ಸೋಮವಾರ, ಜನವರಿ 21, 2013

ಸುಡಾನ್ ಎಂಬ ಸುಡುಗಾಡು ದೇಶದಲ್ಲಿ ಮಾತನಾಡುವ ಮಾಂಸಖಂಡಗಳು !


ಮಹಸ ಎಂಬ "ರೆಫ್ಯೂಜಿ" ಮಹಿಳೆ ಹೇಳಿದ ಕಥೆ ಮತ್ತು ವಿಳಾಸವಿಲ್ಲದ ಊರು !
ಆಫ್ರೀಕಾ ಅಕ್ಷರ ಪ್ರವಾಸ -1 
ಆ ಬೆಟ್ಟದ ಮೇಲೆ ನಿಂತು ಈ ಜಗತ್ತಿನ ತುಂಬಾ ಕಣ್ಣಾಯಿಸಿದಾಗ ಈ ಸುಡಾನ್ ದೇಶದ ಸುಡುಗಾಡಿನಲ್ಲಿ ಹುಟ್ಟುವ ಬದಲು ಬೇರೆಲ್ಲಾದರೂ ಹುಟ್ಟಿದ್ದರೆ ಚೆನ್ನಿತ್ತು ಅಂತ ಅನ್ನಿಸಿತು. ಜನ್ಮ ನೀಡಿದ ಭೂಮಿಯೇ ನೀರಿಲ್ಲದೆ ಮಲಗಿದಾಗ , ಮಳೆ ಸುರಿವ ಮೋಡವೇ ಬಿಸಿಲಿಗೆ ಇಲ್ಲಿ ಬಾಯಾರುತ್ತದೆ. ಪರಿಚಯಸ್ಥರೆಂದು ನಂಬಿದ ನೆರೆಕರೆಯ ಮಂದಿಯೇ ಬಂಡುಕೋರರಾಗಿ ಎದೆಗೆ ಬಂದೂಕು ಹಿಡಿದಾಗ ಕ್ರಿಮಿಕೀಟದ ಮನುಷ್ಯನಿಗೆ ಸುಡಾನಿನಲ್ಲಿ ಏನು ಕೆಲಸ ?.ಕುಳಿತಲ್ಲೇ ಅಂತರ್ಜಾಲದಲ್ಲಿ ಜಗತ್ತನ್ನು ಓದುವ ಮಂದಿಯನ್ನು ನೋಡುವಾಗ ಸುಡಾನ್ ಮರಳುಗಾಡು ಪ್ರದೇಶದ ರಫ್ಯೂಜಿ ಕ್ಯಾಂಪಿನಲ್ಲಿ ಪ್ಲಾಸ್ಟಿಕ್ ಡೇರೆ ಹಾಕಿ, ಮರದ ಬುಡದಲ್ಲೇ ಮಲಗಿ ಇಣುಕಿ ನೋಡುವ ಮಂದಿ ಭಯಗೊಂಡಾರು !. ಜಗತ್ತಿನ  ಅಂತರ್ಜಾಲ ಸುಖದ ಅಭಿವೃದ್ಧಿ ರಾಷ್ಟ್ರಗಳ ಮಂದಿಯ ಬಗ್ಗೆ ಜಿಗುಪ್ಸೆಗೊಂಡಾರು. ಫ್ಯಾಷನ್ ಮೇಳದಲ್ಲಿ ತಕಥೈ ಕುಣಿವ ಹೆಂಗೆಳೆಯರು, ಶಾಲೆ-ಕಾಲೇಜು, ಕಚೇರಿಗೆ ಲಗುಬಗೆಯಿಂದ ಸಿಂಗರಿಸಿ ನಗರ ಪಟ್ಟಣಗಳಲ್ಲಿ ನಡೆದು ನಗುವಿನ ಗಾಳಿ ಬೀಸುವ ಮಹಿಳೆ , ಯುವತಿಯರ ಬಗ್ಗೆ ಇಲ್ಲಿಯ ಮಹಿಳೆಯರು, ಹೆಂಗೆಳೆಯರು ಹೊಟ್ಟೆಕಿಚ್ಚುಪಟ್ಟಾರು. ಅಷ್ಟೊಂದು ಭಯಾನಕವಾಗಿದೆ ಮನುಷ್ಯ ನಂಬಿಕೊಂಡಿರುವ  ಈ ಮಾನವ ಜಗತ್ತು.

ಹಾಗಂತ ಇಲ್ಲಿಯ ಒಬ್ಬ ಮನುಷ್ಯ ಈ ಕಥೆ ಹೇಳುತ್ತಿದ್ದಂತೆ ಮತ್ತೊಂದು ಗುಂಡು ಎದೆಗೆ ತಾಗುತ್ತದೆ. ಒಂದು ಜೀವ ನೆಲಕ್ಕೆ ಬೀಳುವುದನ್ನು ಕಂಡು, ಮತ್ತೊಂದು ಜೀವ ಕಥೆ ಹೇಳದೆ ಓಡುತ್ತಾ ರೆಫ್ಯೂಜಿ ಕ್ಯಾಂಪಿನ ಡೇರೆಯೊಳಗೆ ಅನ್ನ-ನೀರಿಗೆ ತಡಕಾಡುವುದನ್ನು ಕಾಣಬಹುದು. ಹಸಿವಿನ  ಕಟ್ಟಕಡೆಯ ನೋವಿಗೆ ಸಹಿಸಲಾಗದೆ ಮಾರ್ಧನಿಸುವ ಆರ್ತಸ್ವರವೊಂದು ಆ ಡೇರೆಯೊಳಗೆ ಕೇಳುತ್ತಿದೆ.
ಮಹಸ ತಾನೇ ಕಟ್ಟಿದ ಡೇರೆಯ ಹೊರಾಂಗಣದ ಧೂಳು ತುಂಬಿದ ನೆಲದಲ್ಲಿ ಕುಳಿತಿದ್ದಾಳೆ. ಕಂಕುಳಲ್ಲಿ ಹಾಲು ಕುಡಿಯುವ ಹಸುಳೆಯೊಂದು ಅವಳನ್ನೇ ನೋಡುತ್ತಾ ಹಾಲಿಗಾಗಿ ಒಣಗಿದ ತುಟಿಗೆ ನಾಲಗೆ ನೆಕ್ಕುತ್ತಿದೆ. 29ವರ್ಷದ ನಾಲ್ಕು ಮಕ್ಕಳ ಈ ತಾಯಿ ಹೇಳುತ್ತಾಳೆ
"ನನಗೆ ಭಯವಾಗುತ್ತಿದೆ"
ಏಕೆ  ಭಯವಾಗುತ್ತಿದೆ ಎಂಬ ಕಥೆ ಬಿಚ್ಚುತ್ತಾ ಹೋಗುತ್ತಿದೆ ಸುಡಾನ್ ರೆಪ್ಯೂಜಿ ಕ್ಯಾಂಪಿನ ಡೇರೆಗಳಿಂದ .ಗಂಡನಿಲ್ಲದ ಅವರ ಬದುಕು ತುಂಬಾ ಖಂಡನೀಯ. ಮಹಸಳಂತೆಯೇ ಹಲವು ಹತಾಶರಾದ ಮಹಿಳೆಯರ ಸಂಖ್ಯೆ ಇಲ್ಲಿ ಲೆಕ್ಕವಿಲ್ಲದ್ದು. ಇವರ ಗಂಡಂದಿರೆಲ್ಲಾ ದಕ್ಷಿಣ ಸುಡಾನಿನ ಮೇಲ್ಬಾಗದ  ಬ್ಲೂ ನೈಲ್ ರಾಜ್ಯದಲ್ಲಿ ಮಬಾನ್ ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಸುಡಾನ್ ಲಿಬರೇಷನ್ ಪೀಪಲ್ಸ್ ಚಳುವಳಿಯಲ್ಲಿ ಭಾಗವಹಿಸಿದ್ದಾರೆ ಅಥವಾ ಬಲವಂತದಿಂದ ತಳ್ಳಲ್ಪಟ್ಟು ಬಂಡುಕೋರರ ಗುಂಪಿನಲ್ಲಿ ಸುಡಾನ್ ಸರಕಾರದ ಸೈನೈದೊಂದಿಗೆ ಹೋರಾಡುತ್ತಿದ್ದಾರೆ. ಕೆಲವರು ಮಡಿದಿದ್ದಾರೆ. ಸೈನ್ಯದ ಧಾಳಿ ಮಿತಿಮೀರಿದಾಗ ಅಲ್ಲಿಂದ ತಪ್ಪಿಸಿಕೊಂಡು ಮತ್ತೆಲ್ಲಿಗೋ ಗುರುತು ಪರಿಯವಿಲ್ಲದೆ ಓಡಿ ಹೋಗುತ್ತಿದ್ದಾರೆ. ಈ ಮಹಸಳ ಗಂಡನೂ ಕೂಡ ಬಂಡುಕೋರರ ಸೈನ್ಯದಲ್ಲಿ ಸೇರಿಕೊಂಡು ಬ್ಲೂ ನೈಲ್ ರಾಜ್ಯದಲ್ಲಿ ಹೋರಾಡುತ್ತಿದ್ದಾನೆ. ಅವನು ಬದುಕಿದ್ದಾನೆ ಅಥವಾ  ಅಲ್ಲಿಂದ ಓಡಿಹೋಗಿ ಬೇರೆಲ್ಲೋ ಮರೆಯಾಗಿದ್ದಾನೆ. ಹಾಗಂತ  ಮಹಸ ನಂಬಿದ್ದಾಳೆ. ಪತ್ನಿಯಾದವಳು ತನ್ನ ಪತಿಯನ್ನು ಹೀಗೆ ನೆನಪಿಸುತ್ತಾಳೆ. ಗಂಡನಿಲ್ಲದೆ ಮಕ್ಕಳನ್ನು ಬದುಕಿಸುವ ಅವಳ ಬದುಕು ಖಂಡನೀಯ...! ಸುಡಾನ್ ನಾಗರಿಕ ಯುದ್ಧಕ್ಕೆ ಮೌನವಾಗಿ ಒಂದು ಧಿಕ್ಕಾರದ ಧ್ವನಿ ಅಲ್ಲಿ ಮೇಳೈಸುತ್ತಿದೆ...

ಈ ಮಹಸ ಸುಮಾರು 44,000 ರೆಫ್ಯೂಜಿ ಮಹಿಳೆಯರೊಂದಿಗೆ ಇಲ್ಲಿನ ಡೋರೊ ಕ್ಯಾಂಪಿನಲ್ಲಿ ತಮಗೆ ತಾವೇ ಡೇರೆ ಕಟ್ಟಿಕೊಂಡು ಬದುಕುತ್ತಿರುವರು. ಪಕ್ಕದಲ್ಲೇ ಸತ್ತವರನ್ನ ಹೂತ ಹೆಣಗಳ ಅಸ್ತಿಪಂಜರಗಳು ಬಿರುಸು ಗಾಳಿಗೆ, ಮಳೆಗೆ ಮೇಲೆದ್ದು ಅಟ್ಟಹಾಸಗೈಯ್ಯುವುದು. ಪುಟಾಣಿ ಮಕ್ಕಳು ಅದನ್ನೇ ಆಟದ ಸಾಮಾಗ್ರಿಗಂತೆ ಅತ್ತಿಂದಿತ್ತ ಆಟವಾಡುವುದನ್ನು ಕಾಣಬಹುದು. ಮತ್ತೊಂದು ದಿನ ಅವರದ್ದೇ ಹೆಣದ ಅಸ್ತಿಪಂಜರಗಳು ಮತ್ತೊಂದು ಮಗುವಿಗೆ ಆಟದ ಸಾಮಾಗ್ರಿಯಾಗುವುದು. ಮಹಸ ಮತ್ತು ಅವಳಂತೆಯೇ ಇರುವ ಹೆಂಗಸರು  ದಿನ ನಿತ್ಯ ಬಂಡುಕೋರರ ಮತ್ತು ಸುಡಾನ್ ಸರಕಾರದ  ಸೈನಿಕರ ಅಟ್ಟಹಾಸಕ್ಕೆ, ಧೈಹಿಕ ಹಿಂಸೆ, ಧರ್ಮ ಬೇಧ, ಹಿಂಸಾಚಾರಕ್ಕೆ ಬಲಿಯಾಗಿ, ಪ್ರತೀ ಕ್ಷಣ ಪ್ರತೀ ದಿನವನ್ನು ಭಯದಲ್ಲಿ ಕಳೆಯುವುದನ್ನು ಕಲ್ಪಿಸಿಕೊಂಡಾಗ ಯಾವ ಸಂದರ್ಭದಲ್ಲಿ ಧಾಳಿ ಡೇರೆಗೆ ನುಸುಳುತ್ತದೋ ಅದನ್ನು ಎದುರಿಸಲು ದಿನೇ ದಿನೇ  ಅಬಲ ಹೆಂಗಸರು, ಮಕ್ಕಳು ಸಾಮಾರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನೇ ನಂಬಿರುವ  ಮಕ್ಕಳಿಗೆ ಒಪ್ಪೊತ್ತಿನ ಊಟ ಒದಗಿಸಲು ಪರಿತಪಿಸುವುದು ಮಾತ್ರ ಮಹಸ ಹೇಳಿದ ಅವಳ ಅನುಭವ ಬದುಕಿನ ಕಥೆ .  ಹಾಗಂತ ವಿಶ್ವ ಸಂಸ್ಥೆ  ಒದಗಿಸಿದ ರಫ್ಯೂಜಿ ಕ್ಯಾಂಪಿನ ವೀಕ್ಷಕರು ಮತ್ತಷ್ಟೂ ಅನುಭವ ಕಥೆಗಳನ್ನು ದಾಖಲೆ ಮಾಡಿದ್ದಾರೆ.

2011ರಲ್ಲಿ ದಕ್ಷಿಣ ಕೊರ್ಡೊಫನ್ ಮತ್ತು ಬ್ಲೂನೈಲ್ ರಾಜ್ಯಗಳು ಮಾರಣಾಂತಿಕ ಜಟಾಪಟಿಗೆ ಇಳಿದಿದೆ. ಈ ಹೋರಾಟಕ್ಕೆ ಪ್ರಮುಖವಾಗಿ ಹೆಣಗಳಾಗಿದ್ದು ಈ ಪ್ರಾಂತ್ಯದ ನಾಗರಿಕರು. ಕೆಲವರು ತಿಂಗಳು ಗಟ್ಟಲೆ ಅನ್ನವಿಲ್ಲದೆ ಸತ್ತರು, ಹಾಲಿಲ್ಲದೆ ಹಸುಳೆಗಳು ತಾಯಂದಿರ ಮಡಿಲಲ್ಲೇ ಪ್ರಾಣ ಬಿಟ್ಟವು. ಕೆಲವು ತಾಯಂದಿರು ಮಕ್ಕಳ ಸಮೀಪದಲ್ಲೇ ಅನ್ನವಿಲ್ಲದೆ ಹೆಣವಾದರು. ರಾತೋ ರಾತ್ರಿ ಧಾಳಿ ನಡೆಸುವವರ ಉಪಟಳಕ್ಕೆ ಭಯಗೊಂಡು ಗೊತ್ತು ಗುರಿಯಿಲ್ಲದೆ ಪಲಾಯನಗೈಯ್ದರು. ಇವರಲ್ಲಿ ಮಹಿಳೆಯರು ಮಕ್ಕಳನ್ನು ಕಂಕುಳಲ್ಲಿರಿಸಿ ಮನೆ ಸಂಸಾರ ತೊರೆದು ದಿಕ್ಕಾಪಾಲಾಗಿದ್ದಾರೆ. ಇವೆಲ್ಲರನ್ನೂ ಪತ್ತೆ ಹಚ್ಚಿ ವಿಶ್ವ ಸಂಸ್ಥೆಯ ರೆಫ್ಯೂಜಿ ತಂಡ ದಕ್ಷಿಣ ಸುಡಾನಿನಲ್ಲಿ ಕ್ಯಾಂಪ್ ಏರ್ಪಡಿಸಿ ನೆಲೆ ನಿಲ್ಲಿಸಿತು. ಇವರ ಸಂಖ್ಯೆ 1,12,000  ಕುಟುಂಬಗಳು. ಧಾಳಿ ಎಷ್ಟು ಕ್ರೋರವಾಗಿದೆಯೆಂದರೆ, ಹಾಲು ಕುಡಿಯುತ್ತಿದ್ದ ಮಕ್ಕಳು ತಾಯಂದಿರು, ಅನ್ನ ತಿನ್ನುತ್ತಿದ್ದ ಸಂದರ್ಭಗಳಲ್ಲೇ ಧಾಳಿಕೋರರ ಗುಂಡಿಗೆ ಬಲಿಯಾದ ನಿದರ್ಶಗಳು  ಸುಡಾನ್ ಅಮಾನವೀಯ ನೆಲದಲ್ಲಿ ಕಥೆಗಳಾಗಿವೆ. ನಡೆಯುತ್ತಲೇ ಇವೆ. ಕೆಲವು ಹೆಣಗಳು ಯಾರ ಗೋಜಿಗೂ ಸಿಗದೆ ಅಲ್ಲೇ ಮನೆಯೊಳಗೆ ಮಣ್ಣೊಳಗೆ ಹೂತು ಹೋಗುತ್ತಿವೆ.ಆ ಮನೆಯೊಳಗಿಂದ ನಾಯಿ,ಕಾಗೆ, ರಣ ಹದ್ದುಗಳ ಅರಚಾಟ ಕೇಳಬಹುದು. ಮತ್ತಷ್ಟು ನಾಯಿಗಳು ಹೊರಗೆ ಬಂದು ನಾಲಗೆ ನೆಕ್ಕುವುದು, ಕಾಗೆ, ಹದ್ದುಗಳು ಮನೆ ಸುತ್ತಾ ಹಾರಾಡುತ್ತಿರುವವು.

ಮಾನವ ಹಕ್ಕುಗಳ ಕಾರ್ಯಕರ್ತರ ಪ್ರಕಾರ ತಾವು ನೀಡುತ್ತಿರುವ ರಫ್ಯೂಜಿ ಕ್ಯಾಂಪುಗಳಲ್ಲಿ ದಿನನಿತ್ಯ ಸಂಖ್ಯೆಗಳು ಏರುತ್ತಿದೆ. 2012ರ ಮಳೆಗಾಲದ ಸಂದರ್ಭದಲ್ಲಿ ಧಾರಾಕಾರ ಮಳೆಗೆ ಕನಿಷ್ಠ ನಾಲ್ಕು ತಿಂಗಳು ಮನೆ ಮಠವಿಲ್ಲದ ಮಹಿಳೆಯರು ಮಕ್ಕಳು ಇಲ್ಲಿನ ರೆಫ್ಯೂಜಿ ಕ್ಯಾಂಪುಗಳಲ್ಲಿ ಮಳೆ ನೀರಿಗೆ ತೊಯ್ಯುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು. ಅವರು ಚಳಿಯಲ್ಲಿ ನಡುಗುತ್ತಿದ್ದರು.ಹಸಿವಿಗೆ ಮಳೆ ನೀರು ಕುಡಿಯುತ್ತಿದ್ದರು. ಇವರಲ್ಲಿ  ಬ್ಲೂ ನೈಲ್ ರಾಜ್ಯದ ಗಡಿ ರೇಖೆ ದಾಟಿ ಓಡಿ ಬಂದ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚು. ವಯೋವೃದ್ಧರು ನಡೆಯಲಾಗದೆ ಮುಗ್ಗರಿಸಿ ಬೀಳುತ್ತಿದ್ದ ದೃಶ್ಯಗಳನ್ನು ಕಂಡಿದ್ದೇವೆ ಎಂದರು. ವಿಶ್ವ ಸಂಸ್ಥೆಯ ರೆಫ್ಯೂಜಿ ಸಹಾಯಕ ತಂಡಗಳು ಬ್ಲೂನೈಲ್ ರಾಜ್ಯದ ಈ ರೆಫ್ಯೂಜಿಗಳಿಗೆ ದಿನನಿತ್ಯದ ಆಹಾರ ಪದಾರ್ಥ , ಮತ್ತು ಉಳಿದುಕೊಳ್ಳಲು ಡೇರೆ ನೀಡಲಾಗದೆ ಕೈಚೆಲ್ಲುವ ಪ್ರಸಂಗ ಎದುರಾಗಿದೆ. ಈ ಕಾರಣವಾಗಿ ಆಶ್ರಯಕ್ಕಾಗಿ ಬಂದವರು ಅಲ್ಲಲ್ಲಿ ಸಿಕ್ಕಿದ ಮರದ ಬುಡದಲ್ಲಿ ಮಲಗುತ್ತಿದ್ದಾರೆ. ಹಸಿವಿಗೆ ಕಾಡು ಮರಗಳ ಹಣ್ಣು-ಸೊಪ್ಪು ತಿಂದು, ಸುತ್ತಮುತ್ತ  ಕೊಳಚೆ ನೀರು ಹರಿಯವ  ನೆಲದಲ್ಲೇ ನಿಂತುಕೊಳ್ಳುತ್ತಾರೆ. ಇವರ ಗುಂಪಿನಲ್ಲೇ ಇದ್ದಾಳೆ ಈ ನಾಲ್ಕು ಮಕ್ಕಳ ತಾಯಿ ಮಹಸ.

ಇತ್ತೀಚಿನ ಆರು ತಿಂಗಳಲ್ಲಿ ಗಡಿಭಾಗದಲ್ಲಿ ಬಂಡುಕೋರರ ಹೋರಾಟ ಹೆಚ್ಚಾಗಿದೆ.ಆದರೆ, ದಿಕ್ಕಾಪಾಲಾಗಿ ಓಡಿ ಬರುತ್ತಿರುವ ರೆಫ್ಯೂಜಿಗಳ ಸಂಖ್ಯೆ ಕಡಿಮೆಯಾಗಿದೆ. ಬಹುಷಃ ಸಾಕಷ್ಟು ಗಾಯಗೊಂಡ ಮಂದಿ, ಓಡಲು ಅಸಮರ್ಥರಾದ ಮಂದಿ ಸತ್ತು ಹೋಗಿರಬಹುದು. ಅಥವಾ ದಾರಿ ತಿಳಿಯದೆ ಮತ್ತೆಲ್ಲಿಯೋ ಅಲೆಯುತ್ತಿರಬಹುದು. ಆಶ್ರಯ ಪಡೆದುಕೊಂಡು  ಬಂದ ಕುಟುಂಬಗಳಲ್ಲಿ ಶೇ.80ರಷ್ಟು ಮಹಿಳೆಯರು ಮಕ್ಕಳೇ ಇದ್ದಾರೆ. ಕುಟುಂಬದ ವಾರೀಸುದಾರ ಗಂಡನಿಲ್ಲದೆ ಬದುಕುತ್ತಿರುವ ಈ ದಿನಗಳು ಮುಖ್ಯವಾಗಿ ಆಹಾರಕ್ಕಾಗಿ ಪರಿತಪಿಸುವ ಕ್ಷಣಗಳೇ ಹೆಚ್ಚು. ವಿಧೆವೆಯರು ಮತ್ತು ಗರ್ಭೀಣಿ ಮಹಿಳೆಯರು ಮತ್ತಷ್ಟು ತ್ರಾಸ ಪಡುತ್ತಿರುವ ದೃಶ್ಯಗಳನ್ನು ನೋಡುವಾಗ ಕರುಳು ಕಿತ್ತು ಬರುವುದು ಎಂದು ವಿಶ್ವಸಂಸ್ಥೆ ರೆಫ್ಯೂಜಿ ಮೇಲ್ವಿಚಾರಕಿ ಮೈರತ್ ಮುರದೊವ್ ಗದ್ಗದಿತರಾಗುತ್ತಾರೆ. ಏಕೆಂದರೆ, ಅಸಂಖ್ಯ ನಿರಾಶ್ರಿತರಿಂದ ಆವೃತವಾಗಿರುವ ಈ ಕ್ಯಾಂಪುಗಳಲ್ಲಿ ಮಹಿಳೆಯರು ಆಹಾರ ಪದಾರ್ಥಗಳಿಗಾಗಿ ವಿತರಣೆ ಕೇಂದ್ರದ ದೂರದ ಪ್ರದೇಶಗಳಿಗೆ ಗಂಟೆಗಟ್ಟಲೆ ನಡೆದು ಬರುವ ದೃಶ್ಯ ಸರ್ವೇ ಸಾಮಾನ್ಯ.ಅದರಂತೆ ಪಡೆದುಕೊಂಡ ಪದಾರ್ಥಗಳ ಚೀಲಗಳನ್ನು ಹೆಗಲಲ್ಲಿ ಹೊತ್ತೊಯ್ಯುವ ಅತೀ ಸಂಕಷ್ಟದ ಸಂದರ್ಭಗಳು ಇಲ್ಲಿವೆ. ಇದರಲ್ಲಿ ಅಬಲೆ ಮಹಿಳೆಯರು, ವಯೋವೃದ್ದರು, ಬಾಲಕ- ಬಾಲಕಿಯರು ಚೀಲಗಳ ಭಾರಕ್ಕೆ ದಾರಿಗಳಲ್ಲಿ ನಲುಗುತ್ತಿರುವುದು ಕಂಡು ಬರುತ್ತವೆ.

ಈ ಬರಹದ ಅಕ್ಷರ ಪ್ರವಾಸದಲ್ಲಿ ಬರುವ "ಮಹಸ" ಮಹಿಳೆ ಕೇವಲ ಒಂದು ಉದಾಹರಣೆಯಂತೆ ಇಲ್ಲಿನ ಅಸಂಖ್ಯೆ ಮಹಿಳೆಯರನ್ನು ಪತ್ರಿನಿಧಿಸಿದ ಪ್ರತಿಮೆಯಾಗಿದ್ದಾಳೆ. ತಮ್ಮ ಕುಟುಂಬ ಮಂದಿಗೆ, ಮಕ್ಕಳ ಹಸಿವು ಇಂಗಿಸಲು ದಿನದ ಹಲವು ಗಂಟೆಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಪರಿ ಇದೆ. ಇಲ್ಲಿಯೂ ತಮ್ಮತಮ್ಮವರಿಂದಲೇ ಪದಾರ್ಥ ಸಾಗಣೆಗೆ ಜಟಾಪಟಿಗಳು ನಡೆದು ಸಿಕ್ಕಿದ ಪದಾರ್ಥಗಳು ಇನ್ನೊಬ್ಬರ ಪಾಲಾಗುತ್ತದೆ. ಬಲವಂತವಾಗಿ ಮತ್ತೊಂದು ಕುಟುಂಬದ ಮಂದಿಗಳು ಕಸಿದುಕೊಳ್ಳುತ್ತಾರೆ. ಇದು ಜಗತ್ತು ಕಂಡ ಸಮೂಹ  ಅನ್ನದ ಜಗಳ. ಹಸಿವಿನ ತುತ್ತ ತುದಿಯ ಪರಿತಾಪಗಳು. ಇವೆಲ್ಲಕ್ಕಿಂತಲೂ ಮತ್ತಷ್ಟು ಅಪಾಯವೆಂದರೆ, ಆಹಾರ ಪದಾರ್ಥ ಬೇಯಿಸಲು ಕಟ್ಟಿಗೆ ಸಂಗ್ರಹಿಸುವ ಕೆಲಸ. ಈ ವಿಚಾರವನ್ನು ಸ್ವತಃ ಮಹಸ ಬಿಚ್ಚಿಡುತ್ತಾಳೆ. ಹೇಗೆಂದರೆಒಲೆ ಬೆಂಕಿಗೆ  ಕ್ಯಾಂಪುಗಳ ಸಮೀಪದ ಅರಣ್ಯಗಳಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋಗುವುದೇ ಹಸಿವಿಗೆ ಅನ್ನ ತಿನ್ನುವ ತ್ರಾಸಕ್ಕಿಂದ ಅಪಾಯಕಾರಿ. ಅರಣ್ಯಗಳಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಜನಾಂಗದ ಮಂದಿ ರೆಫ್ಯೂಜಿ ಮಹಿಳೆಯರನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಾರೆ. ಅವರಿಂದ ಕಟ್ಟಿಗೆ ಕಡಿಯಲು ಬಳಸುವ ಕತ್ತಿಗಳನ್ನು ಕಸಿದುಕೊಳ್ಳುತ್ತಾರೆ.ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅತೀ ಭಯಂಕರವಾಗಿ ಅಲ್ಲಿಂದ ಓಡಿಸುತ್ತಾರೆ. ಈ ಬುಡಕಟ್ಟು ಜನಾಂಗದ ಮಂದಿ ಮತ್ತು ರೆಪ್ಯೂಜಿ ಮಹಿಳೆಯರ ಮಧ್ಯೆ ಆಗಾಗ್ಗೆ ನಡೆಯುತ್ತಿರುವ ಹೋರಾಟಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮನೆಗೆ ತಂದ ಆಹಾರ ಪದಾರ್ಥ ಬೇಯಿಸಲು ಒಲೆ ಬೆಂಕಿ ಹಚ್ಚುವುದು ಕಷ್ಟಗಳಲ್ಲಿ ಮತ್ತೊಂದು ಸೇರ್ಪಡೆ.

ಮಹಸಳ ಜೊತೆಗಾರ್ತಿಯರಾದ ತಲಿತ ಮತ್ತು ಮಪೆಲ್ ಹೇಳುವಂತೆ ಅರಣ್ಯದಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ಅರಣ್ಯ ಜನಾಂಗದ ಮಂದಿ  ಬೆನ್ನೆಟ್ಟಿ ಕಟ್ಟಿಗೆಗಳಿಂದ ಹೊಡೆದರು. ಅಲ್ಲಿಂದ ಓಡಿಸಿದರು.ಆದ್ದರಿಂದ ತಂದ ಆಹಾರ ಪದಾರ್ಥಗಳನ್ನು ಬೇಯಿಸದೆ, ಮಕ್ಕಳು ಮತ್ತು ಕುಟುಂಬ ಮಂದಿ ಕಾಡು ಎಲೆ ಸೊಪ್ಪು, ಹಣ್ಣು ಹಂಪಲು ತಿಂದು ಹಸಿವು ಇಂಗಿಸಿಕೊಳ್ಳುತ್ತೇವೆ. ಒಲೆಗೆ ಬೆಂಕಿ ಉರಿಸಲು ಅವರಿಗೆ ಗೊತ್ತಿಲ್ಲದಂತೆ ಕಟ್ಟಿಗೆಗಳನ್ನು ಸಂಗ್ರಹಿಸಿ , ಅವರ ಕಣ್ಣಿಂದ ಮುಚ್ಚಿಡಬೇಕು. ಇಲ್ಲದಿದ್ದಲ್ಲಿ ಕೊಂದು ಬಿಡುವರು ಎಂದು ಪ್ರಾಣಭೀತಿಯನ್ನು ಹೊರಗೆಡವುತ್ತಾರೆ. ಮತ್ತಷ್ಟೂ ಅಪಾಯವೆಂದರೆ, ಮಾನ ಕಾಪಾಡುವುದು. ಕಟ್ಟಿಗೆ ಸಂಗ್ರಹಿಸಲು ಹೋಗುವ ಮಹಿಳೆಯರನ್ನು  ಆ ಗುಂಪಿನ ಒಂದಕ್ಕಿಂತ ಹೆಚ್ಚು ಮಂದಿ ಮರಕ್ಕೆ ಕಟ್ಟಿ ಹಾಕಿ ಮುಗಿ ಬೀಳುತ್ತಾರೆ. ಇದೊಂದು ಬಂಡುಕೋರರ ಅತ್ಯಾಚಾರವೆಂಬ ಪ್ರದರ್ಶನದ ಮತ್ತೊಂದು ಯುದ್ದದ ಪ್ರತಿರೂಪ. ಇವರ ಗಂಡಂದಿರು ಸೈನ್ಯದಲ್ಲಿ ಬಂಡುಕೋರರಾಗಿ ನಲುಗುತ್ತಿದ್ದರೆ, ಇವರ ಹೆಂಗಸರು, ಪುತ್ರಿಯರು ಮತ್ತೊಂದು ಗುಂಪಿಗೆ ಬಲವಂತವಾಗಿ ಹರಾಜಾಗುತ್ತಿದ್ದಾರೆ. ಹಲವಷ್ಟು ಸುಲಿಗೆ, ಹತ್ಯೆ ಪ್ರಕರಣಗಳಲ್ಲಿ ರೆಫ್ಯೂಜಿ ಮಹಿಳೆಯರ ವರದಿಗಳನ್ನು ವಿಶ್ವಸಂಸ್ಥೆ  ರೆಫ್ಯೂಜಿ ತಂಡ ಮಾಹಿತಿ ಸಂಗ್ರಹಿಸಿದೆ.  ಇದು ದಿನನಿತ್ಯ ಸುಡಾನಿನಲ್ಲಿ ನಡೆಯುವ ದೈನಂದಿನ ಕಾರ್ಯವೈಖರಿಗಳು. ಹೇಳ ತೀರದಷ್ಟೂ ಜಗತ್ತು ಪರಿಚಯಿಸಿಕೊಂಡ ರೋಗ ರುಜಿನಗಳು ಇಲ್ಲಿ ಹರಿದಾಡುತ್ತಿವೆ. ಆರೋಗ್ಯ ಸೇವೆ ಒದಗಿಸುವಲ್ಲಿ ವಿಶ್ವ ಸಂಸ್ಥೆ ಹೆಣಗಾಡುತ್ತಿದ್ದರೂ, ಇದರ ಮಧ್ಯೆ ಚಿಕಿತ್ಸೆ ದೊರೆಯದೆ ದಿನ ನಿತ್ಯ ಹಲವು ಮರಣ ಯಾತ್ರೆಗಳು ಕಣ್ಣ ಮುಂದೆಯೇ ಸಾಗುತ್ತಿದೆ. ಅದರಲ್ಲಿ ಹಲವು ಭಯಾನಕ ರೋಗಕ್ಕೆ ಬಾಧಿತರಾದ ಮಹಿಳೆಯರು, ಅವರ ಮಕ್ಕಳು ಮಸಣವಿಲ್ಲದ ಮರಳಲ್ಲಿ ಹೂತು ಹೋಗುತ್ತಿದ್ದಾರೆ.

ವಿಶ್ವ ಮಾನವ ಹಕ್ಕುಗಳ ವೀಕ್ಷಕ ತಂಡ 2012ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದ ವರದಿ ಭಯಾನಕವಾಗಿದೆ. ಅಪ್ಪರ್ ಬ್ಲೂ ನೈಲ್ ರಾಜ್ಯದ ಗಡಿಭಾಗದಲ್ಲಿರುವ ಮತ್ತೊಂದು ರೆಫ್ಯೂಜಿ ಕ್ಯಾಂಪಿನಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಯರ ಅತ್ಯಾಚಾರ ಪ್ರಕರಣಗಳಲ್ಲಿ ಬೀಭತ್ಸ ಕೃತ್ಯಗಳು ದಾಖಲಾಗಿದೆ ಎಂದಿದೆ. ಕ್ಯಾಂಪಿನಲ್ಲಿದ್ದ ಮಹಿಳೆಯರು  ಕಟ್ಟಿಗೆಗೆ ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಹಲವು ತಾಸುಗಳವರೆಗೆ ಪರದಾಡಬೇಕಾದ ಪರಿಸ್ಥಿತಿಯಿದೆ. ಹೀಗೆ ಹೋದ ಮಹಿಳೆಯರು ಮತ್ತು ಹೆಂಗೆಳೆಯರ ಮೇಲೆ ಬಲವಂತ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ಹಸಿವಿಗೆ ಅನ್ನ ಬೇಯಿಸಲು ಕಟ್ಟಿಗೆ ಸಂಗ್ರಹಿಸದೇ ಇರುವ ಸ್ಥಿತಿ ಒಂದೆಡೆಯಾದರೆ, ಹೋದವರು ಅತ್ಯಾಚಾರಕ್ಕೀಡಾಗಿ ಶವಗಳಾಗಿ ಬರದೇ ಇರುವ ಮತ್ತೊಂದು ಅಮಾನುಷ ಸ್ಥಿತಿ. ಜಾಗತಿಕ ಡೆನಿಷ್ ರೆಫ್ಯೂಜಿ ಕೌನ್ಸಿಲ್ ಇತ್ತೀಚೆಗೆ 2012ರ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿಯೂ ಇದನ್ನೇ ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿದೆ.

ಹಾಗಾದರೆ, ಸುಡಾನ್ ದೇಶದಲ್ಲಿ ಏಕೆ ಮಾನುಷ ಕೃತ್ಯಗಳು ಹೀಗೆ ನಡೆಯುತ್ತಿದೆ ಎಂಬ ಉತ್ತರಕ್ಕೆ ನಲುಗುವ ಮಾತುಗಳು ಜಗತ್ತಿಗೆ ಸಿದ್ದವಾಗುವುದು. ಇದರ ನಾಗರಿಕ ಹೋರಾಟಗಳ ಪುಟಗಳು 1956ರಿಂದ ಬ್ರಿಟೀಷ್ ಮತ್ತು ಈಜಿಪ್ಟಿನಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಲಭಿಸಿದಂದಿನಿಂದ ಹೊಗೆಯಾಡುತ್ತಿದೆ. ಅದು ಏಕೆ ಮತ್ತು ಅದರ ಅನುಭವಗಳೇನು ಅನ್ನುವ ಮಾತುಗಳು ಇದೀಗ ಬಿಚ್ಚಿಕೊಳ್ಳುವುದು. ಕಗ್ಗತ್ತಲೆ ಖಂಡ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಆಫ್ರೀಕಾದ ಬಹುತೇಕ ರಾಷ್ಟ್ರಗಳು ಈ ಹಿಂದಿನಿಂದಲೂ ಹಲವು ಅಮಾನುಷ ಇತಿಹಾಸಕ್ಕೆ ಜಗತ್ತಿನಲ್ಲಿ ಭಾಜನರು. ಇದರಲ್ಲಿ ಕ್ಯಾಮರೂನ್,ಛಾಡ್, ಕೋಂಗೋ, ಮಾಲಿ,ನೈಜಿರಿಯಾ, ಇತಿಯೋಪಿಯಾ, ಉಗಾಂಡ, ಕಿನ್ಯಾ,ಸೊಮಾಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಸೇರಿಕೊಂಡಿವೆ. ಆದರೆ, ಸುಡಾನ್ ಎಂಬ ಸುಡುಗಾಡು ದೇಶದಲ್ಲಿ ನಾಗರಿಕ ಯುದ್ದಗಳು ನೆಲದ ಪರಿಚಯವನ್ನು ವಿಳಾಸವಿಲ್ಲದ ಊರುಗಳನ್ನಾಗಿಸುವ ಗುರಿ ಮಾತ್ರ ಮಾನವ ಜನಾಂಗವನ್ನು ದಂಗು ಬಡಿಸುತ್ತದೆ. ಅದು ಹೇಗೆ?
(ಮುಂದೆ ನಿರೀಕ್ಷಿಸಿ)
-ರವಿ ಮೂರ್ನಾಡು