ಶನಿವಾರ, ಮಾರ್ಚ್ 16, 2013

ತಲೆದಿಂಬು !



ಹಗುರಗಳು ಉಬ್ಬಿ
ಚಿಗುರಿಕೊಂಡಿದೆ ಗಾಳಿ |

ಎಣ್ಣೆಗದ್ದಿ ಬಿಸಿನೀರಿಗೆ ತೊಯ್ದ
ಮೃದು ಚರ್ಮದ ಹೊಳಪಿಗೆ
ಬಳಿದ ಪೌಡರು-
ಕುಡಿದ ಮೊಲೆ ಹಾಲಿನ ಪರಿಮಳಕೆ
ಒಳ ಸುಳಿದ ನಿದ್ದೆಗಳಿವೆ|

ಸಂದುಗೊಂದಿಗೆ ಅವಿತ
ಬಾಚಿ ತಬ್ಬಿದ ತೋಳ್ತೆಕ್ಕೆಗಳು
ಗಲ್ಲದ ಚಿವುಟುಗಳು
ಗೋಡೆ ಬಿಳಿ ಬಣ್ಣ ಸವರಿದ
ಅಂಬೆಗಾಲು ನಕ್ಷತ್ರಗಳು |

ಇಕ್ಕಟ್ಟಾಗಿವೆ ಹೆಜ್ಜೆಗಳು
ಸಣ್ಣದು ಉಬ್ಬಿ ದೊಡ್ಡದು |

ಅಲೆದ ನೀರ ಗುಳ್ಳೆ
ಕಾಗದ ದೋಣಿಸಿ
ಹಾಯ್ದ ನಾವಿಕನ ಗುರಿಗಳಿವೆ
ವೃತ್ತ ಜಿಗಿವ ಶೂನ್ಯಕೆ |

ಜಾರಿ ಬಿದ್ದಿವೆ...
ಶಾಲಾ ಪುಸ್ತಕದಿಂದ
ನವಿಲುಗರಿ ಪಿಳಿಪಿಳಿ ಕಣ್ಣುಗಳು
ಕಪ್ಪು ಹಲಗೆಗೆ ಬಿದ್ದು
ಹಾರುತ್ತಿವೆ ಅಕ್ಷರಗಳು  |

ತೂಗುವ ತೇಲಿಕೆ
ದುಃಖ್ಖ ಸಮುದ್ರಕೆ ಉಕ್ಕಿ
ನೆಲೆ ಅಲೆದ ನಗುವಿಗೆ |

ಗೆಲುವುಗಳು
ಮೇಲೇಳಲವಣಿಸಿದ ಸೋಲಿಗೆ
ಭರವಸೆಗೆ ಕುಪ್ಪಳಿಸಿ
ಅಪ್ಪುವ ದ್ವೀಪಸ್ಥಂಭದ ಸ್ವಾಗತಕೆ
 ಕಿನಾರೆಗೆ ಕೈಮುಗಿದು |

ಭಾರಗಳು ಜಗ್ಗಿ
ಉಸಿರುಗಟ್ಟುತಿದೆ ಗಾಳಿ |

ಎಳೆ ಎಳೆಯಾಗಿ ಹೊರಗೆಳೆದು
ನಿದ್ದೆಗೆ ಜಾರುತ್ತೇನೆ |

ಒಂದು ಮಾತ್ರ ಬರಲೊಲ್ಲದು |
ಒಳಗೇ ಕುಳಿತಿರಲಿ
ಉಳಿಸಿ ಹೋಗುತ್ತೇನೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಬುಧವಾರ, ಫೆಬ್ರವರಿ 27, 2013

ದೇವರು ನಕ್ಕರು ಜನರಿಗೆ !


ಭಾನಿನಿಂದ ಈರ್ವರು ಇಳಿದರು
ಇಲ್ಲೇ ಉಳಿದರು
ಹೋಗಲಾಗದೆ ಬಂದ ದಾರಿಗೆ

ಮುಖಾಮುಖಿ ನಡೆದರು ಮನೆಗೆ
ಜೋಗುಳ ಹಾಡಿದರು,
ಮಕ್ಕಳೇ ನೀವೇ ನಮ್ಮ ಬಾಳಿಗೆ |

ಬತ್ತಿಯಾದರು ಹಗಲು-ರಾತ್ರಿಗೆ
ಬೆರಳ ಹಿಡಿದರು,
ಮನೆಯಂಗಳ ತೋರಿ ಜಗತ್ತಿಗೆ

ಭಾವವಾದರು ನಕ್ಕು ಅಳುವಿಗೆ
ಪ್ರೀತಿ ಸುರಿದರು,
ಜಗದ ಬದುಕು ಗೆಲುವಿಗೆ |

ಭೂಮಿ ತಾಯಿ-ಸೂರ್ಯ,ತಂದೆಗೆ
ದೇವರು ನಕ್ಕರು ಜನರಿಗೆ
ಚರ್ಚು-ಮಸೀದಿ-ಗುಡಿಯೊಳಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಪದ ಬೀಜ ಬಿತ್ತಿದ ಬಯಲು !



ಬಿಳಿಹಾಳೆ ಮೇಲೆ ತಿರುಗುತ್ತವೆ
ಇಕ್ಕಟ್ಟಾದ ಅಕ್ಷರಗಳು |
ಹಿಡಿದೆಳೆದು ಹಾರುವ
ಕೈ-ಕಾಲುಗಳಂತೆ |

ಚಂದ್ರನ ಮುಖ ಅಡ್ಡಲಾದ 
ತೆಂಗು ಗರಿ ಬೆರಳುಗಳಂತೆ |

ಅಥವಾ

ಕಿಟಕಿ ಸರಳಿಗೆ ನುಸುಳಿ
ಸದ್ದಾಗದ ನೆರಳಾಗಿ
ಬೆತ್ತಲೆ ನೆಲ ಮುಚ್ಚಿದ
ಬೆಳದಿಂಗಳಿನಂತೆ |

ಚತುರ ಪದೋಕ್ತಿ ಬಿತ್ತಿ
ಬೆಳವ ಬೀಜ ಚಮತ್ಕಾರಗಳು
ನವಜಾತ ಶಿಶು ಚರ್ಮದ ಮೃದುವಿನಂತೆ |

ಈ  ಕಚ್ಚಾ ಕಾಗದ
ಮೃದುವಾಗಿ, ಗರಿಗರಿಯಾಗಿ
ಕನ್ಯತ್ವ ಕಳೆಯದ ಪ್ರೀತಿಯಾಗಿ
ಹೊಸ ಹುಟ್ಟಿಗೆ ಹೊರಟಿದೆ
ನನ್ನ ಕೈ ಕೆಳಗೆ |

ದಣಿದ ನಾನು,
ಹೃದಯ ಬಯಸಿದ ಭಾವಕೆ
ಮುಖ ಮಲಗಿ ಪ್ರಕಟವಾಗುತ್ತೇನೆ
ಚೆಲ್ಲಿ ,ಒಂದು ಹನಿ ಶಾಯಿಗೆ |

ನೆಲೆಯಾಗುತ್ತೇನೆ
ಅದ್ಬುತ ಶೂನ್ಯ ಪ್ರಕಾಶದಡಿಯ
ಮಾತುಗಳಿಗೆ ಶಬ್ಧವಿಲ್ಲದಂತೆ |
-ರವಿ ಮೂರ್ನಾಡು

ಭಾನುವಾರ, ಫೆಬ್ರವರಿ 24, 2013

ಆ ಅಕ್ಕಸಾಲಿಗ ।



ಕವಿತೆ ಬರೆಯಲು ಕುಳಿತಾಗಲೆಲ್ಲ
ಆ ಅಕ್ಕಸಾಲಿಗನ
ಸುತ್ತಿಗೆ ಧ್ವನಿ ಕೇಳಿಸುತ್ತಿದೆ |

ಪಟ್ಟಣಕೆ ಸಂತೆಗೆ ಹೋದಾಗಲೆಲ್ಲಾ
ಅಂಗಡಿ ಮುಂದೆ ನಿಲುತ್ತೇನೆ,
ಕುಲುಮೆಗೆ ಬಿದ್ದ ಚಿನ್ನ
ಆಭರಣವಾಗುವರೆಗೆ

ಅವನಲ್ಲಿ ಪ್ರಶ್ನಿಸಿದ್ದೆ,
ಯಾರವರು ಸುತ್ತಿಗೆಯೊಳಗೆ ?!

ಅವನು ನಗುತ್ತಾನೆ,  
ಅದಾಗಲೇ ಹೆಂಗಸೊಬ್ಬಳು-
ಕೊಟ್ಟ ಮಾಸಲು ಚಿನ್ನಕೆ
ತದೇಕ ದೃಷ್ಟಿ ಹಾಯಿಸುತ್ತಾನೆ |

ಬಟ್ಟೆಗೆ ಉಜ್ಜಿ, ನೀರಿಗೆ ತಿಕ್ಕಿ
ಉಫ್ ಉಫ್ ಗಾಳಿಸಿ
ಭೂತ ಕನ್ನಡಿ ಕಣ್ಣಗಲಿಸಿ
ದೊಡ್ಡದು ಮಾಡಿ ಮೇಲೆ -
ಕೆಳಗೆ ನೋಡುತ್ತಾನೆ,
ಕೊಳೆ ಬಿಟ್ಟ ಮೈ
ತೆಳ್ಳಗೇ ಹೊಳೆವವರೆಗೆ |

ಅಲ್ಲೇ ಮಣ್ಣ ಕುಲುಮೆಗೆ ಹಾಕಿ,
ಅದರ ಬಾಯಿಗೆ ಇಕ್ಕಳ ಸಿಕ್ಕಿಸಿ
ಎತ್ತಿ ನೋಡುತ್ತಾನೆ,
ಹೊಳಪಿಗೆ ಒಳಗಿದೆಯೇ ನಿದ್ದೆ ?
ಮತ್ತೆ ಕಣ್ಣಿಗೆಳೆದು, ಇಳಿದು 
ಇಣುಕಿ ನೋಡುತ್ತಾನೆ
ಇಲ್ಲ ! ಸಿದ್ದವಾಗಿದೆ ಯುದ್ದಕೆ
ಮತ್ತೊಂದು ಒಲುಮೆಗೆ |

ಬೂದಿ ಮುಚ್ಚಿದ ಕೆಂಡಕೆ ಮುಂದೆ
ಮೈ ತಬ್ಬಿದ ಪಾತ್ರೆಯಲಿ
ಕೊಳವೆ ಎದೆಯಿಂದ ಗಾಳಿಸಿ
ರೂಯ್ಯೋ ರೂಯ್ಯೋ ಬಾರಿಸಿ
ಕುಲುಮೆ ಇರಿಸಿ ನೋಡುತ್ತಾನೆ
ಸೂರ್ಯ ಮಾತ್ರ ಇದ್ದಾನೆ ಬೆಂಕಿ ಮುಂದೆ |

ನೋಡುತ್ತಲೇ ಇದ್ದ ನನಗೆ
ಪಕ್ಕನೆ ಕುಲುಮೆಯೆತ್ತಿ
ನೀರಿಗೆ ಮುಳುಗಿಸಿದವನ
ಕೈಯಲ್ಲಿ ದುಂಡಗೆ ಹೊಳೆದ ಕಲ್ಲಿದೆ |
ಮಡಿಲ ಬಟ್ಟೆಗೆ ಹಾಕಿ, ಎತ್ತಿ
ಮುಂದಿರುವ ಕಲ್ಲಿಗೆ ತಟ್ಟುತ್ತಾನೆ
ನವಿರು ಮಾತು ಕಿವಿಗಿಳಿಯುತ್ತಿದೆ

ಮನೆಗೆ ಬಂದ ನಾನು,
ಬರೆಯಬೇಕೆಂದಾಗಲೆಲ್ಲ
ಆ ಸುತ್ತಿಗೆ ಧ್ವನಿ ಕೇಳುತ್ತಿದೆ |
ಪತ್ನಿಯ ಮೂಗುತಿಯಲಿ
ಸೂರ್ಯ ಕಿರಣವೊಂದು
ಕಾಯುತಿದ್ದ ಮಿಂಚಿನಂತೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಗುರುವಾರ, ಫೆಬ್ರವರಿ 21, 2013

ಭುಜಕ್ಕೇರಿ ಕುಳಿತ ಎರಡು ಕತ್ತಲೆ ಹಿಂಡುಗಳು !



ಅಪ್ಪ ಸತ್ತ ಮಾರನೇ ದಿನ
ಮನೆಯ ಕಿಟಕಿ ಸರಳುಗಳೆಡೆಗೆ
ಕಣ್ಣು ಬಿಟ್ಟಿದ್ದೆ
ಹುಲ್ಲು ಹಾಸಿನ ಬಯಲ ಕತ್ತಲೆಯಲಿ
ಅವರು ನಡೆದ ಹೆಜ್ಜೆ ಧ್ವನಿ ಆಲಿಸುತ್ತಿದ್ದೆ |

ನನಗೆದುರಾಗಿ, ಅವರ ಪಾದಗಳಲಿ
ಚಂದ್ರ ಹೊಳೆಯುತ್ತಿದ್ದ  |
ಎರಡೂ ಬದಿ ಧೂಳಿಗೆ
ಗಾಳಿ ಬೊಗಸೆಗಿಡಿದು ಒರೆಸುತ್ತಿದ್ದ
ಕೈಗಳಲ್ಲಿ ರಾತ್ರಿಯೊಂದು
ಕಡಿವಾಣವಿಲ್ಲದ ಕುದುರೆಯಂತೆ
ಓಡುತ್ತಿತ್ತು |

ನಾನು ಪ್ರಶ್ನಿಸಿದ್ದೆ
ಎಷ್ಟು ದಿನ ಹೀಗೆ ನಡೆಯುವಿರಿ ?
ಇದು ವಯಸ್ಸು,
ಗಾಳಿ ಉತ್ತರಿಸಿತು
ಖಂಡಿತವಾಗಿ, ಇದು ಗಾಳಿ ಗೀತೆ

ಊಟದ ತಟ್ಟೆ ,ಲೋಟಗಳಿಗೆ
ಬೆರಳುಗಳು ತಿರುಗುತ್ತಾ,
ಬಾಲ್ಯದ ಪೀಠೋಪಕರಣಗಳು
ಬಣ್ಣದ ಕುದುರೆಗಳ ಓಟಕೆ
ಬದಲಾಗುತ್ತಿವೆ  |
ಮತ್ತೊಮ್ಮೆ ತಿರುಗುತ್ತಿವೆ
ಹಳೆ ಸಲಕರಣೆಗಳಂತೆ

ಎಕರೆಗಟ್ಟಲೆ, ಬಯಲು ದಾಟಿ
ನಡೆಯುತ್ತಲೇ ಇದ್ದಾರೆ |
ಅವರ ನಾಲಗೆ ತುದಿಯಲಿ
ನಶಿಸಿದ ಸಾಮ್ರಾಜ್ಯವೊಂದರ
ನಾಣ್ಯದ ಬೆಳಕು ಕಂಗೊಳಿಸುತ್ತಿದೆ

ಸುಗಂಧ ,ಇನ್ನೊಂದು ಚಿನ್ನದ- 
ಪರಿಮಳಗಳ ಜೊತೆಗೆ,
ಎರಡು ಕತ್ತಲೆ ಹಿಂಡುಗಳು
ಭುಜಕ್ಕೇರಿ ಕುಳಿತು ಚಲಿಸಿವೆ |
ಅದೋ.. ಇದೀಗ
ಮುಖ ತಿರುಗಿಸುತ್ತಿದ್ದಾರೆ ತಂದೆ |

ಮತ್ತೆ ಹೋಗಲು ಹವಣಿಸಿದಾಗ
ಭಾರೀ ಮಳೆಗೆ ಹುಟ್ಟಿಕೊಂಡ
ಭಯಾನಕ ರಭಸಗಳ ಭೇದಿಸಲು
ಮುಂದೋಳುಗಳು ಗಾಳಿಗೆ ಬಾಚುತ್ತಿವೆ |

ಕಿಟಕಿ ಪಕ್ಕದ ಹೊರಾಂಗಣಕೆ
ಕುರ್ಚಿಗೆ ಕುಳಿತಿದ್ದೇನೆ |
ಮುಕ್ತ ನೆಲೆ ಕಂಡ ಗಾಳಿ
ಕಾಲ ಸೋಕಿ ಸರಿದಾಗ,
ಜೀವನ ಮೌಲ್ಯದ ಬೆಲೆ
ಅಳತೆಗೆ ಸಿಗಲಿಲ್ಲ  |

ನಾನೀಗ ಬೆಳೆದಿದ್ದೇನೆ
ನನ್ನ ಕೋಣೆಗೆ ಹಿಂತಿರುಗಿ
ಗೊತ್ತಿರುವುದನು ಪುನರಾವರ್ತಿಸುತ್ತೇನೆ |
ಭೂಮಿಯೊಂದು ಮನೆಯಲ್ಲ
ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ |

ಬಯಲು ದಾಟುವ ಮನುಷ್ಯನ
ಕೈಯಲ್ಲಿದೆ ಹಳೆ ರೇಶಿಮೆ 
ಜೊತೆಗೆ,ಹೊಸ ಚಂದ್ರನ ತುಣುಕು |
ಸಾವಿನಿಂದ ಪಲಾಯನಗೈಯ್ಯಲು 
ಉಪಾಯಗಳ ಹುಡುಕಾಡುತ್ತೇವೆ 
ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ  |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಮಂಗಳವಾರ, ಫೆಬ್ರವರಿ 19, 2013

ಕನ್ನಡ ನಮ್ಮದು !



ತಾಯ ಗರ್ಭವದು
ನನ್ನ ಮಣ್ಣದು
ಮರಳಿ ಸೇರುವೆನು ಮನೆಗೆ |

ತ್ರಿವರ್ಣ ಸೀರೆಗೆ
ಜೀವನ ಚಕ್ರವಿದೆ
ಬಂಡಿ ಉರುಳಿ ತೆರೆದ ಹಣತೆ |

ತಂದೆ ಕಿರೀಟವಿದೆ
ತಾಯಿ ಪಲ್ಲಕಿಯಿದೆ
ರಾಜಹಂಸಕೆ ತಾಯ್ನೆಲದ ಕನಸು |

ಪತ್ನಿಯ ನಗುವಿದೆ
ಮಡಿಲಿಗೆ ಹೂವಿದೆ
ಚಿಗುರು ಗಿಡವಾಗಿ ಬೆಳೆದ ಮನಸು |

ತಾಯ ಭಾಷೆಯಿದು
ಕನ್ನಡ ನಮ್ಮದು
ಅಲ್ಲಿರಲಿ ಕೊನೆಗೆ ಉಸಿರು |
-ರವಿ ಮೂರ್ನಾಡು

ಭಾನುವಾರ, ಫೆಬ್ರವರಿ 17, 2013

ನಿದ್ರೆಯ ಬಾಗಿಲು !



ಬೆಳಕೊಂದು ಕಟಕಟಾಯಿಸುತ್ತಿದೆ
ನಿದ್ರೆಯ ಬಾಗಿಲು |
ದೋಣಿ ಬದಿಗೆಳೆವ
ಹಗ್ಗದ ಶಬ್ದದಂತೆ |

ನೀರೊಳಗೆ ಕೇಳುತ್ತಿದೆ
ಎರಡೂ ಬದಿಯೆತ್ತುವ ಮಾತು
ಪರಸ್ಪರ ವಿರುದ್ದವಾಗಿ
ಅಂಗಾತ ಮಲಗಿದ ಮೇಲ್ಮೈ
ಕೆಳಗೆ ಉಜ್ಜಿದಂತೆ|

ಅಲೆಅಲೆಗಳುಕ್ಕಿ
ನಿದ್ರೆಗೆ ಹೊರಟಿದೆ ಮೌನ
ತೆಳು ಹೆಜ್ಜೆಯಿಕ್ಕಿ |

ಈ ನಕ್ಷತ್ರ ನಕ್ಷೆಯಲಿ
ಮುಂಚೋಣಿಯಲ್ಲಿದೆ ಅಂಕುಶ
ಲಗಾಮಿಲ್ಲದ ಓಟಕೆ
ದಾರಿಯ ಸೂತ್ರವಾಗಿ |

ಎಲ್ಲಾ ವಿಫಲ ಪ್ರತಿಧ್ವನಿಗಳಿಗೆ
ಮುಚ್ಚಿಬಿಡಿ ಕಿವಿ
ಭಿತ್ತಿ ಮೇಲಿನ ಚಿತ್ರಗಳಿಗೆ
ಬಣ್ಣ ಚೆಲ್ಲಿ ಬಿಡಿ |

ಮಂದ ನಕ್ಷತ್ರ ದೀಪದಿಂದ
ತೂರಿ ಬರುವುದು ದಾರಿ |
ಉತ್ತುಂಗದ ಸ್ಥಿತಿ ಚದುರಿ
ಶೂನ್ಯಕ್ಕೆ ಜಾರುತ್ತಿದೆ ತುದಿ |

ಗಾಳಿಗೆ ಕೈಮುಗಿದು ಪ್ರಾರ್ಥನೆ
ತಿರುಗಲಿ, ಕೈವಾರದ ಹುಲ್ಲಿನ ತಂತಿ
ಯಾವುದಾದರೂ ದಿಕ್ಕಿದ್ದರೆ
ಆ ಕಡೆಗೆ ಮಗ್ಗಲು ಮಗುಚಲಿ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

ಗುರುವಾರ, ಫೆಬ್ರವರಿ 14, 2013

ಮೊದಲ ಮಲ್ಲಿಗೆ ಹೂವಿನ ತಲೆ ಕತ್ತರಿಸಿದ ರಾತ್ರಿ !



ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |

ಎಲ್ಲವೂ ಅಲ್ಲೇ ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ |

ಎಲ್ಲೆ ಮೀರದ ಆಸುರಕ್ಷಿತ ಕೋಟೆ |

ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |

ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |

ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |

ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |

ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |

ಎಲ್ಲವೂ ಅಲ್ಲೇ  ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಅದೋ ರಾತ್ರಿ ಚಲಿಸಿದೆ...
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |
-ರವಿಮೂರ್ನಾಡು

ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ….

http://avadhimag.com/?p=77539 

ಬುಧವಾರ, ಫೆಬ್ರವರಿ 6, 2013

"ಪ್ರೀತಿ" ಹೇಳಿದ ಪದಗಳನು ಗಂಟಲಿಗಿಳಿಸಿ ..!



ಒಪ್ಪಿಕೊಂಡ ಮೇಲೆ
ನಮ್ಮ ಮನೆಗೆ ಹಿಂತಿರುಗಿದೆವು
ನಾವು ಪ್ರೇಮಿಗಳು |
ಇಬ್ಬರಿಗೂ ತಡೆಯಿಲ್ಲದ ಪ್ರೀತಿ
ನಿಲ್ಲಿಸದಾದೆವು

ಬಂದು ನಿನ್ನ ಪ್ರೀತಿಯ
ಏಕಾಏಕಿ ಕಸಿದುಕೊಳ್ಳುತ್ತೇನೆ
ನೀನೇನು ಮಾಡಬಲ್ಲೆ?

ಸಣ್ಣ ಪೊದೆಯೊಳಗೆ
ಬೆಳೆಯುತ್ತಿದೆ ಕಪ್ಪು ಎಳೆ |
ಹಳದಿಗರಳಿದ ಸೂರ್ಯ
ಕಿಟಕಿ ಸರಳಿಗಿಣುಕಿ ಕಿರಣ
ಇದೀಗ ಬೆತ್ತಲೆ |

ನೀ ನನ್ನ ನೋಡುತ್ತಿದ್ದೆ
ತಿನ್ನುವಂತೆ |
ನಾಲಗೆಯಿಳಿಸಿ ಬಾಯೊಳಗೆ
ತಿರುಗುವಂತೆ |

ಒಬ್ಬರಿಗೊಬ್ಬರು
ಅಭಿನಂಧನೆಗೆ ಕಾದೆವು
ಆದರೆ,
ಎಲ್ಲರಿಗೂ ಗೊತ್ತಿದೆ
ಪ್ರೀತಿ ದಿವಾಳಿಯಂತೆ !

ಎದೆಗಳಿಗೆ, ಮುಂದಿನ ವೆಚ್ಚದ ಪಟ್ಟಿ
ಉಡುಪು ತೊಟ್ಟ ಬೊಂಬೆಯ
ಶೂನ್ಯ ಮಧ್ಯಕೆ ಛೇದಿಸಿ 
ಸಮಾನ ಜನರ ಹಾಯುತಿದೆ
ಖಾಲಿ ಗಾಜು ಪ್ರತಿಫಲಿಸಿ |

ನಿಷೇಧಾತ್ಮಕವಾಗಿ,
ಹೇಳಿದ ಪದಗಳನು ಎಂಜಲಿಗದ್ದಿ
ಗಂಟಲಿಗಿಳಿಸುತ್ತಿದ್ದೇನೆ |
ನಾ ನಿನ್ನ ಪ್ರೀತಿಸುತ್ತೇನೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ 

ಮಂಗಳವಾರ, ಫೆಬ್ರವರಿ 5, 2013

ತೊರೆದ ಪ್ರೀತಿಗೊಂದು ಪ್ರಶ್ನೆಗಳ ಸಾಂತ್ವನ !



ನೀನೊಮ್ಮೆ ಬಂದಿದ್ದೆ
ಈ ಪ್ರೀತಿ ಪರಿಧಿಯೊಳಗೆ
ಅದೀಗ ತೆರೆದಿದೆ
ನನ್ನ  ಪ್ರೀತಿಸಿದ ಜನರನ್ನೇ
ನಿನಗಿಂತ ಪ್ರೀತಿಸುವೆನು
ಇದೀಗ ಮುಂದಿದೆ

ಪ್ರೀತಿ ಒಳಗೋಳ ಸೀಳಿ-
ನಂಬಿಕೆ ಮೇಲ್ಮುಖ ಹೊರಳಿ
ಕತ್ತರಿಸುವ ರಾತ್ರಿಗಳಿಗೆ
ಪ್ರೀತಿ ಮಿತಿಯಿದೆಯೇ?
ನೀರವತೆ ತಬ್ಬಿ ಪ್ರಶ್ನೆಗಳ 
ವರ್ತುಲ ವರ್ತುಲದೊಳಗೆ
ಶೋಧ, ಅಸ್ವಸ್ಥಗಳಿಗೆ
ಚಿಂತೆಯಿದೆಯೇ?

ಕಥೆ ಹೆಣೆದ ನಿದ್ದೆಗಳಿಗೆ
ಒಂದೊಮ್ಮೆ ಸ್ನೇಹತನವಿತ್ತು
ಇದೀಗ ಎಚ್ಚರವಿದೆ ಶತ್ರುವಿಗೆ
ಯಾವ ಕಥೆಗೆ?
ನಿನ್ನ ಪ್ರೀತಿಸಿದ ದಿನಗಳಿಗೆ
ಅದೆಂಥ ಮೂರ್ಖತನವಿದೆ
ನೆನಪು ಹಲಗೆಯ ಕಪ್ಪಿಗೆ
ಬಳಪವಿದೆಯೆ?

ಪ್ರೀತಿ ಕಡಲೆದೆಯೊಳಗೆ
ಉಬ್ಬಿ ಕಂಪನದ ಉರಿ
ಅಲೆಯುತ್ತಿರಲಿ ತಂಪಾಗಿ
ತಡಿಯವರೆಗೆ |
ನೆನಪು ಒಳಗೋಳ ಸೀಳಿ
ನಂಬಿಕೆ ಮೇಲ್ಮುಖ ಚಿಮ್ಮಿ
ಹೆಜ್ಜೆಗಳ ಸವೆಯುತಿರಲಿ
ಜನರ ಕಡೆಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ