ಅಪ್ಪ ಸತ್ತ ಮಾರನೇ ದಿನ
ಮನೆಯ ಕಿಟಕಿ ಸರಳುಗಳೆಡೆಗೆ
ಕಣ್ಣು ಬಿಟ್ಟಿದ್ದೆ |
ಹುಲ್ಲು ಹಾಸಿನ ಬಯಲ ಕತ್ತಲೆಯಲಿ
ಅವರು ನಡೆದ ಹೆಜ್ಜೆ ಧ್ವನಿ ಆಲಿಸುತ್ತಿದ್ದೆ
|
ನನಗೆದುರಾಗಿ, ಅವರ ಪಾದಗಳಲಿ
ಚಂದ್ರ ಹೊಳೆಯುತ್ತಿದ್ದ |
ಎರಡೂ ಬದಿ ಧೂಳಿಗೆ
ಗಾಳಿ ಬೊಗಸೆಗಿಡಿದು ಒರೆಸುತ್ತಿದ್ದ |
ಕೈಗಳಲ್ಲಿ ರಾತ್ರಿಯೊಂದು
ಕಡಿವಾಣವಿಲ್ಲದ ಕುದುರೆಯಂತೆ
ಓಡುತ್ತಿತ್ತು |
ನಾನು ಪ್ರಶ್ನಿಸಿದ್ದೆ
ಎಷ್ಟು ದಿನ ಹೀಗೆ ನಡೆಯುವಿರಿ ?
ಇದು ವಯಸ್ಸು,
ಗಾಳಿ ಉತ್ತರಿಸಿತು
ಖಂಡಿತವಾಗಿ, ಇದು ಗಾಳಿ ಗೀತೆ ।
ಊಟದ ತಟ್ಟೆ ,ಲೋಟಗಳಿಗೆ
ಬೆರಳುಗಳು ತಿರುಗುತ್ತಾ,
ಬಾಲ್ಯದ ಪೀಠೋಪಕರಣಗಳು
ಬಣ್ಣದ ಕುದುರೆಗಳ ಓಟಕೆ
ಬದಲಾಗುತ್ತಿವೆ |
ಮತ್ತೊಮ್ಮೆ ತಿರುಗುತ್ತಿವೆ
ಹಳೆ ಸಲಕರಣೆಗಳಂತೆ |
ಎಕರೆಗಟ್ಟಲೆ, ಬಯಲು ದಾಟಿ
ನಡೆಯುತ್ತಲೇ ಇದ್ದಾರೆ |
ಅವರ ನಾಲಗೆ ತುದಿಯಲಿ
ನಶಿಸಿದ ಸಾಮ್ರಾಜ್ಯವೊಂದರ
ನಾಣ್ಯದ ಬೆಳಕು ಕಂಗೊಳಿಸುತ್ತಿದೆ ।
ಸುಗಂಧ ,ಇನ್ನೊಂದು ಚಿನ್ನದ-
ಪರಿಮಳಗಳ ಜೊತೆಗೆ,
ಎರಡು ಕತ್ತಲೆ ಹಿಂಡುಗಳು
ಭುಜಕ್ಕೇರಿ ಕುಳಿತು ಚಲಿಸಿವೆ |
ಅದೋ.. ಇದೀಗ
ಮುಖ ತಿರುಗಿಸುತ್ತಿದ್ದಾರೆ ತಂದೆ |
ಮತ್ತೆ ಹೋಗಲು ಹವಣಿಸಿದಾಗ
ಭಾರೀ ಮಳೆಗೆ ಹುಟ್ಟಿಕೊಂಡ
ಭಯಾನಕ ರಭಸಗಳ ಭೇದಿಸಲು
ಮುಂದೋಳುಗಳು ಗಾಳಿಗೆ ಬಾಚುತ್ತಿವೆ |
ಕಿಟಕಿ ಪಕ್ಕದ ಹೊರಾಂಗಣಕೆ
ಕುರ್ಚಿಗೆ ಕುಳಿತಿದ್ದೇನೆ |
ಮುಕ್ತ ನೆಲೆ ಕಂಡ ಗಾಳಿ
ಕಾಲ ಸೋಕಿ ಸರಿದಾಗ,
ಜೀವನ ಮೌಲ್ಯದ ಬೆಲೆ
ಅಳತೆಗೆ ಸಿಗಲಿಲ್ಲ |
ನಾನೀಗ ಬೆಳೆದಿದ್ದೇನೆ
ನನ್ನ ಕೋಣೆಗೆ ಹಿಂತಿರುಗಿ
ಗೊತ್ತಿರುವುದನು ಪುನರಾವರ್ತಿಸುತ್ತೇನೆ |
ಭೂಮಿಯೊಂದು ಮನೆಯಲ್ಲ
ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ
|
ಬಯಲು ದಾಟುವ ಮನುಷ್ಯನ
ಕೈಯಲ್ಲಿದೆ ಹಳೆ ರೇಶಿಮೆ
ಜೊತೆಗೆ,ಹೊಸ ಚಂದ್ರನ ತುಣುಕು |
ಸಾವಿನಿಂದ ಪಲಾಯನಗೈಯ್ಯಲು
ಉಪಾಯಗಳ ಹುಡುಕಾಡುತ್ತೇವೆ
ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ
ಚೆಂದದ ಕವಿತೆ ರವಿಯಣ್ಣ. ಅಪ್ಪನ ಪ್ರತಿಮೆಯಿಟ್ಟು ಜೀವನ ಮೌಲ್ಯಗಳನ್ನು ಪರಿಶೋಧಿಸಿದ್ದೀರಿ. ಓದುಗನ ಮನಸ್ಸನ್ನು ಸೆರೆಹಿಡಿಯುವ ಸೂಕ್ಷ್ಮತೆ ಮತ್ತು ತಾಕತ್ತು ಕವಿತೆಗಿದೆ.
ಪ್ರತ್ಯುತ್ತರಅಳಿಸಿಬಯಲು ದಾಟುವ ಮನುಷ್ಯ
ನಕೈಯಲ್ಲಿದೆ ಹಳೆ ರೇಶಿಮೆ
ಜೊತೆಗೆ,ಹೊಸ ಚಂದ್ರನ ತುಣುಕು |
ಸಾವಿನಿಂದ ಪಲಾಯನಗೈಯ್ಯಲು
ಉಪಾಯಗಳ ಹುಡುಕಾಡುತ್ತೇವೆ
ಅಪಾಯಗಳ ಪರಿತ್ಯಜಿಸುವ ಇಚ್ಚೆಗೆ |
ಈ ಸಾಲುಗಳು ಬಹಳ ಹಿಡಿಸಿದವು.
- ಪ್ರಸಾದ್.ಡಿ.ವಿ.
ನನಗೆ ತೀವ್ರವಾಗಿ ಕಾಡಿದ ಕವನವಿದು.
ಪ್ರತ್ಯುತ್ತರಅಳಿಸಿಅಪ್ಪ ನನ್ನ ಪಾಲಿಗೆ ಕಿತ್ರ ಪಟದ ವ್ಯಕ್ತಿತ್ವ ಮಾತ್ರ. ನಾನು ತೀರಾ ಚಿಕ್ಕವನಾಗಿದ್ದಾಗಲೇ ನನ್ನ ತಂದೆಯವರು ತೀರಿಕೊಂಡರು.
" ಭೂಮಿಯೊಂದು ಮನೆಯಲ್ಲ
ಕಡಿವಾಣವಿಲ್ಲದ ರಾತ್ರಿ ಕುದುರೆಯೂ ಅಲ್ಲ |" ಇದು ಮಾನವನಿಗೆ ಮೊದಲು ಅರ್ಥವಾದರೆ ಎನಿಟೋ ಸಮಸ್ಯೆಗಳಿಗೂ ಅಂತ್ಯ!