ಸೋಮವಾರ, ಏಪ್ರಿಲ್ 30, 2012

“ಪ.ಗೋ” ಹೆಸರಲ್ಲ ! ನಡೆದಾಡುವ ಪತ್ರಿಕೆ

-ರವಿ ಮೂರ್ನಾಡು.

ಮುತ್ಸದ್ಧಿ ಮರಕಿಣಿಯವರು ನೆನಪಾಗುತ್ತಾರೆ. 89  ವಸಂತಗಳನ್ನು ಧಾಟಿ ಬದುಕೆಂಬ ಜಗತ್ತಿನಲ್ಲಿ ಎಲ್ಲವನ್ನು ಲೆಕ್ಕ ಹಾಕುವ ಮಗುವಿನ ವಯಸ್ಸು. ಈ ಸಮಾಜದ ಕೊಳಕುಗಳನ್ನು ಒಂದಿಷ್ಟು  ತೊಳೆಯಲು ಪತ್ರಕರ್ತ ಎಂಬ ಕಡಲಲ್ಲಿ ಈಜಿದ ನರಸಿಂಹರಾವ್‍ ಅವರೂ ತೆರೆಯಲ್ಲಿ ನಗುತ್ತಿದ್ದಾರೆ. 79 ರ ಅಂಬೆಗಾಲಿಕ್ಕುವ ಹರೆಯದಲ್ಲಿ ಸಮಾಜಕ್ಕೆ ಕೊಟ್ಟ ಬಾಬ್ತುಗಳು " ಪ.ಗೋ" ಪ್ರಶಸ್ತಿಯಲ್ಲಿ ಉಲ್ಬಣಗೊಳ್ಳುತ್ತವೆ.
        ಮೊನ್ನೆ ಮೊನ್ನೆ  " ಪ.ಗೋ. ಸಂಸ್ಮರಣಾ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ  ಈ ಎಲ್ಲಾ ಮುತ್ಸದ್ಧಿಗಳು ತುಂಬು ಮನಸ್ಸಿನಿಂದ, ತರೆದ ಜಗತ್ತಿಗೆ ಪದ್ಯಾಣ ಗೋಪಾಲಕೃಷ್ಣರೊಂದಿಗೆ ಒಬ್ಬರಿಗೊಬ್ಬರು ಮಾತಾಡಿದಂತೆ ಅನ್ನಿಸಿತು. ಪದ್ಯಾಣ ಗೋಪಾಲಕೃಷ್ಣರು ದ.ಕ. ಜಿಲ್ಲೆಯ ಬಹುದೊಡ್ಡ ಅಭಿಮಾನ. ಅದನ್ನು ಪ್ರತಿನಿಧಿಸುವವರು ಈ ಸಮಾಜದ ಆಸ್ತಿಗಳು. ರಾಜ್ಯ ಮತ್ತು ರಾಷ್ಟ್ರಕ್ಕೆ ಅದರ ಸಮಾರಂಭ ಒಂದು ದಾಖಲೆ.  ಧರ್ಮಸ್ಥಳದ  ಹೆಗ್ಗಡೆಯವರ ವಿಶಾಲ ಹಸ್ತ, ದೈವವೆಂಬ ಸಂಬೋಧನೆಯಲ್ಲಿ  ನಿಜತ್ವವನ್ನು ತೆರೆದ ಬದುಕು ಭಂಡಾರ. ನ್ಯಾಯ-ನೀತಿ-ಧರ್ಮಗಳು  ಜಗತ್ತನ್ನು ಆಳುತ್ತವೆ ಅನ್ನುವ ಪರೋಕ್ಷ ಧ್ವನಿ ಇದು.  ದ.ಕ. ಪತ್ರಕರ್ತರ ಸಂಘದ ತರೆದ ಮನಸ್ಸುಗಳು ಈಗ ಇಲ್ಲಿ, ಇದೇ  ಸಂಸ್ಮರಣೆಯಲ್ಲಿ ಪದ್ಯಾಣರ ಉದಾತ್ತ ಬದುಕನ್ನು ಅನಾವರಣಾಗೊಳಿಸುವಾಗ ಎಲ್ಲೋ ಒಂದಿಷ್ಟು ನೆಮ್ಮದಿಗಳ ಉಸಿರು ಮತ್ತೆ ಮತ್ತೆ ತೆರೆದುಕೊಳ್ಳುವುದು. ಇದು ಬದುಕು ಮತ್ತು ಜಗತ್ತು ನಡೆಯುವ ಪರಿ.
ಜಗತ್ತಿಗೆ ಬಂದ ಪ್ರತಿಯೊಬ್ಬನ ಬದುಕಿನಲ್ಲಿ ನೆನಪಾಗಿ ಕಾಡುವುದು ಸಾಧನೆಯ ಹಿಂದಿನ ಹೆಗಲೊತ್ತ ಬದುಕುಗಳು.  ಕುಟುಂಬದ ಹರಿಕಾರರು, ಈಗಲೂ ವಿಸ್ಮಯಕ್ಕೆ ಸಿಕ್ಕಿದ  ಜಗತ್ತು ಇದು. ಪದ್ಯಾಣ ಸಾವಿತ್ರಮ್ಮ ಅನ್ನುವ ಬದುಕು ಎಲ್ಲರಿಗೂ ಸಿಕ್ಕಿದಲ್ಲಿ ಇನ್ನೊಬ್ಬ ಪದ್ಯಾಣ ಗೋಪಾಲ ಕೃಷ್ಣರನ್ನು ಸಮಾಜ ಕಾಣಬಹುದು. ಅದು ಸತ್ಯ. ಅದಕ್ಕೆ ಸಹನೆ , ತಾಳ್ಮೆ ಮತ್ತು  ಅಭಿಮಾನ ಬೇಕು. ಅದು ಇಲ್ಲಿ ಸಿಕ್ಕಿತು. ಹಾಗಾಗಿ, ಒಬ್ಬ ಗೋಪಾಲಕೃಷ್ಣರ ಬದುಕು ಎತ್ತಲೋ ಸಾಗುತ್ತಿರುವ ಸಮಾಜಕ್ಕೆ ಅದರ್ಶದ  ಮೊನಚಾಗಿ ಕಾಣುತ್ತಿದೆ. ಹೆಣ್ಣು ಸಮಾಜದ ಕಣ್ಣು. ಅದು ಕುಟುಂಬವನ್ನು ಜಗತ್ತಿಗೆ ತೆರೆದಾಗ ಸಿಗುವ ಉತ್ತರ. ಎಲ್ಲಾ ಎಲ್ಲಗಳನ್ನು ಮೈಗೂಡಿಸಿಕೊಂಡು, ತುತ್ತು ಅನ್ನ ಬಾಯ್ಗಿಟ್ಟ ಸಂತಸದ ಕ್ಷಣಗಳು  ಚಿನ್ನದ ಕಣಗಳಾಗಿ ಪರಿಪೂರ್ಣವಾಗುವುದು. ಅದು ಎಲ್ಲಾ ಮನೆಗಳಲ್ಲೂ ಆರ್ವಿಭವಿಸಲಿ.  ಇದು ಉತ್ಪ್ರೇಕ್ಷಯಾಗಲಾರದು. ಸತ್ಯ ಹೇಳಿದರೆ ಇನ್ನೊಂದು ಪ.ಗೋ. ಹುಟ್ಟಬಹುದು ಅನ್ನುವ ಆಶಾಭಾವನೆ.!
ಪ್ರಶಸ್ತಿ ಮತ್ತು ವ್ಯಕ್ತಿ ಅದರ ಬಗ್ಗೆನೇ ಒಂದಷ್ಟು ಮಾತಾಡಬೇಕು ಅನ್ನಿಸಿತು. ಆದರ್ಶ ಮತ್ತು ಬದುಕಿನ ನಿಲುವುಗಳು ವ್ಯಕ್ತಿಯ ಅಳತೆಗೋಲಾಗುವಾಗ ಪ್ರಶಸ್ತಿ ಅವುಗಳನ್ನು ಪ್ರತಿನಿಧಿಸುತ್ತವೆ. ಇದು " ಸೋಷಿಯಲ್ ಐಡೆಂಟಿಟಿ"ಯ ಇನ್ನೊಂದು ಪರ್ಯಾಯ  ಮುಖ. ವ್ಯಕ್ತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಇನ್ನೊಂದು ಹೊಸತನಕ್ಕೆ ಉತ್ತೇಜಿಸುವ ಮಾಧ್ಯಮ. ಪ್ರಶಸ್ತಿಯೇ ಸಾಧನೆ ಎಂದು  ಪಟ್ಟಿ ಮಾಡುವವರು ಉಂಟು. ಅದನ್ನೇ ಹಿಗ್ಗಾಮುಗ್ಗಾ ಪಡೆದು ಪಟ್ಟಿ ಬೆಳೆಸುವುದುಂಟು. ಇವೆಲ್ಲದರ ನಡುವೆ ಪ್ರಶಸ್ತಿಯೇ ಇಲ್ಲದೆ ಇರುವ ಸಾಧನೆಗಳೂ ಇವೆ. ಬೇಡವೆಂದರೂ ಬೆಂಬಿಡುವ ಮುಖಬೆಲೆಗೆ ಮುಖ ಮುರಿದುಕೊಳ್ಳುವವರೂ ಇದ್ದಾರೆ.. ಈ ಅಳತೆ ಪಟ್ಟಿ ಪರ್ಯಾಯವಾಗಿ ಇನ್ನಷ್ಟು ಎತ್ತರಕ್ಕೇರಿಸುವ ಸೂತ್ರ ಅಷ್ಟೆ.  ತಮ್ಮದೇ ನಿಲುವಿಗೆ ಬದ್ಧರಾಗಿ ಗುರುತಿಸಿಕೊಂಡ ಮಹಾನುಭಾವರು ಈ ಪ್ರಶಸ್ತಿಯ ಮೌಲ್ಯವನ್ನೂ ಮೀರಿ ನಿಲ್ಲುವರು. ಅದು ಅವರ ಹೆಸರಿನಲ್ಲಿ ಕೊಡ ಮಾಡುವ ಸಮಾಜ ಮತ್ತು ಪಡೆದುಕೊಂಡವರನ್ನು ಸದಾ ಕಾಲ ಎಚ್ಚರಿಕೆಗೆ ಕರೆದೊಯ್ಯುತ್ತವೆ. ಯಾವಾಗ ಪಡೆದುಕೊಂಡ ವ್ಯಕ್ತಿಯಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಮಾಧರಿ ಸಿಗುವುದೋ ,ಅಂದಿಗೆ  ಅದರ ಮೌಲ್ಯ ಇನ್ನಷ್ಟು ಮೇಲಕ್ಕೇರುವುದು. ಅದು  ದೊಡ್ಡದಾದರೂ ಸರಿ, ಸಣ್ಣದಾದರೂ ಸರಿ. ಪ್ರಶಸ್ತಿಯ ಹೆಸರಿನಲ್ಲಿ ವ್ಯಕ್ತಿಯ ಕೊಡುಗೆ ಮೇಲ್ಮಟ್ಟಕ್ಕೇರುವುದು.
2000  ರಲ್ಲಿ ಪ್ರಾರಂಭವಾದ ಈ " ಪ.ಗೋ" ಪ್ರಶಸ್ತಿಯ  ಮೊದಲ ಸಮಾರಂಭಕ್ಕೆ ಆನಂದ ಪಟ್ಟಿದ್ದೇನೆ. ಈ ಮೊತ್ತ ಮೊದಲ ಗ್ರಾಮೀಣ ಪ್ರಶಸ್ತಿ ಕೊಡಗಿನ " ಶಕ್ತಿ" ದೈನಿಕದ ಗೌರವ ವರದಿಗಾರ ಶ್ರೀ ಅನಿಲ್ ಹೆಚ್.ಟಿ. ಅವರಿಗೆ ಸಂದಾಯವಾಗಿತ್ತು  ಅನ್ನುವಾಗ  ಪದ್ಯಾಣ ಗೋಪಾಲಕೃಷ್ಣ ಮತ್ತು ಕೊಡಗಿನ " ಶಕ್ತಿ" ದೈನಿಕದ ಸಂಪಾದಕ ದಿ.ಬಿ.ಜಿ.ಗೋಪಾಲಕೃಷ್ಣರ  ಸಂಬಂಧವನ್ನು ತಳುಕು ಹಾಕಿತ್ತು. ನಾನು ಇದೇ 2000 ರ ಸಮಯದಲ್ಲಿ ಶಕ್ತಿ ಪತ್ರಿಕೆಯಲ್ಲಿ  ಸೇವೆಯಲ್ಲಿದ್ದೆ.  ಪ್ರಶಸ್ತಿ ಪ್ರಕಟಣೆ ಸುದ್ದಿಯನ್ನು ಖುದ್ಧು " ಕಂಪೋಸ್" ಮಾಡಿದ ಹೆಮ್ಮೆ ನನಗೆ. ಪ.ಗೋ.ರನ್ನು ಮೊದಲ ಭಾರಿಗೆ  ಸಂಪಾದಕ  ಬಿ.ಜಿ.ಗೋಪಾಲಕೃಷ್ಣರನ್ನು ಪರಿಚಯಿಸಿದ ಎನ್. ಮಹಾಬಲೇಶ್ವರ ಭಟ್ಟರು  " ಶಕ್ತಿ" ಪತ್ರಿಕೆಯ ಖಾಯಂ ಬರಹಗಾರರಾಗಿದ್ದರು. ಪ.ಗೋ.ರವರ ಬದುಕು ಬರಹಗಳಲ್ಲಿ  ಹೆಕ್ಕಿ ತೆಗೆದಾಗ ಸಿಕ್ಕಿದ  ಅವರ ಮಾತಿನಂತೆ, ಸಂಯುಕ್ತ ಕರ್ನಾಟಕ ಪತ್ರಿಕೆಗೆ ಕೆಲಸಕ್ಕೆ ಸೇರುವ ಸಮಯದಲ್ಲಿ ಮೇಳೈಸಿದ ಬಂಧವಿದು. ಶಕ್ತಿ ದಿನಪತ್ರಿಕೆಯ ಬೆಂಗಳೂರು ವರದಿಗಾರಿಕೆಗೆ ಸಿಕ್ಕಿದ  ಕೆಲಸವಿದು. ಈ  ಸಂದರ್ಭದ ವಿವರಣೆ ಬಹಳ ಸೊಗಸಾಗಿ ಪದಗಳಲ್ಲಿ  ಹರವಿದ್ದಾರೆ ಪ.ಗೋ.ರವರು.  ಅಲ್ಲಿ ಅವರ ಕೆಲಸದ ತುರಾತುರಿ ಎಷ್ಟಿತ್ತೆಂದರೆ,  ಬಿ.ಜಿ. ಗೋಪಾಲಕೃಷ್ಣರ ಅನುಮಾನದ ಮಾತಿಗೆ " ಸದ್ಯಕ್ಕೆ ದಿನಕ್ಕೊಂದು ರೂಪಾಯಿ ಕೊಟ್ಟರೆ ಸಾಕು" ಎನ್ನುವ ಅನಿರ್ವಾಯತೆ ಕ್ಷಣಗಳು ಆರ್ದ್ರಗೊಳಿಸುವುದು. ಸಂಪಾದಕರಿಂದ ನೇಮಕಾತಿ ಪತ್ರ ಕೈ ಸೇರಿದೊಡನೆ ಹಂಚಿಕೊಂಡ ಅವರ ಅನುಭವ ಬೆಲೆಕಟ್ಟಲಾಗದು. ಅಲೆ ಅಲೆದು ಬೆಂಡಾದ  ಇಂದಿನ ನಿರುದ್ಯೋಗಿಗಳು , ಉದ್ಯೋಗ ಸಿಕ್ಕಿದಾಗ ಪಡೆವ ಸಂತೋಷವನ್ನು ಯತಾವತ್ತಾಗಿ ಚಿತ್ರಿಸುವುದು.
ಇಂತಹದ್ದೇ ಕೈ ಚೆಲ್ಲಿದ ಇನ್ನೊಂದು ಚಿತ್ರಣ ಅವರ ಅನುಭವಗಳಲ್ಲಿ ಬಂದಾಗ  ಸ್ವತಃ ಪತ್ರಿಕೆ ಸ್ಥಾಪಿಸುವ ಇರಾದೆಗೆ ಮನಸ್ಸನ್ನು ಅನಾವರಣಗೊಳಿಸುವುದು. ಚೆನ್ನಾಗಿಯೇ ನಡೆಯುತ್ತಿದ್ದ  ಶಕ್ತಿ ದಿನಪತ್ರಿಕೆಗೆ ಒಂದು ಕಾಲದಲ್ಲಿ  ತೊಡಕಾದಾಗ ಸರಕಾರದ ಅನುಧಾನ  ನೆರವಿಗೆ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ತಾನೊಂದು ಪತ್ರಿಕೆ ನಡೆಸಲು ನಡೆಸಿದ ಎಲ್ಲಾ ಪ್ರಯತ್ನಗಳು ನೆಲಕಚ್ಚಿದಾಗ ಸರಕಾರದ ಅನುದಾನದ ಇಬ್ಬಗೆ ನೀತಿಯನ್ನು ಪರೋಕ್ಷವಾಗಿ ಮಾತುಗಳಲ್ಲಿ  ದುಃಖ್ಖಿಸಿದ ಸಂದರ್ಭವಿದು. ಅದು ಬದುಕಿನ ನೀತಿ ಮತ್ತು  ವ್ಯವಸ್ಥೆಗಳಿಗೆ ಚಾಟಿ ಏಟಿನಂತಿದೆ. ನಡೆಗಳಿಗೆ ಶಪಿಸುವ ವ್ಯವಸ್ಥೆ ವರ್ತುಲದಂತಿದೆ.
ಹತ್ತು- ಹನ್ನೆರಡು ವರ್ಷಗಳು ಕಳೆದಿವೆ ನೋಡಿ. ಇನ್ನಿಲ್ಲದ ಭಾವಗಳನ್ನು ಮೆಲುಕು ಹಾಕುವುದು ಸಂದರ್ಭಗಳು. ಇದರಿಂದ ಬದಲಾದ ದಾರಿಗಳು ಎಷ್ಟೋ. ಸರಿ ದಾರಿಗೆ ಬಂದ  ಸಂದರ್ಭಗಳು ಎಷ್ಟೋ. 2000 ರಲ್ಲಿ ಪ್ರಾರಂಭವಾದ ಈ ಪ.ಗೋ. ಜಗತ್ತಿನ ಪ್ರಶಸ್ತಿಯ ಅನಾವರಣಾ ಇನ್ನಷ್ಟು ಜಗತ್ತಿಗೆ ತಲುಪಬೇಕು ಅನ್ನುವ ಆಶಯ ಇದಕ್ಕಿದೆ. ಪ. ಗೋ. ಪ್ರಶಸ್ತಿಯನ್ನು ರಾಜ್ಯ ಸರಕಾರವೇಕೆ ಪರಿಗಣಿಸಬಾರದು? ಇಂದಿನ ಪ್ರಜಾ ಪ್ರಭಾ ವಲಯದಲ್ಲಿ  ಮತ್ತಷ್ಟು ಪ್ರಭಾವಕ್ಕೆ ಒಳಗಾಗಿರುವ ಪತ್ರಿಕೋಧ್ಯಮಕ್ಕೆ ವಿಶಿಷ್ಟ ಕೊಡುಗೆ ನೀಡಿದ ಈ ಪದ್ಯಾಣ ಗೋಪಾಲ ಕೃಷ್ಣರ ಹೆಸರು ರಾಜ್ಯ, ರಾಷ್ಟ್ರದ  ಸೀಮಾರೇಖೆಗೆ ಏಕೆ ಬರಬಾರದು ಅನ್ನುವ ಪ್ರಶ್ನೆಗೆ ಪ್ರತೀಕವಾಗಿ  ಚಿಂತಿಸುವಾಗ, ಪತ್ರಕರ್ತರ ಜಗತ್ತು ತೆರೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇವೆ. ಬೇಸರಗಳು ಮೂಲೆಗುಂಪಾಗಲಿ, ಒಡಕುಗಳು ಮತ್ತೆ ಸರಿದಾರಿಗೆ ಬರಲಿ. ರಾಷ್ಟ್ರ- ರಾಜ್ಯ ರಾಜಕೀಯದಲ್ಲಿ ಪದವಿತ್ತ ಮಹನೀಯರು ಇತ್ತ ಗಮನ ಹರಿಸಬೇಕೆಂಬುದು ಸಮಾಜದ  ಅವಲತ್ತು. ಕರ್ನಾಟಕ ರತ್ನ ಸಂಪುಟದಲಿ ಶಾಶ್ವತ ನೆಲೆ ಸಿಗುವುದು ಮಾತ್ರವಲ್ಲ , ಚಿರಕಾಲ ನೆನಪಿಸುವ ಬರಹಗಳು ಪತ್ರಕರ್ತರ ಬದುಕನ್ನು ಹಸನುಗೊಳಿಸಲಿ. ಇದಕ್ಕಾಗಿ ಸತ್ಯವನ್ನೇ ಹೇಳಬೇಕು. ಕಲಿಗಾಲದಲ್ಲಿ ಅನ್ಯ ಮಾರ್ಗವಿಲ್ಲ ಎನ್ನುವಾಗ ಸುಳ್ಳನ್ನು ಮರೆಮಾಚಿ, ಸತ್ಯಕ್ಕಾಗಿ ಮೀಸಲಾಗದೆ ವಿಧಿಯಿಲ್ಲ.  !
ಯಾಕೆ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಲಾಗುತ್ತದೆ ಅನ್ನೋದು ಒಂದು ನಯವಾದ ಪ್ರಶ್ನೆ. ಪ್ರತೀಯೊಬ್ಬ ವ್ಯಕ್ತಿ ಈ ಸಮಾಜದಲ್ಲಿ ವಿಭಿನ್ನವಾಗಿ ನಿಲ್ಲುತ್ತಾನೆ. ಕೆಲವು ಸ್ಮರಿಸುವಂತಹ ನಿಲುವುಗಳು, ಕೆಲವು ಒಗ್ಗಿಕೊಳ್ಳಲಾಗದ  ಮನಸ್ಥಿತಿಗಳು. ಅದೆಷ್ಟೋ ವ್ಯಕ್ತಿಗಳನ್ನು ಈ ಸಮಾಜ ಮತ್ತೆ ಮತ್ತೆ ಸ್ಮರಿಸಿ ಅವರಿಂದ ಕಲಿತುಕೊಳ್ಳುತ್ತವೆ. ಜೀವಿತಾವಧಿಯಲ್ಲಿ ಕೊಡಲಾಗದ್ದನ್ನು ಕೊಟ್ಟು, ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳುವುದು ನಡೆದು ಬಂದ ಹಾದಿ.. ಒಂದು ವಿಭಿನ್ನ ಆಲೋಚನೆಯಲ್ಲಿ ಬದುಕಿ, ಸಮಾಜಕ್ಕೆ ಹೊಸ ಆಯಾಮವನ್ನು ಒದಗಿಸಿದ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಪಡೆದುಕೊಂಡ ವ್ಯಕ್ತಿಯ ಜವಾಬ್ದಾರಿಯನ್ನು  ಹೆಚ್ಚಿಸುತ್ತವೆ ಅನ್ನೋದು ಸತ್ಯ. ಪ್ರಶಸ್ತಿ ವ್ಯಕ್ತಿಯ ಉತ್ಕೃಷ್ಟ ಕಾರ್ಯಗಳಲ್ಲಿ ಗರಿಮೆಯಾಗಿ, ಪ್ರತಿನಿಧಿಸುವ ಸಮಾಜದ ಹಿರಿಮೆಯಾಗಿ, ಮಾಡಬೇಕಾದ ಸಾಧನೆಯಲ್ಲಿ ಹೆಚ್ಚಿನ ಮುತುವರ್ಜಿಗೆ ನಾಂದಿ ಹಾಡುವುದು. ಸಾಧನೆಗೆ ಬೆನ್ನು ತಟ್ಟುವುದು, ಮಾಡುವ ಕಾರ್ಯಕ್ಕೆ ಪ್ರೋತ್ಸಾಹಿಸುವುದು ಎಲ್ಲರಿಗೂ ಬರುವ ಗುಣವಲ್ಲ. ಅದು ವಿಶಾಲ ಹೃದಯಕ್ಕೆ ಸಂಬಂಧಿಸಿದ ವಿಶಿಷ್ಟ ಗುಣ. ಪ್ರಶಸ್ತಿಯ ಬೆನ್ನು ಹತ್ತಿ ಹೋಗುವ ಗುಣವನ್ನು ಮೀರಿದ್ದು. ಪದ್ಯಾಣ ಗೋಪಾಲಕೃಷ್ಣರು ಪ್ರಶಸ್ತಿಯನ್ನು ಮೀರಿ ನಿಂತ ಸಾಧನೆಯ ಹರಿಕಾರ. ಈಗ ದೊಡ್ಡ ವಿಪರ್ಯಾಸವೆಂದರೆ ಪ್ರಶಸ್ತಿಯ ಹೆಸರಿನಲ್ಲಿ ಚರ್ಚೆ ಅವರ ಬೆನ್ನು ಹತ್ತಿರುವುದು ದಟ್ಟ ಚಿಂತನೆಯ ಬೆಳಕುಗಳು. ಅದು ಅವರನ್ನು ಇನ್ನಷ್ಟು ಎತ್ತರಕ್ಕೇರಿಸಿದೆ.
ಇಷ್ಟೆಲ್ಲಾ ಮಾತುಗಳು ಯಾಕೆ ಪೀಠಿಕೆಯಾಗುತ್ತವೆ ಅಂದರೆ ,ದಿವಂಗತ ಪದ್ಯಾಣ ಗೋಪಾಲಕೃಷ್ಣರು ಈ ಸಮಾಜದ ಸಂಸ್ಕೃತಿಯಲ್ಲಿ ಪ್ರಶಸ್ತಿ ಅನ್ನುವ ಹೆಸರಿನ ಮೂರ್ತ ರೂಪದಲ್ಲಿ ಇದ್ದಾರೆ ಅನ್ನುವ ಸಂತೋಷಕ್ಕಾಗಿ. ಕಳೆದುಕೊಂಡದ್ದನ್ನು ಮತ್ತೆ ಜೀವಂತವಿರಿಸಿದೆ " ಪ.ಗೋ ಪ್ರಶಸ್ತಿ". ಇದು ಯಾವುದೇ ಮೌಲ್ಯವನ್ನು ಮೀರಿ ನಿಂತಿದೆ. ಕಟ್ಟು ನಿಟ್ಟಿನ ಮನುಷ್ಯಯಾರಿಗೂ ಭಾರವಾಗದ , ವಿಭಿನ್ನವಾಗಿರುವ ಚೌಕಟ್ಟಿನಲ್ಲೇ ಆದರ್ಶವಾಗಿರುವ ಬದುಕು ಪದ್ಯಾಣ ಗೋಪಾಲಕೃಷ್ಣರದು. ಪ್ರಶಸ್ತಿಯನ್ನು ಯಾರೇ ಕೊಡಲಿ, ಯಾವುದೇ ಹೆಸರಿನಲ್ಲಿ ಕೊಡಲಿ. ಅದು ಅದರ ಸುತ್ತ ನಿಂತಿರುವ ವ್ಯಕ್ತಿಯ ಜೀವನದ ಸ್ಪಷ್ಟ ಸಂದೇಶವನ್ನು ರವಾನಿಸುತ್ತವೆ . ಮಾಡುವ ಕಾರ್ಯ ಸ್ಮರಿಸುವಂತಿದ್ದರೆ ಸಮಾಜ ನಮ್ಮ ಹಿಂದಿರುತ್ತದೆ. ಹಲವು ಸಾಧಕರ ಬದುಕಿನಲ್ಲಿ ಕಂಡುಕೊಳ್ಳಬೇಕಾದ ಅಂಶವಿದು. ಪ್ರಶಸ್ತಿಗಾಗಿಯೇ  ಸಾಧನೆ ಮಾಡಿದವರು ಅಲ್ಪಕಾಲದಲ್ಲಿ ಮರೆಯಾಗುವರು. ಗುರುತಿಸಿಕೊಂಡವರು ತಮ್ಮ ತಮ್ಮಲ್ಲೇ ಹೊಸತನವನ್ನು ಕಂಡುಕೊಂಡು ನಮ್ಮಲ್ಲೇ ಉಳಿದುಕೊಳ್ಳುವರು. 
ಸರ್ವ ಕಾಲಕ್ಕೂ ಅನುಕರಣೀಯವಾದ ಈ ಪ. ಗೋ. ಸಂಸ್ಮರಣಾ ಸಮಾರಂಭ 2004 ರಲ್ಲಿ  ಇನ್ನಷ್ಟು ಉತ್ಕೃಷ್ಟ ಮಟ್ಟಕ್ಕೇರಿದ ಕುರುಹು ಇದೆ. ನಾಡಿನಾದ್ಯಂತ ಧರ್ಮಸ್ಥಳದ  ಧರ್ಮಾಧಿಕಾರಿಗಳ ಸಾನ್ನಿಧ್ಯದಲ್ಲಿ  ನಿರಂತರ  ಪ. ಗೋ . ಒಂದು ಹಬ್ಬದಂತೆ ಕಂಗೊಳಿಸುವುದು  ದ. ಕ. ಜಿಲ್ಲಾ ಪತ್ರಕರ್ತರ  ಸಹಯೋಗದಲ್ಲಿ ರಾಜ್ಯ- ರಾಷ್ಟ್ರ- ಅಂತರ್ರಾಷ್ಟ್ರೀಯ ಮಟ್ಟಕ್ಕೆ ಬದುಕು ಕಲಿಸಿದ ನಡೆಗಳ ಸಂದೇಶ ರವಾನೆಯಾಗುವುದು.
ಪದ್ಯಾಣರು ವೇದಿಕೆಯಲ್ಲಿದ್ದಾರೆ ಅನ್ನಿಸುತ್ತದೆ. ಅಲ್ಲಿರುವ ಮಹನೀಯರು, ತುಂಬಿದ ಸಭಿಕರು, ಅವರ ಕುಟುಂಬದ ಕೊಂಡಿಗಳು ನಗುವಿನಲ್ಲಿ ಒಂದಾದಂತೆ ಭಾಸವಾಗುವುದು. ಪ್ರಶಸ್ತಿ ಪಡೆದುಕೊಳ್ಳುವ ಸಾಧಕನಿಗೆ ಅದು ಆನಂದದ ಮೌನ ಪ್ರೇರಣೆಯ ಸಮಯ. ಪದ್ಯಾಣ ಗೋಪಾಲ ಕೃಷ್ಣರ ಬದುಕು, ಈ ಜಗತ್ತಿನಲ್ಲಿ  ಅಳಿಸಲಾಗದ  ಹೆಗ್ಗುರುತಾಗಿ ನಿಂತವು. ನಡೆದು ಬಂದ ಹಾದಿಯಲ್ಲಿ  ಪದ್ಯಾಣ ಗೋಪಾಲಕೃಷ್ಣರಂತೆ ಕಂಗೊಳಿಸುವ ಮುತ್ಸದ್ಧಿಗಳು ಪ್ರತೀ ಭಾರಿ ನೆನಪಾಗುವ ಬದುಕುಗಳು.  ಅವರದು ಸಾರ್ಥಕದ ಬದುಕು ಅಂತ  ಹೆಮ್ಮೆಯಿಂದ ಹೇಳುವುದು ನುಡಿ ನಮನಗಳು. ಪ.ಗೋ. ಎಂಬುದು ಹೆಸರಲ್ಲ.  ನಿತ್ಯ ಕಾಲ ಕಾಲಕ್ಕೆ ನಡೆದಾಡುವ ಪತ್ರಿಕೆ. ಸದಾ ಸುದ್ಧಿಯಲ್ಲಿ ಸುತ್ತಮುತ್ತ ಬೆಳಗುವ ಆತ್ಮ ದೀಪಿಕೆ.

3 ಕಾಮೆಂಟ್‌ಗಳು:

  1. ಇಂತಹ ಹಿರಿಯ ಚೇತನಗಳ ಅದಮ್ಯ ಕಾರ್ಯೋತ್ಸಾಹ ಮತ್ತು ಸತ್ಕಾರ್ಯ ಸಾಹಿತ್ಯಗಳು ನನಗೆ ಪ್ರೇರಣೆ.

    ಪದ್ಯಾಣ ಗೋಪಾಲಕೃಷ್ಣರ ಜೀವನ ಚಿತ್ರಣವೂ ನಮಗೆ ಮಾದರಿ.

    ನಿಜವಾಗಲಿ ಶ್ರೀ. ವೀರೇಂದ್ರ ಹೆಗಡೆಯವರದು ಕೊಡುಗೈ ಮನಸ್ಸು. ಅವರು ಚಿರಕಾಲ ಸಂತಸ ಹೊಮ್ಮಿಸ್ತ್ತಲೇ ಇರಲಿ.

    ಪ್ರಶಸ್ತಿಗಳ ನಿಜಾಯತಿ ಮತ್ತು ಪ್ರಶಸ್ತಿ ಸಮಾರಂಭದ ಆಪ್ತತೆ ಎರಡೂ ಸಮಾನವಾದ ಸಮ್ಮಿಲನಗಳೇ.

    ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು ಸಾರ್.

    ಪ್ರತ್ಯುತ್ತರಅಳಿಸಿ
  2. uttama parichaya lekhana.. Olle mahiti.. Allalli swalpa taalmeyannoo beditu :-) chennagide :-)

    ಪ್ರತ್ಯುತ್ತರಅಳಿಸಿ
  3. ರವಿ ಸರ್ ಪ್ರಾತಃ ಸ್ಮರಣೀಯ ಹಿರಿಯ ವಿಚಾರವಾದಿಗಳ ಪರಿಚಯ ಸೊಗಸಾಗಿದೆ... ಕೆಲವೊಮ್ಮೆ ಪ್ರಶಸ್ತಿಗಳು ಪ್ರಶಸ್ತಿ ಪಡೆದವರಿಗೂ ಆಕಾಂಕ್ಷಿತರಿಗೂ ನಡುವೆ ಕಂದಕ ಏರ್ಪಡಿಸುತ್ತವೆ... ಅಥವಾ ಹಿಂಬಾಲಕರು ಅಂತಹ ಪರಿಸರ ನಿರ್ಮಿಸುತ್ತಾರೆ... ಲೇಖನ ಗಹನ ವೈಚಾರಿಕತೆಗೆ ಎಡೆಮಾಡಿದೆ.

    ಪ್ರತ್ಯುತ್ತರಅಳಿಸಿ