ಸೋಮವಾರ, ಜನವರಿ 28, 2013

ಒಂದು ಸಾವಿರ ವರ್ಷಗಳಿಗೆ !



ಈ ಕ್ಷಣದಿಂದ ಜಿಗಿಯುತ್ತೇನೆ ಸಾವಿರ ವರ್ಷಗಳಿಗೆ
ವಾಲುತ್ತಾ ಪ್ರಾಚೀನ ಮರವೊಂದರ ಭವಿಷ್ಯದ ನೆರಳಿಗೆ
ಹುಬ್ಬೆತ್ತಿ ವಿಚಾರ ಮಾಡುವಿರೋ ನೆರಿಗೆ ಮೂಡಿಸಿ ಹಣೆಗೆ
ಉದುರುವ ಎಲೆಗಳ ಸಾವಿರಾರು ಸಾವಿಗೆ?

ಪ್ರಾಮಾಣಿಕತೆಯಿಲ್ಲದ ಸಮಾನತೆ ಪಡೆದ ನಾವು
ಸಮಯಗಳ ಆಯ್ಕೆಗೆ ಬದಲಾಗುವ ಶತ್ರುಗಳೇ ?
ಕೂದಲು,ಚರ್ಮ,ಗಡಿಯಾರದ ಕದಲಿಕೆ ಸ್ವಾಗತವು
ನೋಡಲಾಗದ ಕಂಗಳ ಮುಚ್ಚಿ ನಿಷೇಧಿಸುವುದೇ?

ಮೊದಲು ಜನಿಸಿದವರಿಗೆ ಭಾರವಿದೆ ಬದುಕಿಗೆ
ಹಗುರಾಗುತ್ತೇವೆ ಭವಿಷ್ಯ ದಿನಗಳ ಭಾರಕೆ
ಪ್ರತೀ ಹೆಜ್ಜೆಯ ಕುರುಡು ಪ್ರಯಾಣದ ತಪ್ಪಿಗೆ
ದಾಟಬಹುದೇ ಅದೇ ರಸ್ತೆಗೆ, ಅದರಂತೇ ಇನ್ನೊಂದಕೆ?

ವಾಲುತ್ತೇವೇ ನೆರಳಿಗೆ, ಅದೇ ಮರ ನೋಡುವುದು
ಪುಡಿಯಾದ ಕಲ್ಲೊಂದರ ಧೂಳು ಪತ್ತೆಯಾಗುವುದು
ಅಚ್ಚರಿಯಾಗುವುದು ,ಧೂಳಿನ ಒಂದು ಕಣ ನನ್ನದೇ
ಮೂಳೆಗಳು ನನ್ನವೇ, ಪ್ರಶ್ನೆಗಳೂ ತುಕ್ಕು ಹಿಡಿಯಬಹುದೇ ?
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

2 ಕಾಮೆಂಟ್‌ಗಳು:

  1. ಹೊಸ ಬದುಕಿನ ಹುಟ್ಟಿಗೆ ಹಿಂದೊಮ್ಮೆ ನೆಲಕೊರಗಿದದವರದೇ ಮೂಲ ವಸ್ತು. ಬದುಕಿನ ಚಕ್ರದ ತುಂಬ ಇಂತವೇ ಪ್ರಶ್ನೆಗಳು.

    ಕಡೆಯ ಚರಣವಂತೂ ಭಗವದ್ಗೀತೆಯ ಸಾರ... ವಾವ್...

    ಪ್ರತ್ಯುತ್ತರಅಳಿಸಿ
  2. ಸಶಕ್ತ ಕವಿತೆಯೊಂದನ್ನು ಓದಲೊದಗಿಸಿದ್ದಕ್ಕೆ ಧನ್ಯವಾದಗಳು ರವಿಯಣ್ಣ. ನಿಮ್ಮ ಕಾವ್ಯ ಪ್ರೌಢಿಮೆಗೆ ಶರಣು.

    ಪ್ರತ್ಯುತ್ತರಅಳಿಸಿ