ಗುರುವಾರ, ಫೆಬ್ರವರಿ 14, 2013

ಮೊದಲ ಮಲ್ಲಿಗೆ ಹೂವಿನ ತಲೆ ಕತ್ತರಿಸಿದ ರಾತ್ರಿ !



ಹುಡುಕಾಡಿದೆ, ಸಿಗಲೇ ಇಲ್ಲ
ಮರಗಳ ಸ್ವರಗಳು
ಕಳೆದುಹೋದ ಸಮುದ್ರದ ಹಾಳೆಗಳು
ಹೆಬ್ಬಂಡೆ ಮೌನಗಳು |

ಎಲ್ಲವೂ ಅಲ್ಲೇ ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಮೇಲೆ ಸೇತುವೆಗೆ
ಕೆಳಗೆ ಹರಿವ ನದಿ ಮಾತಿಗಿಳಿದಿದೆ
ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ |

ಎಲ್ಲೆ ಮೀರದ ಆಸುರಕ್ಷಿತ ಕೋಟೆ |

ಇದ್ಯಾವುದೂ ಸರಿ ಹೊಂದುವುದಿಲ್ಲ,
ಬಾಲ್ಯದ ಮನೆಯೊಳಗೆ ಎದ್ದ
ಕಾರಂಜಿಗಳಿಗೆ ಮಣ್ಣು ಮಗುಚಿದೆ
ಎಲೆಗಳು ಮುಚ್ಚಿವೆ |

ತಾಯ ನೀಳ ಬೆರಳುಗಳಿಗೆ
ಮನೆಯ ಕಲಹದ ಅರಗಿನ ಮಾತುಗಳು
ಕಗ್ಗಂಟಾಗುತ್ತಾ, ಮತ್ತೊಮ್ಮೆ ಬಿಚ್ಚುತ್ತಾ
ಕಸೂತಿ ಹೆಣೆಯುತ್ತಿವೆ ರಾತ್ರಿಗಳು |

ತಂದೆಯ ಸುಕ್ಕು ಕೈಗಳಲಿ
ರಾತ್ರಿಯ ನೆರಳೊಂದು
ನಶಿಸಿದ ಗಡಿಯಾರದ
ಪುನರುತ್ಥಾನಕೆ ಶ್ರಮಿಸುತ್ತಿದೆ |

ಅಥವಾ
ಬಂಧಮುಕ್ತಿಗೊಂಡು
ಅಸಂಖ್ಯ ಹಾರಾಟಕೆ ಹವಣಿಸುತ್ತಿದೆ |

ಹುಡುಕಾಡಿದೆ, ಸಿಗಲೇ ಇಲ್ಲ
ಪತ್ತೆಯಾಗದ ಮನೆಯೊಳಗೆ
ಕತ್ತರಿಸಿದ ರೆಕ್ಕೆಗಳ ಕಳಚಿದ ಗರಿಗಳು
ಕಳೆದುಹೋದ ಜೋಡಿ ಚಪ್ಪಲಿ
ಚದುರಿದ ಅ ಆ ಇ ಈ ಅಕ್ಷರಗಳು |

ಎಲ್ಲವೂ ಅಲ್ಲೇ  ಇದೆ 
ಎಚ್ಚರವಿರದ ನಿದ್ದೆಗೆ ಬಿದ್ದಿವೆ |

ಅದೋ ರಾತ್ರಿ ಚಲಿಸಿದೆ...
ಕಟ್ಟ ಕಡೆಯ ಶವಯಾತ್ರೆಗೆ ನೆನೆದು
ತಲೆ ಕತ್ತರಿಸಿದ ಮೊದಲ ಮಲ್ಲಿಗೆ-
ಹೂವಿನ ವಶದಲ್ಲಿರುವ
ಪರಿಮಳವ ಆಘ್ರಾಣಿಸುತ್ತಿದೆ |
-ರವಿಮೂರ್ನಾಡು

ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ….

http://avadhimag.com/?p=77539 

1 ಕಾಮೆಂಟ್‌:

  1. ಬಾಲ್ಯದಿಂದ ಶವ ಯಾತ್ರೆಯವರೆಗೆ ಒಟ್ಟಿಕೊಡುವ ಅಸಂಖ್ಯ ಚಿತ್ರಗಳ ಪರಿಷೆ ಇಲ್ಲಿದೆ.

    ಕಳೆದುಹೋದ ಜೋಡಿ ಚಪ್ಪಲಿ - ಉಳಿಸಿ ಹೋಗುವ ಆ ಅಸುರಕ್ಷತಾ ಭಾವವೂ ಚಿಂತನೆಗೆ ಹಚ್ಚುತ್ತದೆ.

    ಪ್ರತ್ಯುತ್ತರಅಳಿಸಿ