ಬುಧವಾರ, ಫೆಬ್ರವರಿ 27, 2013

ಪದ ಬೀಜ ಬಿತ್ತಿದ ಬಯಲು !



ಬಿಳಿಹಾಳೆ ಮೇಲೆ ತಿರುಗುತ್ತವೆ
ಇಕ್ಕಟ್ಟಾದ ಅಕ್ಷರಗಳು |
ಹಿಡಿದೆಳೆದು ಹಾರುವ
ಕೈ-ಕಾಲುಗಳಂತೆ |

ಚಂದ್ರನ ಮುಖ ಅಡ್ಡಲಾದ 
ತೆಂಗು ಗರಿ ಬೆರಳುಗಳಂತೆ |

ಅಥವಾ

ಕಿಟಕಿ ಸರಳಿಗೆ ನುಸುಳಿ
ಸದ್ದಾಗದ ನೆರಳಾಗಿ
ಬೆತ್ತಲೆ ನೆಲ ಮುಚ್ಚಿದ
ಬೆಳದಿಂಗಳಿನಂತೆ |

ಚತುರ ಪದೋಕ್ತಿ ಬಿತ್ತಿ
ಬೆಳವ ಬೀಜ ಚಮತ್ಕಾರಗಳು
ನವಜಾತ ಶಿಶು ಚರ್ಮದ ಮೃದುವಿನಂತೆ |

ಈ  ಕಚ್ಚಾ ಕಾಗದ
ಮೃದುವಾಗಿ, ಗರಿಗರಿಯಾಗಿ
ಕನ್ಯತ್ವ ಕಳೆಯದ ಪ್ರೀತಿಯಾಗಿ
ಹೊಸ ಹುಟ್ಟಿಗೆ ಹೊರಟಿದೆ
ನನ್ನ ಕೈ ಕೆಳಗೆ |

ದಣಿದ ನಾನು,
ಹೃದಯ ಬಯಸಿದ ಭಾವಕೆ
ಮುಖ ಮಲಗಿ ಪ್ರಕಟವಾಗುತ್ತೇನೆ
ಚೆಲ್ಲಿ ,ಒಂದು ಹನಿ ಶಾಯಿಗೆ |

ನೆಲೆಯಾಗುತ್ತೇನೆ
ಅದ್ಬುತ ಶೂನ್ಯ ಪ್ರಕಾಶದಡಿಯ
ಮಾತುಗಳಿಗೆ ಶಬ್ಧವಿಲ್ಲದಂತೆ |
-ರವಿ ಮೂರ್ನಾಡು

1 ಕಾಮೆಂಟ್‌:

  1. ಕವಿತೆ ಹುಟ್ಟುವ ಗಳಿಗೆ ಚಿತ್ರಿಸಿದ ಓ ಕವಿವರ್ಯ ನೀನೇ ಮಾನ್ಯ...

    ಎನಿತು ಚಿತ್ರಗಳೋ ಈ ಕವನದಲ್ಲಿ :
    1. ಚಂದ್ರನ ಮುಖ ಅಡ್ಡಲಾದ
    ತೆಂಗು ಗರಿ ಬೆರಳುಗಳಂತೆ |
    2. ಕನ್ಯತ್ವ ಕಳೆಯದ ಪ್ರೀತಿಯಾಗಿ
    3. ಮಾತುಗಳಿಗೆ ಶಬ್ಧವಿಲ್ಲದಂತೆ |

    ವಾವ್ ಹೀಗೆ....

    ಪ್ರತ್ಯುತ್ತರಅಳಿಸಿ