ಭಾನುವಾರ, ಜನವರಿ 27, 2013

ಬೆರಳಿಗಂಟಿದ ಸುಡಾನ್ ಇತಿಹಾಸ ಪುಟದ ಧೂಳಿನ ಕಣಗಳು: ಜಗತ್ತು ಶಾಪ ಹಾಕಿದ್ದೇ ಹೆಚ್ಚು |

ಆಫ್ರೀಕಾ ಅಕ್ಷರ ಪ್ರವಾಸ -2
ಹಾಗೇ ನೋಡಿದರೆ, ಈ ಸುಡಾನ್ ಆಫ್ರೀಕಾ ಖಂಡದಲ್ಲೇ ಅತೀ ದೊಡ್ಡ ರಾಷ್ಟ್ರ. ಆದರೇನು, ಅಷ್ಟೇ ದೊಡ್ಡ ಮಾನವ ಗಂಡಾಂತರದ ರಾಷ್ಟ್ರವೂ ಕೂಡ ಹೌದು. ಆಷ್ಟೇ ಪ್ರಮಾಣದ ಇಲ್ಲಿಯ ಮಾನವ ಹತಾಶೆಗಳು ತುತ್ತ ತುದಿಯಲ್ಲಿ ಗೋಗರೆಯುತ್ತಿವೆ. ತಡೆ ರಹಿತ ಧರ್ಮಯುದ್ದ, ಹೋರಾಟ ನಡೆಯುತ್ತಲೇ ಇದ್ದ ಈ ಕಪ್ಪು ನೆಲದ ಸುಡಾನಿನ್ನಲ್ಲಿ, ಹಸಿವು ಹೋರಾಟ ನಡೆಸಿತು, ರೋಗಗಳು ಸತ್ಯಾಗ್ರಹ ನಡೆಸಿ ಸದ್ದಿಲ್ಲದಂತೆ ಮನುಷ್ಯರು ಮಣ್ಣೊಳಗೆ ಸೇರಿಕೊಂಡರು.ತಮ್ಮ ತಮ್ಮಲೇ ರಕ್ಷಿಸಿಕೊಳ್ಳಲು ತಮ್ಮ ತಮ್ಮವರನ್ನೇ ಹೊಡೆದು ಕೊಂದರು. ಹಸಿವಿಗೆ ಅನ್ನವಿಲ್ಲದ ಘಳಿಗೆಯಲ್ಲಿ ಪಕ್ಕದವರ ಅನ್ನಕ್ಕಾಗಿ ಜಗಳ ಕಾದು,ಪ್ರಾಣಿಗಳ ಹಾಗೇ ಕಚ್ಚಾಡಿ ಹಸಿವು ಇಂಗಿಸಿಕೊಂಡ ನಿದರ್ಶನಗಳನ್ನು ವಿಶ್ವ ಸಂಸ್ಥೆ ರೆಫ್ಯೂಜಿ ತಂಡ ವಿಶ್ವ ದಾಖಲೆಯಾಗಿ ಕಣ್ಣ ಮುಂದೆ ಬಿಚ್ಚಿಡಬಹುದು. ಹಲವು ದಶಕಗಳ ಜಟಾಪಟಿಯಲ್ಲಿ ಸುಧಾರಣೆಗೆ ಹಲವು ದಶಕಗಳೇ ಹಿಡಿಯಬಹುದಾದಷ್ಟು ಸಾಮಾಜಿಕ ಅಸ್ತವ್ಯಸ್ತತೆಗಳು ಹರವಿಕೊಂಡಿವೆ ಸುಡಾನಿನಲ್ಲಿ. ಇರಲು ಮನೆ ಕಟ್ಟುವ ನೆಲ ಬಿರುಕಿಟ್ಟಿದೆ ಫಿರಂಗಿಯ ಸದ್ದುಗಳಿಗೆ. ನೆಲವಿದ್ದರೂ ಮನೆಯಿಲ್ಲ. ತಾಯಿ ಇದ್ದರೂ ತಂದೆಯಿಲ್ಲ.ಮಕ್ಕಳಿದ್ದರೂ ಇವರೂ ಯಾರೂ ಇಲ್ಲ.ಎಲ್ಲರೂ ಇದ್ದರೂ ತಿನ್ನಲೂ ದುಡಿಯುವ ಮೂಲವಿಲ್ಲ.ಒಟ್ಟಾರೆ  ಹಳಿದುಹೋದ ನಾಗರಿಕ ಬದುಕೊಂದು ಹೊಸ ವೇಷಕಟ್ಟಿ ನಿಲ್ಲಬೇಕಾದ ಸ್ಥಿತಿಯಿದೆ ಎಲ್ಲಾ ನೆಲಕ್ಕೆ ಹೂತು ಹೋಗಿ ಅಂಬರ ಮಾತ್ರ ತೆರದ ಈ ಮಣ್ಣಿನಲ್ಲಿ. ಮನುಷ್ಯ ಯಾವುದನ್ನೂ ಮಾಡಿ ಬದುಕುವ ಮೂಲಗಳನ್ನು ಪಡೆದುಕೊಳ್ಳಬಹುದೋ ಅದೆಲ್ಲವೂ ಈ ನೆಲದಲ್ಲಿ ಹೊಸ ಹುಟ್ಟಿಗೆ ಕಾಯುತ್ತಿದೆ. ಇಷ್ಟಕ್ಕೂ ಇಲ್ಲೊಂದು ಆಡಳಿತ ಸರಕಾರ, ಸ್ಥಳೀಯ ಆಡಳಿತ ಸಂಸ್ಥೆ ರಚನೆಗೊಂಡಲ್ಲಿ ಅವರೊಂದು ಹೊಸ ಸವಾಲು ಜಗತ್ತಿಗೆ ಎದುರಾಗುವುದು.

ಮನುಷ್ಯ ಅನ್ನುವ ಜೀವಿ ಸುಮಾರು ಒಂಬತ್ತು ಮಿಲಿಯನ್ ವರ್ಷಗಳ ಹಿಂದೆ ಸುಡಾನಿನಲ್ಲಿ ಜೀವಿಸಿದ್ದ.  ಮಧ್ಯ ಆಫ್ರೀಕಾದಿಂದ ಉಕ್ಕಿ ಮೇಡಿಟರೇನಿಯನ್ ಸರೋವರದವರೆಗೆ ನಾಲ್ಕು ಸಾವಿರ ಮೈಲುಗಳ ಉದ್ದ ಹರಿಯವ ನೈಲ್ ನದಿಯ ಸುತ್ತಳತೆಯಲ್ಲಿ ನಾಗರಿಕ ಬದುಕು ಸಾಗಿದ ಸ್ಪಷ್ಟ ಕುರುಹುಗಳಿವೆ. ಕಳೆದ ನಾಲ್ಕು ಶತಮಾನಗಳ ಹಿಂದೆ ಸುಡಾನಿನಲ್ಲಿ ಕ್ರೈಸ್ತರು ಜಾರಿಗೆ ತಂದ ಎತ್ತುಗಳಿಂದ ನೀರೆತ್ತುವ ತಂತ್ರ ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಹೊಸತೊಂದು ಆಶಾಕಿರಣ ಮೂಡಿಸಿತ್ತು. ಇದೇ ಸಂದರ್ಭ ಕ್ರಿ.ಪೂ.525ರಲ್ಲಿ ಈಜಿಫ್ಟನ್ನು ಆಳುತ್ತಿದ್ದ ಕೇಂಬೆಸಿಸ್ ರಾಜನ ಕಾಲದಲ್ಲಿ ಪರ್ಷಿಯನ್ನರು ಒಂಟೆಗಳನ್ನು ತಂದು ಈ ನೆಲದಲ್ಲಿ ಮೇಯಲು ಬಿಟ್ಟರು.

ಹೋಮರ್ ಎಂಬ ರಾಜನಿಗೆ ಸುಡಾನ್ ಬಗ್ಗೆ ಗೊತ್ತಿತ್ತು. ಅವನ ರಾಷ್ಟ್ರದ ಪ್ರಜೆಗಳು ವ್ಯಾಪಾರಕ್ಕಾಗಿ ಸುಡಾನಿಗೆ ಬಂದು ಅರಬ್ ವಜ್ರಗಳಿಗೆ,ಸಾಂಬಾರ ಪದಾರ್ಥಗಳಿಗೆ ಮತ್ತು  ಗುಲಾಮರ ಸಾಗಾಣೆಗೆ ಬಟ್ಟೆಗಳು, ವೈನ್ ಹಾಗೂ ಹೊಳೆಯುವ ಕಲ್ಲುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಜಗತ್ತಿಗೆ ಹೆಂಗಸರು, ಮಕ್ಕಳನ್ನು ಗುಲಾಮರನ್ನಾಗಿ ಮಾನವ ಮಾರಾಟ ಸಂತೆ ಇಲ್ಲೇ ಕಳೆಕಟ್ಟುತ್ತದೆ. ಮಾನವ ಮಾರಾಟದ ದಲ್ಲಾಳಿಗಳಿಗೆ ಕೆಲಸ ಸಿಕ್ಕಿದ್ದೇ ಇಲ್ಲಿಯ ಮಾನವ ಸಂತೆಗಳಿಂದ. ನೆರೋ ಎಂಬ ರಾಜ ತನ್ನ ವಿಲಕ್ಷಣ ಸೈನ್ಯವನ್ನು ಸುಡಾನಿಗೆ ದಂಡ ಯಾತ್ರೆ ಕಳುಹಿಸುತ್ತಾನೆ. ಈ ದಂಡಯಾತ್ರೆಯ ಸೈನ್ಯಾಧಿಕಾರಿ ಅಚಾನಕ್ಕಾಗಿ ದಕ್ಷಿಣ ಸುಡಾನ್ ಪ್ರದೇಶದಲ್ಲಿ ನಿಂತು ಬಿಟ್ಟ. ಇದಕ್ಕೆ ಆಂಗ್ಲ ಭಾಷೆಯಲ್ಲಿ "ಸಡ್ಡ್" ಅನ್ನುವ ಹೆಸರು ಬಂತು. ಇಲ್ಲೇ ಈ ಭಾಗದ ಹಲವು ರಾಜ್ಯಭಾರಗಳನ್ನು ತೆಕ್ಕೆಗೆ ತೆಗೆದುಕೊಂಡ ನೆರೋ ಕಾರ್ಯಾಭಾರ ಅಲ್ಲಿರುವ ಎಲ್ಲಾ ರಾಜರನ್ನು ತಮ್ಮ ಅಧೀನಕ್ಕೆ ಬರಮಾಡಿಕೊಳ್ಳುತ್ತದೆ. ಇವರದ್ದೇ ಆಳ್ವಿಕೆಯ ಜಸ್ಟಿನಿಯನ್ ರಾಜನ ಅಧಿಕಾರವಧಿಯಲ್ಲಿ ಸುಡಾನ್ ಬಹುತೇಕ ರಾಜ್ಯಭಾರಗಳು ಕ್ರೈಸ್ತಧರ್ಮಕ್ಕೆ ಮತಾಂತರಕ್ಕೆ ರೆಕ್ಕೆ ತೆರೆಯುತ್ತವೆ. .ನೈಲ್ ನದಿಯ ಉದ್ದಗಲಕ್ಕೂ ಇವುಗಳ ದಟ್ಟಣೆಯಿದೆ. 16ನೇ ಶತಮಾನದಲ್ಲಿ ಇಸ್ಲಾಂ ಧರ್ಮ ಪ್ರಚಾರ ಬರುವವರೆಗೆ ಚರ್ಚುಗಳು ಎಲ್ಲೆಂದರಲ್ಲಿ ತಲೆ ಎತ್ತಿದವು. ಮತ್ತಷ್ಟು ಮಂದಿ ಕ್ರೈಸ್ತಧರ್ಮ ಅನುವಾಯಿಗಳಾಗಿದ್ದರು. ಬಹುಪಾಲು ಮಂದಿ ಅವರೇ ಇದ್ದರು.

ಆಧುನಿಕ ಸುಡಾನ್ ಇತಿಹಾಸ ನೆಪೋಲಿಯನ್ನನಿಗೆ ಋಣಿಯಾಗುವುದು. 1797ರಲ್ಲಿ ಮೆಮುಲಿಕ್ಸ್ ಶಕ್ತಿಯಿಂದ ಪಿರಮಿಡ್ ಕದನದಲ್ಲಿ ಈಜಿಪ್ಟಿನ ಕಕೇಶಿಯನ್ ಆಳುವ ವರ್ಗ ಅಲುಗಾಡಿಸಿತು. ಇದರ ಲಾಭದ ಅದೃಷ್ಟ ಅಲ್ಬೇನಿಯ ಸೈನ್ಯದ ಮುಹಮ್ಮದ್ ಮೀ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಮಹಮ್ಮದ್ ಮೀ ತನ್ನ ಪುತ್ರ ಇಸ್ಲಾಯಿಲ್‍ನನ್ನು ಸುಮಾರು 10ಸಾವಿರ ಸೈನಿಕ ಬಲದ ಪಡೆಯೊಂದಿಗೆ 1821ರಲ್ಲಿ ಕಳುಹಿಸಿದ.ಉತ್ತರ ಮತ್ತು ಕೇಂದ್ರ ಸುಡಾನಿನ  ಮರಳುಗಾಡು ಪ್ರದೇಶಗಳು ಇವರ ಸುಪರ್ದಿಗೆ ಬಂದದ್ದೇ ತಡ, ಪ್ರಪ್ರಥಮ ಬಾರಿಗೆ ಸುಡಾನ್ ಎನ್ನುವ ಅರ್ಥ " ಕಪ್ಪು ತುಂಬಿದ ನೆಲ"ಎಂಬ ಹೆಸರಿಗೆ ತಿರುಗಿಕೊಂಡಿತು.ಮಾತ್ರವಲ್ಲದೆ, ರಾಜಕೀಯ ಚತುರತೆಗಳು ಅಧಿಕಾರಕ್ಕೆ ನಿಧಾನವಾಗಿ ಬದಲಾಗ ತೊಡಗಿದವು.

ಮರಳುಗಾಡಿನಿಂದ ಮೋಕ್ಷ ಬರಲು ಸುಡಾನಿಗೆ ಆರಂಭಿಸಿದ್ದೇ ಇಲ್ಲಿಂದ. 1884ರಲ್ಲಿ ದೋಣಿ ನಿರ್ಮಾಪಕ ಡೊಂಗ್ಲಾ ನ ಮಗನಾಗಿ ಮುಹಮ್ಮದ್ ಅಹ್ಮದ್ ಜನಿಸುತ್ತಾನೆ. ಈತ ಮೃದು ಭಾಷಿಯಾಗಿ ಬೆಳೆಯುತ್ತಾ ಬೆಳೆಯುತ್ತಾ ಇಲ್ಲಿನ ಅಬ ದ್ವೀಪ ಪ್ರದೇಶದಿಂದ ಸುಮಾರು 150 ಮೈಲುಗಳ ದಕ್ಷಿಣ  ಖೊರ್ಟೋಂ ಪ್ರದೇಶಕ್ಕೆ ವಲಸೆ ಬಂದು, ಧರ್ಮ ಪ್ರವರ್ತಕನಾಗಿ " ಮೊಹ್ದಿ" ಎಂಬ ನಾಮಾಂಕಿತದಲ್ಲಿ ಗುರುತಿಸಿಕೊಂಡ. 1881ರಲ್ಲಿ ಪ್ರವಾದಿಯ ಎರಡನೇ ಅವತಾರವೆಂದು ಘೋಷಿಸಿಕೊಂಡ. ಅಷ್ಟು ಮಾತ್ರವಲ್ಲದೆ, ಪಶ್ಚಿಮದ ಬುಡಕಟ್ಟು ಜನರನ್ನು ಒಟ್ಟುಗೂಡಿಸಿ ಅನೀತಿ ಮತ್ತು ಮಾನವ ಅಸಂಗತತೆ ವಿರುದ್ಧ ಸಾಮಾಜಿಕ ಯುದ್ಧಕ್ಕೆ ಘೋಷಣೆ ನೀಡಿದ. ಆರಂಭಿಕ 1884 ರಲ್ಲಿ ಈ ಮೊಹ್ದಿ ಎಲ್ಲಾ ಸುಡಾನ್  ಮಂದಿಯನ್ನು ಒಟ್ಟುಗೂಡಿಸಿ ಖರ್ಟೋಂ ಪ್ರದೇಶದ ರಕ್ಷಕನಾಗಿ ಮಾರ್ಪಾಡುಗೊಂಡ.

ಈ ಮಧ್ಯೆ ಈಜಿಪ್ಟ್ ಸುಡಾನಿಗೆ ಕಾಲಿರಿಸುತ್ತದೆ. ಅದರೊಂದಿಗೆ ಬ್ರಿಟನ್ ಸೇರಿಕೊಂಡು ಯುದ್ದಕ್ಕೆ ಸಜ್ಜುಗೊಂಡಿತು. ಆದರೆ, ಮೊಹ್ದಿ ಬಲ ಜನರ ಬೆಂಬಲದಿಂದ ಬಲಿಷ್ಠವಾಗಿತ್ತು. ಪರಿಹಾರ ಕಾಣದಾಗ ಜನರಲ್ ಚಾರ್ಲ್ಸ್ ಗೋರ್ಡನ್ ನೇತೃತ್ವ ಖೋರ್ಟಂ ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗ ತೊಡಗಿತು. ಸುಮಾರು 317 ದಿನಗಳ ಕಾಲ ನಡೆದ ಯುದ್ದದ್ದಲ್ಲಿ ಮೊಹ್ದಿ ಸೈನಿಕರು ಅನಾರೋಗ್ಯ ಪೀಡಿತರಾಗಿ ದುರ್ಬಲರಾಗತೊಡಗಿದರು. ತನ್ನ ಸೈನ್ಯದೊಂದಿಗೆ ಮೊಹ್ದಿ ಪಲಾಯನಗೈಯ್ದ. ಈ ದುರ್ಬಲತೆಯನ್ನು ಸದುಪಯೋಗಪಡಿಸಿಕೊಂಡ ಬ್ರಿಟನ್ ಮತ್ತು ಈಜಿಪ್ಟ್  ಖೊರ್ಟಂ ಪ್ರದೇಶ ವಶಪಡಿಸಿಕೊಂಡಿತು. ಖೊರ್ಟಂ ಪ್ರದೇಶ ಕೈಬಿಟ್ಟ ಐದು ತಿಂಗಳ ನಂತರ ಮೊಹ್ದಿ ಟೈಫಾಯ್ಡಿಗೆ ತುತ್ತಾಗಿ ಮರಣ ಹೊಂದಿದ. ಇವನ ಸ್ಥಾನವನ್ನು ಅಲಂಕರಿಸಿದ ಖಲೀಫ ಅಬ್ದುಲ್ಲಾ ಬರುವಾಗ ಸುಡಾನ್ ಅದಾಗಲೇ ನಾಗರಿಕ ಯುದ್ದದಿಂದ ಸಂಕಷ್ಟಕ್ಕೆ ಈಡಾದ ಜೊತೆಯಲ್ಲಿ ಸರಣಿ ಯುದ್ದಗಳು ಪ್ರಾರಂಭವಾದವು. 1898ರ ಸೆಪ್ಟೆಂಬರ್ ನಲ್ಲಿ ಜನರಲ್ ಹರ್ಬರ್ಟ್ ಕಿಚೆನರ್ ನೇತೃತ್ವದ ಬ್ರಿಟನ್- ಈಜಿಫ್ಟ್ ಸೈನ್ಯವನ್ನು ನೈಲ್ ನದಿಯ ತಪ್ಪಲು ಪ್ರದೇಶದಲ್ಲಿ  ಹೊಸದಾಗಿ ನಿರ್ಮಿಸಲಾದ ಸುಡಾನಿನ ಹೊಸ ನಗರ ಓಮ್ದುರ್ಮನ್ ಬಯಲು ಪ್ರದೇಶದಲ್ಲಿ ತನ್ನ 60 ಸಾವಿರ ಸೈನಿಕರೊಂದಿಗೆ ಖಲೀಫ ಅಬ್ದುಲ್ಲಾ ಎದುರಿಸಿದ.ಈ ಯುದ್ದದಲ್ಲಿ ಖಲೀಫನ ಸುಮಾರು 10,800 ಸೈನಿಕರು ಹತರಾದರು ಮತ್ತು 16,000 ಮಂದಿ ಗಾಯಗೊಂಡ ಪರಿಣಾಮ ಬ್ರಿಟನ್-ಈಜಿಪ್ಟ್ ಸೈನ್ಯ ಓಮ್ದುರ್ಮನ್ ಪ್ರದೇಶವನ್ನು ಆಕ್ರಮಿಸಿಕೊಂಡಿತು.

ಜಂಟಿ ಕಾರ್ಯಾಚರಣೆಯಿಂದ ಸುಡಾನ್ ಅನ್ನು ಆಕ್ರಮಿಸಿಕೊಂಡ ಬ್ರಿಟನ್ ಮತ್ತು ಈಜಿಪ್ಟ್ ನಡುವೆ ಆಳ್ವಿಕೆ ಕುರಿತ ತಗಾದೆ ಆರಂಭವಾಗಿತ್ತು. 1899ರ ಜನವರಿ 19ರಂದು ಈ ಎರಡೂ ರಾಷ್ಟ್ರಗಳೂ ಒಗ್ಗಟ್ಟಾಗಿ ಸುಡಾನಿನಲ್ಲಿ ಯಾವ ಯಾವ ಪ್ರದೇಶಗಳು ತಮ್ಮ ತಮ್ಮ ಸುಪರ್ದಿಯಲ್ಲಿ ಸೇರಬೇಕೆಂಬ ಬಗ್ಗೆ ಚರ್ಚಿಸಿ ನಿರ್ಣಯಕೈಗೊಂಡಿತು. ನಂತರದ ಹನ್ನೆರಡು ವರ್ಷಗಳಲ್ಲಿ ಸುಡಾನ್ ರಾಷ್ಟ್ರದ ಆದಾಯ ಸುಮಾರು ಹದಿನೇಳು ಪಟ್ಟು ಹೆಚ್ಚಳವಾಗಿತ್ತು. ಖರ್ಚು ಮೂರು ಪಟ್ಟು ಏರಿತ್ತು ಮತ್ತು ರಾಷ್ಟ್ರದ ಬಡ್ಜೆಟ್ 1960ವರೆಗೆ ಯಾವುದೇ ತೊಂದರೆಯಿಲ್ಲದೆ ಸರಿತೂಗಿಸುತ್ತ ಬಂದಿತ್ತು. ಇದು ಬ್ರಿಟನ್ ಮತ್ತು ಈಜಿಪ್ಟ್ ಆಡಳಿತ ನಡೆಸುತ್ತಿದ್ದ ಎಲ್ಲಾ ಪ್ರದೇಶಗಳ ಅಭಿವೃದ್ದಿಯ ಪಾಲುಗಾರಿಕೆಯ ಫಲವಾಗಿತ್ತು. ಆದರೆ ಇದರ ಮಧ್ಯೆ 1924ರಲ್ಲಿ ಪ್ರಥಮ ವಿಶ್ವಯುದ್ದ ಸಮಾಪ್ತಿಯಾದ ನಂತರ ಕೈರೋ ರಸ್ತೆಯಲ್ಲಿ ಸರ್ ಲೀ ಸ್ಟಾಕ್ ಹತ್ಯೆ ನಡೆದ ಸಂದರ್ಭ ಈಜಿಪ್ಟ್ ತನ್ನ ರಾಷ್ಟ್ರದ ಭಾವುಟ ಹಾರಿಸಿದ್ದು ಬ್ರಿಟನ್ನಿನ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ಪರಿಣಾಮ ಸುಡಾನಿನಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಪ್ರತಿಕಾರವಾಗಿ ಎಲ್ಲಾ ಈಜಿಪ್ಟಿನ ಅಧಿಕಾರಿಗಳನ್ನು ಸುಡಾನಿನಿಂದ ಕಿತ್ತು ಹಾಕತೊಡಗಿದರು. ತದ ನಂತರ 1936ರಲ್ಲಿ ಬ್ರಿಟನ್ ಮತ್ತು ಈಜಿಪ್ಟ್ ಸಹಾಯ ಸೂತ್ರಕ್ಕೆ ಮತ್ತೊಮ್ಮೆ ಸಹಿ ಹಾಕಿದ ಪರಿಣಾಮ ಸಣ್ಣ ಪುಟ್ಟ ಉದ್ಯೋಗಕ್ಕಾಗಿ  ಕೆಲವೇ ಕೆಲವು ಈಜಿಪ್ಟಿಯನ್ನರಿಗೆ ಬ್ರಿಟನ್ ಕಪಿಮುಷ್ಠಿಯಲ್ಲಿದ್ದ ಸುಡಾನಿನಲ್ಲಿ ನೆಲೆ ನಿಲ್ಲಲು ಅವಕಾಶ ಕೊಟ್ಟಿತ್ತು. ಬ್ರಿಟನ್ ಮತ್ತು ಈಜಿಪ್ಟಿನ ಈ ಒಪ್ಪಂದ ಸೂತ್ರವನ್ನು ಸುಡಾನ್ ಪ್ರಜೆಗಳನ್ನು ಕೆರಳಿಸದೆ ಇರಲಿಲ್ಲ.. ಪರಿಣಾಮವಾಗಿ ಈಜಿಪ್ಟ್ ಮತ್ತು ಬ್ರಿಟನ್ ಪ್ರಜೆಗಳ ವಲಸೆ ಬರುವುದರಿಂದ ಇತರ ರಾಷ್ಟ್ರಗಳ ಮಂದಿಯೂ ಬರುವ ಅನುಮಾನವನ್ನು ಹೊರಗೆಡವಿದರು. ಇವರ ವಿರೋಧಿ ಮನೋಭಾವದ ಬೆನ್ನಲ್ಲೇ, ಇಸ್ಲಾಯಿಲ್ ಅಲ್-ಅಝಾರಿ ನೇತೃತ್ವದಲ್ಲಿ ಪದವೀಧರರ ಕಾಂಗ್ರೇಸ್ ಹುಟ್ಟಿಕೊಂಡಿತು. ಇದು ಸುಡಾನ್ ಇತಿಹಾಸದಲ್ಲಿ ಪ್ರಥಮವಾಗಿ ಭುಗಿಲೆದ್ದ ನೆಲದ ಗುಂಪು.

ಮುಂದುವರೆಯುತ್ತಲೇ 1945ರವರೆಗೆ ಎರಡು ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. ಅಲ್- ಅಝಾರಿ ನೇತೃತ್ವದಲ್ಲಿದ್ದ ನ್ಯಾಷನಲ್ ಯೂನಿಯನಿಷ್ಟ್ ಪಾರ್ಟಿ ಸುಡಾನ್ ಮತ್ತು ಅಬ್ದುರ್ ರಹ್ಮಾನ್ ಅಲ್ ಮಹ್ದಿ ನೇತೃತ್ವದ ಉಮ್ಮಾ ಪಕ್ಷ  ಈಜಿಪ್ಟ್  ಅನ್ನು ಒಂದು ಮಾಡುವ  ಬೇಡಿಕೆಯಿಟ್ಟಿತು. ಇದಕ್ಕೆ ಧರ್ಮದ ಅಡಿಪಾಯದಲ್ಲಿ ಪ್ರಭಾವಿಯಾಗಿದ್ದ ಸಯದ್ ಸರ್ ಅಲಿ ಅಲ್ -ಮಿರ್ಘನಿ ಬೆಂಬಲ ಸೂಚಿಸಿದ್ದರು. ಮತ್ತೊಂದು ಉಮ್ಮಾ ಪಕ್ಷದ ಅಬ್ದುರ್- ರಹ್ಮಾನ್ ಅಲ್ - ಮಹ್ದಿ ನೇತೃತ್ವದಲ್ಲಿ ಸುಡಾನ್ ಸ್ವಾತಂತ್ಯವನ್ನು ಒತ್ತಿ ಹಿಡಿದಿತ್ತಲ್ಲದೆ, ಈಜಿಪ್ಟಿನ ಎಲ್ಲಾ ಸಂಪರ್ಕವನ್ನು ವಿರೋಧಿಸಿತ್ತು. ಸುಡಾನಿನಲ್ಲಿ ಧರ್ಮದ ವಿಚಾರದಲ್ಲಿ ಸಯಿದ್ ಸರ್ ಅವರಿಂದ ಕಿತ್ತು ಹಾಕಲಾದ ಪ್ರಭಾವಿ ಉಮ್ಮಾ ಪಕ್ಷ ಹುಟ್ಟು ಹಾಕಿದ ಅಬ್ದುರ್ ರಹ್ಮಾನ್ ಅಲ್ ಮಹ್ದಿ ಆಗಿದ್ದರು.
ಇಷ್ಟೆಲ್ಲಾ ಸ್ವಾತಂತ್ರ್ಯ ಹೋರಾಟಗಳು ನಡೆದ ಪರಿಣಾಮವಾಗಿ 1953ರ ಫೆಬ್ರವರಿ 12ರಂದು ಬ್ರಿಟನ್ ಮತ್ತು ಈಜಿಪ್ಟ್ ಅಂತಿಮ ನಿರ್ಧಾರದ ಒಪ್ಪಂದಕ್ಕೆ ಎದ್ದು ನಿಂತವು. ಮುಂದಿನ ಮೂರು ವರ್ಷಗಳಲ್ಲಿ ಸುಡಾನಿಗೆ ಸ್ವತಂತ್ರ ರಾಷ್ಟ್ರವನ್ನಾಗಿ ಬಿಟ್ಟು ಕೊಡುವುದಕ್ಕೆ ಒಪ್ಪಿದವು. ಈ ಒಪ್ಪಂದದಲ್ಲಿ ಅಂತರ್ರಾಷ್ಟ್ರೀಯ ಸಮಿತಿಯೊಂದರ ಮುಖಾಂತರ ಸುಡಾನ್ ಸಂಸತ್ತು ರಚನೆಗಾಗಿ ಸಚಿವರು ಮತ್ತು ಚುನಾವಣೆ ನಡೆಸಿ ಜನಪ್ರತಿನಿಧಿಗಳ ಆಯ್ಕೆ ನಡೆಸುವ ಕುರಿತು ಒಪ್ಪಿಗೆ ಸೂಚಿಸಲಾಗಿತ್ತು.

1953ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸುಡಾನ್ ಸಾರ್ವತ್ರಿಕ ಚುನಾವಣೆಯೂ ನಡೆಯಿತು. ಇದರಲ್ಲಿ ಎನ್.ಯು.ಪಿ. ಪಕ್ಷ ಬಹುಮತ ಸಾಧಿಸಿ ವಿಜಯಿಯಾದ ಬೆನ್ನಲ್ಲೇ ನೇತೃತ್ವ ವಹಿಸಿದ್ದ ಇಸ್ಮಾಯಿಲ್ ಅಲ್ ಅಝಾರಿ 1954ರಲ್ಲಿ ಸುಡಾನಿನ ಪ್ರಥಮ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಆದರೆ, ದೇಶದ ಸಾರ್ವಜನಿಕ ಸೇವೆಯಲ್ಲಿ ಬ್ರಿಟಿಷ್ ಮತ್ತು ಈಜಿಪ್ಟಿಯನ್ನರ ಕೈವಾಡ ಇದ್ದೇ ಇತ್ತು. ಡಿಸೆಂಬರ್ 19, 1955ರಲ್ಲಿ ಸುಡಾನ್ ಪಾರ್ಲಿಮೆಂಟ್ ಒಮ್ಮತದ ಮತ ಚಲಾಯಿಸಿ ಸುಡಾನ್ ಸರ್ವ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು.  ಇದರ ಬೆನ್ನಲ್ಲೇ 1956 ಜನವರಿ 1ರಂದು  ಬ್ರಿಟಿಷ್ ಮತ್ತು ಈಜಿಪ್ಟಿಯನ್ ಸೈನ್ಯಗಳು ಸುಡಾನ್ ತೊರೆದ ದಿನದಂದೇ ರಾಷ್ಟ್ರದ ಸಂಸತ್ ಸಮಿತಿಯ ಐದು ಮಂದಿಯನ್ನು ಸುಡಾನಿನ ವಿವಿಧ ಪ್ರದೇಶಗಳ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇವರುಗಳು ಮುಂದಿನ ಎರಡು ವರ್ಷಗಳಲ್ಲಿ ಹೊಸ ಸಂವಿಧಾನ ರಚನೆಯಾಗುವವರೆಗೆ ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ನಂತರ ಅಂದರೆ 1958 ನವೆಂಬರ್ ತಾ.17ರಂದು  ಜನರಲ್  ಇಬ್ರಾಹಿಂ ಅಬೌದು ನೇತೃತ್ವದಲ್ಲಿ ರಕ್ತಕ್ರಾಂತಿ ಸೈನ್ಯವೊಂದು ಪ್ರಧಾನಿ ಅಲ್ ಅಝಾರಿ ಸರಕಾರದ ವಿರುದ್ಧ ದಂಗೆಯೆದ್ದಿತು. ಜನರಲ್ ಅಬೌದು ಕಲ್ಪನೆಯ ಅಧಿಕಾರದಲ್ಲಿ ಸೈನ್ಯದ 13 ಮಂದಿ ಅಧಿಕಾರಿಗಳು ಸುಡಾನಿನಲ್ಲಿ  ಆಡಳಿತ ಉಸ್ತುವಾರಿಗೆ ಸಿದ್ದರಾಗಿದ್ದು ಮಾತ್ರವಲ್ಲದೆ, ಪ್ರಜಾತಂತ್ರದ ಹೆಸರಿನಲ್ಲಿ ಸುಡಾನ್ ಸರಕಾರ ನಿಯತ್ತು ಮಾತು ಸೌರ್ಹಾದತೆಯನ್ನು ಬದಿಗೊತ್ತಿದೆ ಎಂಬ ಘೋಷಣೆ ಮೊಳಗಿಸಿತ್ತು. ಆದರೆ, ಇದು ಮತ್ತೆ ಸರಕಾರದ ಒಳ ಒಪ್ಪಂದದಲ್ಲಿ ಮೌನವಾಯಿತು.

ಇಷ್ಟೆಲ್ಲಾ ಮಾರ್ಪಾಡುಗಳು ಆಗುವಾಗ 1966ರಲ್ಲಿ  ಉಮ್ಮಾ ಪಕ್ಷದ ಅಧ್ಯಕ್ಷ 30ವರ್ಷ ಪ್ರಾಯದ ಸಾಧಿಕ್ ಅಲ್ ಮಹ್ದಿ ಸುಡಾನಿನ ಪ್ರಧಾನಿ ಪಟ್ಟವನ್ನು ಅಲಂಕರಿಸುತ್ತಾನೆ. ರಾಷ್ಟ್ರದ ಒಳನಾಡು ಪ್ರದೇಶಗಳಲ್ಲಿ ಒಂದಾದ ದಕ್ಷಿಣ ಸುಡಾನಿನಲ್ಲಿ ಆತಂಕಗಳಿದ್ದವು. ಆದರೂ ನೂತನ ಪ್ರಧಾನಿ ಇಲ್ಲಿಗೇ ಆಗಾಗ್ಗೆ ಭೇಟಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಂಡುಕೋರರ ಧಾಳಿ, ಕೊಲೆ ಸಂಚು ಮತ್ತು ಇನ್ನಿತರ ಕುತಂತ್ರಗಳೂ ನಡೆದ ಅನುಭವವನ್ನು ಮೆಟ್ಟಿ ನಿಂತ ಉದಾಹರಣೆ ಅಲ್ಲಿದ್ದವು. ಸುಡಾನ್ ರಾಷ್ಟ್ರದ ದಕ್ಷಿಣ ವ್ಯವಹಾರಗಳ ಸಚಿವಾಲಯ ಸರಕಾರದ ಅಧೀನದಲ್ಲಿ ಸಾರ್ವಜನಿಕರಿಗೆ ಸಾಮಾನ್ಯ ಜೀವನವನ್ನು ಕಾಪಾಡಲು ಆಲೋಚನೆ ನಡೆಸಿತ್ತು. ಆದರೆ, ಈಕ್ವೇಟೊರಿಯಾ ಪ್ರಾಂತ್ಯದಲ್ಲಿ ಬಂಡುಕೋರರ ಗಲಭೆಗಳಿಂದ ರಕ್ಷಣೆ ಮತ್ತು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೈನ್ಯವನ್ನು ನೆಲೆಗೊಳಿಸಿ ಬಂಡುಕೋರರ ನೆಲೆಗಳ ಮೇಲೆ 1970ರ ಅಕ್ಟೋಬರ್ ನಲ್ಲಿ ಆಕ್ರಮಣಕ್ಕೆ ತೊಡಗುತ್ತವೆ. ಈ ಯುದ್ದ ಅಧೀಕೃತವಾಗಿ 1972ರಲ್ಲಿ  ಅಂತ್ಯಗೊಂಡು, ದಕ್ಷಿಣ ಸುಡಾನಿನ "ಅನ್ಯ-ನ್ಯಯ" ಬಂಡುಕೋರರ ನಾಯಕ ಮೇಜರ್ ಜನರಲ್ ಲಗುವಿನೊಂದಿಗೆ ಸುಡಾನ್ ಸರಕಾರದ ಕರ್ನಲ್ ನ್ಯುಮೈರಿ ಜೊತೆಗೆ ಶಾಂತಿ ಒಪ್ಪಂದವೇರ್ಪಡುತ್ತದೆ.
ಅಧ್ಯಕ್ಷ ನ್ಯುಮೈರಿ ತನ್ನ 8 ವರ್ಷಗಳ ಆಡಳಿತಾವಧಿ 1976ರಲ್ಲಿ ಕೊನೆಗೊಂಡಾಗ ಹಲವು ಪ್ರಾಣಾಂತಿಕ ಕುತಂತ್ರಗಳನ್ನು ಎದುರಿಸಿ ಬದುಕುಳಿದರು. ತನ್ನ ಆಡಳಿತದಿಂದ ಕಿತ್ತು ಹಾಕಲಾಗಿದ್ದ ಮಾಜಿ ಹಣಕಾಸು ಮಂತ್ರಿ ಹುಸೈನ್ ಅಲ್ ಹಿಂದಿ ಮತ್ತು ಮಾಜಿ ಪ್ರಧಾನಿ ಸಾಧಿಕ್ ಅಲ್ ಮಹ್ದಿ  ಈ ಕುತಂತ್ರಗಳನ್ನು ಹೆಣೆದು ವಿರೋಧಿಗಳೊಂದಿಗೆ ಸೇರಿ ಸುಮಾರು 2ಸಾವಿರ ಮಂದಿಯ ಬಂಡುಕೋರರ ಸೈನ್ಯವನ್ನು ಖೋರ್ಟಂ ಮತ್ತು ಒಮ್ದುರ್ಮನ್ ಪ್ರದೇಶದಲ್ಲಿ ನೆಲೆ ನಿಲ್ಲಿಸುವಲ್ಲಿ ಸಫಲರಾತ್ತಾರೆ. ಈ ಗುಂಪು ಸರಕಾರಕ್ಕೆ ಬಹಳಷ್ಟು ತೊಂದರೆಯನ್ನು ತಂದೊಡ್ಡಿತ್ತಲ್ಲದೆ, ವಾಯುದಳದ ಯುದ್ದವಿಮಾನಗಳನ್ನು ಅಪಹರಿಸುವಲ್ಲಿ ಕೈಚಳಕ ತೋರಿಸುತ್ತಾರೆ. ಈ ಸಂದರ್ಭ ಯುದ್ದ ನಡೆದ ಅವರ ಸ್ವಾಧೀನದ ಪ್ರಾಂತ್ಯಗಳಲ್ಲಿ ಸುಮಾರು 98 ಮಂದಿಯ ಮಾರಣ ಹೋಮ ನಡೆಯಿತು. ನೂರಾರು ಮಂದಿಯನ್ನು ಸೆರೆಹಿಡಿದು ದಿಗ್ವಂಧನಕ್ಕೊಳಪಡಿಸಲಾಗಿತ್ತು. ಈ ಬಂಡುಕೋರ ಗುಂಪು ಎರಡು ಪ್ರಭಲ ರಾಷ್ಟ್ರಗಳ ಸಹಾಯವನ್ನು ಪಡೆದು ಸುಡಾನಿಗೆ ಬರಮಾಡಿಕೊಂಡಿತು. ಸೈನ್ಯಗಳ ಹಸ್ತಾಂತರದ ಒಪ್ಪಂದಕ್ಕೆ ಈಜಿಪ್ಟ್ ನೊಂದಿಗೆ ಸಹಿ ಹಾಕಿದ  ಬೆನ್ನಲ್ಲೇ ಯುದ್ದಗಳು ಬಿರುಸಾಗತೊಡಗುವುದು. ಇದೇ ದಿನಗಳು ಈಜಿಪ್ಟ್ ಮತ್ತು ಸೌದಿ ಅರೇಬಿಯಾದೊಂದಿಗೆ ತ್ರೀಪಕ್ಷೀಯ ಮಾತುಕತೆಗೆ ನಾಂದಿಯಾಡುತ್ತದೆ.

ಕೈಗಾರಿಕಾ ಉದ್ಯಮ ಮೂಲಗಳು 1981 ತಡೆರಹಿತವಾಗಿ ನಡೆದ ಇತಿಹಾಸ ಪುಟಗಳಾಗಿವೆ. ಇದರಲ್ಲಿ ರೈಲ್ವೇ ಇಲಾಖೆ ಮತ್ತು ರಸ್ತೆ ಸಂಚಾರ ಇಲಾಖೆಗಳ ಸುಮಾರು 43ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೊಡಲಾಗದ ವೇತನಕ್ಕೆ ಜೂನ್ ತಿಂಗಳಲ್ಲಿ ಸತ್ಯಾಗ್ರಹದ ರೂಪದಲಿ ಸುಡಾನ್ ರಸ್ತೆಯಲ್ಲಿ ನಡೆಯುತ್ತಾರೆ. ಇದು ರಾಜಕೀಯ ಪ್ರೇರಿತ ಹೊರದೇಶಿಗರ ಕುತಂತ್ರವಾಗಿತ್ತು. ಜೂನ್ 16ರಂದು ಅಧ್ಯಕ್ಷ ನ್ಯುಮೈರಿ ತನ್ನ ರಕ್ಷಣಾ ದಳಗಳಿಗೆ ಆದೇಶ ನೀಡಿ ಹೋರಾಟದಲ್ಲಿ ಭಾಗಿಯಾದ ಎಲ್ಲರನ್ನೂ ಹೊಣೆಗಾರರನ್ನಾಗಿಸಿ ಬಂಧಿಸುತ್ತಾರಲ್ಲದೆ, ಎಲ್ಲಾ ಸಂಘಟಣೆಗಳನ್ನು ಸುಡಾನ್ ಸೋಷಿಯಲಿಸ್ಟ್ ಯೂನಿಯ ಸುಪರ್ದಿಗೆ ಒಳಪಡಿಸಿದರು.

1971ರವರೆಗೆ ಸುಡಾನ್ ಅರಬ್ ಜಗತ್ತು ಮತ್ತು ಅದಕ್ಕೆ ಹೊಂದಿಕೊಂಡ ಯುಎಸ್.ಎಸ್.ಆರ್. ರಾಷ್ಟ್ರಗಳೊಂದಿಗೆ ಗೆಳತನವನ್ನು ಸಾಧಿಸಿದ ಫಲವಾಗಿ ಅಂತರ್ರಾಷ್ಟ್ರೀಯ ಸಂಬಂಧಗಳು ಗರಿಗೆದರಿದ್ದವು.  ಇದು ಸುಡಾನ್ ದೇಶದ ಆಂತರಿಕ ನಿಯಮಕ್ಕೆ ಸರಿಹೊಂದುವಂತಿತ್ತು. ಇದರ ಪರಿಣಾಮವಾಗಿ ಖಾಸಗಿ ಸಂಸ್ಥೆಗಳು ಮತ್ತು ವಿದೇಶಿಗರ ಅಧೀನದಲ್ಲಿದ ವ್ಯಾಪಾರಿ ಸಂಸ್ಥೆಗಳು ರಾಷ್ಟ್ರೀಕೃತಗೊಂಡು 1973ರಲ್ಲಿ ಹಲವು ಗೊಂದಲದಲ್ಲಿದ್ದ  ವ್ಯಾಪಾರ ವಹಿವಾಟುಗಳು ಖಾಸಗಿತನದ ಒಡೆತನಕ್ಕೆ ದೂಡಲ್ಪಡುತ್ತವೆ ಸುಡಾನಿನಲ್ಲಿ.

ಸುಡಾನ್ ದೇಶದ ಇತಿಹಾಸ ಹೀಗೆ ಮುಂದುವರೆಯುತ್ತಿದ್ದಂತೆ ಮತ್ತೊಂದು ಸುತ್ತಿನ ಹೋರಾಟ ಮತ್ತು ಯುದ್ದಕ್ಕೆ  1983ರ ಸೆಪ್ಟೆಂಬರ್ 8ರಲ್ಲಿ ಅಧ್ಯಕ್ಷ ಜಾಫರ್ ಮೊಹಮ್ಮೆದ್ ಅಲ್ ನ್ಯುಮೈರಿ ನಾಂದಿ ಹಾಡುತ್ತಾರೆ. ಅದು ಹೇಗೆಂದರೆ, ರಾಷ್ಟ್ರದಲ್ಲಿ ಹೊಸ ಇಸ್ಲಾಂ ಷರಿಯಾ ಕಾನೂನೊಂದನ್ನು ಜಾರಿಗೆ ತರುತ್ತಾರೆ. ಇದರ ಪ್ರಕಾರ ದರೋಡೆ,ಅತ್ಯಾಚಾರ, ಕೊಲೆ ಮತ್ತು ಇದಕ್ಕೆ ಸಮನಾದ ಕೃತ್ಯಗಳನ್ನು ಪವಿತ್ರ ಧರ್ಮದ ಆಧಾರದಲ್ಲಿ ಶಿಕ್ಷಿಸಲಾಗುವುದು ಎಂದಾಗಿತ್ತು.. ಮತ್ತು ಮದ್ಯಪಾನ, ಜೂಜುಗಾರಿಗೆ ನಿಷೇಧಿಸಿ, ಮುಸ್ಲಿಮೇತರರಿಗೆ ಇದರಿಂದ ಹೊರತುಪಡಿಸಿ ಹತ್ಯೆ ಮತ್ತು ಕಳ್ಳತನದ ಶಿಕ್ಷೆಯನ್ನು ಘೋಷಿಸಲಾಯಿತು. ಈ ಕಾನೂನಿನ ಜಾರಿಯನ್ನು ಸುಡಾನ್ ರಾಜಧಾನಿ ಖೋರ್ಟಂನಲ್ಲಿ ಸೆಪ್ಟೆಂಬರ್ 23ರಂದು ಅತಿ ವಿಜೃಂಭಣೆಯಿಂದ ಅಧ್ಯಕ್ಷ ನ್ಯುಮೈರಿ ಜಾರಿಗೆ ತಂದ ದಿನವೇ ದೇಶಾದ್ಯಂತ ಸಂಗ್ರಹಿಸಿಡಲಾಗುವ ಮಧ್ಯಪಾನಗಳನ್ನು ನೈಲ್ ನದಿಗೆ ಸುರಿಯಲಾಗುವುದು ಎಂದು  ಅಧ್ಯಕ್ಷೀಯ ಭಾಷಣದಲ್ಲಿ ನ್ಯುಮೈರಿ ಘೋಷಿಸಿದ್ದರು. ಪ್ರಸಕ್ತ   ಹರವಿಕೊಂಡಿರುವ ಸುಡಾನ್ ಎಂಬ ಭೂಮಿಯ ಜಗತ್ತು ಕಂಡ ಕರಾಳ ದೃಶ್ಯಗಳು ಇಲ್ಲಿಂದಲೇ ಬಣ್ಣ ಕಟ್ಟಿಕೊಂಡಿವೆ. ಜನ ಸಾಗರವೇ ಸಾವಿನಂಚಿಗೆ ಸರಿದ,ರಾತೋರಾತ್ರಿ ದಿಕ್ಕೆಟ್ಟು ಪಲಾಯನಗೈಯ್ದ,ಬೀಭತ್ಸತೆಗಳು ಇಲ್ಲಿಂದ ಆರಂಭವಾಗುವುದು. ಇಲ್ಲಿಂದಲೇ ಜನರು ಮನೆಯಿಲ್ಲದೆ,ಅನ್ನವಿಲ್ಲದೆ, ಸಹಾಯಕರಿಲ್ಲದೆ, ಕುಟುಂಬಸ್ಥರಿಲ್ಲದೆ ಸುಡಾನ್ ದೇಶದ ಗಡಿ ಭಾಗಕ್ಕೆ ಸಾಲು ಸಾಲುಗಳಾಗಿ ಮಿಲಿಯನ್ ಸಂಖ್ಯೆಗಳಲ್ಲಿ ವಲಸೆ ಹೋಗುತ್ತಾರೆ. ಅದು ಹೀಗಿದೆ:

ಖೊರ್ಟಂನಲ್ಲಿ ಸಾಮಾಜಿಕ ವ್ಯವಸ್ಥೆಗಳ ಅಧಃಪತನದ ವಿರುದ್ಧ  ಪ್ರಥಮವಾಗಿ ದಂಗೆಯೆದ್ದವರು ಮುಂದಿನ ಜನಾಂಗದ ಆಸ್ತಿ ವಿದ್ಯಾರ್ಥಿಗಳು.. ಎಲ್ಲಾ ಶಾಲೆಗಳು ಮುಚ್ಚಲ್ಪಟ್ಟವು. ಇಡೀ ಖೊರ್ಟಂ ಪ್ರದೇಶದಲ್ಲಿ ವಿದ್ಯುಚ್ಛಕ್ತಿ ಕಡಿತಗೊಂಡು ಕತ್ತಲೆಯಲ್ಲಿ ಮುಳುಗಿತು. 1984ರಲ್ಲಿ  ಸಾರ್ವಜನಿಕ ಸೇವೆಯಲ್ಲಿ  ಅಸ್ತವ್ಯಸ್ತತೆ ,ವೇತನ ಕೊರತೆ, ಔಷಧಿಗಳಿಲ್ಲದೆ ವೈದ್ಯರ ಹೋರಾಟಗಳು ಆರಂಭವಾಗುತ್ತವೆ. ದೇಶದ ಎಲ್ಲಾ 2ಸಾವಿರಕ್ಕೂ ಅಧಿಕ ವೈದ್ಯರುಗಳು ಸಾಮೂಹಿಕ ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ಒಪ್ಪಿಕೊಳ್ಳದ ಸರಕಾರ ವೈದ್ಯರ ಸಂಘ ಸಿಂಧುವಲ್ಲ ಎಂದಿತು. ವೈದ್ಯರು ಕೆಲಸಕ್ಕೆ ಹೋಗದೆ ಹೋರಾಟದಲ್ಲೇ ಮುಂದುವರೆದರು.

ಈ ಮಧ್ಯೆ ನಿರಾಶ್ರಿತರ ಸಂಖ್ಯೆ ಹಂತ ಹಂತವಾಗಿ ಬೆಳೆಯತೊಡಗಿ ಸುಡಾನ್ ಗಡಿಭಾಗಗಳಲ್ಲಿ ಇವರುಗಳು ಆಶ್ರಯಕ್ಕಾಗಿ ಹರಡಿಕೊಳ್ಳುತ್ತಿದ್ದರು. ಇದಲ್ಲದೆ, ಕೆಲವು ನಿರಾಶ್ರತರನ್ನು ವಿಶ್ವಸಂಸ್ಥೆ ರೆಫ್ಯೂಜಿ ಸಹಾಯಕ ತಂಡಗಳ ಮಧ್ಯವರ್ತಿಗಳಿಂದ ಇತರ ದೇಶಗಳಲ್ಲಿ ಆಶ್ರಯಕ್ಕೆ ಕರೆದೊಯ್ಯಲಾಗುತ್ತಿತ್ತು. ಅದೂ ಸುಡಾನ್ ಗಡಿಭಾಗದ ಮೂಲಕವೇ ನಡೆಯುತ್ತಿತ್ತು. 1982 ರಲ್ಲಿ ಪೋರ್ಟ್ ಸುಡಾನ್ ನಗರದಲ್ಲಿ ನಿರಾಶ್ರಿತರನ್ನು ಒಳಸಂಚು ಮಂದಿಗಳಿಂದ ಗಲಭೆಗೆ ಪ್ರಚೋದಿಸಲಾಗುತ್ತದೆ. ಕಸಿವಿಸಿಗೊಳಗಾದ ಅಧ್ಯಕ್ಷ ಗಾಫರ್ ನ್ಯುಮೈರಿ ತನ್ನ ದೇಶದ ಗಡಿ ಮಾರ್ಗಗಳನ್ನು ಮುಚ್ಚಿದ. ಈತನಿಗೆ ತನ್ನದೇ ಸರ್ಕಾರದ ಕೆಲವು ಸದಸ್ಯರಿಂದ ಇದಕ್ಕೆ ಒತ್ತಡ ಬರುತ್ತದೆ. 1985ರಲ್ಲಿ ದೇಶದಲ್ಲಿ ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ಗೆ ವಿಸ್ತರಿಸತೊಡಗಿತು. 1986ರಲ್ಲಿ ಇದು ಮತ್ತಷ್ಟು ವಿಶಾಲಗೊಂಡು ಎರಡು ಮಿಲಿಯನ್ ಗಡಿಯನ್ನು ದಾಟಿತು. ಸುಡಾನ್ ರಾಷ್ಟ್ರದ ಹಸಿದವರ ಸಂಖ್ಯೆ, ಜೊತೆಗೆ ರೋಗಿಗಳು, ಆಶ್ರಯವಿಲ್ಲದವರ ಸಂಖ್ಯೆಗೆ ವಿಶ್ವ ಸಂಸ್ಥೆ ರೆಫ್ಯೂಜಿ ತಂಡ ಕಂಗಾಲಾಗತೊಡಗಿದಂತೆ , ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹಾಯ ಹಸ್ತಕ್ಕೆ ತೊಡಗುತ್ತವೆ. ಅದು ಹೇಗೆಂದರೆ, ಅಹಾರ ಸಾಮಾಗ್ರಿಗಳು, ಡೇರೆ ಕಟ್ಟಿಕೊಳ್ಳಲು ಸಲಕರಣೆಗಳು, ಹೊದಿಕೆಗಳು, ನೀರಿನ ಟ್ಯಾಂಕರ್,ಉಪ್ಪು,ಆರೋಗ್ಯ ತುರ್ತು ಚಿಕಿತ್ಸಾ ಔಷಧಿಗಳು ಸೇರಿದಂತೆ ಮನುಷ್ಯ ಮೂಲಭೂತ ಅವಶ್ಯಕಗಳು ವಿತರಣೆಯಾಗುತ್ತವೆ. ಇದೇ ಕಾರ್ಯಕ್ರಮಗಳು ಇಂದಿಗೂ ಹಲವು ದಶಕಗಳ ನಾಗರಿಕ ಯುದ್ದಕ್ಕೆ ನಲುಗಿ ಸುಧಾರಣೆ ಕಾಣದ ಸುಡಾನ್ ನಿರಾಶ್ರಿತರ ತಾಣಗಳಲ್ಲಿ ವಿಶ್ವಸಂಸ್ಥೆಯ ಮೂಲಕ ನಡೆಯುತ್ತಲೇ ಇದೆ. ಹಲವು ದಶಕಗಳಿಂದ ಅತೃಪ್ತ ಬಂಡುಕೋರರು ಮತ್ತು ಮಿಲಿಟೆರಿ ಸರಕಾರ ಸುಡಾನನ್ನು ಆಳುತ್ತಿದೆ. ನಾಗರಿಕ ಯುದ್ದಗಳಿಗೆ ಜಗತ್ತಿನಾಧ್ಯಂತ ರಾಷ್ಟ್ರಗಳು ಸುಡಾನಿಗೆ ಶಾಪ ಹಾಕಿದ್ದೇ ಹೆಚ್ಚು.ಯಾರೂ ಅದರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದು ಇದುವರೆಗೆ ಕೇಳಿಲ್ಲ. ಪತ್ರಿಕಾ ವರದಿ ಕಾಣಲಿಲ್ಲ.
(ಮುಂದೆ ನಿರೀಕ್ಷಿಸಿ)