ಶನಿವಾರ, ಏಪ್ರಿಲ್ 21, 2012

ಪಲವಳ್ಳಿ ಕವಿತೆ ಓದಿದ್ದೀರಾ ?


-ರವಿ ಮೂರ್ನಾಡು
ತಿಳಿ ನೀರಿಗೆ ಬೆರಳಾಡಿಸಿದಾಗ ಅಲೆ ಅಲೆಗಳ ಉಂಗುರ. ಬೆರಳಿಗೆಂಥ ಉಮ್ಮಸ್ಸು ..! ಉಬ್ಬುಬ್ಬಿ ತಬ್ಬಿಕೊಳ್ಳುವುದು ತೀರಕೆ. ಸಂವೇಧನೆಯ ಸೂಕ್ಷ್ಮಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಕವಿತೆ, ತಾಳ್ಮೆಯಿಲ್ಲದಿದ್ದರೆ ಓದಿಸುವುದೇ ಇಲ್ಲ. ಬರೆದ ಕವಿಯ ಬರವಣಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಕವಿತೆ ಅನ್ನುವ ಹೆಸರೇಳಿಕೊಂಡೇ ಉಳಿದು ಬಿಡುವ ಇಂತಹ ಕವಿತೆಗಳಲ್ಲಿ ಸತ್ವಗಳು ಬೆಳೆಯುತ್ತಲೇ ಇರುತ್ತವೆ. ಅದರ ನಿಜತ್ವದ ಸಾರವನ್ನು  ನಿಜವಾದ ಮನಸ್ಸು ಹೀರುವವರೆಗೆ. ಪಲವಳ್ಳಿಯ ಕವಿತೆ ಅಂತ ಬರೆದರೆ ಹೇಗಿರುತ್ತದೆ ? ಅಂದರೆ, ಭಾವ ಪಲ್ಲಟಗಳು .ಇದು ಮೂರ್ತ ಹೆಸರು. ಈಗ ನೋಡಿದ ಚಂದ್ರ, ಕಣ್ಣು ಮಿಟುಕಿಗೆ  ಕ್ಷಣಾರ್ಧದಲ್ಲೇ ಬೆಟ್ಟದ ಮರೆಯಲ್ಲಿ  ಇಣುಕುತ್ತಾನೆ ಇವರ ಕವಿತೆಗಳಲ್ಲಿ.  ಅಗಾಗ್ಗೆ ಕವಿತೆಗಳಲ್ಲಿ ಸಿಕ್ಕಿದ್ದನ್ನು ಹೆಕ್ಕಿ ಭಾವಕ್ಕೆ ಸಿಕ್ಕಿಸಿಕೊಳ್ಳುವಾಗ ನಿಜದ ಕವಿಯ ನಿಜ ಕವಿತೆಗಳ ಬಗ್ಗೆ ಕಟುವಾಗಿ ಹೇಳಬೇಕೆನಿಸಿತು.. ಅಲ್ಲಿ ಯಾವುದೇ ಮುಲಾಜಿಗೆ ಬೀಳುವ ಅಗತ್ಯ ಕಾಣುವುದಿಲ್ಲ.  ಯಾವುದೇ "ಸರ್ಟಿಫಿಕೇಟು" ಬೇಕಾಗಿಲ್ಲ. ಅಂದ ಹಾಗೇ ನೀವುಗಳು ಬದ್ರಿನಾಥ ಪಲವಳ್ಳಿಯವರ ಕವಿತೆಗಳನ್ನು ನಿಜವಾಗಿ ಓದಿದ್ದೀರಾ?. ಅದು ಪದಗಳಲ್ಲಿ ಸಿಕ್ಕಿಸುವ ಉಪಾಯಗಳು. ಮುಟ್ಟಿದರೆ ಅಂಟಿಕೊಳ್ಳುವುದು.. ಅಲ್ಲಿರುವುದು ಬಲಿಷ್ಠ ಪದಗಳೊಂದಿಗೆ ಮೇಳೈಸುವ ಭಾವಗಳ ತಿಕ್ಕಾಟಗಳು.
ನೃತ್ಯಗಾತಿಯ ನರ್ತನ ಆಸ್ವಾಧಿಸುವಾಗ ಹಾವ-ಭಾವ-ಭಂಗಿಯ ಮತ್ತು ತೀಕ್ಷಣತೆಗೆ ಕಣ್ಣಾಲಿಗಳು ತಿರುಗುವುದು. ಹಾಗೇ ಮನಸ್ಸು. ಮೂರ್ತತೆಯ ದೃಶ್ಯವನ್ನು ನೋಡುವಾಗಲೂ ಅಷ್ಟೇ, ಮನಸ್ಸಿನೊಳಗೆ ಆ ಚಿತ್ರ  ಜೀವಂತ ಹರಿದಾಡಬೇಕು. ಅದಿಲ್ಲದೆ, ಚಿತ್ರ ಚಿತ್ರವಾಗಿಯೇ ಇರುತ್ತವೆ. ನಾವು ನಾವಾಗಿಯೇ ಇರುತ್ತೇವೆ. ಸಂಪೂರ್ಣವಾಗಿ ಒಪ್ಪಿಸಿ, ಭಾವ ಪರವಶವಾಗುವಾಗ ಒಂದು ಗೊತ್ತಿಲ್ಲದ ಸ್ವರ "ಅಹಾ..!" ನಮ್ಮನ್ನೇ ಮರೆತಂತೆ. ಅದು ಒಪ್ಪಿಸಿಕೊಳ್ಳುವಿಕೆ. ಇಂತಹ ನೃತ್ಯ ಮತ್ತು ಚಿತ್ರಗಾರಿಕೆಯ ಕಲೆ ಸಾಹಿತ್ಯಕ್ಕೆ ಬಂದಾಗ ಬದ್ರಿನಾಥರ ಪದ ಬಳಕೆ ಸಲೀಸಾಗಿ ನಮ್ಮನ್ನು " ಮನಸ್ಸಿನ ಇಕ್ಕಳಕ್ಕೆ" ಸಿಕ್ಕಿಸಿದೆ. ಒಂದಷ್ಟು ಅರ್ಥವಾದಂತೆ , ಇನ್ನೊಂದಷ್ಟು ಅರ್ಥವಾಗದಂತೆ, ಹಲವು ಬಣ್ಣಗಳು ಒಂದಕ್ಕೊಂದು ಮಿಲನಗೊಂಡಂತೆ.
ಒಂದು ಅಂದಾಜಿಗೆ ತೆಗೆದುಕೊಂಡಾಗ , ಮೊತ್ತ ಮೊದಲು ಎದುರಾಗುವ ಪ್ರಶ್ನೆ . ಇವರ ಕವಿತೆಗಳು ನಿಜವಾಗಿ ಏಕೆ ಅರ್ಥವಾಗುತ್ತಿಲ್ಲ ? ಹಾಗಂತ ಹಲವು ಓದುಗರು ಅವರನ್ನೇ ಪ್ರಶ್ನೆ ಹಾಕಿದ್ದಾರೆ ಅಂದುಕೊಳ್ಳುತ್ತೇನೆ. " ಫೇಸ್ಬುಕ್‍" ಎಂಬ ಅಂತರ್ಜಾಲ ತಾಣದಲ್ಲಿ ಅಗಾಗ್ಗೆ ಹರಿದಾಡುತ್ತವೆ ಇವರ ಕವಿತೆಗಳು. ಕೇವಲ ಕವಿತೆಗಳು. ಅದಕ್ಕಷ್ಟೇ ಒಗ್ಗಿಸಿಕೊಂಡ ಕವಿತೆಗಳು, "ಕಬ್ಬಿಣದ ಕಡಲೇ ಕಾಯಿ" ಅಂದವರೆಷ್ಟೋ. ಒಂದಿಷ್ಟು ಪರಿಚಯಸ್ಥರು ಮೆಚ್ಚಿ , ಒಂದಷ್ಟು ಬೆನ್ನ ತಟ್ಟುವ ಪದಗಳು ಬಿಟ್ಟರೆ, ಈ ಕವಿತೆಗಳಿಗೆ ಸಿಕ್ಕಿದ್ದು ಕವಡೆ ಕಾಸಿನ ಮುಖಬೆಲೆಗಳು. ಅಷ್ಟರಲ್ಲೇ ತೃಪ್ತಿ ಹೊಂದುವ ಈ ಕವಿ, ಇನ್ನೊಂದು ಭಾವ ಸಂಕಲನಕ್ಕೆ ಲಯ ಹುಡುಕುತ್ತಾರೆ. ನಿಜ ಕವಿತೆಗೆ ಇಷ್ಟು ಸಾಕು ಅಂದುಕೊಳ್ಳುತ್ತೇನೆ.  ನಿಜವಾದ ಆಳಕ್ಕೆ ಹೋದಾಗ ಗೊತ್ತಾಗಿದ್ದು, ಅಲ್ಲಿರುವುದು ಓಭಿರಾಯನ ಹೊಕ್ಕಳ ಬಳ್ಳಿಯಲಿ ಸಿಗಿದಾಡುವ ಮನುಷ್ಯಾವಸ್ಥೆಯ ಪ್ರಸಕ್ತ  ಚಿತ್ರಗಳು. ಈ ಫ್ಯಾಷನ್ ಶೋ ಬದುಕಿನಲ್ಲಿ ಕಲಬೆರಕೆ ಬಣ್ಣ ಹಚ್ಚಿದ ಸಮಾಜದ ಬದುಕುಗಳು ನಾಲ್ಕಾರು ದೌರ್ಬಲ್ಯಕ್ಕೆ ಹಲ್ಲುಗಿಂಜಿ ಹರಾಜಾಗುತ್ತಿವೆ. ಈ ಕವಿತೆ " ಸಂಧ್ಯಾ ರಾಗ " ಓದಿ ನೋಡಿ.
ಹೊರಟು ನಿಂತಿರೇ ದೊರೆ..
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ !
-  ಕವಿತೆ ಏಕೆ ಇಷ್ಟೊಂದು ಕೈ ಮುಗಿಯುತ್ತಿದೆ  ಅಂತ ಪ್ರಶ್ನೆ ಬಂತು. ವಿದಾಯದ ಆ ಒಂದು ಕ್ಷಣ ಒಂದೇ ಮಾತಿನಲ್ಲಿ  ಮತ್ತೆ ಮತ್ತೆ  ತಿರುಗಿಸುವಷ್ಟು ಭಾವಗಳು ಸುರುಳಿಗಟ್ಟಿವೆ ಇಲ್ಲಿ. ಮತ್ತೆ ಬರಲಾಗದ ಜಗತ್ತನ್ನು ಸೃಷ್ಟಿಸಿದ ಪರಿಗೆ ಅಚ್ಚರಿಗೊಂಡಿದ್ದೇನೆ. ಮಾತುಗಳಲ್ಲಿ ಹೇಳಲಾಗದೆ ಕೊರಗಿದವರ ಧ್ವನಿ ಇಲ್ಲಿದೆ. ಅದು ಸ್ಪಷ್ಟವಾಗಿ ವಿವರಿಸುತ್ತಿದೆ.  ತಿರುಗಿ ಬಾರದವರ ಬಗ್ಗೆ ಹೇಳಲಾಗದ ಮಾತುಗಳಿಗೆ ಕಣ್ಣೀರು ಧ್ವನಿಯಾಗಬಹುದು. ಅಲ್ಲಿ ಮಾತುಗಳಿಗೆ ಸ್ವರ ಸೇರುವುದೇ ಇಲ್ಲ. ಅಂತರಾಳದ ಮೌನದ ಹರಳುಗಳನ್ನು ಪದಗಳಲ್ಲಿ ಸಮರ್ಥವಾಗಿ ಹರವಿ ಬಿಡಲಾಗಿದೆ. ಇದೇ ಕವಿತೆಯಲ್ಲಿ "ಸಾವಿರ ಬೇಸಿಗೆಯಲಿ ತಂಪಾಗಿ ಇದ್ದೇನು ದೊರೆಯೇ"  ಅನ್ನುವಾಗ ಮಂಜಿಗಿಂತಲೂ ತಂಪಾಗಿದೆ ಈ ನೆನಪಿನ ಮಾತು ಅನ್ನಿಸಿತು. ವಿದಾಯದ ಆ ಕ್ಷಣಕೆ ಒತ್ತರಿಸಿ ಬರುವ ಮೌನಗಳು ಹೆಪ್ಪುಗಟ್ಟುತ್ತಿವೆ.
ಒಂದೇ ಗುಕ್ಕಿನಲ್ಲಿ ಸೆರೆ ಹಿಡಿಯುವ ಪದಾರ್ಥಗಳು ಇವರ ಕವಿತೆಗಳಲ್ಲಿ ದೊರೆಯುವುದೇ ಇಲ್ಲ. ಪ್ರತಿಮೆಗಳಲ್ಲಿ ಸಿಂಗರಿಸಿದ ಪದಗಳು ಗಮನ ಸೆಳೆಯಬಹುದು. ಆದರೆ, ಭಾವಕ್ಕೆ ತಕ್ಕಂತೆ ಮತ್ತೆ ಮತ್ತೆ ಕೆದಕಿದಾಗ  ನಿಧಾನವಾಗಿ ಅಲ್ಲಿರುವ ಗಂಟುಗಳು ಬಿಚ್ಚಿಕೊಳ್ಳುವುದನ್ನು ಕಾಣಬಹುದು. ಯಾವತ್ತಿಗೂ ತೂಕಬದ್ಧ ಕವಿತೆಗಳ ಅರ್ಥವಾಗುವಿಕೆ ವಿಧಾನ ಹೀಗೆ. ಅಂತಹ ಅನುಭವಗಳು ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುತ್ತವೆ. ಬ್ಲಾಗಂಗಳ http://badari-poems.blogspot.com ಗೆ  ಸಮಯ ಸಿಕ್ಕಿದಾಗ ಭೇಟಿ ನೀಡುವುದು ಅಂದರೆ, ಕ್ಲಿಷ್ಟ ಪದಗಳ ಲಯಬದ್ಧ ಭಾವ ಸಮಾಧಿ ಅಂತ ಅರ್ಥೈಸಿಕೊಂಡಿದ್ದೆ. 
ಗುಡಿಯೇ ಅಂಗಡಿಯಾದ ಮೇಲೆ ಎಲ್ಲಿದೆ ಬಕುತಿ
ನೋಡಿ ನೋಡಿಯೇ ಅವನೂ ಕಲ್ಲಾಗಿ ಕುಳಿತ !
ಪ್ರಶ್ನೆ ಪತ್ರಿಕೆಯಲೇಕೆ ಹುಡುಕುವಿರಿ
ಉತ್ತರವನ್ನೇ.....!
-"ದೇವರು ದೇವರಂಥವನೇ" ಅನ್ನುವ ಕವಿತೆಯಲ್ಲಿ ದೇವರ ದೌರ್ಬಲ್ಯದ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಹೇಗೆಂದರೆ, ಯಾರಿಗೂ ಮಾತನಾಡಿಸಲಾಗದ ಕಲ್ಲು ದೇವರನ್ನು ಮಾತಿಗಿಳಿಸಿದ ಬಗೆ ಸೂಜಿಗವೆನಿಸುವುದು. ಮನುಷ್ಯನ ಅತ್ಯಂತ ಸೂಕ್ಷ್ಮ ದೌರ್ಬಲ್ಯಗಳಲ್ಲಿ ಭಕ್ತಿ ಕೂಡ ಒಂದು ಅನ್ನುವ ಸಂದೇಶ ಇಲ್ಲಿ ರವಾನೆಯಾಗಿದೆ. ಇದೇ ದೌರ್ಬಲ್ಯಗಳನ್ನು ಉಪಯೋಗಿಸಿ ವ್ಯಾಪಾರಕ್ಕಿಳಿದ ಹಲವರ ಬದುಕನ್ನು ಸಮಾಜಕ್ಕೆ ಅನಾವರಣಗೊಳಿಸಿ ಪ್ರಶ್ನಿಸಲಾಗಿದೆ. ಪರಮ ಪೂಜ್ಯತೆ ಮಂದಿರಗಳು , ಗುಡಿ ಗುಣ್ಣಾಣಗಳು ಪವಿತ್ರತೆಯನ್ನು ಸಾರಿದ ಸ್ಥಳದಲ್ಲೇ ಮೂಗು ಮುಚ್ಚುವ ಘಟನಾವಳಿಗಳ ದಾಖಲೆ ಬಿಚ್ಚುತ್ತಿವೆ. ಈ ಕವಿತೆಯಲ್ಲಿ ಸ್ಪಷ್ಟವಾಗಿ ಸಾರುವ ಸಂದೇಶದಂತೆ , ಇವೆಲ್ಲವನ್ನೂ ಕಂಡ ನಿಜವಾದ ದೇವರು ನಿಜವಾಗಿ ಕಲ್ಲಾಗಿ ಕುಳಿತಿದ್ದಾನೆ ಅನ್ನುತ್ತಾರೆ ಪಲವಳ್ಳಿಯವರು. ದೇವರು ಅನ್ನುವ ಮನುಷ್ಯ ಸೃಷ್ಟಿಯ " ಭಾವ ತೀವ್ರತೆಯೇ" ಒಂದು  ಪ್ರಶ್ನೆ. ಇಂತಹ ಒಂದು ಪ್ರಶ್ನೆಗೆ ಉತ್ತರ ಹುಡುಕುವುದು ಕತ್ತಲಲ್ಲಿ ಕತ್ತಲೆಯನ್ನು ಸಂಯೋಜನೆಗೊಳಿಸಿದಂತೆ ಅನ್ನುವಷ್ಟು ಸತ್ಯ.
" ಜೀ ಹುಜೂರ‍್" ಅಂತ ಒಂದು ಕವಿತೆ ಬರೆದಿದ್ದಾರೆ. ಓದುವಾಗ ನೆನಪಿಗೆ ಬಂದು ಮತ್ತೆ ಮತ್ತೆ ಕೆದಕುವ ಪದ " ಬಕೇಟು ಸಂಸ್ಕೃತಿ".  ನೀವು ಚೆನ್ನಾಗಿ ಬರೆದಿದ್ದೀರಿ ಅಂದರೆ " ಹೊಗಳುತ್ತಾರೆ" ಅಂತ ಸರ್ಟಿಪಿಕೇಟು ಕೊಡುವರೋ ಅನ್ನುವ  ಅನುಮಾನ. ಬಕೇಟು ಸಂಸ್ಕೃತಿ ಅಂದರೆ ಗುಲಾಮ. ಮನುಷ್ಯ ಮನುಷ್ಯನಿಗೆ ಮಾನವೀಯತೆಯನ್ನು ತೊರೆದು ಸ್ವಾರ್ಥಕೆ ಬಲಿಯಾಗುವ ಸಂದರ್ಭ ಎಂಥ ವಿಪರ್ಯಾಸದ ವರ್ತುಲ..!? ದಿ. ಪದ್ಯಾಣ ಗೋಪಾಲಕೃಷ್ಣರು ಇಂತಹ ನಡವಳಿಕೆ ಮನುಷ್ಯರಿಗೆ " ಹಿತ್ತಾಳೆ ದೂರು ಗಂಟೆ" ಅಂತ ನೇರವಾಗಿ ಹೇಳಿದ್ದಾರೆ. " ಜೀ ಹುಜೂರು" ಕವಿತೆ ಬಂದದ್ದು ಇದರ ಇನ್ನೊಂದು ಮುಖ. "ಬಾಸ್‍ ಈಸ್‍ ಅಲ್ವೇಸ್‍ ರೈಟ್‍" ಅನ್ನುವಾಗ ಪರೋಕ್ಷವಾಗಿ ತಿವಿದ ಈ ಜೀ ಹುಜೂರ‍್ ಕವಿತೆ ಹೊಗಳು ಭಟ್ಟರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ. ಹೊಗಳಿಕೆ ಅಂದರೆ ಮೇಲೇರಿಸುವುದು. ಇದನ್ನು ಈ ಜಗತ್ತು ಮೊದಲು ಕಲಿತದ್ದು  ದೇವರನ್ನು ಮತ್ತು ಹೆಣ್ಣನ್ನು ಓಲೈಸಿ. ಯಾವುದೇ ದೇವರ  ಶ್ಲೋಕ, ಭಜನೆ, ಭಕ್ತಿ ಪರವಶ ಸಂಗೀತಗಳು ದೇವರನ್ನು ಹೊಗಳಿಯೇ ಇದೆ. ಏಕೆ ಈ ರೀತಿ ಇದೆ? ಅಂದರೆ, ಹೊಗಳದಿದ್ದರೆ ನಮಗೆ ಸಿಗಬಾರದ್ದು ಸಿಗದು ಅನ್ನುವ ಕಾರಣವನ್ನು ಅಂದಾಜಿಸುತ್ತೇವೆ. ದೇವರು ಅನ್ನುವ ವಿಸ್ಮಯದಲ್ಲಿ ಏನೆಲ್ಲಾ ನ್ಯಾಯಗಳು ತೆರೆದುಕೊಂಡವು,ಎಷ್ಟೆಲ್ಲಾ ಅನ್ಯಾಯಗಳು ಮತ್ತೆ ಮತ್ತೆ ಬೀದಿಗೆ ಬಂದವು. ದೇವರು ಅನ್ನುವ ಮಾತಾಡದ ಅಗೋಚರ ಏನೂ ಅಲ್ಲದ ಶೂನ್ಯದಲ್ಲಿ ಕುಳಿತಿದೆ. ಮನುಷ್ಯ ಮಾತ್ರ ಅದನ್ನು ತನ್ನ ಸ್ವಾರ್ಥಕೆ, ತನಗೆ ಬೇಕಾದಂತೆ, ತನ್ನೊಳಗೆ ವರ್ತುಲ ಸೃಷ್ಟಿಸಿ ಮಂತ್ರ ಪ್ರೋಕ್ಷಣೆ ಮಾಡಿದ. ಅದು ಇಂದಿನ ಜಗತ್ತಿನ ಅನಾವರಣ. ಈ ಹೊಟ್ಟೆ, ಈ ಮೋಹ , ತನಗೋಷ್ಕರ ಹೊರಗೆ ಮಿರ ಮಿರ ಮಿಂಚುವ ಬಟ್ಟೆ ಧರಿಸಿ, ಒಳಗೊಳಗೇ ಬೆತ್ತಲೆ ನಡೆಯುತ್ತಿದ್ದಾನೆ. ಮನುಷ್ಯನಿಗೆ ಆಸೆ ಹೆಚ್ಚು. ಹಾಗಾಗಿ ಬುದ್ಧನಂತಹ ಹತ್ತು ಜನರು ಬಂದರೂ ಈ ದುಃಖ್ಖಕ್ಕೆ ಮರುಗಿ ಇಲ್ಲವಾಗುತ್ತಾರೆ. ಬದ್ರಿನಾಥರ ಕವಿತೆ ಇಷ್ಟರವರೆಗೆ ವಿಸ್ತಾರವಾಗುವುದು.
ಇದರ ಪರ್ಯಾಯವಾಗಿ ಉದ್ಭವಿಸಿದೆ  ಈ" ಬಕೇಟು ಸಂಸ್ಕೃತಿ". ಮನುಷ್ಯನನ್ನು ದೇವರನ್ನಾಗಿಸಿದ ಪರಿ.  ಕಚೇರಿಯ ಆಡಳಿತ ವ್ಯವಸ್ಥೆಗಳಲ್ಲಿ, ರಾಜಕೀಯದಲ್ಲಿ  ಇದನ್ನು ಹೆಚ್ಚಾಗಿ ಕಾಣುತ್ತೇವೆ. ಈ ಅಂತರ್ಜಾಲ ಯುಗದಲ್ಲಿ  ಈಗ ಎಲ್ಲಾ ಕ್ಷೇತ್ರದಲ್ಲೂ  ಇದಕ್ಕೆಂದೇ ಕೆಲವು ಮಂದಿಯನ್ನು ಸೃಷ್ಟಿಸಲಾಗುತ್ತಿದೆ. ಅದು "ಫೇಸ್ಬುಕ್‍" ಎಂಬ ತನ್ನಿಚ್ಚೆಯ ತಾಣವನ್ನೂ ಬಿಟ್ಟಿಲ್ಲ. ಸತ್ಯವನ್ನು ಮರೆಮಾಚುವ  ಕೈಲಾಗದ ಮನುಷ್ಯ ಇದನ್ನು ಮಾಡಿಯೇ ಸಿಗಬೇಕಾದದ್ದನ್ನು ದಕ್ಕಿಸುತ್ತಾನೆ. ಅದರಲ್ಲೂ " ಹೆಣ್ಣು" ಈ ಹೊಗಳಿಕೆಗೆ ಮೊದಲು ಬಾಧ್ಯಸ್ಥಳಾಗುವುದು. ಕರಗುವುದು  ಹೆಣ್ಣಿನ ಮೊದಲ ದೌರ್ಬಲ್ಯ. ಬದ್ರಿನಾಥರ ಕವಿತೆ " ಜೀ ಹುಜೂರ್" ಇದರ ಸ್ಪಷ್ಟ ಚಿತ್ರಣವನ್ನು ನೀಡುವುದು.  
ಗಂಡು ಮತ್ತು ಹೆಣ್ಣು ಎಂಬ ಈ ಎರಡು ವಿಭಿನ್ನ ಮೋಹಗಳ ಒಂದಕ್ಕೊಂದು ಅಂಟಿಕೊಂಡೇ ಸಾಗುವ ಜಗತ್ತಿನಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಆಸಕ್ತಿಗಳು, ಕುತೂಹಲಗಳು, ಆಕರ್ಷಣೆಗಳು. ಇವಿಷ್ಟೇ ಜಗತ್ತನ್ನು ಮುನ್ನೆಡೆಸುತ್ತಿದೆ ನೋಡಿ. ಅದರಲ್ಲೇ ಜಗತ್ತು ತುಂಬಿ ಹೋಗುವುದು. ಇಬ್ಬರಿಗೂ ಇಬ್ಬರ ಬಗೆಗಿನ ಚಿಂತನೆಗಳು, ಆಲೋಚನೆಗಳು ಕೆಲವು ಕೌತುಕಗಳನ್ನು ಸೃಷ್ಟಿಸುತ್ತಿವೆ. ಗಂಡು ಕಾಣುವ ಕನಸುಗಳಷ್ಟೇ ವಿಶಾಲವಾಗಿ ಹೆಣ್ಣು ಕೂಡ ಹೊಂದಿರುತ್ತಾಳೆ. ಅವರಿಬ್ಬರಿಗೂ ಇರುವ ಹೃದಯ ಮಿಡಿತಗಳು, ಮನೋವೇಗಗಳು, ಅತಿರೇಕಗಳು ಎಲ್ಲವೂ ಒಂದೇ. ಇಂತಹ ಹಲವು ವಿಶೇಷಣಗಳು ಪಲವಳ್ಳಿಯವರ ಕವಿತೆಗಳಲ್ಲಿ ಢಾಳಾಗಿ ಹುಟ್ಟಿಕೊಳ್ಳುತ್ತವೆ. ತಮಗೇ ತಾವೇ ತರ್ಕಕ್ಕೆ ಸಿಕ್ಕಿಸಿ, ಒಂದೇ ಸಾಲಿನಲ್ಲಿ  ಭಾವಗಳು ಒಂದರಿಂದ ಇನ್ನೊಂದಕ್ಕೆ ಪದಗಳಲ್ಲಿ ಘರ್ಶಿಸುತ್ತವೆ. ಕೆಲವೊಮ್ಮೆ ಗರ್ಜಿಸುತ್ತಿವೆ. ಹೊಗಳಿಕೆಗೆ ಉಬ್ಬಿಸುವುದಿಲ್ಲ, ತೆಗೆಳಿದರೆ ಮುಖ ಗಂಟಿಕ್ಕುವುದೂ ಇಲ್ಲ. ಒಟ್ಟಾರೆ ಪದಗಳಲ್ಲಿ ಮೈ ತಟ್ಟಿಸುವುದು ಇವರ ಕವಿತೆಗಳಿಗಂಟಿದ ಸೂಕ್ಷ್ಮ ಗುಣ. ದಿ. ಪಿ. ಲಂಕೇಶರ ಮಾತುಗಳು ನೆನಪಿಗೆ ಬರುತ್ತವೆ. ಬೆಂಗಳೂರಿನ " ಸಂಚಯ" ಸಾಹಿತ್ಯ ಮಾಸಿಕದ ಡಿ. ಪ್ರಹ್ಲಾದವರು ಒಂದು ಬಾರಿ ಮಾತಿಗಿಳಿಸಿದಾಗ ಹೇಳಿದ್ದಾರೆ " ಹೊಗಳಿಕೆ ಅಂದರೆ ನನಗೆ ಅಲರ್ಜಿ. ಯಾರಾದರೂ ಹೊಗಳುವಾಗ , ಅಲ್ಲಿ ಹಲವು ಅನುಮಾನಗಳು ಕಂಡು ಬರುತ್ತವೆ. ಅಂದರೆ, ಹೊಗಳುವ ವ್ಯಕ್ತಿ, ನಮ್ಮಲ್ಲಿರುವ ನಿಜವಾದ ನಿಜತ್ವವನ್ನು ಕುಗ್ಗಿಸುತ್ತಾನೆ" ಅನ್ನೋದು ಲಂಕೇಶರ ಮಾತುಗಳು. ನಿಜವನ್ನೇ ಹೇಳಿ, ಅದು ಒಳ್ಳೆಯದಿರಬಹುದು, ಕಲಿಯುವಂತಿರಬಹುದು ಅಂದಿದ್ದಾರೆ. ಹೊಗಳಿಕೆ ಅಂದರೆ ಓಲೈಸುವ ಕುಗ್ಗಿಸುವ ಇನ್ನೊಂದು ಮಾರ್ಗ. ಇಂದಿನ ರಾಜಾಧಿರಾಜ ರಾಜಕಾರಣಿಗೆಳಿಗೆ ಇವಿಲ್ಲದಿದ್ದರೆ  ಓಟೇ ಸಿಗುವುದಿಲ್ಲ. ಅದು ಮತದಾರರ ದೌರ್ಬಲ್ಯ.  !
ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸ್ವಂತಿಕೆ ಅನ್ನೋದು ಬೇಕು. ಅದಿಲ್ಲದೆ ಅನುಸರಿಸುವ ಮಾರ್ಗದಿಂದ ಹೊಸತನವನ್ನು ಹುಡುಕುವುದು ಕಷ್ಟ ಸಾಧ್ಯ. ಈ ಜನರ ಸಂತೆಯಲ್ಲಿ ಒಬ್ಬ ವ್ಯಕ್ತಿ ಹೇಗೆ ವಿಭಿನ್ನವಾಗಿ ಎದ್ದು ಕಾಣುತ್ತಾನೆ ಅಂತ ಪ್ರಶ್ನೆ. "ಗಿಂಡಿ ಮಾಣಿ" ಅನ್ನುವ ಕವಿತೆಯಲ್ಲಿ ಬದ್ರಿನಾಥರು ನೇರವಾಗಿ ಹೇಳುವ ಮಾತಿದು. ಅನುಸರಿಸುವುದೇ ಆದರೆ, ಬದುಕುವ ರೀತಿಯಲ್ಲಿ ಸೃಜನಶೀಲತೆ ಕಂಡುಕೊಳ್ಳುವುದು ಹೇಗೆ ಮತ್ತು ಯಾಕೆ?
ಪ್ರತಿಫಲನವೇ ಬದುಕೇ...ಸ್ವಂತಿಕೆ ಏಕಿಲ್ಲ ಜನಕೆ?
ಇಲ್ಲಿ ಮೊಗೆದ ನೀರು ...ಮತ್ತೆಲ್ಲೋ ಒಗೆವ ಕಲೆ
ಕಲಿತ ಬಿತ್ತಾಸುರರ ಲೀಲೆ,
-ತೋಚಿದಂತೆ ಬದುಕುವುದಕ್ಕೂ, ನಮಗೆ ನಮ್ಮಲ್ಲೇ ನಿರ್ಮಾಣಗೊಂಡ  ವರ್ತುಲಕ್ಕೆ ಒಗ್ಗಿಸಿಕೊಂಡು ಬದುಕುವುದಕ್ಕೂ ವ್ಯತ್ಯಾಸವಿದೆ. ಎಲ್ಲಾ ಬೇಕುಗಳ ನಡುವೆ ಹೊಯ್ದಾಡಿ ಎಲ್ಲಿಂದ ಎಲ್ಲಿಗೋ  ಕೊಂಡೊಯ್ಯುವುದು ಬದುಕು. ತೃಪ್ತಿ ಅನ್ನುವ ಗೋಡೆಗಳ ನಡುವೆ ಮೈ ಪರಚಿಕೊಳ್ಳುತ್ತೇವೆ. ಇಲ್ಲವೆಂದಾಗ ಇನ್ನೊಂದು ತೃಪಿಗಳಿಗೆ ಆಶಾಭಾವನೆಗಳನ್ನು ಮೈಗೂಡಿಸಿಕೊಂಡಿರುವ ಮನುಷ್ಯರು ನಾಳೆಗಳಿಗೆ ದಿನಗಳನ್ನು  ಕಾಯುತ್ತಾರೆ. ಇಲ್ಲಿ ಸ್ವಂತಿಕೆ ಬೇಕು. ಅವರಿವರು ಅನುಸರಿಸಿದಂತೆ ಬದುಕು ಪಾಠ ಕಲಿಸಿದ ನಂತರ ತನ್ನದೇ ಬದುಕು ಪರಿಚಯವನ್ನು  ಕುಟುಂಬ, ಸಮಾಜಕ್ಕೆ ಕೊಡುವುದು ಧರ್ಮ ಅಂತ ಈ ಕವಿತೆಯ ಒಟ್ಟಾಂಶ ಅಡಕವಾಗುವುದು.
ಬಿಗುಗೊಂಡ ಮನಸ್ಸನ್ನು ಒಂದೇ ಪದಗಳ ಓದಿಗೆ ಸಡಿಲಗೊಳಿಸುವ ಪದ ಬಳಕೆ ಕಂಡು ಬರುವುದು. ಯಾವುದೇ ಬರಹಗಾರನ ಆಲೋಚನೆಗಳನ್ನು ಸ್ವೀಕರಿಸುವುದು ಅಂದರೆ ಅವನ ಹೆಜ್ಜೆಗಳ ಪರಿಚಯ ಮಾಡಿಕೊಳ್ಳುವುದು ಎಂದರ್ಥ. ಓದುವ ಮನಸ್ಸು ಹೊಸತನವನ್ನು ಬಯಸುವುದಾದರೆ ಬರಹಗಳಲ್ಲಿ  ಅಂತಹ ಸಂದರ್ಭಗಳನ್ನು ಪಡೆದುಕೊಳ್ಳಬಹುದು. ಎಳೆ ಎಳೆಯಾಗಿ ಅವನ ಪದಗಳ ಎದೆಗಿಳಿದು ಓಡಾಡುವುದು. "ಕಿಟಕಿಯಾಚೆ ಮಳೆ" ಕವಿತೆಯಲ್ಲಿ ಈ  ಮಳೆಗೆ ತಣ್ಣಗಾದ ಮನಸ್ಸಿನ  ಹೊಸ ಅನಾವರಣ ಗೋಚರವಾಗುತ್ತಿದೆ.
ಇರುಳೆಲ್ಲ ಸುರಿದ ಮಳೆಗೆ...ಇವಳ ನರ ನಾಡಿಗಳೆಲ್ಲ ಮುದ್ದೆ ಮುದ್ದೆ...!
ಈ ಮಳೆಯ ಇಷ್ಟೊಂದು ತಂಪುಗಳು ನರ ನರಗಳನ್ನು ಹೆಪ್ಪುಗಟ್ಟಿಸಿದಾಗ, ಬೆಳಗ್ಗಿನ ಸೂರ್ಯನ ಬಿಸಿಗೆ ಕಾದು ಕುಳಿತುಕೊಳ್ಳುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಬದುಕು ಇಷ್ಟರಲ್ಲೇ ತೆರೆದುಕೊಳ್ಳುವುದು ಮತ್ತು ಅರ್ಥವಾಗುತ್ತಿದೆ. ಗಂಡು ಮತ್ತು ಹೆಣ್ಣಿನಿಂದಲೇ ಸಾಗುತ್ತಿರುವ ಜಗತ್ತಿನ ಜೀವ ಸಂಚಲನಕೆ ಇಲ್ಲಿನ ಸೂಕ್ಷ್ಮ ಹೆಜ್ಜೆಗಳು ಬೆಳಕು. ಯಾವುದೇ ಒತ್ತಡಗಳು  ಅಡ್ಡ ಬರುತ್ತಿಲ್ಲ. ತನ್ನನ್ನೇ ತಾನು ಒಪ್ಪಿಸಿಕೊಳ್ಳುವ ಬಗೆ ಹೀಗೆ "ತಾಲೀಮು" ಕವಿತೆಯಲಿ "ಎತ್ತಿಕೋ ಉಳಿ,ಕೆತ್ತು ಈ ಕಗ್ಗಲ್ಲು ,ದೇವರಾಗದಿದ್ದರೂ  ದ್ವಾರಪಾಲಕನಾಗಲಿ..." ಅನ್ನುವಾಗ ಕವಿಯ ಮನಸ್ಸಿನ ವಿಶಾಲತೆಯನ್ನು ತೆರೆಯುತ್ತಿದೆ. ಗುರುವಿನ ಬಗೆಗಿನ  ಹುಡುಕಾಟ , ಅದೇ ರೀತಿ ಪರಿಪೂರ್ಣತೆಯಲ್ಲಿಯೂ ಸ್ವಾಮಿನಿಷ್ಠೆಯನ್ನು ಪ್ರತಿಬಿಂಭಿಸುವ ಈ ಕವಿತೆಯ ಸಾಲಿನಲ್ಲಿ  ಯಾವುದಕ್ಕೂ "ನೀ ಕೊಡುವ ರಂಗ ತಾಲೀಮಿನಲಿ ಛಾಟೀ ಏಟಾದರೂ ಸೈ! ತಾಳಿಕೊಂಡೇನು..." ಅನ್ನುವ ಪರಾಕಾಷ್ಠತೆ ಮನಸ್ಸಿನಲ್ಲಿ ಒಂದಷ್ಟು ಗೀಚುವುದು. ಸಲೀಸಾಗಿ ಸಿಗುವ ಯಾವುದೇ ಕಾರ್ಯದಲ್ಲಿ ಆನಂದ ಸಿಗುವುದು ಅಲ್ಪ. ದೀರ್ಘ ಕಾಲದ ನಿರೀಕ್ಷೆಯಲ್ಲಿ  ಅಥವಾ ಅದರ  ಹುಡುಕಾಟದಲ್ಲಿ  ಹೊರಟವನಿಗೆ ಪ್ರತಿಫಲ ಸಿಗುವುದೆಂದರೆ ಅದರ ಆನಂದ ಬದುಕಿನಲ್ಲಿ ಮರೆಯಾಲಾಗದ ಕ್ಷಣಗಳು. ಪಲವಳ್ಳಿಯವರ ಹಲವು ಕವಿತೆಗಳು ಹೀಗೆ ಹುಡುಕಾಟದಲ್ಲಿ ಮರೆತು ಹೋದ ದಿನಗಳಿಗೆ ಸಿಕ್ಕಿದ ಅನಂತ ತಾಳ್ಮೆಗಳನ್ನು ಪರಿಚಯಿಸುತ್ತವೆ. ಹೇಗೆಂದರೆ "ಬದುಕಿನ ಓಟ" ಕವಿತೆಯಲ್ಲಿ  ಹುಚ್ಚು ಕುದುರೆಯ ಓಟವೀ ಬದುಕು..ಲಗಾಮು ಕಳೆದಿದೆ ಪಯಣ ಭೀಭಿತ್ಸ.. ಅಂತ ಹೇಳುತ್ತಾ ಓಡಿದ  ಭಾವಗಳುಅಹಂಕಾರದ ಪೊರೆ ಕಳಚಿದ ದಾಖಲೆ ಲಭ್ಯವಾಗುವುದು.  ಮತ್ತಷ್ಟು ಅನುಭವಕ್ಕೆ ತಿಕ್ಕಿಸಿಕೊಂಡ ಕವಿ ಅದ್ಭುತವಾದ ಸಮಾಧಿ ಮಾತಿಗೆ ಶರಣಾಗುತ್ತಾರೆ.
ಹೂವ ಹಾಸಿಗೆ ಎಂದೇನು ಹಿಗ್ಗದಿರು
ಕೆಳಗೆ ನಕ್ಕೀತು ವಿಷದ ಮುಳ್ಳು!
-ಇದು ಮೂರ್ತತೆ ಬದುಕಿನ  ಚಿಂತನೆಗಳು. ಹೆಜ್ಜೆ ಹೆಜ್ಜೆಗೆ  ಎಚ್ಚರ ತಪ್ಪದ ನಡಿಗೆ ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುವುದು. ಕೆಲವೊಮ್ಮೆ ಹರಿದಾಡುವಾಗ ನೇರವಾಗಿ, ಮಗದೊಮ್ಮೆ ಅಲ್ಲಿ ಸರಿದು, ಇಲ್ಲಿಗೆ ಬರುವಂತೆ ನಡಿಗೆಯಲಿ ತೊಡರುವಂತೆ ಕಾಣಿಸುವುದು.ಏಕೆಂದರೆ , ಬಿಳಿ ಹಾಳೆಯಲ್ಲಿ ದೃಷ್ಠಿಗೆಂದೇ ಅಮ್ಮ ಮಗುವಿನ ಗಲ್ಲಕೆ ಕಪ್ಪಿಟ್ಟಂತೆ. ಆಟವಾಡುತ್ತಲೇ ಕೆಲ ಸಮಯದಲ್ಲಿ ಮರೆಯಾಗುವುದು. ಅದು ಬೇಕು. ಕೆಲವಷ್ಟು ಪೌಡರು ಪರಿಮಳ, ಕಾಲ ಗೆಜ್ಜೆಯ ಸಪ್ಪಳ, ಸ್ವರಗಳ ನಿನಾದ, ಬಿಗುವಾದಾಗ  ಅಡುಗೆ ಕೋಣೆಯಲಿ ಪಾತ್ರೆಗಳನ್ನು ಎತ್ತಿ ಎತ್ತಿ ಕುಕ್ಕುವ ಕೈಬಳೆ ನಾದ, ಮುಖ ಸಿಂಡರಿಸಿ ಸಿಂಬಳ ಸುರಿಸುವ ಸಿಡುಕುಗಳು  ಓದುತ್ತಿದ್ದಂತೆ ಓದುಗನಿಗೆ ಇನ್ನೊಂದು ಭಾವಾವೇಷವನ್ನು ತೆರೆದುಕೊಳ್ಳುವುದು. ಇದು ಪ್ರತೀ ಬರಹಗಾರನ ಬರಹದಲ್ಲಿ ಬೇಕು. ಏಕೆಂದರೆ ಬರಹಗಾರನಂತೆ ಓದುಗನೂ ನಿಜ ಬದುಕಿನ ಮನುಷ್ಯನಾಗಬೇಕು.

10 ಕಾಮೆಂಟ್‌ಗಳು:

 1. ಒಂದು ಉತ್ತಮ ಲೇಖನ ರವಿ ಸರ್.......ವಜ್ರದ ಪರಿಚಯ ಕೇವಲ ಆಭರಣಕಾರನಿಗೆ .....ಬದರಿನಾಥ ಪಲವಳ್ಳಿಯವರ ಕವನದ ರುಚಿ ಸವಿದು ಸುಂದರ ರೀತಿಯಿಂದ ನಮಗೂ ಈ ಲೇಖನ ಮೂಲಕ ತಿಳಿಸಿದ್ದಿರಿ......ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 2. ನಾನು full tight, out of order. ಉಬ್ಬುಬ್ಬಿ ಹೋಗಿದ್ದೇನೆ.

  ಪುಟ್ಟ ಮೀನಿನಂತಹ ಈ ಅಙ್ಞಾತ ಕವಿಗೆ ಇದು ಭಾರೀ ಬಹುಮಾನ. ಅಸಲು ನನ್ನ ನೀರೇ ಬಾವಿಯಗಲ, ಚಕ್ಕುಬಂದಿಯೂ ಕೂಗು ದೂರ! ತಿಳಿದದ್ದೇ ಅರೆ ಪಾವು. ನನ್ನ ಕವಿತೆಗಳೋ(!) ಸ್ವಗತಗಳು. ಖಾಸಗಿ ಅಳಲು.

  ನನ್ನ ಕವಿತೆಗಳನ್ನು ಇಲ್ಲಿ ವಿಶ್ಲೇಷಿಸಿದ ರೀತಿ ತಕ್ಕುದಾಗಿದೆ. ಒಳ ಹೂರಣವು ನಿಮಗೆ ಸರಿಯಾಗಿಯೇ ಅರ್ಥವಾಗಿದೆ ಸಾರ್.

  ಪದ್ಯ ಗರ್ಭಿಸುವಾಗ ಗೊಜಲು ಅಥವ ಕಠಿಣಾರ್ಥ ಅಂತ ಮೊದಲ ಓದಿಗೆ ಅನಿಸಿದರೂ, ಈ ಪದಾರ್ಥವಿಲ್ಲದೆ ಈ ಪಾಕಗಟ್ಟಲಾರದು ಎಂದೆಣಿಸಿ ಬರೆಯುತ್ತೇನೆ. ಸ್ವಲ್ಪ ಸ್ಥೂಲ ಕಾಯದ ಈ ಕವಿಯ ಕಾವ್ಯ ಕಬ್ಬಿಣದ ಕಡಲೆಯಾಗದಂತೆ ಆಶೀರ್ವದಿಸಿ.

  ಧನ್ಯೋಸ್ಮಿ, ಸಮಕಾಲೀನ ಕಾವ್ಯೋತ್ತಮ ಶ್ರೀಯುತ ರವಿ ಮೂರ್ನಾಡು ಅವರು ತಮ್ಮ ಅತ್ಯುತ್ತಮ ಬ್ಲಾಗಿನಲ್ಲಿ ನನ್ನ ಪುಟ್ಟ ಈಜನ್ನು ಸರಿಯಾಗಿ ಗ್ರಹಿಸಿ, ತಿದ್ದಿ ಬರೆದದ್ದು ನನಗೆ ಮಾರ್ಗ ಸೂಚಿ ಮತ್ತು ದಿಕ್ಸೂಚಿ. ಅಭಾರಿ ರವಿ ಸಾರ್.

  ಇಷ್ಟು ದೊಡ್ಡ ಅಭ್ಯಂಜನಕ್ಕೆ ನಾನು ಪ್ರಾಪ್ತನಾದದ್ದು ನನ್ನ ಪ್ರಯತ್ನಕ್ಕೆ ಸಂದ ಅತ್ಯುನ್ನತ ಪುರಸ್ಕಾರ.

  ಅಭಾರಿ ಸಾರ್.

  ಪ್ರತ್ಯುತ್ತರಅಳಿಸಿ
 3. ಬದರಿಯವರ ಕವನಗಳ ಅತ್ಯುತ್ತಮ ವಿಮರ್ಶೆ.ಧನ್ಯವಾದಗಳು ಸರ್.

  ಪ್ರತ್ಯುತ್ತರಅಳಿಸಿ
 4. ರವಿಯವರೆ...

  ನನಗೆ ಕವನಗಳೆಂದರೆ ಸಣ್ಣ ಅಲರ್ಜಿಯಿತ್ತು...

  ಕವನಗಳೆಂದರೆ ಆಸಕ್ತಿ ಹುಟ್ಟಿಸಿದ್ದು ಬದರಿಯವರ ಕವನಗಳು...

  ಅವರ ಕವನಗಳಲ್ಲಿನ ಅಪರೂಪದ "ಉಪಮೆ"ಗಳು ಬಲು ಇಷ್ಟ...

  ಬದರಿಯವರ ಬಗೆಗೆ ಬರೆದ ನಿಮಗೂ..
  ಬದರಿಯವರಿಗೂ ನನ್ನ ನಮನನಗಳು...

  ಪ್ರತ್ಯುತ್ತರಅಳಿಸಿ
 5. ಬದರಿಯವರ ಕವಿತೆಗಳನ್ನು ಓದಿದಾಗ ಏನೋ ಒಂದು ರೀತಿಯ ಖುಷಿ ಆಗುತ್ತದೆ ,ಕಾರಣ ಅವರು ಆಯ್ದು ಕೊಂಡಿರುವ ಕವಿತಾವಸ್ತುಗಳು. ಇವರ ಎಲ್ಲಾ ಕವಿತೆಗಳಲ್ಲಿ "ಸಾವಿಗೆ ಬರದ ನೆಂಟ " ತುಂಬಾ ಇಷ್ಟವಾದ ಕವಿತೆ

  ಪ್ರತ್ಯುತ್ತರಅಳಿಸಿ
 6. ರವಿ ಅವರೇ...
  ಮೊದಲು ನೀವೊಬ್ಬ ಸೂಕ್ಷಮಗ್ರಾಹಿ ಅನ್ನಬಹುದು...ಬದರಿನಾಥ್ ಅವರ ಪಧ್ಯಗಳ ಆಳಕ್ಕೆ...ಕವಿಯ ಭಾವಕ್ಕೆ ಇಳಿದು ಬರೆದಿದ್ದೀರ ಅನ್ಸತ್ತೆ...ಅಥವಾ ಅದು ನಿಮ್ಮದೇ ಭಾವದ ಸಮಾಗಮವೂ ಆಗಿರಬಹುದು..
  ನಾನು ಕಂಡಂತೆ ಬದರಿನಾಥ್ ಅವರ ಪಧ್ಯಗಳಲ್ಲಿ ಒಂಥರಾ ಆರ್ಥ ಭಾವ ಇರುತ್ತದೆ,ಇನ್ನೊಮೆ ಏನೋ ಜಿಜ್ಞಾಸೆ ಹಾಗು ಆಶಾಭಾವನೆ....ಇವೆಲ್ಲದರ ಮಿಶ್ರಣ ಅವರ ಪಧ್ಯಗಳು...ಓದುಗನಿಗೆ ಎಟುಕಲಾಗದ್ದನ್ನ ಆತ ಯಾವತ್ತೂ ಕೊಟ್ಟಿಲ್ಲ...
  ಪದ್ಯಗಳೇ ಅಲ್ಲ...ಅವರ ವ್ಯಕ್ತಿತ್ವ ಅವರ ಕವನಗಳಿಗಿಂತ ಸುಂದರ

  ಇಬ್ಬರಿಗೂ ಧನ್ಯವಾದಗಳು.
  sunil

  ಪ್ರತ್ಯುತ್ತರಅಳಿಸಿ
 7. ತುಂಬಾ ಚೆನ್ನಾಗಿ ಬರೆದಿದ್ದೀರಿ.
  ಅವರ ಊರ್ಮಿಳೆ ಕವಿತೆ ತುಂಬಾ ಇಷ್ಟವಾಗಿತ್ತು.
  ಸ್ವರ್ಣಾ

  ಪ್ರತ್ಯುತ್ತರಅಳಿಸಿ
 8. ರವಿಯವರೇ ಹೌದು ವಿಶ್ಲೇಷಣೆ ಮತ್ತು ದುಬಟಿ-ಕಾಮೆಂಟ್ ಎರಡರ ವ್ಯತ್ಯಾಸ ನಿಮ್ಮ ಲೇಖನದಲ್ಲಿ ಕಾಣುತ್ತೆ. ಕೆಲವೊಮ್ಮೆ ಬದರಿಯವರ ಕವಿತೆಯ ಆಳದ ಅರ್ಥವಾಗದೇ ಸ್ವ್ಲಲ್ಪ ಈಜಿ... ಹೊರಬಂದು ಓಹ್..ಚನ್ನಾಗಿದೆ ಎಂದಿದ್ದು ನನ್ನ ದುಬಟಿ-ಕಾಮೆಂಟ್ ಆಗಿದ್ದರೂ ಅದು ನನ್ನ ಅರಿತುಕೊಳ್ಳುವ ಮಿತಿಯನ್ನು ಆಧರಿಸಿತ್ತು ಎಂದರೂ ತಪ್ಪಿಲ್ಲ... ನಿಜ ಅವರ ಕೆಲ ಶಬ್ದಗಳ ಬಳಕೆ... ಬೆಟ್ಟದ ನೆಲ್ಲಿ ತಿಂದಂತೆ...ಆಗ ಏನಿದೆ ಇದ್ರಲ್ಲಿ..?? ಅಥವಾ..ಏಯ್..ಬಿಡು ಎನಿಸಿದರೂ ನಂತರ ಮತ್ತೆ ಮತ್ತೆ ನವಿರು ಸ್ವಾದ ಮನದಾಳಕ್ಕೆ ಹೋಗಿಬರುವುದು ಮಾಡಿದಾಗ ಹೌದು..ನಿಜಕ್ಕೂ ಸುಂದರ ಭಾವನೆಗಳ ಮೋಹಕ ಮಂಥನ ಅನಿಸುತ್ತೆ...
  ವಿಶ್ಲೇಷಿಸಿದ ನಿಮಗೂ ಅಂತಹ ಯೋಗ್ಯ ಕವನಗಳನ್ನು ನೀಡುತ್ತಿರುವ ಬದರಿಗೂ ನನ್ನಿ.

  ಪ್ರತ್ಯುತ್ತರಅಳಿಸಿ
 9. 'ಅತ್ತ್ಯುತ್ತಮ' ಅಮೋಘ ಲೇಖನ:) ಬದರಿ ಬಗ್ಗೆ ಬರೆಯುವಷ್ಟು ಹಿರಿಯವಳಲ್ಲ ; ಶುಭ ಮಸ್ತು
  All da very best bro

  ಪ್ರತ್ಯುತ್ತರಅಳಿಸಿ
 10. ಬದರಿನಾಥ ಪಲವಳ್ಳಿಯವರ ಕವನಗಳ ಉತ್ತಮವಾದ ವಿಶ್ಲೇಷಣೆ.. ಅಭಿನಂದನೆಗಳು

  ಪ್ರತ್ಯುತ್ತರಅಳಿಸಿ