ಶುಕ್ರವಾರ, ಜನವರಿ 18, 2013

ನಾ ತೆರೆದ ಜಗತ್ತು !ಎಲ್ಲಾ ಉಳಿಪೆಟ್ಟು ಹಲ್ಲುಗಳು ಕೊರೆದು
ಎದೆ ಕಗ್ಗಲ್ಲ ಸಿಗಿಯಲಿ
ಅಲ್ಲೊಂದು, ಸುಂದರ ಶಿಲ್ಪ ಸೆಟೆದು
ಪೆಟ್ಟುಗಳಿಗೂ ನಗುತಿರಲಿ |

ಊರೆಲ್ಲಾ ಕೊಳಚೆಗಳು ಹರಿದು
ಎದೆಕೊಳಕೆ ದುರ್ವಾಸನೆ ಉಕ್ಕಲಿ
ಅಲ್ಲೊಂದು ಕಮಲ ದಳಗರಳಿಸಿ
ಜೇನ್ನೊಣ ಮಕರಂಧವೀರುತ್ತಿರಲಿ |

ಎದೆಎದೆಯ ಆರ್ತಸ್ವರಗಳು ಮೊರೆದು
ಸಾಂತ್ವನದ ಕಿವಿಗಳ ಹುಡುಕಲಿ
ನನ್ನೆರಡು ಕಿವಿಗಳಿಗೆ ಮಾತ್ರ
ಧಾವಿಸಿ ಸುಮ್ಮನಾಗಲಿ !

ಜಗದಲ ಪ್ರವಾಹಗಳು ನೆರೆಬಿದ್ದು
ಸಂದು ಸಂದುಗಳ ತಡವಲಿ
ನನ್ನೆದೆಯ ಕಾಲುವೆಗೆ ಹರಿದು
ನೊರೆ ಉಕ್ಕಿ ನಲಿಯುತಿರಲಿ |

ಅವರಿವರ ನೋವುಗಳು ಕೂಗೆದ್ದು
ಆಗಸಕೆ ಮೊರೆಯಿಡಲಿ
ಅಲ್ಲೊಂದು,ಎನ್ನ ಮೋಡದ ಹೃದಯ
ತಂಪಾಗಿ ಮಳೆ ಸುರಿಯಲಿ |

ಸುಡುಸುಡು ದೃಷ್ಠಿಗಳು ದುರುಗುಟ್ಟಿ
ತಂಪು ಕಣ್ಣೆರಡ ಹುಡುಕಲಿ
ನನ್ನೆರಡು ಕಂಗಳು ಮಾತ್ರ
ಬೆಂಕಿ ನೋಟಕೆ ಹನಿಯಲಿ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ