ಬುಧವಾರ, ಏಪ್ರಿಲ್ 4, 2012

ಹೋಗಿ ಬರುತ್ತೇನೆ

ಹೋಗಿ ಬರುತ್ತೇನೆ ನಾನು
ಬರುವ ದಾರಿಗೇ ಕಾಯುವೆನು
ಬರದಿದ್ದರೂ ಮಲ್ಲಿಗೆಯಲಿ ನೆನಪಾದೇನು !

ತಿಂದು ಬಿಡಿ ಉಪ್ಪಿಟ್ಟು ಬಿಸಿ ಬಿಸಿ ಇದೆ 
ಆರದಿರಲಿ ಬಿಸಿ ನಾ ಬರುವವರೆಗೆ !
ನೀವಿಟ್ಟ ಕೈತುತ್ತು ಉದರ ತುಂಬಿಸಿದೆ
ತೊಳೆದಿಟ್ಟ ತಟ್ಟೆಯಲಿ ನನ್ನ ಮುಖವಿದೆ !

ತೊಟ್ಟಿಯಲಿ ನೀರಿದೆ, ನಲ್ಲಿ ತೆರೆದೇ ಇದೆ
ಕಾಣದಿರಲಿ ತಳ, ಬತ್ತಿ ಎದೆವರೆಗೆ !
ಬಟ್ಟೆ ತೊಳೆದಿದ್ದೇನೆ ,ಕೆಲವಷ್ಟು ನಾಳೆಗೆ
ತೊಳೆದಷ್ಟು ಹರಿಯಲಿ ಕೊಳೆ, ಬದುಕ ಹೊಳೆಗೆ !

ಹಚ್ಚಿಟ್ಟ ದೀಪಕೆ ತೈಲ ಸುರಿದಿದ್ದೇನೆ
ಕಾಪಿಡಿ ನಂದದೆ ನನ್ನ ಗಾಳಿಮನೆಗೆ !
ಬಂದುಬಿಡಿ ನನ್ನೊಡೆಯ, ಹೆರಿಗೆ ನೋವಿಗೆ ಮುನ್ನ 
ಕಣ್ಣೊಳಗೆ ಇದ್ದು ಬಿಡಿ ಅದೇ ಚೆನ್ನ !

ಮುಡಿಸಿಬಿಡಿ ಮಲ್ಲಿಗೆ,ಹರಡಿ ಕೂದಲ ಬನಕೆ 
ಬೆರಳಿಗೆ ನನೆಪಿರಲಿ ಮುಡಿಯ ಕನಸು !
ಹಣೆಗೀಗ ಸಿಂಧೂರ ,ನಿಮ್ಮದೇ ಬಂಗಾರ
ಮಾಂಗಲ್ಯ ಪದಕದಲಿ, ನಿಮ್ಮ ಉಸಿರು  !

ಬರುತ್ತೇನೆ ನಾನಿನ್ನು,  ಅಂಗಳಕೆ ನಿಂತಿದ್ದೇನೆ
ನೆನಪಾಗಿ ನಡೆಯುತ್ತೇನೆ ದಿನಕ್ಕೊಂದು
ಮನೆಯೊಳಗೆ ತರುತ್ತೇನೆ ಮಗುವೊಂದು !
-------------------------------------------
-ರವಿ ಮೂರ್ನಾಡು
( Photo by: Google)

7 ಕಾಮೆಂಟ್‌ಗಳು:

  1. ಸ್ತ್ರೀ ಶಕ್ತಿಯೇ ಹಾಗೆ ಆಕೆ ಒಮ್ಮೆಲೆ ಎಲ್ಲಾ ಪಾತ್ರಗಳನ್ನೂ ನಿಭಾಯಿಸಬಲ್ಲಳು. ಆಕೆ ನೋವುಗಳ ಹಾಲಾಹಾಲವನ್ನು ನುಂಗಿ ನಗೆಯಷ್ಟೇ ಅರಳಿಸಿ ನಿಲ್ಲಬಲ್ಲಳು.

    ನಿಮ್ಮ ಈ ಕವಿತೆ ನನಗೆ ಹಲವು ಚಿತ್ರಗಳನ್ನು ತೋರುವ ಮಾಯಾ ಗೋಲದಂತೆ, ಆಕೆಯ ಹಲವಾರು ರೂಪಗಳನ್ನು ತೋರಿಸಿತು.

    ಒಂದು ಉತ್ತಮ ಕವನ ಓದಿಸೈದ್ದಾಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಭಾವಗಳು ಮಧುರವಾಗಿ ತುಳುಕಿವೆ ರವಿಯಣ್ಣ.. ಹೆಣ್ಣಿನ ಮನದ ಭಾವಗಳನ್ನು ಬಲು ಸುಂದರವಾಗಿ ಪಡಿ ಮೂಡಿಸಿದ್ದೀರಿ.. ಕೆಲಸದ ನಿಮಿತ್ತವೋ, ಕಾರಣಾಂತರಗಳಿಂದ ಮನೆ ತೊರೆದು ಹೊರಟ ನಾವಿಕನ ಸಮಯದಲ್ಲಿ ಆ ಹೆಣ್ಣು ಮಗಳ ಮೃದು ಮನದಲ್ಲಿ ಮನೆ ಮಾಡುವ ಭಾವಗಳಿಗೆ ಪರೆದೆ ಒದಗಿಸಿದ ಹೆಗ್ಗಳಿಕೆ ನಿಮ್ಮ ಕವಿತೆಯದ್ದು.. ಈ ಕವಿತೆಯನ್ನು ಓದುತ್ತಿದ್ದಂತೆ ನನಗೆ ಜಿ.ಎಸ್.ಎಸ್ ರವರ 'ಸ್ತ್ರೀ ಎಂದರೆ ಅಷ್ಟೇ ಸಾಕೇ' ಕವಿತೆ ನೆನಪಾಗುತ್ತದೆ.. ಸುಂದಾರ ಕವಿತೆ, ಓದಿ ಭಾವಗಳು ಗರಿ ಬಿಚ್ಚಿದವು..:)

    ಪ್ರತ್ಯುತ್ತರಅಳಿಸಿ
  3. ಆಹಾ ಅನ್ನಿಸಿಬಿಡುವ ಭಾವಗಳು ಸರ್...
    ಪೂರ್ತಿ ಹೊಸಭಾವಗಳಿಂದ ಮಿಂದೆಳುತ್ತೇವೆ ನಿಮ್ಮ ಕವನಗಳಲ್ಲಿ ....ಸುಂದರ ಕವನ....ಬಹಳ ಇಷ್ಟವಾಯಿತು...

    ಪ್ರತ್ಯುತ್ತರಅಳಿಸಿ
  4. ಸುಖ ದಾಂಪತ್ಯದ ದೈವೀಕ ಸಂಬಾಷಣೆ , ಮದುರ ಬಾಂದವ್ಯದ ಸಲ್ಲಾಪ, ಹೊಣೆ ಕರ್ತವ್ಯಗಳ ನೆನಪು, ಮನಮುಟ್ಟುವ ಕವನ .

    ಪ್ರತ್ಯುತ್ತರಅಳಿಸಿ
  5. ಪ್ರತಿಕ್ರಿಯಿಸಲು ಮಾತಿಲ್ಲ.. ಕವಿ ಹೃದಯಕ್ಕೆ ನನ್ನ ನಮನ :)

    ಪ್ರತ್ಯುತ್ತರಅಳಿಸಿ
  6. ರವಿ ಸರ್,
    ನಾನು ಇತ್ತೀಚಿಗೆ ಓದಿದ ಅತ್ಯುತ್ತಮ ಸೂಕ್ಶ್ಮ ಸಂವೇದನೆಯ ಕವಿತೆ.... ಬಳಸಿದ ಪದ, ಅದರ ಆಳ ಎರಡೂ ಸುಪರ್...

    ಪ್ರತ್ಯುತ್ತರಅಳಿಸಿ