ಮಂಗಳವಾರ, ಜನವರಿ 29, 2013

ಗಾಂಧಿ ಚಿತ್ರದ ನೋಟು !ನೋಟು ಬಂತು ಬೀದಿಗೆ
ಮುದ್ರೆಯೊತ್ತಿ ಗಾಂಧಿಗೆ
ಸರದಿ ಜನರು ಬ್ಯಾಂಕಿಗೆ |

ತಿಂಗಳಿಡೀ ಸುರಿದ ಬೆವರು
ದುಡಿದ ಮಂದಿ ಕನಸಿಗೆ |
ಅಕ್ಕಿ,ಬೇಳೆ,ಶಾಲೆ ಶುಲ್ಕ 
ಹೆಂಡತಿ, ಮಕ್ಕಳ ಬದುಕಿಗೆ |
ದುಡಿವ ಮಹಿಳೆ ಗಂಡನಿಗೆ
ನೋಟು ಹೆಂಡ ಮೋಜಿಗೆ |

ಜನನಾಯಕ ಕೊಳ್ಳೆಹೊಡೆದ
ನೋಟು ತುಂಬಾ ಓಟಿಗೆ |
ಸುಂಕವೆಂಬ ಹೆಸರಿನಲ್ಲಿ
ಸೊಂಟ ಮುರಿವ ಜನರಿಗೆ |
ಅಕ್ಕಿ,ರಸ್ತೆ,ನೀರು,ಹೆಂಡ
ಟೆಂಡರು ಕರೆದು ಸೋರಿದೆ |

ನೋಟಿಗಾಗಿ ಮದುವೆಯಾದ
ವರ ವಧುವಿನ ಭಿಕ್ಷುಕ |
ಹಣಕ್ಕಾಗಿಯೇ ಹೆಣವಾಗುವ
ಮಂದಿ ಮಸಣ ಸೂತಕ |
ಹೆಣ ಹೋಗುವ ದಾರಿಯಲ್ಲಿ
ನಾಣ್ಯ ಎಸೆವ ನಾಟಕ |
ಸತ್ತವನ ಹಣಕ್ಕಾಗಿಯೇ
ಬಂಧ,ಬಂಧ ಮಾರಕ |

ವಿದ್ಯೆ ಕೊಡುವ ಶಾಲೆಗಳಿಗೆ
ನೋಟು ವಿದ್ಯೆ ಕರಗತ |
ನೀತಿ ನುಡಿವ ಪಾಠಗಳು
ನಕಲಿ ಸಹಿಗೆ ಸೀಮಿತ |
ಪದವಿಗೊಂದು ಉದ್ಯೋಗಕೆ
ಶುಲ್ಕ ಪಡೆವ ವ್ಯಾಪಾರ |
ಲಂಚ ಕೊಡುವ ಕೆಲಸಗಳಿಗೆ
ಗಾಂಧಿ ನೋಟೇ ಅಪಚಾರ |

ಆಸ್ಪತ್ರೆಯ ದೇಗುಲದಲಿ
ವೈದ್ಯ,ದಾದಿ ದೇವರು|
ಹಣವಿಲ್ಲದೆ ಸತ್ತ ರೋಗಿ
ಹೆಣದ ಸಾಲಿಗನೆಂಬರು|
ಕೋರ್ಟು ಕಚೇರಿ ಮೇಜಿನಲ್ಲಿ
ಅಧಿಕಾರಿ ಸತ್ಯ ಸಭ್ಯರು
ಲೋಕಾಯುಕ್ತದೆಸರಿನಲ್ಲಿ
ನೋಟು ಮುಟ್ಟವವೆಂಬರು|

ಕೂಲಿಯವನ ನೋಟಿನಲ್ಲಿ
ಬೆವರ ನಾತ ಹೇಸಿಗೆ |
ಶ್ರೀಮಂತನ ಜೇಬಿಗಿಳಿದು
ಸುಗಂಧ ಅರಳಿ ನಾಸಿಕ |
ನೋಟಿಗಾಗಿ ಹಲವು ವೇಷ
ಜಗದ ತುಂಬಾ ಜನರಿಗೆ  |
ಬೆವರ ಹನಿಗೆ ಸತ್ಯವಿದೆ
ಅನ್ನ ತುಂಬಿ ಹೊಟ್ಟೆಗೆ |

ಬಾರು,ಕ್ಲಬ್ಬು ರಾತ್ರಿ ಮಬ್ಬು
ಬಿದ್ದ ಹೆಂಡ ನೋಟಿಗೆ |
ಸೊಂಟ ಕುಣಿವ ಬೆಲೆವೆಣ್ಣಿನ
ಬಾಯಿ ತುಂಬ ಮುತ್ತಿಗೆ |
ಅನ್ನಕ್ಕಾಗಿ ಸೆರಗು ಸರಿದ
ಹಾದರ ಹೆಣ್ಣ ಮಡಿಲಿಗೆ |
ಅದೇ ನೋಟು ಪೂಜೆಗೆಂದು
ಗುಡಿ ದೇವರ ಹುಂಡಿಗೆ |

ಊರು ದೇಶ ಸುತ್ತಿ ನೋಟು
ಮಿಥ್ಯ ಸತ್ಯ ನೋಡಿದೆ |
ಕಣ್ಣೀರು, ಬೆವರು,ರಕ್ತ
ನೆಕ್ಕಿ ಸ್ವಲ್ಪ ಮಾಸಿದೆ |
ಸತ್ಯಮೇವ ಜಯತೇ ವಾಕ್ಯ
ಗಾಂಧಿ ನೋಟು ಅಪ್ಪಿದೆ |
ಅನಾಚಾರ, ಅತ್ಯಾಚಾರ
ನಿತ್ಯ ಅದಕೆ ನಡೆದಿದೆ |

ನೋಟು ಬಂತು ಬೀದಿಗೆ
ಮುದ್ರೆಯೊತ್ತಿ ಗಾಂಧಿಗೆ
ಸರದಿ ಜನರ ಬದುಕಿಗೆ |
-ರವಿ ಮೂರ್ನಾಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ