ಮಂಗಳವಾರ, ಫೆಬ್ರವರಿ 5, 2013

ತೊರೆದ ಪ್ರೀತಿಗೊಂದು ಪ್ರಶ್ನೆಗಳ ಸಾಂತ್ವನ !ನೀನೊಮ್ಮೆ ಬಂದಿದ್ದೆ
ಈ ಪ್ರೀತಿ ಪರಿಧಿಯೊಳಗೆ
ಅದೀಗ ತೆರೆದಿದೆ
ನನ್ನ  ಪ್ರೀತಿಸಿದ ಜನರನ್ನೇ
ನಿನಗಿಂತ ಪ್ರೀತಿಸುವೆನು
ಇದೀಗ ಮುಂದಿದೆ

ಪ್ರೀತಿ ಒಳಗೋಳ ಸೀಳಿ-
ನಂಬಿಕೆ ಮೇಲ್ಮುಖ ಹೊರಳಿ
ಕತ್ತರಿಸುವ ರಾತ್ರಿಗಳಿಗೆ
ಪ್ರೀತಿ ಮಿತಿಯಿದೆಯೇ?
ನೀರವತೆ ತಬ್ಬಿ ಪ್ರಶ್ನೆಗಳ 
ವರ್ತುಲ ವರ್ತುಲದೊಳಗೆ
ಶೋಧ, ಅಸ್ವಸ್ಥಗಳಿಗೆ
ಚಿಂತೆಯಿದೆಯೇ?

ಕಥೆ ಹೆಣೆದ ನಿದ್ದೆಗಳಿಗೆ
ಒಂದೊಮ್ಮೆ ಸ್ನೇಹತನವಿತ್ತು
ಇದೀಗ ಎಚ್ಚರವಿದೆ ಶತ್ರುವಿಗೆ
ಯಾವ ಕಥೆಗೆ?
ನಿನ್ನ ಪ್ರೀತಿಸಿದ ದಿನಗಳಿಗೆ
ಅದೆಂಥ ಮೂರ್ಖತನವಿದೆ
ನೆನಪು ಹಲಗೆಯ ಕಪ್ಪಿಗೆ
ಬಳಪವಿದೆಯೆ?

ಪ್ರೀತಿ ಕಡಲೆದೆಯೊಳಗೆ
ಉಬ್ಬಿ ಕಂಪನದ ಉರಿ
ಅಲೆಯುತ್ತಿರಲಿ ತಂಪಾಗಿ
ತಡಿಯವರೆಗೆ |
ನೆನಪು ಒಳಗೋಳ ಸೀಳಿ
ನಂಬಿಕೆ ಮೇಲ್ಮುಖ ಚಿಮ್ಮಿ
ಹೆಜ್ಜೆಗಳ ಸವೆಯುತಿರಲಿ
ಜನರ ಕಡೆಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

3 ಕಾಮೆಂಟ್‌ಗಳು:

 1. ಇಂತಹವೇ ಪ್ರಶ್ನೆ ನನಗೂ ಕಾಡುತ್ತಿರುತ್ತವೆ. ನಾನು ಅದೆಷ್ಟು ನಿಷ್ಕಲ್ಮಶವಾಗಿ, ನಿಸ್ವಾರ್ಥವಾಗಿ ಇತರರನ್ನು ಪ್ರೀತಿಯಿಂದ ಕಂಡರೂ ಅವರು ನಮ್ಮನ್ನು ಅದೇಕೆ ಪದೇ ಪದೇ ನೋವಿಗೆ ಈಡು ಮಾಡುತ್ತಾರೋ!

  ಅತ್ಯುತ್ತಮ ಕಾವ್ಯ.

  ಪ್ರತ್ಯುತ್ತರಅಳಿಸಿ
 2. ಚೆನ್ನಾಗಿದೆ ರವಿ ಸರ್. ಬರೀ ಪ್ರಶ್ನೆಗಳ ಸಾಂತ್ವನವಷ್ಟೇ ಅಲ್ಲ, ಕೊನೆಯ ಭಾಗದಲ್ಲಿ ಉತ್ತರದಲ್ಲೂ ಸಾಂತ್ವನವಿದೆ!!. ಸ್ನೇಹತನ ಎಂಬುದರ ಬದಲಾಗಿ ಗೆಳೆತನ ಎಂದಿದ್ದರೆ ಚೆನ್ನಾಗಿರುತಿತ್ತೇನೋ ಅನ್ನಿಸಿತು. ಬರೀ ನನಗನ್ನಿಸಿದ್ದಷ್ಟೇ. ತಪ್ಪು ತಿಳಿಯಬೇಡಿ.

  ನೆನಪು ಹಲಗೆಯ ಕಪ್ಪಿಗೆ
  ಬಳಪವಿದೆಯೆ?
  ........ಇಷ್ಟವಾದ ಸಾಲು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೌದು ಕವಿಮಿತ್ರ . ನಿಮ್ಮ ಅನಿಸಿಕೆ ಸರಿಯಾಗಿದೆ. "ಸ್ನೇಹ" ಮತ್ತು "ಗೆಳತನ" ಎನ್ನುವ ಎರಡು ಪದಗಳ ವಿವರಣೆಯಂತೆ ಸಾಮಾನ್ಯವಾಗಿ ಬಳಸುವ ಪದ ಮತ್ತು ಒಂದೇ ಅರ್ಥವನ್ನು ಕೊಡುವಂತಹದ್ದು.ಆದರೆ ಇದರ ವಿಶಾಲತೆ ಗ್ರಹಿಸುವ ಭಾವದಲ್ಲಿ ವ್ಯೆತ್ಯಾಸವಿದೆ. ಹೇಗೆಂದರೆ ಗೆಳತನ ಅನ್ನುವ ಭಾವ ಸಮಾನ ತೆಲೆಮಾರಿನ ವಯಸ್ಸಿನ ಆಸುಪಾಸಿಗೆ ಸೇರಿಸಿಕೊಳ್ಳುವುದು. ವಯಸ್ಸಿನ ಹಿರಿತನವಿದ್ದರೆ ಅದು ಗೆಳತನವಾಗಲಾರದು, ಅದು ಗೌರವಯುತ ಸ್ನೇಹವಾಗಬಹುದು. ಸ್ನೇಹವೆಂದರೆ ಸಮಾಜದ ಎಲ್ಲಾ ದರ್ಜೆಗಳಿಗೆ (ಲಿಂಗಬೇಧವಿಲ್ಲದೆ, ಮಕ್ಕಳಿಂದ ವಯೋವೃದ್ದರವರೆಗೆ ) ವಯಸ್ಸಿನ ಅಂದಾಜಿಗೆ ಸಿಗದೇ ಸಮಾನವಾಗಿ ಹಂಚಿಕೊಳ್ಳುವಂತಹದ್ದು. ಈ ಕವಿತೆಯಲ್ಲಿ ಗಂಡು ಹೆಣ್ಣಿನಿಂದ ,ಹೆಣ್ಣು ಗಂಡಿನಿಂದ, ಅಥವಾ ವಯಸ್ಸಿನ ಅಂತರ ಮೀರಿ ಚಲಿಸಿದ ನಡೆಗಳು ಎಲ್ಲವೂ ಕೂಡಿಕೊಂಡವು.ಇದನ್ನು ಸಮಾಜದ ಬೀದಿಗೆ ತೆರೆದುಬಿಡಲು ಪ್ರಯತ್ನಿಸಿದ್ದೇನೆ. ಅಂದರೆ, ಇದೇ ಅನುಭವ ಪಡೆದುಕೊಂಡವರಿಗೆ ಕವಿತೆಯ ಭಾವಚಿತ್ರದಲ್ಲಿ ಪ್ರೇಮಿಗಳ ಇಬ್ಭಾಗ ಚಿತ್ರಣ ಕೇವಲ ಕಲ್ಪನೆ ಮಾತ್ರ. ನಿಮ್ಮ ಸೂಕ್ಷ್ಮ ಗ್ರಹಿಕೆ ಓದು ಖುಷಿ ಆಯಿತು.ಇದು ಬೇಕು. ಅಭಿನಂದನೆಗಳು.

   ಅಳಿಸಿ