ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ
|
ಎಲ್ಲೆ ಮೀರದ ಆಸುರಕ್ಷಿತ ಕೋಟೆ |
ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |
ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |
ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |
ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |
ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |
ಎಲ್ಲವೂ ಅಲ್ಲೇ ಇದೆ
ಎಚ್ಚರವಿರದ ನಿದ್ದೆಗೆ ಬಿದ್ದಿವೆ |
ಅದೋ ರಾತ್ರಿ ಚಲಿಸಿದೆ...
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |
ಬಾಲ್ಯದಿಂದ ಶವ ಯಾತ್ರೆಯವರೆಗೆ ಒಟ್ಟಿಕೊಡುವ ಅಸಂಖ್ಯ ಚಿತ್ರಗಳ ಪರಿಷೆ ಇಲ್ಲಿದೆ.
ಪ್ರತ್ಯುತ್ತರಅಳಿಸಿಕಳೆದುಹೋದ ಜೋಡಿ ಚಪ್ಪಲಿ - ಉಳಿಸಿ ಹೋಗುವ ಆ ಅಸುರಕ್ಷತಾ ಭಾವವೂ ಚಿಂತನೆಗೆ ಹಚ್ಚುತ್ತದೆ.