ಆ ಸರದಿ ಸಾಲಿನ ಕೊನೆಯಲಿ
ದೊಡ್ಡ ಗುಂಪಿನ ಮಂದಿ ನಿಂತಿದ್ದಾರೆ|
ಬಡತನಕೆ ಹಸಿದವರ ಹೆಜ್ಜೆಗಳು
ಸ್ವಲ್ಪ ಸ್ವಲ್ಪವೇ ಸರಿದು ಕೆಳಗೆ
ನೆಲದುದ್ದಕ್ಕೂ ಸ್ಪಷ್ಟವಾಗಿವೆ
ಪೂರ್ವಜರ ಚಳವಳಿಗೆ-
ಬಾಯ್ಬಿಟ್ಟ ವಲಸೆ ಧ್ವನಿಗಳು |
ಕಂಗಳ ತುಂಬಾ ಕಪ್ಪು ನೀರು-
ಹೊತ್ತು ನಿಂತವರ
ಗಂಟಲಿಗೆ ಅಗತ್ಯದಷ್ಟು ತುಂಬಿ
ಮೊದಲು ಹುಟ್ಟಿದ ಸ್ವರಕೆ ಹೊರಟ
ಮೊದಲ ವಾಕ್ಯ ಮಾತ್ರವೇ ಉಳಿದಿವೆ ।
ಕಟ್ಟಿದ ಬಾಯಿಗೆ ಮೂಕವಾಗಿ
ತುಟಿ ಒಣಗಿದ ಕಂಗಳು ಕಾದಿವೆ ।
ಹದ್ದು-ಗಿಡುಗಗಳ ರೆಕ್ಕೆಗಳು
ಅಂಕು ಡೊಂಕು ಸಲಕರಣೆಗಳ
ಪಕ್ಕೆಲುಬುಗಳ ತೂಗಿ
ಮಿರುಗು ಕಣ್ಬೊಂಬೆಗಳ ಕಪ್ಪಿನಲಿ
ಸ್ತಬ್ಧಗಳು ಬೇಟೆಗಿಳಿದಿವೆ |
ಪಕ್ಕದ ಕೊಳದಲಿ
ಬರಗಾಲ,ನಾಗರಿಕ ಯುದ್ಧಗಳ ಬಾಯಿಗೆ
ಹಾರುತ್ತಿದ್ದ ನೋಣಗಳ ರೆಕ್ಕೆ
ಒಣಗಿದ ರಕ್ತಕೆ ಮುರಿಯುತ್ತಿವೆ |
ಸಾಲುಗಟ್ಟಿದ ಗುಂಪು ಒಟ್ಟಾಗಿ
ಒಂದೇ ದೇಹಕೆ ಮಾಂಸಖಂಡವಾಗಿ
ಒಬ್ಬನೇ ಮನುಷ್ಯನಾಗಿ
ಸರದಿ ಮುಗಿಸುವ ಬಯಕೆಯಿದೆ |
ಸದಾ ಮೇಲಿರುವ ರಾತ್ರಿಗಳಿಗೆ
ಚಂಡಮಾರುತದ ಮೈದಾನದಲ್ಲಿ
ಕಾಡುಕುದುರೆ ಸವಾರಿ ನಡೆಯುತಿದೆ |
ಅವರು ..
ಅಂತಿಮ ಪಯಣದ ಒಂದು ದಿನ
ಇಲ್ಲೇ ಹುಟ್ಟಿದ ಹಕ್ಕಿಗಾಗಿ
ಅನುವಂಶಿಕವಾಗಿ ಬಂದ ಭೂಮಿಯ
ಒಡೆಯರಾಗುತ್ತಾರೆ |
ಕರುಣೆ ತೋರುವುದಿಲ್ಲ
ಸಾಲಿನ ಕೊನೆಗೆ ಹುಟ್ಟಿದ
ಶುಭ್ರ ಸರೋವರದ ಅಲೆಯಲಿ
ತೇಲಿ ಪ್ರತಿಫಲಿಸಿದ
ಚಿನ್ನದ ಖಡ್ಗದ ಹರಿತದ ತೀವ್ರತೆಗಳು |
ಮೂಡಣಕೆ ಬೆಳಕಿನ ಪ್ರಕಾಶ ಉರಿಯುತಿದೆ
ಅದು ಅವರಿಗಲ್ಲ !
ಅಲ್ಲೆಲ್ಲೋ ಮಳೆಗೆ ಬಿರುಸು ಬಂದಿದೆ
ತೊಯ್ದಿದೆ ಇವರ ಗಲ್ಲ !
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ
ಶತ ಶತಮಾನಗಳಿಂದ ಹಸಿವಿನ ಹೊಡೆತಕೆ ಸಿಕ್ಕು ಒಂದು ಬೃಹದ್ ಸಮೂಹ ಹೇಳ ಹೆಸರಿಲ್ಲದೆ ಅಳಸಿ ಹೋಗುತಿದ್ದರೂ. ಗಮನಿಸಿಯೂ ಗಮನಿಸದಂತೆ ಮೇಜುವಾನಿಯಲ್ಲಿ ನಿರತವಾಗಿರುವ ಆಳುವಾಂಗಗಳು ಮೆರೆಯುತಲೇ ಇವೆ!
ಪ್ರತ್ಯುತ್ತರಅಳಿಸಿಮಾ|| ಹಿರಣ್ಣಯ್ಯನವರು ಹೇಳುವಂತೆ ಯಾವ ಬಿಂದುವಿನಿಂದ ಗೆಬರಿದರೂ ಬಡವರಿಗೇ ತ್ರಾಸು.
" ಒಬ್ಬನೇ ಮನುಷ್ಯನಾಗಿ
ಸರದಿ ಮುಗಿಸುವ ಬಯಕೆಯಿದೆ|" ಎನ್ನುವ ಉದ್ಘೋಷವಿದೆಯಲ್ಲಾ ಇದೇ ಕ್ರಾಂತಿಯ ಮೊದಲ ಸೂತ್ರ.
ಆಗಲೇ,
"ಆ ಸರದಿ ಸಾಲಿನ ಮಂದಿ"ಗೂ ಬದುಕಿನ ನೆಮ್ಮದಿ.
ದನಿ ಎತ್ತಿ ಹಾಡಬೇಕಾದ ಕ್ರಾಂತಿ ಗೀತೆ ಇದು.