕ್ಷತ್ರದ ಕಣ್ಣು ತೆರೆಯತೊಡಗಿದ !. ಕತ್ತಲೆ ಏಣಿ ಮೆಟ್ಟಿಲಿನಲ್ಲಿ ಹೀಲ್ಡ್ ಚಪ್ಪಲಿ ಮೆಟ್ಟಿದ ಶಬ್ಧ ಕೇಳುತ್ತಿದೆ. ತಾಳ ಬಿಟ್ಟು ರಿಂಗಣಿಸುವ ಗೆಜ್ಜೆ ಸ್ವರ ! ಕೈಯಲ್ಲಿ ಬ್ಯಾಗು,ಬೆರಳಿಗೆ ಪುಟ್ಟ ಕೈ ಬಿಗಿದು ಆ ಹೆಂಗಸು-ಮಗು ಏಣಿ ಮೆಟ್ಟಿಲು ಹತ್ತಿ ಬರುತ್ತಿದ್ದಾರೆ. ಮಗು ಬಂದದ್ದೇ ಇವನನ್ನೇ ದುರುಗುಟ್ಟಿ ನೋಡ ತೊಡಗಿತು. ಇವನು ಯಾರು ಹೊಸ ನಕ್ಷತ್ರ ಬಿಡಿಸುವ ಚಿತ್ರಗಾರ?!. ಅದರ ಕಣ್ಣುಗಳು ಹಾಲಿನಲ್ಲಿ ನೆನೆ ಬಿದ್ದ ದ್ರಾಕ್ಷಿ ಹಣ್ಣಿನಂತೆ ಹೊಳೆಯುತ್ತಿದೆ.  ಬ್ಯಾಗು ಕೆಳಗಿಟ್ಟು, ಒಮ್ಮೆ ಮೂಗಿಗೆ ಅಂಗೈ ಉಜ್ಜಿ , ಬಟ್ಟೆ ಹೊಲಿಯುತ್ತಿದ್ದ ಆ ಮನುಷ್ಯನ ಪಕ್ಕಕ್ಕೆ ನಿಂತಳು ಆ ಹೆಂಗಸು. ಇದು ಹೆಂಡತಿ ! ಅದು ಗಂಡ ! ಇವನನ್ನೇ ನೋಡಿದ ಇವರ ಮಗುವಿಗೆ ವರ್ಷ ನಾಲ್ಕು ! ಸ್ಪರ್ಧೆಗೆ ನಿಂತಿದೆ. ! ಕುಪ್ಪಳಿಸುತ್ತಿದ್ದ ಕಾಲು ಎತ್ತಿ ಹೊಲಿಯುತ್ತಿದ್ದ ಬಟ್ಟೆಯನು ಒಮ್ಮೆಗೇ ಎಳೆಯಿತು. ನಕ್ಷತ್ರ ಬಿಡಿಸುತ್ತಿದ್ದ ಸೂಜಿ ಪಕ್ಕನೇ ಕಿರು ಬೆರಳಿಗೆ ಚುಚ್ಚುತ್ತಿದೆ. ಅಮ್ಮಾ.. ಎಂದ ಸ್ವರ ಒಳಗೆ ಅವುಚಿಕೊಂಡಿತು. ಹೊಟ್ಟೆ ಹಸಿಯುತ್ತಿದೆ ಎಂದು ಹೇಳಬೇಕಿತ್ತು.
ಬ್ಯಾಗು ತೆರೆದ ಆ ಹೆಂಗಸು ನೀರು ತುಂಬಿದ ಗಾಜಿನ ಬಾಟಲು, ಮುಖ ತುಂಬಿ ಮುಚ್ಚಿದ ಅನ್ನದ ಟಿಫನ್ ಬಾಕ್ಷ್ ತೆರೆದು ಗಂಡನ ಮುಂದಿಟ್ಟಳು. ಹೊಲಿಯುತ್ತಿದ್ದ ಕುರ್ಚಿ ಬಿಟ್ಟೆದ್ದ ಅವನು ಒಮ್ಮೆ ಜೋರಾಗಿ ಕೆಮ್ಮಿದ ಗಂಟಲು ಸರಿಪಡಿಸಿ ಕೆಮ್ಮಲು. ಕೈ ತೊಳೆದು ನಿಧಾನವಾಗಿ  ಚಮಚ ಅನ್ನಕ್ಕೆ ತಿರುಗಿಸಿ ಬಾಯಿಗೆ ತುಂಬಿಸ ತೊಡಗಿದ. ಮಗು ಅಡ್ಡಾದಿಡ್ಡಿ ಕೋಣೆ ತುಂಬಾ ಓಡಾಡುತ್ತಾ ಒಮ್ಮೆ ಇವನ ಪಕ್ಕ ಉಜ್ಜುತ್ತಾ ಅವನ ಕೈಯ ಬಾಯಿಗೆ ತುಟಿ ತೆರೆಯುತ್ತಿತ್ತು. ಹೊಟ್ಟೆ ಹಸಿಯುತ್ತಿತ್ತು. ನಕ್ಷತ್ರ ಬಿಡಿಸುವ ಕೈಗಳು ತರಗುಟ್ಟ ತೊಡಗಿದವು.

"ಈ ಹುಡುಗ ಓದಿದ್ದಾನ ?"
ಆರನೇ ಕ್ಲಾಸು, ಸಂಗೀತ ಕಲಿಯಬೇಕಂತೆ. ದಿನಕ್ಕೆ ಒಂದು ರೂಪಾಯಿ ಕೊಟ್ಟರೆ ಸಾಕಂತೆ. ಹೊಟ್ಟೆ ಹಸಿಯುತ್ತಿದೆ. ಬೆವರು ಒಂದೊಂದಾಗಿ ಇಳಿಯ ತೊಡಗಿದವು. ಆ ಹೆಂಗಸು ಮತ್ತೊಮ್ಮೆ ಮುಖ ನೋಡುತ್ತಿದ್ದಾಳೆ. ಮೂಗಿನ ಮೇಲೆ ಸಣ್ಣ ಮಚ್ಚೆ ಇನ್ನಷ್ಟು ದೊಡ್ಡದಾಗಿ ಕಪ್ಪು ಕಾಣುತ್ತಿದೆ. ಗಂಡ ತಿಂದುಳಿದ ಅನ್ನದ ಬಾಕ್ಷ್ ಹಿಡಿದು ಅವನ ಪಕ್ಕಕ್ಕೆ ಮುಂದೆ ಬಂದಳು. ನಕ್ಷತ್ರ ಬಿಡಿಸುತ್ತಿದ್ದವನು ಅದನ್ನೇ ನೋಡುತ್ತಿದ್ದ. ಮತ್ತೆ ಹೆಂಗಸಿನ ಮುಖ ನೋಡಿದ. ಇವನ ಪಕ್ಕದಲ್ಲಿ ಇಟ್ಟು ಕಿಟಕಿ ಸರಳುಗಳೆಡೆಗೆ ಎಲ್ಲೋ ನೋಡುತ್ತಿದ್ದಳು. ಮತ್ತೆ ನಕ್ಷತ್ರ ಬಿಡಿಸುತ್ತಿದ್ದ. ಮತ್ತೆ ತಿರುಗಿ ನೋಡಿದಳು.
"ಅದು ನಿನಗೆ ಇಟ್ಟ ಅನ್ನ"
ಬಟ್ಟೆಯನ್ನು ಪಕ್ಕನೇ ಬದಿಗಿಟ್ಟು.ಗಬಗಬನೇ ಬಾಕ್ಷಿನೊಳಗೆ ಬಾಚತೊಡಗಿದವು ಕೈಗಳು. ತಳ ನೋಡಿದಾಗ ಗೊತ್ತಾಯಿತು ಅಲ್ಲಿದ್ದದ್ದು ಎರಡೇ ತುತ್ತಿನ ಅನ್ನದ ಅಗಳುಗಳು. ಬೆರಳಿಗೆ ಅಂಟಿದ್ದ ಅನ್ನದ ಮೈಲಿಗೆಯನ್ನು ಲೊಚ ಲೊಚನೆ ನೆಕ್ಕ ತೊಡಗಿದವು ನಾಲಗೆ ತುಟಿಗಳು. ಅವರೆಲ್ಲರೂ ಕೆಕ್ಕರುಗಣ್ಣಿನಲ್ಲಿ ನೋಡುತ್ತಿದ್ದಾರೆ. ಪಾಪ್ಯುಲರ್ ಹೋಟೆಲಿನ ಹಿಂಭಾಗದ ಮಬ್ಬು ಕತ್ತಲಲ್ಲಿ ಒಣಗಿದ ಚಪಾತಿ ತಿನ್ನುತ್ತಿದ್ದ ಭಿಕ್ಷುಕಿ ಹಾಗೇ ಕಣ್ಣಂಚಿನಲ್ಲಿ ಹಾದು ಹೋಗುತ್ತಿದ್ದಾಳೆ. ಆ ಬಾಕ್ಷನ್ನು ಹಾಗೇ ಮುಚ್ಚಿ ಅವರನ್ನೇ ನೋಡುತ್ತಿದ್ದ. ತಳ ಕಂಡ ಗಾಜಿನ ಬಾಟಲಿನ ನೀರಿನಲ್ಲಿ ಕೈತೊಳೆದು, ಅಲ್ಲಿದ್ದ ಬ್ಯಾಗಿನಲ್ಲಿ ಅವೆಲ್ಲವನ್ನೂ ಯರ್ರಾಬಿರ್ರಿಯಾಗಿ ತುಂಬಿಸತೊಡಗಿದವು ಹೊಟ್ಟೆ ತುಂಬಿದ ಕೈಗಳು. ಅಂಗಿಯ ಗುಂಡಿಗೆ ನಕ್ಷತ್ರಗಳನ್ನು ಹುಡುಕತೊಡಗಿದವು ಅನ್ನದ ಮೈಲಿಗೆ ನೆಕ್ಕಿದ ಬೆರಳುಗಳು. ಸೂಜಿ ಸಲೀಸಾಗಿ ಓಡುತ್ತಿದೆ. ಕತ್ತರಿಸಿದ ಬಟ್ಟೆ ಗುಂಡಿಗಳು ಚೆನ್ನಾಗಿಯೇ ಕಾಣುತ್ತಿದೆ. ಹೌದು ನಕ್ಷತ್ರಗಳು ತುಂಬಾ ಚೆನ್ನಾಗಿ ಚಿತ್ತಾರ ಬಿಡಿಸುತ್ತಿವೆ. ಒಂದೊಂದೇ ಸೂಜಿ ಮೊನೆಯಲ್ಲಿ ಅನ್ನದ ಕಣ್ಣುಗಳು ಹಸಿವಿನ ಹರಿತದ ವೇಗಕ್ಕೆ ನಕ್ಷತ್ರಗಳನ್ನು ತೆರೆಯುತ್ತಿದೆ. ಹೊರಗೆ ಸೂರ್ಯನ ಬೆಳಕು ನಿಧಾನವಾಗಿ ಕರಗತೊಡಗಿದವು. ಅಲ್ಲಿಗೆ ಅದು ನಿಂತಿತು.!
ಆ ಹೆಂಗಸು ಅಲ್ಲೇ ಗೋಡೆಗೆ ಸದ್ದಿಲ್ಲದೆ ಅಪ್ಪಿಕೊಂಡ ಗಡಿಯಾರ ನೋಡಿದಳು. ಸಮಯ ಮುಸ್ಸಂಜೆಯ ಆರು ಗಂಟೆಯ . ಅಂಗಡಿ ಬಾಗಿಲು ಮುಚ್ಚಿದ ಅವನು ಮೆಲ್ಲನೆ ನಡೆಯುತ್ತಿದ್ದಾನೆ ರಸ್ತೆಗೆ. ಮುಂದೆ ಆ ಹೆಂಗಸು, ಇವನ ಕೈಹಿಡಿದ ಮಗು. ಮುಂದೆ ಹೋಗುತ್ತಿದ್ದ ಹೆಂಗಸಿನ ಹಿಂದೆ ಇದ್ದಬದ್ದ ವಸ್ತುಗಳೆಲ್ಲಾ ಇವನ ಹೆಗಲೇರಿ, ಚೀಲಗಳಾದವು ಮೂರು. ನಡೆಯುತ್ತಲೇ ಇದ್ದವನ ಸುರಿಯುತ್ತಿದ್ದ ಗೊಣ್ಣೆಗೆ ಮೂಗನ್ನು ಮೇಲೆ ಏರಿಸಿ ಎಳೆಯುತ್ತಲೇ ಇದ್ದ. ಆಗ ಬಂದಿತು ಒಂದು ಮನೆ !
ಸುಂದರ ಸಂಸಾರದ ಸಣ್ಣ ಮನೆ. ಹತ್ತು ಜನರು ಎದ್ದೇದ್ದು ಒದ್ದಾಡಬಹುದಾದ ವೆರಾಂಡ. ಬೀಗ ಹಾಕಿದ್ದ ಬಾಗಿಲಿನಲ್ಲಿ ದೇವರಿಗೆ ಬರೆದಿದೆ " ಆಲ್ ಫಾರ್ ಗಾಡ್". ! . ರಸ್ತೆ ಬದಿಯ ವ್ಯಾಪಾರಿ ಕೊಟ್ಟ ಆಂಗ್ಲ ದೇವರ ಸ್ಟಿಕ್ಕರು !. ಬೀಗ ತೆರೆದಾಗ ಒಳಗೆಲ್ಲಾ ಅಚ್ಚುಕಟ್ಟಿನ ಸರಂಜಾಮು.! ಮೂಲೆಗೆ ಕುಳಿದ ಟೇಬಲ್ ಮೇಲೆ ಸದಾ ಹಸಿರಾಗಿಯೇ ನಗುತ್ತಿದ್ದ ಪ್ಲಾಸ್ಟಿಕ್ ಗಿಡದ ಎಲೆಗಳು ಮುಚ್ಚಿದ ಹೂಗುಚ್ಛ. ಮುಖ ಮುಚ್ಚಿದ ಕಪ್ಪು-ಬಿಳುಪು ಟೀವಿಯ ಮೌನ ವೃತ. ಅಲ್ಲೇ ಗಡಿಯಾರದ ಗಂಟೆ ಮುಳ್ಳು ಗಾಜಿನೊಳಗೆ ಜೋತು ಬಿದ್ದು ಅತ್ತ ಇತ್ತ ಓಲಾಡುತ್ತಿತ್ತು. ನೋಡುತ್ತಲೇ ಇದ್ದವನ ಕತ್ತು ಅದರ ಎಡ ಬಲಕ್ಕೆ ಕಣ್ಣು ಗೊಂಬೆಗಳನ್ನು ಹೊರಳಿಸ ತೊಡಗಿದವು. ಹೌದು ಸಮಯ ರಾತ್ರಿ ಎಂಟು ಗಂಟೆ !
ಪಕ್ಕದ ಕೋಣೆಗೆ ಹೊಕ್ಕಿದ ಆ ಮೂವರ ಪಿಸುಪಿಸು ಮಾತುಗಳು ಬಾಗಿಲ ಸೆರೆಯಲ್ಲಿ ನುಸುಳಿ ಗಾಳಿಗೆ ಕಿವಿಯೊಳಗೆ ನುಸುಳತೊಡಗಿದವು. ಮಗು ಬೊಬ್ಬೆ ಹಾಕಿದ ಸ್ವರ..!. ಬಟ್ಟೆ ಬದಲಿಸುತ್ತಿರಬಹುದು . ಕಾಲಿನ ಚಪ್ಪಲಿ ಬಿಚ್ಚಿ ಪಟಪಟನೇ ಒದೆಯುತ್ತಿರಬಹುದು. ಶಬ್ಧಗಳು ನೆಲಕ್ಕೆ ಬಡಿದು ಮನೆ ತುಂಬ ಓಡುತ್ತಿವೆ. ದಡಕ್ಕನೇ ಬಾಗಿಲು ತೆರೆದು ಬಂದ ಹೆಂಗಸು ಅಡುಗೆ ಕೋಣೆಗೆ ಕರೆದಳು. ಚೀಲ ಮುಟ್ಟಿ ನೋಡುತ್ತಿದ್ದಾನೆ. ಪಕ್ಕದ ಗೋಡೆಗೆ ಒರಗಿಸಿ ನಿಧಾನವಾಗಿ ಅವಳ ಹಿಂದೆ ಒಳ ಹೊಕ್ಕಿದ. ಬೆಳಿಗ್ಗೆಯಿಂದ ಅದೇ ಮೈಲಿಗೆ ಬಿದ್ದ ಪಾತ್ರೆಗಳು, ಖಾಲಿ ಬಿದ್ದು  ನೀರಿಗೆ ಬಾಯಾರಿದ ಹಂಡೆಗಳು, ಉರಿದು ಉರಿದು  ಇನ್ನಷ್ಟು ಉರಿಯಲಾಗದ ಮಸಿ ಮೆತ್ತಿಕೊಂಡ ಪಾತ್ರೆಗಳ ತಳಮಟ್ಟದ ಗಲೀಜು ಕಾಲುಗಳು. ಬಾ ಬಾ ಎಂದು ಕರೆಯುತ್ತಿವೆ ! ಅಡುಗೆ ಕೋಣೆಗೆ ಬಗಬಗನೇ ಉರಿಯುತ್ತಿದ್ದ ಹೊಲೆಯ ಮುಂದೆ ಈರುಳ್ಳಿ ಕೊಚ್ಚುತ್ತಿದ್ದ ಮಾಮ ಸರಿದು ಹೋಗುತ್ತಿದ್ದಾರೆ. ಗ್ಯಾಸ್ ಸ್ಟೌವ್ ಉರಿಸುತ್ತಿದ್ದ ಆ ಹೆಂಗಸಿನ ತುಟಿಗಳು  ಈಗ ಸರಿಯಾಗಿ ತೆರೆದು ಅಲ್ಲಾಡ ತೊಡಗಿದವು. ಹೌದು ಸರಿಯಾಗಿ ತೆರೆದು ಕೇಳಿಸುತ್ತಿದೆ...
"ನೀರು ಸೇದಲು ಬರುತ್ತಾ?"
ಹಿತ್ತಲ ಕಪ್ಪು ಅಂಗಳದಲ್ಲಿ ಸುತ್ತೆಲ್ಲಾ ಹೂಬನ ಅರಳಿನಿಂತ ಹಸಿರು ಹಾಸುಗಳಿವೆ. ಒಂದೆರಡು ಹಕ್ಕಿಗಳು ಚಿಲಿಪಿಲಿ ಗುಟ್ಟಿದಾಗ, ಬೆಳಕಿಗೆ ಕಣ್ಣು ತೆರೆದು ನಿದ್ದೆಗೆ ಎಚ್ಚರ ತಪ್ಪಿದ ಕಪ್ಪೆಗಳು ಗುಟುರು ಕೂಗಿದವು. ಅಲ್ಲಲ್ಲಿ ದೈನಂದಿನ ಗುದ್ದಿಗೆ ನಜ್ಜುಗುಜ್ಜಾದ ಅಲ್ಯುಮಿನೀಯಂ ಬಿಂದಿಗೆ ಹೊರಗೆಳೆಯುತ್ತಿದ್ದಂತೆಯೇ ಗಜ ಗಾತ್ರದ ಹಗ್ಗದ ಗಂಟೊಂದು ಅವಳ ಕೈಯೊಳಗೆ ಎದ್ದು ನಿಂತು  ಹೆಬ್ಬಾವಿನಂತೆ ಸುರುಳಿ ಸುತ್ತಿಕೊಂಡವು. ಅಲ್ಲೇ ಪಕ್ಕದಲ್ಲಿ ಗಂಟಲು ತಬ್ಬಿದ ನೀರಿನ ಸಣ್ಣ ಬಾವಿಯ ಬಾಯಿಗೆ ಮೇಲೆ ಅಡ್ಡ ಗಟ್ಟಿದ ಮರದ ಕಮಾನುಗಳಿವೆ. ಮಧ್ಯದಲ್ಲಿ ನೇತು ಬಿದ್ದ ರಾಟೆಗೆ ಹಗ್ಗದ ಕುಣಿಕೆ ಹಾಕಿ ಒಮ್ಮೆ ತಿರುಗಿಸಿದಳು. ಸರಿಯಿದೆ !. ಮನೆಯೊಳಗೆ ಕಪ್ಪು-ಬಿಳುಪು ಟೀವಿ ಮಾತಾಡುವ ಸ್ವರ ಕೇಳುತ್ತಿದೆ. ಗಂಡ ಅದರ ಕಿವಿ ತಿರುಗಿಸಿ ಮಾತಾಡಿಸುತ್ತಿರಬಹುದು.! ಬಾವಿಯ ಮುಂದೆ ಮತ್ತೆ  ಇವನನ್ನು ತಿರುಗಿ ನೋಡಿದಳು.
ಗಂಟಲು ಮುಳುಗದ ಬಾವಿಯ ನೀರು ನಿಧಾನವಾಗಿ ತಳ ಕಂಡ ಬಚ್ಚಲು ಮನೆಯ ಹಂಡೆಗಳು ಬಾಯಾರಿದ ಮುಖ ತೆರೆದು ನೀರು ಕುಡಿಯತೊಡಗಿದವು. ಹಂಡೆಗಳ ಬಾಯಿಗೆ ಸುರಿಯುತ್ತಲೇ ಇದ್ದ .ಒಂದು.. ಎರಡು. ಮೂರು.. ಹತ್ತು.... ಮತ್ತಷ್ಟು ಬಾಯಾರಿದ ಹಂಡೆಗಳು ಇಪ್ಪತ್ತೈದಕ್ಕೆ ಸರಿದು ಮತ್ತೆ ಬಾಯಿ ತೆರೆಯುತ್ತಿವೆ. ಪಾಪ್ಯುಲರ್ ಹೋಟೆಲ್ಲಿನಲ್ಲಿ ತೊಟ್ಟ ಎರಡು ಗುಂಡಿ ಬಿಟ್ಟ ಅಂಗಿ ಬಾವಿಯಲ್ಲಿದ್ದ ನೀರನ್ನು ಒದ್ದೆ ಮಾಡುತ್ತಿದೆ.. ಮನೆಯೊಳಗೆ ಗಂಟೆ ಬಾರಿಸಿದ ಸ್ವರ !. ಒಂದು.. ಎರಡು.. ಮೂರು...ಹನ್ನೊಂದಕ್ಕೆ ಸ್ಥಬ್ದವಾದವು. ಗಂಟೆ ಹನ್ನೊಂದು. ಇನ್ನೆರಡು ಹಂಡೆ ನೀರಿಗೆ ಬಾಯ್ತೆರೆದೇ ಇವೆ. ಒಳಗೆ ಮಗು ಅಳುತ್ತಿರುವ ಸ್ವರ. ಮಲಗುವ ಸಮಯವಿರಬಹುದು. ನೀರು ಮನೆಯ ಹಂಡೆಗಳನ್ನು ತುಂಬಿ ಒಳಗೆ ಬಂದಾಗ ಗೊತ್ತಾಯಿತು ಮನೆಯ ಲೋಕವೆಲ್ಲಾ ಹೊಟ್ಟೆ ತುಂಬಿ ನಿದ್ದೆ ಕಣ್ಣಿಗೆ ಬೆಳಗ್ಗಿನ ಕನಸು ಕಾಣುತ್ತಿರಬಹುದು. ಹೊಟ್ಟೆ ಹಸಿಯುತ್ತಿದೆ!. ಮತ್ತೆ ನಿಂತಿದೇ ಅದೇ ಆಕೃತಿ..!
" ತೆಗೆದುಕೋ ಈ ಅಂಗಿ "
ಅರೆ ! ಈ ಹೆಂಗಸು ಮಲಗಿಲ್ಲವೆ? ಇಷ್ಟುದ್ದದ ಅಂಗಿ ಹಿಡಿದು ನಿಂತಿದ್ದಾಳೆ. ಇವನಷ್ಟೇ ಉದ್ದವಿದೆ, ಸ್ವಲ್ಪ ಮಾಸಿದೆ. ಬೇರೆಯವರು ತೊಟ್ಟ ಬಟ್ಟೆಯಿರಬಹುದು. ಬಟ್ಟೆ ಬದಲಾಯಿಸಿ ಅಂಗಿ ತೊಟ್ಟು ನೋಡುತ್ತಾನೆ. ಮೇಲಿಂದ ಕೆಳಗಿನವರೆಗೆ ಜೋತು ಬಿದ್ದ ಅಂಗಿ ಮೊಣಕಾಲವರೆಗೆ ಒಂದೇ ಕಾಣುತ್ತಿದೆ. ಏನಿದು ಚಳಿ? ಅಂಗಿ ಒಳಗೊಳಗೇ ಬಿಸಿ ಮುಟ್ಟಿಸಿತು. ಅಡುಗೆ ಕೋಣೆಯಲ್ಲಿ ಪಾತ್ರೆಗಳು ಮಗುಚಿದ ಶಬ್ಧ ! ಒಂದು ಅಲ್ಯುಮಿನಿಯಂ ತಟ್ಟೆಗೆ ಅನ್ನ ಸಾರು ಬೆರೆಸಿ,ನಜ್ಜುಗುಜ್ಜಾದ ಗ್ಲಾಸಿನಲ್ಲಿ ನೀರು ತಂದಿಟ್ಟಳು. ಹೊರಗೇ ಇವರೇ ಸಾಕಿದ ನಾಯಿ ಬೊಗಳುತ್ತಿದೆ. ಮತ್ತೆ ಸ್ವಲ್ಪ ಸುಮ್ಮನಾಯಿತು. ಲೊಚ ಲೊಚನೆ ನೆಕ್ಕುತ್ತಿರುವ ನೆಕ್ಕಾಟ ಕೇಳುತ್ತಿದೆ. ಅದಕ್ಕೂ ಅನ್ನ ಇಕ್ಕುತ್ತಿದ್ದಾಳೆ. ಅನ್ನ ತಿಂದು ಕೈತೊಳೆಯಲು ಹೊರಗೆ ಬಂದ. ನಾಯಿ ಇವನನ್ನೇ ದುರುಗುಟ್ಟಿ ನೋಡುತ್ತಿದೆ. ಅದು ತಿನ್ನುತ್ತಿದ್ದ ಅನ್ನದ ಬಟ್ಟಲು ಪರಿಚಯ ಹಿಡಿದಂತಿದೆ ಇವನು ತೊಳೆಯುತ್ತಿದ್ದ ತಟ್ಟೆ. ಒಮ್ಮೆ ಗಾಳಿಗೆ ಮೂಗಾಡಿಸಿ, ಅದರ ತಟ್ಟೆಗೆ ನಾಲಗೆ ಇಳಿಸಿತು. ಸೀದಾ ಮನೆಯೊಳಗೆ ಬಂದ. ಆಡುಗೆ ಮನೆಯಲಿ ಅವಳು ಹೇಳುತ್ತಿದ್ದಾಳೆ..
"ಇಲ್ಲಿಡಬೇಡ. ಇದು ನಿನ್ನದೇ ಊಟದ ತಟ್ಟೆ"
ಆಯಿತು ! ಮೂಲೆಗೆ ಬಿದ್ದ ಚೀಲದ ಪಕ್ಕದಲ್ಲಿ ಅದನ್ನು ಮುಖಮುಚ್ಚಿ ಮಲಗಿಸಿದ. ನಾಳೆಯ ಬೆಳಿಗ್ಗೆ ಒಣಗಬಹುದು. ಅನ್ನ ತಬ್ಬಿಕೊಂಡ ಹೊಟ್ಟೆಯಲಿ ನಿದ್ದೆ ಕರೆಯುತ್ತಿದೆ ಕಣ್ಣಿಗೆ. ಎರಡು ಗೋಣಿ ಚೀಲಗಳನ್ನು ಹಿಡಿದು ಆ ಹೆಂಗಸು ಮುಂದೆ ಬಿಸಾಡಿದಳು. ಅವಳ ಮುಖವನ್ನೇ ನೋಡುತ್ತಿದ್ದ. ಇನ್ನೇನೋ ಹೇಳಲು ಮೈಮುರಿದು ನೆಲಕ್ಕೆ ಮಲಗಿದ ಗೋಣಿ ಚೀಲಗಳನ್ನು ಎವೆಯಿಕ್ಕದೇ ನೋಡುತ್ತಿದ್ದಳು.
 "ಮನೆಯ ಮುಂಬಾಗಿಲ ವೆರಾಂಡದಲ್ಲಿ ಖಾಲಿ ಜಾಗವಿದೆ"
ಗೋಡೆ ಗಡಿಯಾರಕ್ಕೆ ಕತ್ತೆತ್ತಿದ.. ಸಮಯ ಹನ್ನೆರಡು ಗಂಟೆ. ಹೆಗಲಿಗೆ ಚೀಲವೆತ್ತಿ, ಗೋಣಿಚೀಲ ಕೈಯೊಳಗೇ ಸಿಕ್ಕಿಸಿ ವೆರಾಂಡಕ್ಕೆ ಮೆಟ್ಟಿಲು ಇಳಿಯುತ್ತಿದ್ದಂತೆ ಹಿಂಬದಿಯಲ್ಲಿ ನಿಧಾನವಾಗಿ ಬಾಗಿಲು ಚಿಲಕ ಸಿಕ್ಕಿಸಿದ ಸಪ್ಪಳ. ಹಿಂತಿರುಗಿ ನೋಡಿದ. ಬಾಗಿಲು ಮುಚ್ಚಿದೆ. ತಿರುಗಿ ಕತ್ತು ತಿರುಗಿಸಿದವನು ಮನೆಯ ಹೊರಗೆ ನಿಂತಿದ್ದ. ಅದೋ ಅಲ್ಲಿ ಸಾಪು ಸಪಾಟು ನೆಲದ ಹಾಸು. ಒಂದು ಗೋಣಿಚೀಲ ನೆಲಕ್ಕೆ ಹಾಸಿ, ಇನ್ನೊಂದು ಚೀಲದೊಳಗೆ ಕಾಲುಗೆಳೆರಡನ್ನು ತೂರಿಸಿಕೊಂಡ. ಬಿಸಿಯಾಗಿದೆ. ಮಧ್ಯರಾತ್ರಿಗೆ ಬೀಸುತ್ತಿದ್ದ ಗಾಳಿ ಚಳಿಗೆ ನಡುಗಿ ಮಂದವಾಗಿದೆ. ಕೇಳಿಯೂ ಕೇಳಿಸದ ಹಕ್ಕಿ ಚಿಲಿಪಿಲಿ, ಕಪ್ಪೆ ಗುಟುರು. ಒಂದು ನಿಶ್ಯಬ್ಧದ ಸಂದುಗಳಲ್ಲಿ ಮನೆಯೊಳಗೆ ಗೊರಕೆ ಶಬ್ಧ ಹೆಂಚುಗಳನ್ನು ಸೀಳಿ ರಾತ್ರಿಯ ಕಿವಿ ತೆರೆದು ಮಗ್ಗುಲು ಮಗುಚುತ್ತಿದೆ. ಸರಿಗಮಪದನಿಸ ಸ್ವರಗಳ ನರ್ತನಕೆ ತೆರೆಯಲಾಗದ ಕಣ್ಣು ರಾಗದ ಚಿತ್ರ ಬಿಡಿಸುತ್ತಿದೆ. ಮುಚ್ಚಲಾಗದ ಕಿವಿ ತೆರೆದು ಮಧುರವಾಗಿ ಆಲಿಸುತ್ತಿವೆ. ಪಕ್ಕನೇ ನಾಯಿ ಬಾಯಿ ಆಕಳಿಸಿದ ಶಬ್ಧ !. ವೆರಾಂಡದ ಒಂದು ಮೂಲೆಯಲ್ಲಿ  ಎರಡು ಕಾಲುಗಳೆಡೆಗೆ ಕಿವಿ ನಿಮಿರಿಸಿ, ಉದ್ದ ಮೂಗಿಟ್ಟು  ಸೊಂಟ ಮುರಿದ ಗೋಣಿ ಚೀಲಗಳ ಮೇಲೆ ಮಲಗಿದೆ. ಮಿರಮಿರನೇ ಹೊಳೆಯುವ ಅದರ ರಾತ್ರಿ ನಕ್ಷತ್ರದ ಕಣ್ಣೆರಡು ಇವನತ್ತಲೇ ನೋಡುತ್ತಿದ್ದವು. ಸಧ್ಯ ! ನಾಯಿಯಿದೆ. ಚಂದ್ರಿ,ರಾಧೆ,ಗಿರೀಜಾ, ಮುರಳಿ ಹೇಳಿದ್ದ ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಸುತ್ತಾ ಓಡಿದ ಪ್ರೇತಗಳು ಇಲ್ಲಿ ಬಂದರೋ. ? ಸಧ್ಯ ನಾಯಿಯಿದೆ !
ತಟ್ಟೆ-ಗ್ಲಾಸಿನಲ್ಲಿ ಅಲ್ಲಲ್ಲಿ ಅಪ್ಪಿಕೊಂಡ ನೀರ ಹನಿಗಳು ನಿಧಾನವಾಗಿ ನೆಲಕ್ಕೆ ತೊಟ್ಟಿಕ್ಕ ತೊಡಗಿದವು. ಮಣ್ಣಿನ ನೆಲ ಅದನ್ನು ಕುಡಿಯುತ್ತಿದ್ದವು. ದಣಿದ ಕಣ್ಣುಗಳು ಸ್ವಲ್ಪ ಸಲ್ವವೇ ನಿದ್ದೆಗೆ ಜಾರಿದವು.

ದೊಡ್ಡ ಮನೆಯ ತುಂಬಾ ಸ್ವರನಾಳ ಕಡಿದುಕೊಂಡ ಹಾರ್ಮೋನಿಯಂ ಪೆಟ್ಟಿಗೆಗಳು, ಅಕ್ಕಪಕ್ಕದಲ್ಲಿ ಸ್ಪರ್ಧೆಗೆ ಸೋತು ಚಕ್ಕಳ ಸುಲಿದುಕೊಂಡ ತಬಲಗಳು,ಒಂದಕ್ಕೊಂದು ತೀಡಿಸಿ ತಂತಿ ಕಡಿದುಕೊಂಡ ಪಿಟೀಲು, ಏಳು ಸ್ವರಗಳನ್ನು ಮರೆತು ವೃದ್ದಾಪ್ಯಕ್ಕೆ ಸರಿದ ಕೊಳಲುಗಳು ಸುಕ್ಕುಗಟ್ಟಿವೆ. ಬೆಳಕಿದ್ದ ಮನೆಯ ಕತ್ತಲೆಯಲ್ಲಿ ಶಬ್ಧಗಳಿಲ್ಲದ ಶೂನ್ಯಗಳು. ಅವುಗಳ ಮಧ್ಯೆ ಒಂಟಿ ಬಾಲಕನೋರ್ವ ಎಲ್ಲಾ ಸತ್ತ ಸಂಗೀತ ಸಲಕರಣೆಗಳ ಮೈದಡವುತ್ತಿದ್ದ. ಹೆಣದ ಪಟ್ಟಿಗೆಗೆ ತುಂಬಿಸಿ ಸ್ಮಶಾನಕ್ಕೆ ಹೆಗಲೊತ್ತು ಹೆಜ್ಜೆಯಿಕ್ಕುತ್ತಿದ್ದ.
ದಡಾರನೇ ಮನೆಯ ಬಾಗಿಲು ತೆರೆದುಕೊಂಡವು. ಸ್ಮಶಾನಕ್ಕೆ ಹೆಜ್ಜೆಯಿಕ್ಕಿದವನು ಪಕ್ಕನೇ ಎದ್ದು ಕುಳಿತ. ಕೂದಲು ಕೆದರಿ, ಅಸ್ತವ್ಯಸ್ತ ಬಟ್ಟೆ ತೊಟ್ಟ ಆಕೃತಿಯೊಂದು ಬಾಗಿಲ ಹೊರಗೆ ಬರುತ್ತಿದೆ. ಮತ್ತೆ ಕಣ್ಣುಜ್ಜಿ ಸರಿಯಾಗಿ ನೋಡಿದ. ಹೌದು ! ಅವಳು ಬೆಳಕಿಗೆ ಕೈ ಮುಗಿಯುತ್ತಿದ್ದಳು. ಮನೆಯೊಳಗೆ ಗಡಿಯಾರ ಸ್ವರವೇಳಿಸುತ್ತಿವೆ . ಒಂದು ಎರಡು ಮೂರು...ಆರಕ್ಕೆ ಮೌನವಾದವು. ಸಮಯ ಆರು ಗಂಟೆ ! . ಮೈ ಸೆಟೆದ ನಾಯಿ "ಕುಂಯ್.. ಕುಂಯ್" ಎಂದು ಬಾಲ ಅಲ್ಲಾಡಿಸ ತೊಡಗಿತು. ಹಕ್ಕಿಗಳ ಹಾರಾಟಕ್ಕೆ ಒಂದೆರೆಡು ಕಾಗೆಗಳು ಕೂಗುತ್ತಿದ್ದವು. ಕಪ್ಪೆಗಳು ನಿದ್ದೆ ಬಿಡದೆ ಮಲಗಿವೆ !
ಮತ್ತೆ ಮನೆಗೆ ನುಗ್ಗಿ ಮೌನ ಸುರಿದು ಹೋಗುದಳು. ದಡಬಡ ಪಾತ್ರೆಗಳ ಸದ್ದುಗಳು, ಮತ್ತೆ ಹೊರಗೆ ಬರುತ್ತಿದ್ದಾಳೆ. ಗೋಣಿ ಚೀಲ ಮಡಚಿ ಚೀಲದ ಪಕ್ಕದಲ್ಲಿಟ್ಟು ಹೆಗಲೇರುವ ಚೀಲ ನೋಡಿದ. ರಾತ್ರಿಯಿಡೀ ಗಡದ್ದಾಗಿ ಮಲಗಿದ್ದ ತಟ್ಟೆ ಗ್ಲಾಸುಗಳು ಮತ್ತೊಮ್ಮೆ ತೊಳೆಯಲು ನೋಡುತ್ತಿದ್ದವು.  ಒಳಗೆ ಕರೆಯುತ್ತಿರುವ ಹೆಂಗಸಿರ ಸ್ವರ ...
ರಾತ್ರಿ ತಿಂದುಂಡ ತಟ್ಟೆಗಳು,ಪಾತ್ರೆಗಳು ಬೆಳ್ಳಂಬೆಳಗ್ಗೆ  ಕೋಣೆಯ ಬೆಳಕಿಗೆ ಮತ್ತೆ ಮತ್ತೆ ಉಜ್ಜಿ ಕಣ್ಣು ಮಿಟುಕಿಸ ತೊಡಗಿದವು.. ಅಲ್ಲೇ ಕುಕ್ಕುರು ಕುಳಿತ ಕಪ್ಪು ರುಬ್ಬು ಕಲ್ಲು ರಾತ್ರಿ ನೆನೆ ಹಾಕಿದ್ದ  ಅಕ್ಕಿಗಳನ್ನು ತುಂಬಿ ಇವನನ್ನೇ ಕಾಯುತ್ತಿದ್ದವು. ಹತ್ತೇ ನಿಮಿಷದಲ್ಲಿ ಅಕ್ಕಿ ಹಿಟ್ಟು ಸಿದ್ದ !. ಅವನನ್ನೇ ಮೇಲಿನಿಂದ ಕೆಳಗೆವರೆಗೆ ನೋಡುತ್ತಿವೆ ಬೆಳಗ್ಗಿನಿಂದ ಮುಖ ತೊಳೆಯದ ಅವಳ ಕಣ್ಣುಗಳು. ಮೊಣಕಾಲವರೆಗೆ ಇಳಿ ಬಿದ್ದ ಅಂಗಿಯ ಕೊನೆಯಲ್ಲಿ ಸ್ವಲ್ಪ ನೀರು ನೆನೆ ಬಿದ್ದಿದ್ದವು. ಮಗು ಅಳುತ್ತಿದೆ. ಹೌದು ಎಚ್ಚರವಾಗಿ ಮಂಚದ ಮೇಲೆ ಕುಳಿತಿರಬಹುದು !. ಮಲಗುವ ಕೋಣೆಯಿಂದ ಅವಳ ಕಂಕುಳಿಗೆ ಜೋತು ಬಿದ್ದು ಅಡುಗೆ ಕೋಣೆಗೆ ಅದು ಬಂತು. ಆ ಮನುಷ್ಯನ ಗೊರಕೆ ಶಬ್ಧ ಕೋಣೆವರೆಗೆ ಕೇಳುತ್ತಿತ್ತು. ಅವನು ಮಲಗಿಯೇ ಇದ್ದಾನೆ...! ಇವತ್ತು ಭಾನುವಾರ !

ಹೊರಗೆ ಹೋದವಳು ಮತ್ತೆ ಒಳಗೆ ಬಂದಳು. ಅಮ್ಮಾ ಎನ್ನುತ್ತಿದೆ ಮಗುವಿನ ಅಳುವಿನ ಸ್ವರ. ಬಹಿರ್ದೆಸೆಗೆ ಕುಳಿತಿರಬಹುದು.! ಒಮ್ಮೆ ಕಿವಿ ನಿಮಿರಿಸಿ ಮತ್ತೆ ಇವನನ್ನೇ ನೋಡುತ್ತಿದ್ದವು ಅವಳ ಕಂಗಳು.
"ಹೊರಗೆ ಹೋಗಿ ತೊಳೆದು ಕೊಡೊ"
ಬಚ್ಚಲು ಮನೆಯಿಂದ ಒಂದು ಮಗ್ ನೀರು ತುಂಬಿ ಮಗುವಿನ ಸಮೀಪ ನಿಂತಿದ್ದಾನೆ.. ಅದು ಒಮ್ಮೆ ನೋಡಿ,ನೆಲಕ್ಕೆ ಓಡುತ್ತಿದ್ದ ಇರುವೆಗಳನ್ನು ಹಿಡಿಯುತ್ತಿತ್ತು. ಅವುಗಳು ಕೈಗೆ ಸಿಗದಂತೆ ಓಡುತ್ತಿದ್ದವು. ಅಲ್ಲೇ ಪಕ್ಕದಲ್ಲಿದ್ದ ಒಣಗಿದ ಗಿಡದ ಕಡ್ಡಿ ತೆಗೆದು ಮಣ್ಣಿಗೆ ಏನೇನೋ ಚಿತ್ರ ಬಿಡಿಸುತ್ತಿತ್ತು. ಮಗ್ ಹಿಡಿದು ಬಿಡಿಸುತ್ತಿದ್ದ ಅದರ ಚಿತ್ರವನ್ನೇ ನೋಡುತ್ತಿದ್ದವು ಇವನ ಕಣ್ಣುಗಳು. ಮತ್ತೊಮ್ಮೆ ಮುಕ್ಕಳಿಸುತ್ತಿರುವ ಸ್ವರ..! ಕೈಯಲ್ಲಿದ್ದ ಒಣಗಿದ ಕಡ್ಡಿ ತೆಗೆದು ಇವನ ಮುಖಕ್ಕೆ ಎಸೆದು  ಅಳತೊಡಗಿತು. ಮಗುವಿನ ಆರ್ಭಟಕೆ ಒಳಗಿನಿಂದ ವೇಗವಾಗಿ ಬಂದವಳು ದುರುಗುಟ್ಟಿ ನೋಡುತ್ತಿದ್ದಳು. ಮೂಗಿನ ಮೇಲಿದ್ದ  ಕಪ್ಪು ಮಚ್ಚೆ ಮತ್ತಷ್ಟು ದೊಡ್ಡದಾಗಿ ಕಾಣಿಸುತ್ತಿದೆ.
ಪಕ್ಕನೇ ಬಾಗಿ ಮಗುವಿನ ಹಿಂಬದಿ ತೊಳೆಯತೊಡಗಿದ. ಖಾಲಿಯಾದ ಮಗ್ಗಿಗೆ ಮತ್ತೆ ನೀರು ತುಂಬಿಸಿ ತಂದು ಮತ್ತೆ ತೊಳೆಯತೊಡಗಿದ. ಅರೆ ! ಇದೇನು ಮಗು ಮತ್ತೊಮ್ಮೆ ಜೋರಾಗಿ ಅಳುತ್ತಿದೆ?! .ಬೀಸುತ್ತಿದ್ದ ಗಾಳಿಗೆ ತುಂಬಾ ಚಳಿಯಿದೆ. ತೊಳೆದ ರಭಸಕ್ಕೆ ಅದರ ಬಟ್ಟೆಗೆ ನೀರು ಚೆಲ್ಲಿ ನೆನೆದು ಚಳಿ ಹುಟ್ಟಿಸಿದೆ. ಪಕ್ಕನೇ ತಿರುಗಿ ರಬಕ್ಕನೇ ಇವನ ಮುಖಕ್ಕೆ ಭಾರಿಸಿತು. ಕೈಯಲ್ಲಿದ್ದ ಮಗ್ ಅದರ ಹಿಂಬದಿಯಲ್ಲಿದ್ದ ಮಲದ ಮೇಲೆ ಬಿದ್ದಿದೆ. ಮೆಲ್ಲನೇ ಬಾಗಿ ಕೈಗಿಡಿದುಕೊಂಡ. ಎದ್ದು ನಿಂತ ಮಗು ಮತ್ತೆ ಜೋರಾಗಿ ಅಳತೊಡಗಿತು. ಹೊರ ಬಂದವಳು ಮಗುವನ್ನೇ ನೋಡುತ್ತಿದ್ದಳು.  ಅದರ ಬೆರಳು ಇವನೆಡೆಗೆ ತೋರಿಸುತ್ತಿತ್ತು. ಬಲದ ಕೈಯೆತ್ತಿ ಇನ್ನೊಂದು ಬಾರಿಸಿದಳು. ಕೆನ್ನೆ ಸವರಿ ನೋಡಿದ. ಕೈ ಬೆರಳುಗಳು ಮೂಗಿಗೆ ಹಾದು ಹೋದಂತೆ ದುರ್ವಾಸನೆ ಬಡಿಯುತ್ತಿತ್ತು. ಅಳುತ್ತಿದ್ದ ಮಗುವನ್ನು ಎತ್ತಿ ಒಳಗೆ ಹೋದಳು. ಕೆನ್ನೆಗೆ ಹೊಡೆದ ರಭಸಕ್ಕೆ ಅಲ್ಲೇ ಪಕ್ಕದಲ್ಲಿ ಮಗುಚಿ ಬಿದ್ದ ಮಗ್ಗು ಎತ್ತಿ ಸೋಪು ಹಾಕಿ ಉಜ್ಜಿ ತೊಳೆದ. ಮತ್ತೆ ಮೂಗಿಗೆ ಕೈಗಳು ಸರಿದವು. ಮೂಸಿ ನೋಡಿದ. ಲೈಫ್ ಬಾಯ್ ಸೋಪು ಸುವಾಸನೆ ಬೀರುತ್ತಿದೆ.
ಒಳಗೆ ತಟ್ಟೆ-ಗ್ಲಾಸುಗಳು ಒಂದಕ್ಕೊಂದು ತೀಡುತ್ತಿರುವ ಶಬ್ಧ. ಹೊರಗೆ ಪೊರೆಕೆ ಹಿಡಿದು, ಬಚ್ಚಲು,ವೆರಾಂಡ, ಬಾವಿ ಕಟ್ಟೆ ಸುತ್ತ ಸತ್ತ ತರಗೆಲೆಗಳನ್ನು ಗುಡಿಸುತ್ತಿದ್ದ. ಒಂದಷ್ಟು ಗುಡ್ಡೆ ಹಾಕಿ ಮನೆ ಒಳಗೆ ಬಂದ. ಅವರ ಕೋಣೆಗಳಿಂದ ಜಾನ್ಸನ್ ಪೌಡರು, ಮಲ್ಲಿಗೆ ಪರಿಮಳ. ಹೊಸ ಬಟ್ಟೆ ತೊಟ್ಟು ಕೋಣೆ ತುಂಬಾ ಓಡಾಡುತ್ತಿದೆ ಮಗು. ಅವರೆಲ್ಲರೂ ಹೊರಡುವ ತುರಾತುರಿಯಲಿದ್ದಾರೆ. ಕನ್ನಡಿ ಮುಂದೆ ಫ್ಯಾರ್ ಅಂಡ್ ಲವ್ಲಿ ತೀಡುತ್ತಿದೆ ಹಸಿರು-ಕೆಂಪು ಬಳೆ ತೊಟ್ಟ  ಕೈಗಳು. ನೆರೆಬಿದ್ದ ಕ್ರಾಪಿಗೆ ಮಸಿ ಮೆತ್ತಿ, ಮೀಸೆ ತೀಡುತ್ತಿದ್ದ ಗಂಡ ಪಕ್ಕನೆ ಹೊರಗೆ ಬಂದ. ಅಲ್ಲೇ ಕುರ್ಚಿಗೆ ಬಗ್ಗಿ ಲೆದರ್ ಶೂಗಳಿಗೆ ಪಾಲಿಶ್ ಬಳಿಯುತ್ತಿದ್ದ.
ಮಾತುಗಳು ಕೇಳುತ್ತಿವೆ. ಮುಂಜಾನೆಗೆ ಬೆಳಕು ಮೆತ್ತಿಕೊಂಡ ಮುಸ್ಸಂಜೆಯ ಬಣ್ಣಗಳಂತೆ.  ಕಂಕುಳಲ್ಲಿ ಜೋತು ಬಿದ್ದ ಮಗುವೆತ್ತಿ ಬಂದಳು. ಅವನನ್ನೇ ನೋಡುತ್ತಿದ್ದ ಕಣ್ಮಸಿ ಬಳಿದ ಜಾನ್ಸನ್ ಪೌಡರು ಮಗುವನ್ನು ನಲಕ್ಕೆ ಬಿಟ್ಟು, ಮೂರು ಬ್ಯಾಗುಗಳನ್ನು ಮನೆಯ ವೆರಾಂಡಕ್ಕೆ ತಂದಿಡುತ್ತಿದ್ದಳು. ಬೊಗಳುತ್ತಿದ್ದ ನಾಯಿ "ಕುಂಯ್" ಎಂದು ಒಮ್ಮೆ ಬಾಲ ಅಲ್ಲಾಡಿಸಿತು. ಎಲ್ಲರನ್ನೂ ಹೊರಗೆ ಕರೆದು ಮನೆಗೆ ಬೀಗ ಹಾಕುತ್ತಿದ್ದಾಳೆ.
"ಈ ಬ್ಯಾಗುಗಳನ್ನು ಬಸ್ ಸ್ಟ್ಯಾಂಡ್‍ವರೆಗೆ ತಂದು ಕೊಡು "
ಅವಳು ಹೇಳುತ್ತಿದ್ದಳು. ಮಗು ಅವನ ಕೈಯಿಡಿದು ಮುಂದೆ ನಡೆಯುತ್ತಿತ್ತು. ಭಾರಕ್ಕಾಗಿಯೇ ಮೀಸಲಿದ್ದ ಒಂದು ಬ್ಯಾಗು ಎತ್ತಿ ಹೆಗಲಿಟ್ಟು, ಇನ್ನೊಂದು ಕೈಗೆ, ಮತ್ತೊಂದು ಹೆಗಲಿಗೆ ಜೋತು ಬಿಟ್ಟು, ಹಿಲ್ಡ್ ಚಪ್ಪಲಿ ಮೆಟ್ಟಿ ಮುಂದೆ ನಡೆಯುತ್ತಿದ್ದವಳ ಕೈಬಳೆ ಸದ್ದು ಕೇಳುತ್ತಿದೆ. ಗಾಳಿ ತುಂಬಾ ಪಾಂಡ್ಸ್ ಪೌಡರು. ಅದನ್ನೇ ಹಿಂಬಾಲಿಸಿ ಲೋಕದ ಭಾರವೆತ್ತಿ ನಡೆಯುತ್ತಲೇ ಇದ್ದವು ಇವನ ಕನಸುಗಳು. ಈ ರಸ್ತೆಯಲಿ ಬಾಗಿಲು ತೆರೆದು ಗಿರಾಕಿಗಳಿಗೆ ಕಾಯುತ್ತಿವೆ ಅಂಗಡಿಗಳು. ವಾಹನಗಳಿಗೆ ಬೆದರಿ ರಸ್ತೆ ಬದಿಗೆ ಹೆಜ್ಜೆ ತಿಕ್ಕುತ್ತಿರುವ ಮಕ್ಕಳನ್ನೇ ನೋಡುತ್ತ ಮುಂದೆ ಹೋಗುತ್ತಿದ್ದವರ ಹಿಂದೆ ಇವನು ಆಗಸದಲ್ಲಿ ಹಾರುತ್ತಿದ್ದ ಹಕ್ಕಿಗಳ ಹಾರಾಟಕ್ಕೆ ಕಣ್ಣು ಮೇಲಕ್ಕೆತ್ತಿ ನಡೆಯುತ್ತಿದ್ದ.
"ಬನ್ನಿ ಬನ್ನಿ ಅಕ್ಕ.. ಅಂಕಲ್ " ಎಂದು ಕರೆಯುತ್ತಿದ್ದಾರೆ ಬಸ್ ಕಂಡೆಕ್ಟರುಗಳು. ಮೂರು ಸೀಟು ಬಾಕಿಯಿದೆ. ಈಗಲೇ... ಹತ್ತೇ ನಿಮಿಷಕ್ಕೆ ಹೊರಡುವುದು. ಟಿಕೇಟಿಕೆ ನಾಲಗೆಯ ಎಂಜಲು ತಿಕ್ಕಿ ಮೂರು ಟಿಕೇಟು ಹರಿಯಲು ಮುಂದಾದ ಕಂಡೆಕ್ಟರು !
"ಹೊದ್ದೂರಿಗೆ ಎಷ್ಟು ಗಂಟೆಗೆ ತಲಪುತ್ತೆ"
ಈಗಲೇ ಹನ್ನೊಂದು ಗಂಟೆಗೆ ತಲಪುತ್ತೆ. ಬಸ್ಸಿನೊಳಕ್ಕೆ ನುಗ್ಗುತ್ತಿದ್ದವರ ಹಿಂದೆ ಮೂರು ಬ್ಯಾಗುಗಳ ಭಾರಕ್ಕೆ ಹಿಂದೆ ಮುಂದೆ ಓಲಾಡತೊಡಗಿದೆ. .ಇಕ್ಕಟ್ಟಿನ ಬಾಗಿಲಿಗೆ ನುಗ್ಗಿಸಿ ಹಿಂದೆಯೇ ಹೋದ. ಅಹಾ ! ಅಲ್ಲಿ ಇಡು. ಇನ್ನೊಂದು ಇಲ್ಲಿ ಇಡು. ಎಲ್ಲಾ  ಅಚ್ಚುಕಟ್ಟು ಇಟ್ಟ ಮೇಲೆ ಅಲ್ಲೇ ನಿಂತುಕೊಂಡ.  ಮತ್ತೆ ನಾಯಿ ಕಾವಲಿಗಿರುವ ಮನೆಯ ಸ್ವರ ಆಲಿಸುತ್ತಿದ್ದವನ ಹೊಟ್ಟೆ ಹಸಿಯ ತೊಡಗಿತು. "ಆಲ್ ಫಾರ್ ಗಾಡ್" ಸ್ಟಿಕ್ಕರು  ಅಂಟಿಸಿದ ಬೀಗ ಹಾಕಿದ ಬಾಗಿಲಿಗೆ ನಾಯಿಯ ಆಕಳಿಕೆ ಹಾದು ಹೋದವು. ನಿಲ್ದಾಣದಲ್ಲಿ ಹೆಜ್ಜೆ ಹಾಕಿದ ಪಾಪ್ಯುಲರ್ ಹೋಟೆಲಿನ ಮಟ್ಟಿಲಿಗೆ ನೀರಿಗಾಗಿ ಲೋಟಗಳನ್ನು ಮೇಜಿಗೆ ಗುದ್ದಿ  ಕರೆದ ಜನರು ಹತ್ತುತ್ತಾ ಇಳಿಯುತ್ತಿದ್ದರು. ಹೆಜ್ಜೆಗಳು ಬಸ್ಸಿನ ಬಾಗಿಲಿಗೆ ರಭಸವಾಗಿ ತುಳಿದು ನಿಲ್ದಾಣದ ನೆಲಕ್ಕೆ ನಿಂತಿವೆ. ಸುತ್ತಲೂ ಗಾಳಿಯಂತೆ  ಕಣ್ಣೆರೆಡು ತಿರುಗ ತೊಡಗಿತು. ಅದೋ ಮೂರ್ನಾಡಿನ ಬಸ್ಸು. ಆ ಗಲ್ಲಿ ಗಲ್ಲಿಗಳಿಗೆ ಕುಪ್ಪಳಿಸಿ ನಗುತ್ತಾ  ಓಡುವ ಶಾಲೆಯ ಮಕ್ಕಳು. ಇದೋ ಮಾಮ, ಅಜ್ಜಿ .. ಬೆರಳ ನರ್ತನಕ್ಕೆ ಮೈ ಬಿಟ್ಟ ತಬಲಗಳು.. ಸ್ವರ ಸೇರಿಸುವ ಧಾವಂತಕೆ ಮಧುರ ಇಂಪಿನ ಹಾರ್ಮೋನಿಯಂ ಪಕಳೆಗಳು ! ತಿರುಗಿ ಮತ್ತೆ ಅವರು ಕುಳಿತ ಬಸ್ ಗೆ ಹತ್ತಿದ.
"ಮನೆಗೆ ಹೋಗಿ ನಾಳೆ ಬರುತ್ತೇನೆ ತಾಯಿ... ಎರಡು ರೂಪಾಯಿ ಕೊಡಿ"
ಕೆಕ್ಕರುಗಣ್ಣಿನಲ್ಲಿ ನೋಡುತ್ತಿದ್ದವಳ ಕತ್ತಿನಲ್ಲಿದ್ದ ಮಾಲೆಯಂತೆ ಹಣೆಯಲ್ಲಿ ಬೆವರ ಹನಿ ಪೋಣಿಸುತ್ತಿದ್ದವು. ಮಧ್ಯೆ ಸಿಂಧೂರಕೆ ಮುತ್ತಿಕ್ಕುತ್ತಿವೆ ನೀರ ಹನಿಗಳು. ಅವರಿಬ್ಬರೂ ಪಿಸುಪಿಸು ಮಾತಾಡುತ್ತಿದ್ದರು. ಚಾಲಕ ಬಸ್ ಚಾಲಿಸಿ ಹಾರ್ನ್  ಹೊಡೆಯ ತೊಡಗಿದ. ಕೆಳಭಾಗದಲ್ಲಿ ನಿಂತವರು ಒಬ್ಬರಿಗೊಬ್ಬರು ಉಜ್ಜುತ್ತಾ ಮೇಲೇರುತ್ತಿದ್ದವರ ನಡುವೆ ಮಾಸಿದ ಎರಡು ರೂಪಾಯಿ ಅವನ ಬೆರಳ ಸಂದಿನಿಂದ ಪಕ್ಕನೇ ಕಣ್ಣ ಮುಂದೆ  ಹಾದು ಬರುತ್ತಿದೆ. ರಬಕ್ಕನೇ ಕಸಿದುಕೊಂಡವನು ಬಸ್ಸಿನ ಮುಂಬದಿ ಬಾಗಿಲಿಗಾಗಿ ಓಡ ತೊಡಗಿದ.ಸಾಸಿವೆ ಬಿದ್ದರು ಕೆಳಬೀಳಿಸದ ಜನರು ! ಆ ಸಂದಣಿಯಲ್ಲಿಯೇ ತಿರುಗಿ ನೋಡಿದ. ಅದೇ ಪರಿಚಯದ ಕಡೆಯ ಸ್ವರ ಮೌನಗಳು. ನೋಡುತ್ತಲೇ ಇದ್ದ ಮಗುವಿನ ಮುಂದೆ ಅವರ ನಾಲ್ಕು ಕಂಗಳು ಮನೆಯ ನಾಯಿಯಂತೆ ನೋಡುತ್ತಿತ್ತು.

ಮೂರ್ನಾಡಿಗೆ ಹೊರಟ ಬಸ್ಸಿನ ಹಿಂಬದಿಯ ಆಸನದಲ್ಲಿ ಕುಳಿತು ಓಡುತ್ತಿದ್ದ ಮರ,ಗಿಡ, ಮನೆಗಳ ಹಿಂದೆ ಓಡುತ್ತಿದ್ದ ನೆರಳುಗಳಿಗೆ ಹೆಸರು ಹುಡುಕುತ್ತಿದ್ದವು ಓಡಿ ಬಂದ ದಿನಗಳು. ಅಜ್ಜಿ ಚೀಲದಲ್ಲಿದ್ದ ಬುತ್ತಿ ಬಟ್ಟಲು ಹುಡುಕುತ್ತಿದ್ದಾಳೆ. ಮಾಮ ಅವನು ಬರೆದ ಪತ್ರಗಳಲ್ಲಿ  ಕಂಗಳ ಬಳಪದಿಂದ ಅಕ್ಷರ ತಿದ್ದುತ್ತಿದ್ದ. ತಿರುಗಾಡಿ ಬಿದ್ದವನ ವಿಳಾಸವಿಲ್ಲದ ಪಯಣದ ಪರಿಚಯವಿದೆ.
ಶಾಲೆಯಲಿ ಮತ್ತೊಂದು ಸ್ವಾತಂತ್ರ್ಯೋತ್ಸಕೆ ಹೆಸರು ಗುಜರಾಯಿಸಿದ. ನೆರೆದ ಸಭೀಕರು ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಚಂದ್ರಿ, ಗಿರಿಜಾ, ರಾಧೆಯಾಗುತ್ತಿದ್ದಾರೆ. ಚೆನ್ನಾಗಿದೆಯೇ? ತಲೆ ಅಲ್ಲಾಡಿಸಿದವು ಸಭಾಂಗಣದ ತುಂಬಾ ಶಿಸ್ತಿನಲ್ಲಿ ಕೂರಿಸಿದ ತಲೆಗಳು. ಹೌದು ಚೆನ್ನಾಗಿದೆ. " ಸ..ರಿ.ಗ.ಮ.ಪ.ದ.ನಿ.ಸ." ಏಳು ಸ್ವರಗಳು ನಿದ್ದೆಯಲಿ ಕನವರಿಸುತ್ತಿದ್ದವನ ಕಣ್ಣು ನಿಧಾನವಾಗಿ ತೆರೆಯುತ್ತಿದೆ. ಏಳು ಮಜಲುಗಳು ದಾಟಿ ಕೊನೆಯಲ್ಲಿ ನಿಂತವನ ಎದೆಗೆ ಕೈಯಿಟ್ಟು ಕೇಳುತ್ತಿದ್ದವು "ಟಿಕ್.ಟಿಕ್.ಟಿಕ್" ಮೂರು ಸ್ವರಗಳು. ತಾಳಗಳು ಗುಳೆ ಎದ್ದವು.

1 ಕಾಮೆಂಟ್‌:

  1. ಆ ಬಡತನದ ದಿನಗಳಲೂ ಸಂಗೀತ ಕಲಿಯಲೇಬೇಕೆನ್ನುವ ಆ ಬಾಲಕನ ಅಮಿತೋತ್ಸಾಹ ನಮ್ಮನ್ನು ಹುರಿದುಂಬಿಸುತ್ತದೆ. ಆ ಪುಟ್ಟ ವಯಸ್ಸಿಗೆ ಮೂವತ್ತು ರೂಪಾಯಿ ಸಾಮಾನ್ಯದ ಮೊತ್ತವಲ್ಲ!

    ಹೊಟೆಲಿನಿಂದ ಟೈಲರಿನ ಎಡೆಗೆ ಕಲಿಕೆಯ ಹೆಜ್ಜೆಗಳು.

    ಆ ಬಾಲಕನ ಹೊಟ್ಟೆಯ ಹಸಿವು ಮತ್ತು ಅದನ್ನು ಮೀರಿದ ಜ್ಞಾನದ ಹಸಿವು ಮನ ಮಿಡಿಯಿತು.

    ಈ ಐದನೇ ಭಾಗವಂತೂ ನನ್ನನ್ನು ಆರ್ಧ್ರವಾಗಿಸಿತು.

    ಪ್ರತ್ಯುತ್ತರಅಳಿಸಿ