ಬುಧವಾರ, ಏಪ್ರಿಲ್ 25, 2012

ಬಾಲ(ಚಂದ್ರ)ನ ಕವಿತೆ


ಸುಂದರ ಚಂದಿರ ಮೋಡದಲಿಣುಕಿ
ಧರಣಿಯ ಸುಂದರ ಮಾಡಿದನು
ಚಿಕ್ಕೆಯ ಸಂಗಡ ಚುಕ್ಕಿಯನಾಡುತ
ಬಾನಿನ ಹೃದಯದಿ ಓಡಿದನು !

ಮಲಗಿದ ಸೂರ್ಯನ ಕಡಲಿದು ಕನ್ನಡಿ
ತೇಲಿವೆ ಚಂದ್ರನ ಬಿಂಬಗಳು
ದುಂಡನೆ ಮೊಗದಲಿ ಕಪ್ಪನೆ ಕಲೆಗಳು
ಚಿಕ್ಕೆಯು ತರಚಿದ ಗಾಯಗಳು !ಭೂಮಿಗೆ ಹುಟ್ಟಿ ಬಾನಿಗೆ ಮುಟ್ಟಿ
ಚಿಲಿಪಿಲಿ ಕರೆದಿವೆ ಹಕ್ಕಿಗಳು
ಧರಣಿಗೆ ಹಾಸಿದ ಹೊದಿಕೆಗೆ ಬಿದ್ದಿವೆ
ಮಿಂಚುಳು ಸಾವಿರ ಚಿಕ್ಕೆಗಳು !

ಬಂಡೆಯ ಸೀಳುತ ಗಿಡಮರ ನುಸುಳುತ
ನದಿಗಳ ಹುಡುಕಿವೆ ತೊರೆಗಳು
ಚಂದ್ರನ ಬಿ೦ಬದ ಮೋಹಕೆ ಕೆನೆಯುತ
ಕಡಲಿಗೆ ಮುತ್ತಿವೆ ನದಿಗಳು ! 

ಕತ್ತಲು ಮುಚ್ಚಿದೆ ಧರಣಿಯ ನಿದ್ದೆಗೆ
ಮಡಿಲಲಿ ಮಲಗಿದ ಬಾಲಶಶಿ
ನಿದ್ದೆಯ ಉಸಿರಿಗೆ ಮರಗಳು ನಲಿದಿವೆ
ಜೋಗುಳ ಹಾಡುತಾ ತಂಗಾಳಿ..!

--------------------------------------
-ರವಿ ಮೂರ್ನಾಡು

9 ಕಾಮೆಂಟ್‌ಗಳು:

 1. ರವಿ ಸರ್;ಸುಂದರ ಕವಿತೆ.ಅಭಿನಂದನೆಗಳು.

  ಪ್ರತ್ಯುತ್ತರಅಳಿಸಿ
 2. ತಾಯಿ ರಾಗ ಕಟ್ಟಿ ರಚ್ಚೆ ಹಿಡಿಯುವ ಮಗುವನ್ನು ರಮಿಸಲು ನೀವು ಬರೆದು ಕೊಟ್ಟ ಅತ್ಯುತ್ತಮ ಭಾವಗೀತೆ ಇದು.

  ಮೊದಲ ಚರಣದಲ್ಲೇ ಒಡ ಮೂಡುವ ರಮ್ಯತೆಯು ಕಡೆಯ ಸಾಲಿನವರೆಗೂ ಮುಂದುವರೆದಿದೆ.

  ಭಾವಗೀತೆಯ ರಚನೆ ಅತ್ಯಂತ ಕ್ಲಿಷ್ಟ ಪ್ರಕ್ರಿಯೆ. ಒಡ್ಡೊಡ್ಡಾಗಿ ಬರೆದು ಬಿಸಾಡ ಬಲ್ಲ ಕಾವ್ಯ ಶೈಲಿಯಲ್ಲ. ಸಂಗೀತಕ್ಕೆ ಒಪ್ಪುವ ಹಾಗೆ ಸದಾ ಗುನುಗುನಿಸೋ ಒಲುಮೆಗೆ ಕವಿಯೆ ಹುಟ್ಟಿಬರಬೇಕು.

  ನೀವು ಅತ್ಯುತ್ತಮ ಭಾವಗೀತೆ ರಚನೆ ಮಾಡಬಲ್ಲ ನವೋದಯ ಮತ್ತು ನವ್ಯ ಕವಿ ಎಂಬುದು ಇಲ್ಲಿ ಅರಿವಿಗೆ ಬಂತು.

  ಒಮ್ಮೆ ಹಾಡಿ ನೋಡುತ್ತೇನೆ. ನನ್ನ ಬಾಲ್ಯ ನೆನಪುಗಳು ಮತ್ತೆ ನನ್ನೊಳಗೆ ಮರುಕಳಿಸಲಿ.

  5*

  ಪ್ರತ್ಯುತ್ತರಅಳಿಸಿ
 3. ಮಕ್ಕಳಿಗೆ ರಜೆಯ ಪದ್ಯದಂತೆ. ಓದಲು ಖುಷಿ.. ಚೆನ್ನಾಗಿ ಹಾಡಬಹುದು :)

  ಪ್ರತ್ಯುತ್ತರಅಳಿಸಿ
 4. ಪುಟ್ಟ ಮಕ್ಕಳಿಗೆ ಮೂಡಿ ಬಂದ ಮುದ್ದಾದ ಕವನ!, ಬಾಲ್ಯದ ಕಲ್ಪನೆಯಲ್ಲಿ ಸೂರ್ಯ,ಚಂದ್ರ ,ತಾರೆಯರು ಹೀಗೆ ಇರಬಹುದೇನೋ, ಒಂದು ಹಾಯಾದ ಮುಗುಳ್ನಗೆ ಸೂಸುತ್ತ ಜೋಗುಳ ಹಾಡಿ, ಮುಗ್ದ ಕನಸುಗಳಿಗೆ ನಾಂದಿಯಾಗುವ ಸುಂದರ ಕವನ ರವಿ ಮುರ್ನಾಡ್ ಅವರೆ
  arathi gahtikaar

  ಪ್ರತ್ಯುತ್ತರಅಳಿಸಿ
 5. ನಮಸ್ಕಾರ ! ನಿಮ್ಮ ಕಾಂಟಾಕ್ಟ್ face book nalli ಬಹಳ ದಿನಗಳಿಂದ ಇಲ್ಲ ! ಹೇಗಿದ್ದೀರಿ ? ನಿಮ್ಮ ಹೊಸ id ಇದ್ದರೆ ಕಳಿಸಿ . ಅದಕ್ಕೆ ಆಡ್ ಮಾಡಿಕೊಳ್ಳುವೆ !ನೆಮೆಲ್ಲರ ಹಾರೈಕೆ ಯಿಂದ ನನ್ನ ಒಂದು ಬ್ಲಾಗ್ ಮಾಡಿದ್ದೇನೆ ,ಲಿಂಕ್ ಹೀಗಿದೆ www.bhaavatorana.blogspot.com
  nimage samya sikkaaga bheti needi nimma amoolya salahe , anisike nedabeku .dhnayvaadagalu

  ಪ್ರತ್ಯುತ್ತರಅಳಿಸಿ
 6. ಮಧುರಾನುಭೂತಿ.. ಬಹಳ ಚೆನ್ನಾಗಿದೆ ರವಿಯಣ್ಣ :)

  ಪ್ರತ್ಯುತ್ತರಅಳಿಸಿ
 7. ಅತ್ಯಂತ ಮನೋಹರ,ಕರ್ಣಗಳಿಗಿಂಪಾಗಿ ಸೊಂಪಾಗಿ ಲಾಲಿಯ ಪದವನ್ನು ಆಲಿಸುವ ಹಾಗೆ ಲಯಬದ್ಧವಾಗಿ ಪ್ರಸ್ತುತಪಡಿಸಿರುವ ಸುಂದರ ಕವಿತೆ.ಸರಳ,ಮಾಧುರ್ಯಭರಿತ ಕವಿತೆ.ಭಾವಗೊಂಡು ಪುಳಕಿತಗೊಳಿಸುವುದು.ತುಂಬಾ ಇಷ್ಟವಾಯಿತು ರವಿಜೀ.ಕವನ ಓದುವ ಭಾಗ್ಯ ಮಾತ್ರ ನಮ್ಮದು.

  ಪ್ರತ್ಯುತ್ತರಅಳಿಸಿ
 8. ರವಿಯಣ್ಣ, ಅಮವಾಸ್ಯೆಯ ಕತ್ತಲಲಿ ಕೂತವಗೆ ಬೆಳದಿಂಗಳು ಕಂಡಂತಾಯ್ತು ಇವತ್ತು ಈ ಕವನ ಓದಿ. ಕುಳಿರ್ಗಾಳಿಯೂ ಹಿತ ತಂಗಾಳಿಯಾದದ್ದಂತು ನಿಜ ನನಗೆ ಈ ಭಾವದೊಳಗೆ ತೂರಿ.

  ಪ್ರತ್ಯುತ್ತರಅಳಿಸಿ