ಸಾಹಿತ್ಯವನ್ನು ಬೆಳೆಸಿ, ಕನ್ನಡ ಸಂಸ್ಕೃತಿ-ಕಲೆಯನ್ನು ಉಳಿಸಿ ಅಂತ ಭಾಷಣ ಬಿಗಿಯುವವರ ಅಗತ್ಯತೆ ನಮಗಿಲ್ಲ. ಕನ್ನಡದ ಹೆಸರೇಳಿ ವ್ಯಾಪಾರ-ಪ್ರಚಾರದ
ಸ್ವಾರ್ಥಕ್ಕೆ ಇಳಿದವರೂ ಬೇಡ. ಅದನ್ನು ನಿಜವಾಗಿ ಬೆಳೆಸುವವರು ಬೇಕು. ಯಾವುದೇ ಪ್ರತಿಫಲವಿಲ್ಲದೆ,
ತನ್ನ ಪಾಡಿಗೆ ತಾನು ಕನ್ನಡಕ್ಕೆ ಮನವನ್ನು ಅರ್ಪಿಸುವವರ ಅಗತ್ಯತೆ ಈ ಸಂದರ್ಭದಲ್ಲಿ
ಕನ್ನಡಕ್ಕಿದೆ. ನಾಡಿನ ಯಾವುದೋ ಮೂಲೆಯಲ್ಲಿ ಕುಳಿತು ಸದ್ದಿಲ್ಲದೆ ಬರೆಯುವ ಬರಹಗಾರನ ಪದಗಳನ್ನು ಹೆಕ್ಕಿ
ನಾಡಿಗೆ ಪರಿಚಯಿಸುವ ಕನ್ನಡಾಭಿಮಾನಿ ಬೇಕು. ಅಂತಹ ಪ್ರತಿಭಾನ್ವೇಷಕರನ್ನು ಪ್ರೋತ್ಸಾಹಿಸಿ ಅವರ ಹೊಣೆಗಾರಿಕೆಯನ್ನು
ಹೆಚ್ಚಿಸುವ ಕಾರ್ಯ ಕನ್ನಡದ ನೆಲದಲ್ಲಿ ನಡೆಯಬೇಕಿತ್ತು. ಅದಕ್ಕೆ ಕೆಲವೇ ಕೆಲವು ಹೆಸರುಗಳಲ್ಲಿ ಕನ್ನಡದ ಅಭಿಮಾನದ ಗಾಳಕ್ಕೆ ಸಿಕ್ಕವರು ಕೆಲವರು.
ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ
ಮಾಡಿದ್ದನ್ನು ನೋಡಿದ್ದೆ. ಅದರಲ್ಲಿರುವ ಹೆಸರುಗಳನ್ನು ಓದುತ್ತಿದ್ದಂತೆ, ಕೆಲವು ಹೆಸರುಗಳನ್ನು ಆ ಪಟ್ಟಿಯಲ್ಲಿ ನೋಡಬೇಕೆನಿಸಿತು. ತೆರೆಮರೆಯಲ್ಲಿರುವ
ಕನ್ನಡದ ಪ್ರತಿಭಾನ್ವೇಷಕರ ಬಗ್ಗೆ ಬರೆಯುವುದು ಕನ್ನಡದ ಬೆಳವಣಿಗೆ ಮಟ್ಟಿಗೆ ಒಳ್ಳೆಯದು. ಅದು ವ್ಯಕ್ತಿ
ಸ್ತುತಿಯಲ್ಲ ಅಥವಾ ಇಂತಹವರಿಗೇ ಪ್ರಶಸ್ತಿ ಕೊಡಿ ಅಂತ ದುಂಬಾಲು ಬೀಳುವುದೂ ಅಲ್ಲ. ಕನ್ನಡ ನಾಡಿನ ಸಾಹಿತ್ಯ
ಭಂಡಾರವನ್ನು ಅಲ್ಲಲ್ಲಿ ಹೆಕ್ಕಿ ತೆಗೆದು ತುಂಬಿಸುವ
ಕಾಣದ ಕೈಗಳನ್ನು ಸ್ಮರಿಸುವುದು ಕನ್ನಡದ ಅಕ್ಷರಕ್ಕೆ ಸಲ್ಲಿಸುವ ನಮನ.
ಹಾಗಂತ, ಇವರು ಪ್ರಚಾರ ಪ್ರೀಯರಲ್ಲ, ಪ್ರಶಸ್ತಿ ಬಂದರೂ ಸಾರಾ
ಸಗಟಾಗಿ ತಿರಸ್ಕರಿಸಲೂ ಹಿಂಜರಿಯುವುದಿಲ್ಲ. ಅದು ನಿಜವಾದ ಕನ್ನಡಿಗನ ನಿಜವಾದ ಕನ್ನಡದ ಕೆಲಸ. ಹಲವು
ಉತ್ಕೃಷ್ಟವಾದ ಕನ್ನಡದ ಕೆಲಸಗಳಲ್ಲಿ ಕೈ ಕೆಸರು ಮಾಡಿಕೊಂಡು
ಆಸ್ವಾಧಿಸುವ ಅಪ್ಪಟ ಕನ್ನಡದ ವಿಶಾಲ ಮನಸ್ಸು . ಪ್ರಚಾರದ ವೇದಿಕೆಗೆ ಹೋಗದೆ ಸದ್ದಿಲ್ಲದೆ ಕನ್ನಡದ
ಸಾಗರಕ್ಕೆ ನದಿಗಳನ್ನು ಹರಿಯ ಬಿಡುತ್ತಿದ್ದಾರೆ ಪದ್ಯಾಣ ರಾಮಚಂದ್ರರು. ಈ ಹೆಸರು ಆ ರಾಜ್ಯೋತ್ಸವದ
ಪ್ರಶಸ್ತಿ ಪಟ್ಟಿಯಲ್ಲಿರಬೇಕಿತ್ತು. ಏಕೆಂದರೆ, ಕನ್ನಡಕ್ಕಾಗಿ ಇವರ ಹೊಣೆಗಾರಿಕೆಯನ್ನು
ಇನ್ನಷ್ಟು ಹೆಚ್ಚಿಸಬೇಕು.
ಇವರಿಗಿಂತ ಘಟಾನುಘಟಿಗಳಿದ್ದಾರೆ. ಹಾಗಂತ,ಕನ್ನಡದ ಕೆಲಸ ಮಾಡಿ ಪರಿಪೂರ್ಣರಾಗಿ ನಿದ್ರಾವಸ್ಥೆಯಲ್ಲಿರುವವರು ಬೇಡ. ದ.ಕನ್ನಡ
ಜಿಲ್ಲೆಯ ಪತ್ರಿಕಾ ರಂಗದಲ್ಲಿ ಪ್ರವಾಹವನ್ನು ಹರಿಸಿದ
ದಿವಂಗತ ಪದ್ಯಾಣ ಗೋಪಾಲಕೃಷ್ಣರ ಪುತ್ರ ಅಂತ ಹೇಳುವಾಗ, ಪ.ಗೋ.ಕನ್ನಡದ
ಸೇವೆ ನಿರಂತರವಾಗಿದೆ ಎಂದು ಹೇಳುವಂತಹದ್ದು. ದೇಶ ಬಿಟ್ಟು ದೇಶದಲ್ಲಿ ನಡೆಸುವ ಕನ್ನಡದ ಕಾರ್ಯ ಇವರದೇನು ಮಹಾ ? ಅಂತ ಆಶ್ಚರ್ಯವಾಗಬಹುದು.ಇವರ ಕೆಲಸ ಇಷ್ಟೇ..ಒಂದು ಬರಹ ಬರೆದ ಬರಹಗಾನಿಂದ ನೂರು ಬರಹಗಳನ್ನು
ಬರೆಸುವ ತಾಕತ್ತುಳ್ಳವರು. ಅಂತಹ ಒಂದು ಪ್ರೋತ್ಸಾಹದ
ಕೆಲಸದಿಂದ ನಾಡಿನಾದ್ಯಂತ ಬೆಳಕಿಗೆ ಬಂದ ಪ್ರತಿಭೆಗಳು ಇನ್ನೇಷ್ಟೋ. ಈ ಕನ್ನಡದ ಅಗಾಧ ಮನಸ್ಸಿನ ಕನ್ನಡದ
ಕೆಲಸಕ್ಕೆ ಪೂರ್ವಪರ ಬದುಕಿನ ಇತಿಹಾಸಗಳ ಪರಿಚಯವೇ ಕಾಣುವುದಿಲ್ಲ. ನಾಡಿನಾದ್ಯಂತ ಬರೆಯುತ್ತಿರುವ ಬರಹಗಾರರೇ
ಸಾಕು ಇವರ ವ್ಯಕ್ತಿ ಪರಿಚಯಕ್ಕೆ.
ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ದಿ.
ಪ.ಗೋ. ಟ್ರಸ್ಟ್ ನ ಬುನಾದಿಯ ಶಿಲೆಗಳಲ್ಲಿ ಇವರೂ ಒಬ್ಬರು.ಅರಬ್ ದೇಶದ ದೊಹದಲ್ಲಿ ಕುಳಿತು ಬರಹಗಾರರನ್ನು ಇನ್ನಿಲ್ಲದಷ್ಟು ಬೆಳಕಿಗೆ ತರುತ್ತಾ ಆನಂದವನ್ನು ಅನುಭವಿಸುತ್ತಾರೆಪದ್ಯಾಣ ರಾಮಚಂದ್ರರು..ಇದೇ ದೇಶದಲ್ಲಿ ವೃತ್ತಿಯಲ್ಲಿ
ವೈದ್ಯರಾಗಿರುವ ಬಿಜೂರು ಮೋಹನ್ ದಾಸ್ ಅವರ ಹೆಸರು ಕೇಳಿರಬಹುದು. ಗಲ್ಫ್ ಕನ್ನಡಿಗ ಅಂತರ್ಜಾಲ ತಾಣದ
ಸ್ಥಾಪಕ ಸಂಪಾದಕರಾದ ಮೋಹನ್ ದಾಸರು " ಗಲ್ಫ್ ಕನ್ನಡಿಗ ವರ್ಷದ ವ್ಯಕ್ತಿ" ಅಂತ ಪ್ರಶಸ್ತಿ
ನೀಡಿ ಗೌರವಿಸಿದ ಒಂದು ಸಮ್ಮಾನ ಬಿಟ್ಟರೆ , ಪದ್ಯಾಣರು ಯಾವುದನ್ನು ನಿರೀಕ್ಷಿಸುವುದಿಲ್ಲ
ಅನ್ನುವುದು ಆಲೋಚನೆಗೆ ನಿಲುಕುವ ಮಾತು.
ಬರಹಗಾರನಿಗೇ ದಿಕ್ಕಿರುವುದಿಲ್ಲ ಅವನ
ಬರಹ ಎಲ್ಲಿ ಪ್ರಕಟಿಸಬೇಕೆಂದು. ಅಂತಹ ಸಂದರ್ಭಗಳಲ್ಲಿ ಈ ಪದ್ಯಾಣ ರಾಮಚಂದ್ರರು ಅವರ ಬರಹಗಳನ್ನು ಪ್ರಕಟಿಸಿಯೂ
ಇರುತ್ತಾರೆ. ಅಷ್ಟು ಸಾಕು ನೀರಲ್ಲಿ ಮುಳುಗುತ್ತಿದ್ದವನಿಗೆ ಹುಲುಕಡ್ಡಿ ಸಿಕ್ಕಿದಷ್ಟು ಸಂತೋಷ. ಅಷ್ಟರ
ಮಟ್ಟಿಗೆ ಕನ್ನಡದ ವಿಷಯದಲ್ಲಿ ಕ್ರೀಯಾಶೀಲರಾಗಿರುವ ಇವರ ಜವಾಬ್ದಾರಿಯನ್ನು ಹೆಚ್ಚಿಸುವ ಅಗತ್ಯತೆ ಇತ್ತು.
ಅದು ರಾಜ್ಯದಲ್ಲಿ ನಡೆಯುವ ಗಂಭೀರ ಕನ್ನಡದ ಹಬ್ಬ ರಾಜ್ಯೋತ್ಸವದಲ್ಲಿ ನಡೆಯಬೇಕು. ನಾಡಿನ ಯಾವುದೋ ಮೂಲೆಯಲ್ಲಿ
ಕಲೆ-ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವಿರಬಹುದು ಅದು ಪದ್ಯಾಣರ ಕೈಸೇರುತ್ತದೆ. ಅದೇ ರೀತಿ ಅದನ್ನು ನಾಡಿನಾದ್ಯಂತ
ಪರಿಚಯವೂ ಅಷ್ಟೇ ಶೀಘ್ರಗತಿಯಲ್ಲಿ ಮುಗಿಸಿ ಬಿಡುತ್ತಾರೆ. ಪ್ರೋತ್ಸಾಹಗೊಂಡ ಬರಹಗಾರನ ಸಂತಸದಲ್ಲಿ ಅವರೂ
ಪಾಲ್ಗೋಳ್ಳುತ್ತಾರೆ. ಅದು ನಿಜವಾದ ಕನ್ನಡಾಭಿಮಾನಿಯ ನಿಜವಾದ ಕನ್ನಡದ ಕೆಲಸ. ಇಂತಹವರಿಗೆ ರಾಜ್ಯೋತ್ಸವ
ಪ್ರಶಸ್ತಿ ಸೂಕ್ತವೇ ಅಂತ ನಾಡಿನ ಮತಕ್ಕೆ ಹಾಕಿ ಅಂತ ಈ ಬರಹ ಒತ್ತಾಯ ಹೇರುವುದಿಲ್ಲ. ಇವರಿಂದ ಉತ್ತೇಜಿರಾದ
ಬರಹಗಾರರೇ ರಾಜ್ಯ ಪ್ರಶಸ್ತಿಗೂ ಮಿಗಿಲಾದ ಮನಸ್ಸಿನ
ಕೃತಜ್ಞತೆ ಮೂಲಕ ಅಭಿಮಾನದ ಪ್ರಶಸ್ತಿ ಅರ್ಪಿಸುತ್ತಿದೆ. ಅಷ್ಟರಲ್ಲೇ ಸಂಪೂರ್ಣ ತೃಪ್ತಿಗೊಳ್ಳುತ್ತದೆ
ಈ ನಿಸ್ವಾರ್ಥ ಮನಸ್ಸು. ಜೈ ಕನ್ನಡ ಮಾತೆ....!
----------------------------------------------------------------------------------