ಅವರೊಂದು ನಾಯಿ ಸಲಹುವರು
ತಲೆ ಸವರಿದಾಗ
ಬೆರಳು ನೆಕ್ಕುವುದು|
ದುರುಗುಟ್ಟಿದಾಗ
ಕುಂಯ್ ಗುಟ್ಟಿ
ಬಾಲ ಅಲ್ಲಾಡಿಸುವುದು !
ಕೈಯೆತ್ತಿದಾಗ
ಬೊಗಳುವುದು ಗುರುಗುಟ್ಟಿ-
ಹೊಡೆದಾಗ ,ತಿರುಗಿ ಕಚ್ಚುವುದು|
ಹುಚ್ಚು ಹಿಡಿದು
ಚುಚ್ಚು ಮದ್ದು ಚುಚ್ಚಿ
ಹೊಡೆದು ಕೊಲುವರು !
ಅವರೊಬ್ಬ ಮನುಷ್ಯನ ಸಲಹುವರು
ತಲೆ ಸವರಿದಾಗ
ತಿರುಗಿ ಸವರುವನು|
ಪ್ರೀತಿಸಿದಾಗ
ತಾನೇ ಪ್ರೀತಿಯಾಗುವನು|
ದುರುಗುಟ್ಟಿದಾಗ
ಎಗರಾಡಿ ದುರುಗುಟ್ಟಿ -
ತಿರುಗಿ ಎಗರುವನು|
ಹೊಡೆದಾಗ,
ತಿರುಗಿ ಹೊಡೆವನು
ಚುಚ್ಚು ಮಾತು ಚುಚ್ಚಿ
ಇಷ್ಟಿಷ್ಟೇ ಮೌನ ಸಾಯುವುದು
ಗುಲಾಮ ಎನುವರು !
-ರವಿ ಮೂರ್ನಾಡು
ಚಿತ್ರ ಕೃಪೆ:ಗೂಗಲ್ ಅಂತರ್ಜಾಲ
ತೀವ್ರ ವಿಷಾದ ಹೊತ್ತ ಕವನ.
ಪ್ರತ್ಯುತ್ತರಅಳಿಸಿಮನುಜನ ನಮಕ್ ಹರಾಮ್ ಬುದ್ಧಿ ಮತ್ತು ಅವನ ಪಾಲಕ ಭಂಜಕತ್ವ ಕಂತ್ರೀತನ ಇಲ್ಲಿ ಅನಾವರನವಾಗಿದೆ.
ನಿಯತ್ತಿಗೆ ನಾಯಿ ಎನ್ನುವ ಸಂಕೇತವೂ ಈಗ ಪುನರ್ ಪರಿಶೀಲನೆಗೆ ಒಳಗಾಗಬೇಕಾದ ಸಂಗತಿಯೇ.
ಹಾಗೆಯೇ, ನಿಮ್ಮನ್ನು ಯಾಮಾರಿಸಿದವರು ಯಾವತ್ತಿಗಾದರೂ ಪಶ್ಚಾತ್ತಾಪದ ಬೇಗೆಯಲಿ ಬೆಂದರೆ ಅದೇ ಪುಣ್ಯ.
ಉತ್ತಮ ಕವನ.