ಭಾನುವಾರ, ಫೆಬ್ರವರಿ 17, 2013

ನಿದ್ರೆಯ ಬಾಗಿಲು !



ಬೆಳಕೊಂದು ಕಟಕಟಾಯಿಸುತ್ತಿದೆ
ನಿದ್ರೆಯ ಬಾಗಿಲು |
ದೋಣಿ ಬದಿಗೆಳೆವ
ಹಗ್ಗದ ಶಬ್ದದಂತೆ |

ನೀರೊಳಗೆ ಕೇಳುತ್ತಿದೆ
ಎರಡೂ ಬದಿಯೆತ್ತುವ ಮಾತು
ಪರಸ್ಪರ ವಿರುದ್ದವಾಗಿ
ಅಂಗಾತ ಮಲಗಿದ ಮೇಲ್ಮೈ
ಕೆಳಗೆ ಉಜ್ಜಿದಂತೆ|

ಅಲೆಅಲೆಗಳುಕ್ಕಿ
ನಿದ್ರೆಗೆ ಹೊರಟಿದೆ ಮೌನ
ತೆಳು ಹೆಜ್ಜೆಯಿಕ್ಕಿ |

ಈ ನಕ್ಷತ್ರ ನಕ್ಷೆಯಲಿ
ಮುಂಚೋಣಿಯಲ್ಲಿದೆ ಅಂಕುಶ
ಲಗಾಮಿಲ್ಲದ ಓಟಕೆ
ದಾರಿಯ ಸೂತ್ರವಾಗಿ |

ಎಲ್ಲಾ ವಿಫಲ ಪ್ರತಿಧ್ವನಿಗಳಿಗೆ
ಮುಚ್ಚಿಬಿಡಿ ಕಿವಿ
ಭಿತ್ತಿ ಮೇಲಿನ ಚಿತ್ರಗಳಿಗೆ
ಬಣ್ಣ ಚೆಲ್ಲಿ ಬಿಡಿ |

ಮಂದ ನಕ್ಷತ್ರ ದೀಪದಿಂದ
ತೂರಿ ಬರುವುದು ದಾರಿ |
ಉತ್ತುಂಗದ ಸ್ಥಿತಿ ಚದುರಿ
ಶೂನ್ಯಕ್ಕೆ ಜಾರುತ್ತಿದೆ ತುದಿ |

ಗಾಳಿಗೆ ಕೈಮುಗಿದು ಪ್ರಾರ್ಥನೆ
ತಿರುಗಲಿ, ಕೈವಾರದ ಹುಲ್ಲಿನ ತಂತಿ
ಯಾವುದಾದರೂ ದಿಕ್ಕಿದ್ದರೆ
ಆ ಕಡೆಗೆ ಮಗ್ಗಲು ಮಗುಚಲಿ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

1 ಕಾಮೆಂಟ್‌:

  1. ದಿನವಹಿಯನ್ನು ಮುರಿಯಲು ನಿದ್ರೆಯು ಒಳ್ಳೆಯ ಸಾಧನ.

    "ಎಲ್ಲಾ ವಿಫಲ ಪ್ರತಿಧ್ವನಿಗಳಿಗೆ
    ಮುಚ್ಚಿಬಿಡಿ ಕಿವಿ
    ಭಿತ್ತಿ ಮೇಲಿನ ಚಿತ್ರಗಳಿಗೆ
    ಬಣ್ಣ ಚೆಲ್ಲಿ ಬಿಡಿ"

    ವಾವ್ ಎಂತಹ ಒಳ್ಳೆಯ ಉಪಾಯ...

    ಪ್ರತ್ಯುತ್ತರಅಳಿಸಿ