ಕವಿತೆ ಬರೆಯಲು ಕುಳಿತಾಗಲೆಲ್ಲ
ಆ ಅಕ್ಕಸಾಲಿಗನ
ಸುತ್ತಿಗೆ ಧ್ವನಿ ಕೇಳಿಸುತ್ತಿದೆ |
ಪಟ್ಟಣಕೆ ಸಂತೆಗೆ ಹೋದಾಗಲೆಲ್ಲಾ
ಅಂಗಡಿ ಮುಂದೆ ನಿಲುತ್ತೇನೆ,
ಕುಲುಮೆಗೆ ಬಿದ್ದ ಚಿನ್ನ
ಆಭರಣವಾಗುವರೆಗೆ ।
ಅವನಲ್ಲಿ ಪ್ರಶ್ನಿಸಿದ್ದೆ,
ಯಾರವರು ಸುತ್ತಿಗೆಯೊಳಗೆ ?!
ಅವನು ನಗುತ್ತಾನೆ,
ಅದಾಗಲೇ ಹೆಂಗಸೊಬ್ಬಳು-
ಕೊಟ್ಟ ಮಾಸಲು ಚಿನ್ನಕೆ
ತದೇಕ ದೃಷ್ಟಿ ಹಾಯಿಸುತ್ತಾನೆ |
ಬಟ್ಟೆಗೆ ಉಜ್ಜಿ, ನೀರಿಗೆ ತಿಕ್ಕಿ
ಉಫ್ ಉಫ್ ಗಾಳಿಸಿ
ಭೂತ ಕನ್ನಡಿ ಕಣ್ಣಗಲಿಸಿ
ದೊಡ್ಡದು ಮಾಡಿ ಮೇಲೆ -
ಕೆಳಗೆ ನೋಡುತ್ತಾನೆ,
ಕೊಳೆ ಬಿಟ್ಟ ಮೈ
ತೆಳ್ಳಗೇ ಹೊಳೆವವರೆಗೆ |
ಅಲ್ಲೇ ಮಣ್ಣ ಕುಲುಮೆಗೆ ಹಾಕಿ,
ಅದರ ಬಾಯಿಗೆ ಇಕ್ಕಳ ಸಿಕ್ಕಿಸಿ
ಎತ್ತಿ ನೋಡುತ್ತಾನೆ,
ಹೊಳಪಿಗೆ ಒಳಗಿದೆಯೇ ನಿದ್ದೆ ?
ಮತ್ತೆ ಕಣ್ಣಿಗೆಳೆದು, ಇಳಿದು
ಇಣುಕಿ ನೋಡುತ್ತಾನೆ
ಇಲ್ಲ ! ಸಿದ್ದವಾಗಿದೆ ಯುದ್ದಕೆ
ಮತ್ತೊಂದು ಒಲುಮೆಗೆ |
ಬೂದಿ ಮುಚ್ಚಿದ ಕೆಂಡಕೆ ಮುಂದೆ
ಮೈ ತಬ್ಬಿದ ಪಾತ್ರೆಯಲಿ
ಕೊಳವೆ ಎದೆಯಿಂದ ಗಾಳಿಸಿ
ರೂಯ್ಯೋ ರೂಯ್ಯೋ ಬಾರಿಸಿ
ಕುಲುಮೆ ಇರಿಸಿ ನೋಡುತ್ತಾನೆ
ಸೂರ್ಯ ಮಾತ್ರ ಇದ್ದಾನೆ ಬೆಂಕಿ ಮುಂದೆ |
ನೋಡುತ್ತಲೇ ಇದ್ದ ನನಗೆ
ಪಕ್ಕನೆ ಕುಲುಮೆಯೆತ್ತಿ
ನೀರಿಗೆ ಮುಳುಗಿಸಿದವನ
ಕೈಯಲ್ಲಿ ದುಂಡಗೆ ಹೊಳೆದ ಕಲ್ಲಿದೆ |
ಮಡಿಲ ಬಟ್ಟೆಗೆ ಹಾಕಿ, ಎತ್ತಿ
ಮುಂದಿರುವ ಕಲ್ಲಿಗೆ ತಟ್ಟುತ್ತಾನೆ
ನವಿರು ಮಾತು ಕಿವಿಗಿಳಿಯುತ್ತಿದೆ ।
ಮನೆಗೆ ಬಂದ ನಾನು,
ಬರೆಯಬೇಕೆಂದಾಗಲೆಲ್ಲ
ಆ ಸುತ್ತಿಗೆ ಧ್ವನಿ ಕೇಳುತ್ತಿದೆ |
ಪತ್ನಿಯ ಮೂಗುತಿಯಲಿ
ಸೂರ್ಯ ಕಿರಣವೊಂದು
ಕಾಯುತಿದ್ದ ಮಿಂಚಿನಂತೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ
ಅಕ್ಕಸಾಲಿಗನಿಗೂ ಕವಿಗೂ ಇರುವ ಸ್ವಾಮ್ಯತ್ಯಯನ್ನು ಅಮೋಘವಾಗಿ ತೆರೆದಿಟ್ಟಿದ್ದೀರಾ ಸಾರ್.
ಪ್ರತ್ಯುತ್ತರಅಳಿಸಿಅಂದಹಾಗೆ ನಿಮ್ಮ ಕವನ ಸಂಕಲನವೆಂಬೋ ಚಿನ್ನದ ಆಭರಣದ ಅಂಗಡಿ ತೆರೆಯುವುದು ಯಾವಾಗ?