ಬುಧವಾರ, ಸೆಪ್ಟೆಂಬರ್ 28, 2011

ಮನೆಗೆ ಬಂದವರು..!


ಎದೆಯೊಳಗೆ ಕುಳಿತರು
ಮನೆಯವರೆಗೆ ಬಂದರು
ಹೊಸ್ತಿಲಲ್ಲೆ ನಿಂತು ಮನೆಯ
ಅಸ್ತಿತ್ವವ ಅಳೆದರು.

ಹೊಸಿಲು ದಾಟಿ ಬಂದರು
ಮನೆಯ ತುಂಬಾ ನಡೆದರು
ಬಡಿಸಿಕೊಟ್ಟ ಅಡುಗೆಯಲ್ಲಿ
ನೂರು ತಪ್ಪು ಸುರಿದರು
ಕಲ್ಲು ಹೆಕ್ಕಿ ಹುಳಿಯ ಹಿಂಡಿ
ತಟ್ಟೆ ಮುಖಕೆ ಎಸೆದರು..

ಬಿಕ್ಕಳಿಕೆಯೇ ತುಂಬಿದೆ
ದುಃಖ್ಖ ಹೊದಿಕೆ ಹಾಸಿದೆ
ಹೋದವರಿಗೆ ಕಿಟಕಿ ತೆರೆದು
ಮನೆಯ ಕೋಣೆ ಕೊರಗಿದೆ
ಇದ್ದವರ ಬಿರುಗಾಳಿಗೆ
ಮನದ ದೀಪ ಬೆಚ್ಚಿದೆ

ಕರಗದಿರಲಿ ದೀಪರೂಪ
ಜಗದ ಬೆಂಕಿ ಕೋಪಕೆ
ಅಂಗಳದಲಿ  ಮಲ್ಲಿಗೆ
ಮನೆಯ ಒಳಗೂ ಚೆಲ್ಲಿದೆ
ಕೋಣೆ ತುಂಬಾ ದೀಪದಲ್ಲಿ
ನೂರು ಮನಸ್ಸು ಅರಳಿದೆ
ಬೊಗಸೆಯೊಡ್ಡಿ ಬೇಡುತ್ತಿದೆ
ಮನದ ಕಂಬನಿ ಮೆಲ್ಲಗೆ..!
-----------------------------------------------------------
-ರವಿ ಮೂರ್ನಾಡು

ಮಂಗಳವಾರ, ಸೆಪ್ಟೆಂಬರ್ 27, 2011

62 ಪತ್ನಿಯರ ಪತಿ ಮೂಂಘಫೀರ್ : ಶಾಲೆ ತುಂಬಾ ಅವನದೇ 200 ಮಕ್ಕಳು


            -ರವಿ ಮೂರ್ನಾಡು.
ಒಂದು ಭಾನುವಾರ ಅವನನ್ನು ಚರ್ಚೆಗೆ ಕರೆದೆ. ಅರವತ್ತರ ವಯೋಮಾನದ ಟಚುಟೋ  ಆಂದ್ರೆ ! ಕ್ಯಾಮರೂನ್‍ ಲೋಕ ಸಂಸ್ಕ್ರತಿಯ ಜತನದ ಮಾತುಗಳು ಅವನ ಸ್ವರವಾದಾಗ ಸ್ವಲ್ಪ ಕುತೂಹಲ ಕೆರಳಿಸಿತು. ಇಲ್ಲಿಗೆ ಬಂದಲ್ಲಿಂದ ಇವನೊಂದಿಗೆ ಒಂದಷ್ಟು ಆಳವಾದ ಮಾತುಕತೆ ನಡೆಸಿದ್ದೆ. ಮಹಾಭಾರತದ ಕಥೆಯ ಬಗ್ಗೆ ಅಲ್ಪಸ್ವಲ್ಪ ವಿವರಿಸಿದಾಗಲೇ ಈ ನೆಲದ ಅಜ್ಞಾತ ಕಂದರವನ್ನು ಕೆದಕ ತೊಡಗಿದ. ಶ್ರೀಕೃಷ್ಣನ ಹದಿನಾರು ಸಾವಿರ ಹೆಂಡತಿಯರು ಇದ್ದರು ಅಂತ ಕಥೆ ಕೇಳಿದ್ದೆ, ಅದು ಸಾವಿರಾರು ವರ್ಷಗಳ ಹಿಂದೆ. ನಮ್ಮ ಕ್ಯಾಮರೂನಿನಲ್ಲಿ ಸಾವಿರದ ಗಡಿ ತಲುಪದಿದ್ದರೂ ನೂರರ ಗಡಿ ತಲಪಿದ ಹೆಂಡತಿಯರು ಇದ್ದಾರೆ. ಹಾಗೆ ಹೆಚ್ಚು ಹೆಂಡತಿಯರನ್ನು ಇಟ್ಟುಕೊಳ್ಳುವುದು ಇಲ್ಲಿಯ ಪ್ರತಿಷ್ಟೆ ಮತ್ತು ಗೌರವದ ಸಂಕೇತ. ಇದು ನೂರಾರು ವರ್ಷಗಳಿಂದ ನಡೆದು ಬರುತ್ತಿದೆ.
ಆಫ್ರೀಕಾ ಸಂಸ್ಕೃತಿಯ ಕಥೆಗಾರ ಟಚುಟೋ ಆಂದ್ರೆ
          ಅವನು ಹೇಳುತ್ತಲೇ ಇದ್ದ, ಅವನ ಪ್ರತೀಯೊಂದು ಮಾತನ್ನು ಟಿಪ್ಪಣಿ ಮಾಡ ತೊಡಗಿದೆ. ಬೆಳಿಗ್ಗೆಯಿಂದ ಪ್ರಾರಂಭವಾದ  ಅವನ ಕ್ಯಾಮರೂನ್ ಸಂಸ್ಕೃತಿಯ ಸಂಪುಟ ನಿಧಾನವಾಗಿ ತೆರೆದುಕೊಳ್ಳ ತೊಡಗಿತು.
ಸುಮಾರು ನಾಲ್ಕು ಸಾವಿರ ಜನಸಂಖ್ಯೆಯ ಮೂಂಘ ಗ್ರಾಮ, ಕ್ಯಾಮರೂನಿನ ರಾಜಧಾನಿ ಯಾವುಂದೆ ನಗರದ 60 ಕಿ.ಮೀ ದೂರದಲ್ಲಿದೆ. ದಟ್ಟಾರಣ್ಯಗಳಿಂದ ಕೂಡಿದ ಅಧುನಿಕ ಜಗತ್ತಿನ ಶೇ.50 ರಷ್ಟು ಮಾಹಿತಿ ಲಭ್ಯವಿಲ್ಲದ ಪ್ರದೇಶ ಇದು. ಇಲ್ಲಿಯ ಮುಖ್ಯಸ್ಥ ಈ ಮೂಂಘಫೀಯರ‍್..! ತುಂಬಾ ಗೌರವ, ಭಯಭಕ್ತಿಯಿಂದ ಪೂಜಿಸಲ್ಪಟ್ಟ ವ್ಯಕ್ತಿ. ಇದೇ ಸಂಸ್ಕೃತಿ, ಇಡೀಯಾ ಕ್ಯಾಮರೂನಿನ ಎಲ್ಲಾ 198 ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ. ಎಲ್ಲಾ ಗ್ರಾಮಗಳು ಪಾರಂಪರಿಕ ಮುಖಸ್ಥನನ್ನು ಹೊಂದಿದೆ. ಈತ ಯಾವಾಗಲು ಏಕಮೇವ ಮತ್ತು ಅವನು ಹೇಳಿದ್ದೇ ಅಂತಿಮ. ಅವರನ್ನು ದೇವರೆಂದು ಪರಿಗಣಿಸುತ್ತಾರೆ ಅವರ ಜನರು. ಫ್ರೆಂಚ್‍ ಭಾಷೆಯಲ್ಲಿ "ಫೊನ್‍" ಎಂದು ಕರೆಯುತ್ತಾರೆ. ಇಂಗ್ಲೀಷ್‍ನಲ್ಲಿಯೂ ಇದೇ ಇರಬಹುದೇನೊ ಅಂದ ಟಚುಟೋ ಆಂದ್ರೆ. ತನ್ನ ಗ್ರಾಮದ ಜನತೆ ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಈತನ ಪ್ರಭಾವವಿದೆ. ಅದು ನಡೆಯುತ್ತಲೂ ಇದೆ.
          ಸರ್ವಾಧಿಕಾರಿ ಆಡಳಿತವಿರುವ ಕ್ಯಾಮರೂನಿನ ಪ್ರತೀ ಗ್ರಾಮದಲ್ಲಿ ಒಬ್ಬೊಬ್ಬ ಸರ್ವಾಧಿಕಾರಿ ಸಂಸ್ಕೃತಿಯ ರಾಜನಿದ್ದಾನೆ. ಅವನ ಅಧಿಕಾರವನ್ನು ರಾಷ್ಟ್ರದ ಸರಕಾರವೂ ಪ್ರಶ್ನಿಸುವುದಿಲ್ಲ. ಅಷ್ಟೊಂದು ಪ್ರಭಾವಶಾಲಿ ಈ "ಫೊನ್‍". ಈ ಮೂಂಘಫೀಯರ‍್ ಮೂಂಘ ಗ್ರಾಮದಲ್ಲಿ  ಮಾಡಿದ್ದು ಇದನ್ನೇ. ಅವನ ಹೆಂಡತಿಯರ ಸಂಖ್ಯೆ ಅರವತ್ತೇರಡು..! ಎಲ್ಲಾ ಮದುವೆಯನ್ನು ನ್ಯಾಯುಯುತವಾಗಿ ಸರಕಾರಿ ದಾಖಲೆಯೊಂದಿಗೆ ಮಾಡಿದ್ದಾನೆ. ಈ ಎಲ್ಲಾ ಹೆಂಡತಿಯರಿಗೂ ಮಕ್ಕಳನ್ನು ಕರುಣಿಸಿದ ಸಂಖ್ಯೆ 243. ಇದೇ ಗ್ರಾಮದಲ್ಲಿ  ಒಂದು ಶಾಲೆಯಿದೆ. ಆ ಶಾಲೆ ತುಂಬೆಲ್ಲಾ ಅವನದೇ ಮಕ್ಕಳು. ಈತ  ಇತ್ತೀಚೆಗೆ  2010 ರಲ್ಲಿ  ಮರಣ ಹೂಂದಿದ.
          ಇಂತಹ ಪ್ರಸ್ತುತ ಮಾತುಗಳು ಬೇಕಾದಷ್ಟಿವೆ ಕ್ಯಾಮರೂನಿನಲ್ಲಿ ಎಂದು ಆಂದ್ರೆ ಮಾತು ಮುಂದುವರೆಸಿದ. ಇಲ್ಲಿನ ಈಶಾನ್ಯ ಭಾಗದಲ್ಲಿ ಬಬೂನ್ ಎಂಬ ಗ್ರಾಮವಿದೆ. 45 ಹೆಂಗಸರನ್ನು ಮದುವೆಯಾದವನು ಈಗಲೂ ಬದುಕಿದ್ದಾನೆ.  ಕಿಂಗ್‍ ಆಫ್ ಬಬೂನ್ ಸುಸ್ತಾನ್ ಜಾಯ್‍ ! ಇವನಿಗೆ  122 ಮಕ್ಕಳಿದ್ದಾರೆ. ಏಕಪತ್ನಿ ಸಂಸ್ಕೃತಿಯ ನಿಮಗೆ  ಆಶ್ಬರ್ಯವಾಗಬಹುದು. ಆದರೆ ಇಲ್ಲಿ ಇದು ಸರ್ವೇ ಸಾಮಾನ್ಯ. ಇತ್ತೀಚೆಗೆ  ಇಂತಹ ಸಂಸ್ಕೃತಿ ಯುವ ಪೀಳಿಗೆಯವರಲ್ಲಿ ಕಡಿಮೆಯಾಗುತ್ತಿದೆ. ಹಲವು ಜಾತೀಯ ಪಂಗಡಗಳಲ್ಲಿ ಬೇರ್ಪಟ್ಟಿವೆ ಕ್ಯಾಮರೂನ್ ಬುಡಕಟ್ಟು ಜನಾಂಗ. ಬಾಂಬ್ಲಿಕೆ, ಬಾಸಾ, ಹೌಸಾ, ಇತ್ಯಾಧಿ ಪಂಗಡಗಳು  ಕ್ರಿಶ್ಚಯನ್‍, ಮುಸಲ್ಮಾನರು, ಮತ್ತು ಇಲ್ಲಿಯದೇ ಆದ ಜತನ ಪಂಗಡಗಳು ಅವರದ್ದೇ ಆದ ದೇವರನ್ನು ಪೂಜಿಸುತ್ತಾರೆ. 200ಕ್ಕೂ ಅಧಿಕ ಬುಡಕಟ್ಟು ಪ್ರಾಂತೀಯ ಭಾಷೆಗಳು ಇಲ್ಲಿ ಚಾಲ್ತಿಯಲ್ಲಿವೆ. ಹಾಗೇ 20 ರಿಂದ 30 ರಷ್ಟು ಹೆಂಡತಿಯರು, ಒಬ್ಬೊಬ್ಬ ಹೆಂಡತಿಗೆ 5 ರಿಂದ 8 ರವರೆಗೆ ಮಕ್ಕಳನ್ನು ಹೊಂದಿದ್ದಾರೆ ಅಂದಾಗ  ಒಂದು ಕ್ಷಣ ಮೂಕ ವಿಸ್ಮೀತನಾಗಿದ್ದೆ. ಅವನದೇ ಮನೆಯ ಕಥೆಯನ್ನೂ ಅವನು  ಬಿಚ್ಚಿಡದೇ ಇರಲಿಲ್ಲ.
ಕ್ಯಾಮರೂನ್‍  ಗ್ರಾಮ ಮುಖ್ಯಸ್ಥರೆಂಬ " ಫೊನ್‍"ಗಳು ಒಂದೆಡೆ ಸೇರಿದಾಗ..
          ನನ್ನದು ಬಾಂಬ್ಲಿಕೆ ಬುಡಕಟ್ಟು ಪಂಗಡ. ನನ್ನ ಊರು ಬಫೌನ್‍, ಈ ಗ್ರಾಮದ ಮುಖಸ್ಥ  25 ಹೆಂಡತಿಯರನ್ನೂ, 69 ಮಕ್ಕಳನ್ನು ಹೊಂದಿದ್ದಾನೆ. ಅವನ ಹೆಸರು ಜಾಂಕೇ..! ನನ್ನ ಪ್ರಕಾರ, ನಾನು ನಂಬಿದಂತೆ ಅವನಿಗೆ ತುಂಬಾ ಗೌರವ ಭಕ್ತಿಯಿಂದ ಪೂಜಿಸುತ್ತೇನೆ. ನನ್ನ ವಯಸ್ಸು ಈಗ 60. ಈ ಪರಂಪರೆ ನನ್ನ ಅಪ್ಪ-ಅಮ್ಮನ ಕಾಲಾಂತರದಿಂದ ಪಾಲಿಸಿಕೊಂಡು ಬಂದಿದೆ. ನಿಮಗೆ ಒಂದು ವಿಷಯ ಹೇಳುತ್ತೇನೆ. ಈ ಫೊನ್‍ ಎನ್ನುವ ಅಗೋಚರ ಹೆಸರಿನಲ್ಲಿರುವ ಮುಖ್ಯಸ್ಥ ವ್ಯಕ್ತಿ ಸತ್ತರೂ, ಫೊನ್‍ ಎನ್ನುವ ಪಟ್ಟ ಸಾಯುವುದಿಲ್ಲ. ಸತ್ತ ವ್ಯಕ್ತಿಯ ಕುಟುಂಬದ ಹಿರಿಯರು ಅದನ್ನು ಅಲಂಕರಿಸಬೇಕು. ಅದು ಕಟ್ಟಳೆ. ಅಲ್ಲದೆ ಅವನನ್ನು ಅವಲಂಭಿಸಿರುವ ಹೆಂಡತಿ ಮಕ್ಕಳನ್ನು, ಅವನಿಗೆ  ಹೆಂಡತಿಯಿದ್ದರೂ ಅವರೊಂದಿಗೆ ವರಿಸಬೇಕು. ಒಂದು ಪಕ್ಷ ಅವನು ತಿರಸ್ಕರಿಸಿದರೆ, ಆ ಗ್ರಾಮದಲ್ಲಿ ಅವನಿಗೆ ನೆಲೆಯಿಲ್ಲ. ಅಲ್ಲಿಂದ ಕ್ಯಾಮರೂನಿನ ಇತರ ಪಟ್ಟಣಗಳಿಗೆ ಪಲಾಯನ ಮಾಡಬೇಕಾಗುತ್ತದೆ. ಅವನು ಹೆಚ್ಚು ಕಾಲ ನಿಂತರೆ ಸಾವು ಖಚಿತ...! ಅದು ಈ ರಾಷ್ಟ್ರದ ಎಲ್ಲಾ ಫೊನ್ ಕಪಿಮುಷ್ಠಿಯಲ್ಲಿರುವ ಗ್ರಾಮಗಳಲ್ಲಿ  ಮುಂದುವರೆದುಕೊಂಡು ಬಂದಿದೆ ಅಂದ.
          ಹೆಚ್ಚಿನ ಸಂಖ್ಯೆಯ ಇಲ್ಲಿನ ಜನರು ನಾಲ್ಕರಿಂದ ಐದು ಮಲತಾಯಂದಿರು ಹಾಗೂ 25 ರಿಂದ 30 ಅಣ್ಣ-ಅಕ್ಕ -ತಮ್ಮ-ತಂಗಿಯಂದಿರನ್ನು ಹೊಂದಿದ್ದಾರೆ. ಮುಖ್ಯಸ್ಥ ಫೊನ್‍ 10 ರಿಂದ 15 ಹೆಂಡತಿಯರನ್ನು ಹೊಂದಿ ಬಹುದೊಡ್ಡ ಕುಟುಂಬವನ್ನು ಹೊಂದಿದ್ದಾನೆ. ಅವರಿಂದ 70 ರಿಂದ 100 ರವರೆಗೆ ಮಕ್ಕಳನ್ನು ಪಡೆದಿರುತ್ತಾನೆ. ಅದು ಈಗಲೂ ಇದೆ.  ಈ ಹೆಚ್ಚು ಹೆಚ್ಚು ಹೆಂಡತಿಯರನ್ನು ಪಡೆದ ಪರಿಣಾಮವಾಗಿ ನೀವು ಇಲ್ಲಿ ಕಾಣುತ್ತಿರುವ ಯಾವುದೇ ವ್ಯಕ್ತಿ, ಬಹುದೊಡ್ಡ ಕುಟುಂಬವನ್ನೇ ಹೊಂದಿದ್ದಾನೆ.
          ಹಳೆಯ ಫೊನ್‍ ಮುಖ್ಯಸ್ಥನ ಪೀಳಿಗೆಯಲ್ಲಿ 12 ಹೆಂಡತಿಯರು, 100 ಕ್ಕಿಂತ ಹೆಚ್ಚು ಮಕ್ಕಳನ್ನು ಇಲ್ಲಿ ಕಾಣಬಹುದು. ಅದರೆ,ನೀವು ಆಲೋಚಿಸಿದಂತೆ ಇಲ್ಲಿಯ ಹೆಂಗಸರೇನು ಕಡಿಮೆಯಿಲ್ಲ. ಕ್ಯಾಮರೂನಿನ ಪ್ರಶ್ಚಿಮಾ ಪ್ರಾಂತೀಯಾ ಗ್ರಾಮಗಳಲ್ಲಿ  ಹೆಂಗಸರ  ಪಾರುಪತ್ಯದ ಸಂಸ್ಕೃತಿಯೂ ಇದೇ. ಅಲ್ಲಿ  ಒಬ್ಬೊಬ್ಬ ಹೆಂಗಸು ಐದರಿಂದ  ಹತ್ತು ಗಂಡಸರನ್ನು ಕಾನೂನು ಬದ್ಧವಾಗಿ ಇಟ್ಟುಕೊಂಡಿದ್ದಾರೆ. ಹೇಗಿದೆ ಅಫ್ರೀಕಾದ ಹೆಂಗಸರ ಸಂಸ್ಕೃತಿ.?
ಈಗ ನಾನು ಹೇಳಿದ ಕಥೆಯೆಲ್ಲಾ  ನನ್ನ 20-30 ರ ಹರೆಯದ ವಯಸ್ಸಿನ  ಕಾಲದ್ದು. ಕಂಪ್ಯೂಟರ್ ಜಗತ್ತು ಬಂದ ಮೇಲೆ, ಆ ಸಂಸ್ಕೃತಿ ನಿಧಾನವಾಗಿ  ಮರೆಯಾಗುತ್ತಿದೆ. ಅದಕ್ಕೆ ನನ್ನ ಮಗನೇ ಸಾಕ್ಢಿ ಅಂದ ಟಚುಟೋ ಅಂದ್ರೆ.  ನನ್ನ ದೊಡ್ಡ ಮಗ  ಇಥೋ ಇದ್ದಾನೆ. ಅವನಿಗೆ 40 ವಯಸ್ಸು. ಅವನಿಗೆ ಒಬ್ಬಳೇ ಹೆಂಡತಿ, 8 ಮಕ್ಕಳಿದ್ದಾರೆ. ಅದು ಈಗೀಗ  ಅವನ  ಪೀಳಿಗೆಯ ಜನ ಒಬ್ಬಳು ಹೆಂಡತಿ 7 ರಿಂದ 8 ಮಕ್ಕಳನ್ನು ಪಡೆದಿದ್ದಾರೆ. ಅದು ಪರಿವರ್ತನೆಯ ಜಗತ್ತು. ನನ್ನ  ಇನ್ನೊಬ್ಬ  ಮಗ  ಕ್ರಿಷ್ಟೀನ್‍ 28 ವಯಸ್ಸು, ಅವನಿಗೂ ಒಬ್ಬಳೇ ಪತ್ನಿ, 3 ಮಕ್ಕಳಿದ್ದಾರೆ ಅಂತ ನಗು ಚೆಲ್ಲಿದ.
          ಪತ್ನಿಯರನ್ನು ಪಡೆಯುವ ವಿಚಾರದಲ್ಲಿ ತುಂಬಾ ಸ್ವತಂತ್ರರಾಗಿದ್ದರೆ ಗ್ರಾಮಗಳ ಈ "ಫೊನ್‍"ಗಳು. ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವುದು ವಿಚಿತ್ರವಾಗಿದೆ. ಅವರಿಗೆ  ಹೊಸ ಹುಡುಗಿ ಬೇಕೆಂದಾಗ ಸೀದಾ  ಗ್ರಾಮದಲ್ಲಿ  ಸುತ್ತಾಟ ನಡೆಸುತ್ತಾರೆ. ನಿರಾಯಾಸವಾಗಿ ತಾನು ಗಲ್ಲಿಗಳಲ್ಲಿ ಮೆಚ್ಚಿದ ಹುಡುಗಿಯನ್ನು ತನ್ನ ಮನೆಗೆ ಎತ್ತಿ ಹಾಕಿಕೊಂಡು ಬರುತ್ತಾರೆ. ನೀವು ನಂಬಿದರೆ ನಂಬಿ, ಇದು ಈಗಲೂ ಚಾಲ್ತಿಯಲ್ಲಿದೆ. ಹಾಗೆ ತಾನು ತಂದ ಹುಡುಗಿಗೆ ಬಂಗಾರದ ಬ್ರೇಸ್ಲೆಟ್ ಹಾಗೂ ಸೊಂಟಕ್ಕೆ ಅವನ ಪಾರಂಪರಿಕ ಚಿಹ್ನಿಯಿರುವ ರಾಣಿಯರ ಸೊಂಟದ ಬೆಲ್ಟ್ ಧರಿಸಲಾಗುತ್ತಿದೆ. ಅಲ್ಲಿಗೆ ಅವಳು ಅವನ  ಸೊತ್ತಾಗುತ್ತಾಳೆ. ಇದಕ್ಕೆ ಯಾರೂ ಎರಡು ಮಾತಾಡುವಂತಿಲ್ಲ.  ಒಂದು ವಿಚಾರದಂತೆ ಎಂದೆಂದಿಗೂ ಈ "ಫೊನ್‍" ನ  ಹೆಂಡತಿಯರು  ಜನರ ಮುಂದೆಯಾಗಲಿ, ಪಟ್ಟಣದಲ್ಲಾಗಲಿ ಕಾಣಲು ಸಿಗುವುದೇ ಇಲ್ಲ. ಅವರು ಅವನ ಮನೆಯಲ್ಲಿ  ಮಕ್ಕಳೊಂದಿಗೆ ನಾಲ್ಕು ಗೊಡೆಯೊಳಗೆ ಬಂಧಿ. ಪಾರಂಪರಿಕವಾಗಿ ನಡೆದು ಬಂದ ಈ ಕಟ್ಟಳೆ , ಆ ಗ್ರಾಮ  ಜನರಿಂದಲೆ ಪೋಷಿಸಲ್ಪಟ್ಟಿದೆ. ಅದಕ್ಕೆ ಆ "ಫೊನ್" ಮತ್ತು, ಅವನ ಹೆಂಡತಿಯರು ಅದರೊಳಗೆ  ಇರಬೇಕು. ಆದು ಮೀರಿದರೆ ಮರಣವೆ ಗತಿ. ಊರಿನ ಜನರೇ ಕೊಂದು ಹಾಕುವ ಸಂಸ್ಕೃತಿಯಿದೆ. ಅಂತಹ ಹಲವು ಕಥೆಗಳು ಇಲ್ಲಿನ  ಮಣ್ಣಿನಲ್ಲಿ  ಇನ್ನಿಲ್ಲದಂತೆ  ಮಣ್ಣಾಗಿವೆ. ಹೇಳುತ್ತಲೇ ಒಮ್ಮೆ  ನಿಟ್ಟುಸಿರು ಬಿಟ್ಟ ಟಚುಟೋ ಆಂದ್ರೆ,
          ಮೂಂಘಫೀಯರ‍್ ಹೇಗೆ ಇಷ್ಟೋಂದು ಹೆಂಡತಿಯರನ್ನು ಪಡೆದ ಅನ್ನುವುದಕ್ಕೆ ಉತ್ತರ ಸಿಕ್ಕಿತು ಅಂತ ನಿಮಗೆ ಗೊತ್ತಾಗಿರಬಹುದು.
          ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ... ಹೆಚ್ಚು ಹೆಚ್ಚು ಹೆಂಗಸರನ್ನು ಮದುವೆಯಾಗುವುದು ಕಾನೂನು ಬದ್ದವಾಗಿ ನಡೆದುಕೊಂಡು ಬಂದಿದೆ ಕ್ಯಾಮರೂನಿನಲ್ಲಿ. ಇದು ಇಲ್ಲಿನ ಹಳೆಯ ಪೀಳಿಗೆಯಲ್ಲಿ  ಹೆಚ್ಚು. ನವ ಪೀಳಿಗೆಯಲ್ಲಿ ಇದರ ಸಂಖ್ಯೆ ಕಡಿಮೆ. ಇಲ್ಲಿನ  ಪ್ರತಿಷ್ಥೆಯ ಸಂಕೇತವಾಗಿ, ಅವನೇ ನಿಜವಾದ ಗಂಡಸು. ಸಮಾಜದಲ್ಲಿ ಗೌರವ ಮತ್ತು ಪ್ರಭಾವವೂ ಹೆಚ್ಚು. ಇದು ಗ್ರಾಮದ ಮುಖಸ್ಥನಿಗೆ ಮಾತ್ರ ಸೀಮಿತವಲ್ಲ. ಆ ಗ್ರಾಮದ ಇತರ ಗಂಡಸರಿಗೂ ಅನ್ವಯಿಸುತ್ತದೆ. ಗ್ರಾಮದಲ್ಲಿರುವ ಹೆಂಗಸರ ಅನುಮತಿಯಿಲ್ಲದೆ ಅನಾಮತ್ತಾಗಿ ಎತ್ತು ತಂದು ಮದುವೆಯಾಗುವ ಸಂಪ್ರದಾಯ ಇಲ್ಲಿ ಈಗಲೂ ಇದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದು ಕಾನೂನಿಗೆ ವಿರುದ್ಧ ಅಂತ ಗೆರೆ ಸಾಭೀತಾಗಿದೆ. ಏನು ವಿಚಿತ್ರ ಅಲ್ವೇ?
ಗ್ರಾಮಸ್ಥರೊಂದಿಗೆ "ಫೊನ್" ಮುಖ್ಯಸ್ಥನ ಸಮಾಲೋಚೆನೆ
          ಗ್ರಾಮಕ್ಕೆ ಭೇಟಿ ನೀಡಿದವರು ಈ ಮುಖ್ಯಸ್ಥನನ್ನು ಶಾರೀರಿಕವಾಗಿ ಮುಟ್ಟಿ ಕೈಕುಲುಕುವಂತಿಲ್ಲ. ಸೂಕ್ಷ್ಮವಾಗಿ ಹೇಳುವುದಾದರೆ ಅವನ ಅನುಮತಿಯಿಲ್ಲದೆ ಯಾರೂ ಕೂಡ ಅವನನ್ನು ಶಾರೀರಿಕವಾಗಿ ಮುಟ್ಟುವಂತಿಲ್ಲ.ಇಲ್ಲಿನ ಜಾನಪದ ಸಂಸ್ಕೃತಿಯಂತೆ ಈತ ಜನರ ಗುಂಪಿರುವಲ್ಲಿ ಆಹಾರ-ಖಾಧ್ಯಗಳನ್ನು ತಿನ್ನುವುದೂ ಇಲ್ಲ, ಅದು ನೆಂಟರಿಷ್ಟರಾದರೂ ಸರಿ. ಜನರ ಗುಂಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಜನರ ಗುಂಪಿರುವಲ್ಲಿ ಈತನಿಗೆ ಆಹಾರ  ಸರಭರಾಜು ಆಗುವುದಿಲ್ಲ. ಊಟದ ಸಮಯ ಅಥವಾ ಬೆಳಿಗ್ಗಿನ ಉಪಹಾರದ ಸಮಯದಲ್ಲಿ ಸುತ್ತಮುತ್ತ ಈತ ಗೋಚರಿಸಬಹುದು ಅಥವಾ ಆ ಸಮಯದ ನಂತರ ಗೋಚರಿಸದೆಯೂ ಇರಬಹುದು. ಅಷ್ಟೊಂದು ಪ್ರಭಾವಶಾಲಿಯಾಗಿ ಅವನನ್ನು ಕಾಣಲಾಗಿದೆ.
          ಈ "ಫೊನ್‍"ಗೆ ಸಾವಿಲ್ಲ. ಅವರು ಕ್ಷಣ ಕಾಲ ಅದೃಶ್ಯರಾಗುತ್ತಾರೆ ಅಂತ  ಇಲ್ಲಿನ ಪ್ರತೀತಿ. ಮನುಷ್ಯ ಜನ್ಮವನ್ನು ಕಳೆದು ಪ್ರಾಣಿಗಳ ರೂಪಗಳಲ್ಲಿ, ಅರಣ್ಯ ಮತ್ತು ಗ್ರಾಮದಲ್ಲಿ ಓಡಾಡುತ್ತಿರುತ್ತಾರೆ ಅಂತ ನಂಬಿದ್ದಾರೆ ಇಲ್ಲಿಯ ಜನರು. ಪಕ್ಕದ ಅರಣ್ಯದಿಂದ ವಿಷಸರ್ಪಗಳೋ ಅಥವಾ ಇನ್ಯಾವುದೋ ಪ್ರಾಣಿ ಬಂದಾಗ ಕೊಲ್ಲುವುದನ್ನು ನಿರ್ಬಂಧಿಸಲಾಗುತ್ತದೆ. ಅಗೋಚರನಾದ ಫೊನ್‍ ತನ್ನ ರಾಜ್ಯಭಾರದ ಗ್ರಾಮದಲ್ಲಿ  ಸೂಕ್ತ ನೆಲೆ ಕಂಡುಕೊಳ್ಳಲು ಬಂದಿದ್ದಾನೆ ಅಂತ ಪೂಜಿಸಲಾಗುತ್ತದೆ. ಇದರ ಬಗ್ಗೆ ಹಲವು  ನನ್ನ ಗ್ರಾಮದ ಜನರು ಸಂಶಯ ವ್ಯಕ್ತಪಡಿತ್ತಾರೆ ಅಂದ.
ಕಥೆ ಹೇಳುತ್ತಿದ್ದಂತೆ ಮಧ್ಯೆ ನನಗೊಂದು ಪ್ರಶ್ನೆ ಎದ್ದಿತು.
ನಿಮ್ಮಲ್ಲೇ ಈ ಬಗ್ಗೆ  ನಂಬಿಕೆಯ  ಗೊಂದಲವಿದ್ದರೂ  ಹೇಗೆ ನಂಬಿದ್ದೀರಿ?
ಈ ಬಗ್ಗೆ ಇಲ್ಲಿಯ ಜನರಲ್ಲೇ ಗೊಂದಲವಿದೆ ಅಂದ ಟಚುಟೋ ಆಂದ್ರೆ .ನಂಬಲೇ ಬೇಕು. ಸಂಶಯಕ್ಕೆಡೆಯಿದ್ದಂತೆ  ಗ್ರಾಮದಲ್ಲಿ ಬದುಕಲು ಸಾಧ್ಯವಿಲ್ಲ . ಅದರ ಮಾತು ಮುಗಿಸಿದ.
          ನಿಮಗೆ ಗೊತ್ತಿರುವಂತ  ವಿಚಿತ್ರ ಮತ್ತು ಅಭಾಸ ಸಂಸ್ಕೃತಿ  ಇತ್ತು. ಅದು ನಿಧಾನವಾಗಿ  ಕಳೆದು ಕೊಳ್ಳುತ್ತಿದೆ. ಮಂದಿ  ಕತ್ತಲೆಯಿಂದ  ಬೆಳಕಿನ ಜಗತ್ತು ನೋಡುತ್ತಿದ್ದಾರೆ.  ಎಲ್ಲಕ್ಕಿಂತ ಹೆಚ್ಚಾಗಿ  ಹೆಣ್ಣಿನ ಮೇಲೇ ಅಧಿಕಾರ ಚಲಾಯಿಸಿ ಸವಾರಿ ಮಾಡುತ್ತಿದ್ದ ಗಂಡಿಗೆ  ಸವಾಲೊಡ್ಡುವ ರೀತಿಯಲ್ಲಿ ಹೆಂಗಸರು ವಿಧ್ಯೆ ಕಲಿತು ಬುದ್ಧಿವಂತರಾಗಿದ್ದಾರೆ. ಅದು ಮಾನವತೆಯೇ ಇಲ್ಲದ ಆಫ್ರೀಕಾದ  ಅಂಧ ಸಂಸ್ಕೃತಿಕೆ ಸಡ್ಡು ಹೊಡೆದ ಬೆಳವಣಿಗೆ ಸಂಕೇತ. ಹೆಣ್ಣು ಸಮಾಜ ಕಟ್ಟುತ್ತಾಳೆ.ಒಂದು ಪರಿವರ್ತನೆಯ ಕಾಲದ ಬಗ್ಗೆ  ಮಾತಾಡಿದ ಟಚುಟೋ ಆಂದ್ರೆ, ಈ ಫೋನ್ ಸಂಸ್ಕೃತಿ  ಕ್ಯಾಮರೂನಿನ  ಶೇ. 40 ರಷ್ಟು ಗ್ರಾಮಗಳಲ್ಲಿ ಇನ್ನೂ  ನಡೆಯುತ್ತಿದೆ. ಅವನ  ಅಧೀನವನ್ನು ಬಿಟ್ಟು  ಆ ಗ್ರಾಮ ವಾಸಿಗಳು ಹೊರ ಬಂದಿಲ್ಲ.

ಸೋಮವಾರ, ಸೆಪ್ಟೆಂಬರ್ 19, 2011

ಕಸದ ತೊಟ್ಟಿ(ಯ)ಲ ಮಗು


ಯಾರವಳು ತಾಯಿ..?
ಬಲಿತ ನನ್ನ ,ರಕುತಕ್ಕೆ ಅದ್ದಿ
ಕಸದ ತೊಟ್ಟಿಗೆ ಎಸೆದವಳು ?
ತನ್ನೊಡಲ ಮಾಂಸವನ್ನೇ
ವಾಂಛೆ ಹಸಿವಿಗೆ ತಿಂದವಳು

ಎದೆ ಹಾಲ ರುಚಿಗೆ
ಬೆಳೆದ ಮುದ್ದೆ ನಾನು
ಗರ್ಭದಲ್ಲೇ ಕನಸ ಕೊಂದವಳು
ರಾತ್ರಿಗೆ ಜಡೆ ನೇಯ್ದು
ನೊಣಗಳಿಗೆ ಮೂಗನಿಟ್ಟು
ಆಸೆ-ಬಿಸುಪಿಗೆ ನನ್ನ,
ಹರಾಜಿಗಿಟ್ಟವಳು.

ನೋಡಲ್ಲಿ ಸೂರ್ಪನಕಿ....!
ನಾಯಿಗಳಿಗೆ ಕಿರೀಟ ಬಂದಿವೆ.
ಗೆಜ್ಜೆ ಕಟ್ಟಿವೆ ಕಾಗೆಗಳು
ವಿವೇಚನೆ ಮರೆತಿವೆ ರಣ-ಹದ್ದುಗಳು
ಎಳೆದಾಡುತ್ತಿವೆ ಹೂವಂತ ಕಾಲುಗಳು.

ಕೆಲವಕ್ಕೆ ಹೃದಯ
ದಾಹಕ್ಕೆ ನೆತ್ತರು
ನೊಣ ಮುಚ್ಚಿವೆ ಹಾಲ್ದುಟಿ
ನೇಣುಗಂಬಕ್ಕೇರುತ್ತಿವೆ ನನ್ನ ಕತ್ತು..!

ನೀನೊಂದು ವಾಂಛೆಯ  ಹೆಣ್ಣೋ
ಕುಡಿದ ನೀರೆಲ್ಲಾ ಎದೆ ಹಾಲ ನಂಜೋ
ಸುಖದ ಬತ್ತಳಿಕೆಯಲ್ಲಿ
ಜಗದಲ್ಲೇ ಬೆತ್ತಲೆ ಕೂಗಿ
ಎದೆ ಸೀಳಿದೆ  ಮೊರೆತ
ನೀನೊಂದು ಭುವಿ
ನಾ ನಿನ್ನ ನಾಭಿಗಂಟಿದ ಬಳ್ಳಿ..!

ಅರಿಯದಾದೇನೋ ವಿಧಿ ಬರಹ
ಯಾರವನು ನನ್ನ ಪಿತ ?
ಏಕಾದೇನೋ ನಿಮ್ಮಿಬ್ಬರ ಪಿಂಡ
ಗೊತ್ತಿದ್ದರೆ ಕರಗುತ್ತಿದ್ದೆನೋ
ಗರ್ಭದೊಳಗೆ.....!
ತೆರೆಯದಾದೆ ಕಂಗಳ ಕತ್ತಲೊಳಗೆ
-ರವಿ ಮೂರ್ನಾಡು.