ಭಾನುವಾರ, ಜನವರಿ 13, 2013

ಆಂಗ್ಲ ಕವಯತ್ರಿ ಕೆನೀಶ ಶೈನ್ ಬರೆದ "ವುಮನ್" ಎಂಬ ಕವಿತೆ

Art curtesy : google.com

ಕಾವ್ಯ ಕಟ್ಟುವುದಕ್ಕಾಗಿಯೇ ಗಮನ ಸೆಳೆಯುವ ಸೂಕ್ಷ್ಮ ವಸ್ತುಗಳಿಗೆ ದಿನನಿತ್ಯ ಹುಡುಕಾಡುತ್ತೇವೆ. ನಮ್ಮ ಕೈಯಳತೆಯಲ್ಲೇ ಅದೇಷ್ಟೋ ವಿಷಯಗಳು ಸರಿದು ಹೋಗುತ್ತಿರುವುದು ಅರಿವಿಗೆ ಮೀರಿದ್ದು. ಕಾವ್ಯ ಏಕೆ ಕಟ್ಟಬೇಕು ಮತ್ತು ಅದು ಏನನ್ನು ಹೇಳಬೇಕು ಅನ್ನುವ ಪ್ರಶ್ನೆಗಳು ಹಲವು. ಅದನ್ನು ಓದುಗರೇ ಓದಿ ನಿರ್ಧರಿಸುವರು. ಅಂತಹ ಪ್ರಶ್ನೆಗಳನ್ನು ತಟ್ಟಿ ಎಬ್ಬಿಸಿದಾಗ ನಮ್ಮ ಮನೆಯ ಹಲವು ಜೀವಗಳು, ಸದಾ ಜೊತೆಯಾದ ಪರಿಕರಗಳು ಅರಿವಿಗೆ ಬರುವುದಿಲ್ಲ. ನಮ್ಮ ಕಣ್ಣ ಮುಂದೆಯೇ ಎಡತಾಕಿದರೂ ನಗಣ್ಯವಾಗುತ್ತವೆ. ನಾನೇ ಬರೆದ ಕವಿತೆಯಲ್ಲಿ ನನ್ನಂತೆಯೇ ಇರುವ ಸಮಾಜದ ಮಂದಿಯನ್ನು ತಲಪಿಸುವ ಉದ್ದೇಶ ಅಲ್ಲಿರುವುದಾದರೆ, ಅದೊಂದು ಪರಿವರ್ತನೆಯ ಸಂಕೇತ. ಏಕೆಂದರೆ ಬರಹದಲ್ಲಿ ಓದುಗ ತಾನಾಗಿ ಅಲ್ಲಿ ನಡೆಯುತ್ತಿರುತ್ತಾನೆ. ಅಂತಹ ಸಂದರ್ಭದಲ್ಲಿ ನಮ್ಮ ಕವಿತೆಯೊಂದನ್ನು ಆಂಗ್ಲ ಕವಯತ್ರಿ ಕೆನೀಶ ಶೈನ್ ಬರೆದು ಸಮಾಜಕ್ಕೆ ಹರಿಯ ಬಿಟ್ಟಿದ್ದಾರೆ.  ಮಹಿಳೆಯ ಬಗ್ಗೆ ಮಹಿಳೆ ಮಾತ್ರ ಅರ್ಥೈಸಿಕೊಳ್ಳಬಲ್ಲಳು ಅನ್ನುವ ಮಾತು ಉಲ್ಲೇಖನೀಯ. ಹಾಗಾಗಿ, ಕಾವ್ಯ, ಕಥೆ, ಕಾದಂಬರಿಗಳಲ್ಲಿ ಉಲ್ಲೇಖವಾಗುವ ನುಡಿಯಂತೆ "ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ" ಅಂತ. ಅದು ಏನನ್ನೋ ಬಯಸುತ್ತದೆ. ಅದು ನಮಗೆ ಅರ್ಥವಾಗುವುದಿಲ್ಲ ಅಂದಾಗ, ಈ ಮಾತು " ವುಮನ್" ಎಂಬ ಕವಿಯಲ್ಲಿಯೂ ಇದೆ ಎಂಬುದನ್ನು ಗಮನಿಸಬೇಕು. ಈ ಮಾತು ಬಂದಿದ್ದೇ ಹೆಮ್ಮನಸ್ಸನ್ನು ಹೊರತುಪಡಿಸಿದ ಆಲೋಚನೆಯಿಂದ ಅಂತ ಹೇಳುವುದರಲ್ಲಿ ತಪ್ಪಿಲ್ಲ ಅಂದುಕೊಳ್ಳುತ್ತೇವೆ. ಇಲ್ಲಿಯ ಪ್ರತಿಮೆ ಹುಟ್ಟಿಕೊಂಡಿದ್ದು ಹೇಗೆ ಅಂತ ಪ್ರಶ್ನೆ ಹಾಕಿಕೊಳ್ಳುವ ಮೊದಲು ಅನುಭವಗಳು ಢಾಳಾಗಿ ಪದಗಳ ಕ್ಯಾನ್ವಾಸಿನಲ್ಲಿ ಬಣ್ಣ ಮೆತ್ತಿಕೊಳ್ಳುತ್ತಾ ಸಾಗುತ್ತವೆ. ಈ ಕವಯತ್ರಿ ಅನುಭವಿಸಿಯೇ ಬರೆದದ್ದು. ಹಾಗಾಗಿ, ಪಕ್ಕನೇ ಸಮಾಜದಲ್ಲಿರುವ ಮನೆಗಳು, ಅಲ್ಲಿರುವ ಜೀವಗಳು, ಅಡುಗೆ ಒಲೆ ಮುಂದೆ ಉದೋ ಉದೋ ಕೊಳವೆ ಊದುವ ಶಬ್ದಗಳಿಗೆ ಮನೆ ಹೆಂಚುಗಳ ಸಂದುಗಳಲ್ಲಿ ಹೊಗೆ ಹೊರ ಓಡುತ್ತಿರುತ್ತವೆ. ಮಡಿಲಲ್ಲಿ ಮಕ್ಕಳು ಹಾಲು ಕುಡಿಯುತ್ತಿರುತ್ತವೆ. ಮಾತಿಗೆ ಮಾತು ಬೆಳೆದು ಮನೆ ಜಗಳ ಕೇಳುತ್ತಿರುತ್ತವೆ. ರಾತ್ರಿ ಆವರಿಸಿ ಮತ್ತೊಂದು ಬೆಳಗ್ಗೆ ಎಲ್ಲರೂ ಕಣ್ಣುಜ್ಜುತ್ತಾ ಹಿಂದಿನ ದಿನದ ಅದೇ ಪ್ರಸಂಗಗಳು ಮರುಕಳಿಸುತ್ತವೆ. ಈ ಕೆನೀಶ ಶೈನ್ ಬರೆದ "ವುಮನ್" ಎಂಬ ಕವಿತೆ ಅಲ್ಲಿಂದಲೇ ಹುಟ್ಟಿಕೊಂಡಿವೆ...

"ಮಹಿಳೆ"

ನಾನು, ಭೂಮಾತೆ ಮಗಳು
ಜಗದ ಸೃಷ್ಠಿ-ನಾಶಕೆ ಶಕ್ತಳು |
ಅವರು ಅಸಭ್ಯ ಜನರು
ಇವರೇ ನ್ಯಾಯಾಧೀಶರಂತೆ 
ಸರಳ ದುರ್ಬಲ ಜೀವಿಯೆನುವರು|

ಸುಂದರ ಜೀವಿಯ ಜನನವೆಂದವರು
ಸಂಪೂರ್ಣ ಬದುಕನು ತೆಕ್ಕೆಗಿಟ್ಟರು|

ಬಾಲ್ಯದಲಿ,ಇಚ್ಚೆಯಿತ್ತು
ಆಟಕೆ ಬೊಂಬೆ,ಸ್ನೇಹಿತರೆನಗೆ
ಒಳಗೆ ಕರೆದೊಯ್ದು ತಳ್ಳಿದಿರಿ ಕೆಲಸದ ಕೋಣೆಗೆ |
ಹೊರಗೆ, ಸಹೋದರರ ಕೇಕೆ ಆನಂದಗಳು
ಕೇಳುತ್ತಿತ್ತು, ಸಂತಸ ಅನುಭವಗಳು|
ವಿನೋದದ ಆಸೆಗೆ ಕನಸು ಬಿದ್ದು
ಕಳೆದು ಹೋದೆ ಸೂರ್ಯನಿಗೆ ಬಿಸಿಯೆದ್ದು |

ನಾನು ಮಗಳು,
ಕತ್ತೆ ಕೆಲಸಕೆ ಕಾವಲುಗಾರ ಮಗನು |
ಅವನಿಗೆ ಓದಲು ಪುಸ್ತಕಗಳು
ಎನ್ನೆದೆಯ ಅಡುಗೆ ಒಲೆ ತುಂಬಾ ಕೆಂಡಗಳು|

ಅವನೊಬ್ಬ ಗಂಡ
ಬದುಕಿಗೆ ಹೊಸದಾಗಿ ಬಂದ
ಹಣ ಗಳಿಸುತ್ತಿದ್ದವನಿಗೆ ನಾನು ಜೇನು|
ಅಧಿಕಾರವಿತ್ತು, ರಾಜನಂತೆ ಮೆರೆದ
ಪ್ರೀತಿ ಬಯಸಿದ ಜೀವಕೆ
ಬೇಯಿಸಿಯಿಕ್ಕುವುದೇ ರಾತ್ರಿ-ಹಗಲು |

ಸರಿಯುತ್ತಿವೆ ದಿನಗಳಿಗೆ ವರ್ಷಗಳು
ಋತುಗಳು, ಕದಲಲಿಲ್ಲ ಹೆಣ್ಣೆಂಬ ಬದುಕು |
ಪತ್ನಿಯಿಂದ ತಾಯಿಗೆ ಪದೋನ್ನತಿ
ಲಾಲಿಸಿ ಮುದ್ದಿಸಿಕೊಳ್ಳುವ ಮುಖಸ್ತುತಿ|
ಮನೆಗೆರಡು ವಿಭಿನ್ನ ತಂಡಗಳು
ಪತಿಗೊಂದು, ಮಕ್ಕಳಿಗೆ ಇನ್ನೊಂದು
ಎನ್ನ ಎದೆ ಬಯಸಿದ್ದೇ ಮತ್ತೊಂದು|

ಬಲಿತ ರೆಕ್ಕೆ ಬೆಳೆದಿದೆ ಮಕ್ಕಳಿಗೆ
ಹಾರಿದ್ದಾರೆ ಹೊಸ ಗುರಿಗೆ |
ಹೃದಯ ಕಂಪಿಸಿ,ಪೀತಿ ಹಪಹಪಿಸಿ
ದಿನದ ತಳಮಳಕೆ ನಾನು ಮೂರ್ಖಳು |

ಕಲಿಯಬೇಕಿತ್ತು,
ಓದಿ,ಆಟವಾಡಿ ತಣಿಸಬೇಕು
ಬಾಲ್ಯದಲ್ಲೇ ದರೋಡೆಯಾಗಿವೆ ಮನಸು !

ಯಾರು ಸುಂದರ ಮಾಡಿದರು ?
ಈ ಜಗತ್ತು, ಶಾಂತಿ- ಸಂತಸ
ನಾವು ಮಾತೆಯರು
ಪುತ್ರಿಯರು, ಸಹೋದರಿಯರು
ಹೆಚ್ಚೆಂದರೆ, ನಿಮ್ಮಂತೆಯೇ ಮನುಷ್ಯರು |

ನಾವು ಗುಲಾಮರಲ್ಲ !
ಸೇರಿಸಿಕೊಳ್ಳಿ ನಿಮ್ಮ ದಾರಿಗೆ
ಜೊತೆ ಜೊತೆಗೆ ನಡೆದು
ಕಣ್ಣಿಂದಲೇ ಆನಂದಿಸಿರಿ
ಸುಂದರವಿದೆ ಜಗತ್ತು |
ಕನ್ನಡಾನುವಾದ: ರವಿ ಮೂರ್ನಾಡು
ಮೂಲ ಆಂಗ್ಲ ಕವಯತ್ರಿ: ಕೆನೀಶ ಶೈನ್ಸ್


ಮೂಲ ಕವಿತೆ :
"woman"
I am the daughter of eve ,
with the strength to create
or destroy the world,
but you nasty people
Judge and say me as a simple weak being.
Was born to be beautiful being
but you made me suffer my whole life.

During childhood,
I loved playing with dolls  and with friends,
But you wanted me to do the chores
so brother can enjoy.
He enjoyed all the pleasures
and had all the fun,while I was in the
Hot sun,doing the work like a nun.
I worked like a donkey,
but he had the turkey.
As he was the son, and I was none.
He had to read the books and I had the food to cook.
And there came a new man in life ,for whom I was wife.
He earned money and I was honey.
he had the authority and I was in poverty.
He was the ruler and I was the bearer.
All I wanted was the love ,but he gave me the stove.

The  days passed and the seasons changed,but my life hadn’t.
Designation changed from wife to  mother,nursing all the time .
Was split into  two by husband and kids,but the heart always
Desired something else.
Kids grew and flew to new destinations.
the heart does crave and yearn for love as it is stupid,as it doesn’t
have mind to think,and it is  there only to feel.

I want to learn, read ,play and relive those moments which were
Mine  but were snatched away as I was a girl.
But it is us, who make this world beautiful,peaceful and happy.
We are mothers, daughters, sisters above all we are human beings.
Treat us like fellow humans but not like slaves,then you will see
The more beauty of the world.
 -By kenisha shines

1 ಕಾಮೆಂಟ್‌:

 1. ನಿಜ,
  ""ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ" ಎನ್ನುವುದು ದಿಟವಾದ ಮಾತು.

  ಅನುಪಮ ಕವಿಯತ್ರಿ ಕೆನೀಶ ಶೈನ್ ಅವರನ್ನು ಪರಿಚಯಿಸಿದ ನಿಮಗೆ ಶರಣು. ಅವರ ಮೂಲ ಪಾಠದೊಂದಿಗೆ ನಮಗಾಗಿ ನೀವು ಅನುವಾದಿಸಿಕೊಟ್ಟ ಕವನವೂ ಅರ್ಥಪೂರ್ಣವಾಗಿದೆ.

  ಆಕೆ,
  Treat us like fellow humans
  but not like slaves,
  then you will see
  ಎನ್ನುವಲ್ಲಿ ನಿಮ್ಮ
  ನಾವು ಗುಲಾಮರಲ್ಲ !
  ಸೇರಿಸಿಕೊಳ್ಳಿ ನಿಮ್ಮ ದಾರಿಗೆ
  ಜೊತೆ ಜೊತೆಗೆ ನಡೆದು
  ಕಣ್ಣಿಂದಲೇ ಆನಂದಿಸಿರಿ
  ಸುಂದರವಿದೆ ಜಗತ್ತು |

  ಎನ್ನುವುದು ಹೆಚ್ಚು ಮನಮುಟ್ಟುತ್ತದೆ.
  The more beauty of the world.

  ಪ್ರತ್ಯುತ್ತರಅಳಿಸಿ