ಮುಡಿ ಬಿಚ್ಚಿ ಬಾಚುವಳು
ಓಡುವ ಬಣ್ಣಗಳ ಬಳಿದು
ನೆಲಕೆ ಅದ್ಭುತ ಸುರಿದು
ರೋಮಾಂಚನಕೆ ಹರಿದು
ಶರತ್ಕಾಲದ ಬೆಡಗಿ ।
ಬಾಡಿದ ಬೇಸಿಗೆ ಬಿಸಿಗೆ
ಗಾಳಿ ತಂಪುಗಳ ಹಿಂಡಿ
ಹಸಿರೊದ್ದ ಉಡುಗೆಗೆ ಬಳುಕಿ
ಮೈಬಿದ್ದ ಮಂಜಿಗೆ ನಡುಗಿ
ಋತುವಿನ ಹುಡುಗಿ ।
ದಳ ಬಿಟ್ಟ ಹೂಬಳ್ಳಿಗೆ
ಚಿಟ್ಟೆಗಳದ್ದೇ ಮುತ್ತಾಟ
ದುಂಬಿಗಳದ್ದೇ ಹಾರಾಟ |
ಶರತ್ಕಾಲದ ಹುಡುಗಿಯ
ಹೊದ್ದಿವೆ ಚಳಿಯ ದುಪ್ಪಟ |
ಅಸ್ಥಿರ ಕಾಲದ ಘಳಿಗೆ
ವಸಂತಿಗೆ ವಿದಾಯ ಸಂಕಟ ।
ಓಡುವ ಬಣ್ಣಗಳ ಹಿಡಿದು
ಬಾಚುವ ಬಾಚಣಿಗೆ ಮುರಿದು
ತುರುಕಿ ಹೆಗಲೇರಿದೆ
ವ್ಯಾನಿಟಿ ಬ್ಯಾಗು |
ತುಟಿಗೆ ಮುತ್ತಿಕ್ಕುತ್ತಿತ್ತು
ತಂಪು ಮಂಜು !
-ರವಿ ಮೂರ್ನಾಡು