ಭಾನುವಾರ, ಏಪ್ರಿಲ್ 8, 2012

ಗಡಿಯಾರ

Photo by : Google

ಗೋಡೆ ತಬ್ಬಿದ ಗಡಿಯಾರ
ಅದೆಷ್ಟು ತಾಳ್ಮೆಗೆ ಬಿದ್ದಿದೆ ?
ಇರುಳಲ್ಲೂ ಹಗಲಂತೆ
ದುಡಿವುದ ಕಲಿಸಿದೆ !
ಕೀಲಿ ಕೊಡುವ ದೇವ
ನಡೆಗೆ ಚಕ್ರವನ್ನಿಟ್ಟು
ಮುಳ್ಳನ್ನಷ್ಟೇ ತಿರುಗಿಸುವ ಎದೆಗೆ
ಲಯಬದ್ಧ ಬಡಿತ, ನಾಡಿ ಮಿಡಿತ !
ಟಿಕ್ ಟಿಕ್ ಟಿಕ್...!

ತಿರುವಿ ನೆನಪುಗಳ ತಡವಿ
ಕಣ್ಣಾಲಿಯ ಎತ್ತಿ ನೆಗೆವುದು
ರೆಪ್ಪೆ ಮುಚ್ಚಿ, ಇಲ್ಲಿ ಸಿಗಿದು
ಅದೋ ಅಲ್ಲಿ  ಓಡುತ್ತಿದೆ ಗುರಿ
ಭೂಮಿ ಹುಟ್ಟಿನಿಂದ ಬಿದ್ದ ಘಳಿಗೆ !
ಬಿಂದು ಬಿಂದುಗಳ ತಬ್ಬಿ
ಜಗದ ನೆಲಕೆ ಅಂಡಲೆದು
ಕ್ಷಣದ ಮುಳ್ಳು ದಿನಗಳ ಎಳೆವುದು !

ಇಷ್ಟಿಷ್ಟೇ ಜಾಗ ಬದಲಿಸುವುದು
ನಡೆ ನಡೆಯ ಬೆಳಕಿನೆಡೆಗೆ
ಕಿವಿ ಹಿಂಡಿ ಓಡುವ ಘಳಿಗೆಯ 
ಅರಿವಿಗೆದ್ದು ಕದಲಿ ನಿಮಿಷ ಮುಳ್ಳು  !
ಜಗದ ಕೇಂದ್ರ ಪಲ್ಲಟಕೆ
ನಿಮಿಷ ಘಳಿಗೆ ನಿಲುವುದು
ಕಾಯಕವೆಲ್ಲ ತಿಂಗಳು ತುಂಬುವುದು !

ನಿಗೂಢತೆಯ ಬಿಚ್ಚಿ
ತಾಳ್ಮೆಗೆ ಸರಿಯುತ್ತಿದೆ ಕಾಲ !
ಘಳಿಗೆ ಅರಿವಿಗೂ ಮೀರಿ
ನಿಮಿಷ ಜಾಗಕ್ಕಷ್ಟೇ ತೆವಳಿ
ಸಾವಕಾಶಕ್ಕೆ ತೆರಳುವುದು.....
ಅಹಾ  ! ಎಲ್ಲಾ ಎಲ್ಲಗಳ ಸೂತ್ರಕೆ
ಘಂಟೆಯೀಗ ವರ್ಷವಾಗುವುದು !

ಎಂಥ ಮಗುತನದ ಘಳಿಗೆ..!
ನಿಮಿಷದಲ್ಲೇ ಬದುಕೋಡಿ
ಸುಕ್ಕು ತೊಡೆಗಳಿಗೆ ಬಲವಿಟ್ಟು
ಮೇಲೇಳಲೆತ್ನಿಸುವುದು ಘಂಟೆ !

ಅವುಗಳೆಲ್ಲಾ...  ಸಮನಾಂತರಕೆ
ಮುಖಾಮುಖಿ ಅಪ್ಪಿದ 
ಆ ಒಂದು ನಿಶ್ಯಬ್ಧದ ಘಳಿಗೆ....
ಕರೆಗಂಟೆ ಶೂನ್ಯಕೆ ಜಾರುವುದು !
ಸುತ್ತ  ಧುಮ್ಮಿಕ್ಕಿ ದುಃಖ್ಖ
ನಿಶ್ಚಲ ಗೋಡೆ ಬಡಿದು
ತಿರುಗಿ ಕಿವಿ ಕಿವುಡಾಗುವುದು
ಗಡಿಯಾರವೀಗ ಸಂಪೂರ್ಣ !
-------------------------------------------------------------------------
-ರವಿ ಮೂರ್ನಾಡು



Gulf Kannadiga - a reflection of Karnataka in the Gulf
Link: http://www.gulfkannadiga.com/news-63885.html 

8 ಕಾಮೆಂಟ್‌ಗಳು:

  1. ಗಡಿಯಾರಕೂ ಬದುಕಿಗೂ ತುಂಬ ಹೋಲಿಕೆ ಇದೆ ಅಲ್ವಾ ರವಿ ಸಾರ್! ಅಲ್ಲಿ ಮುಳ್ಳು ಗೋಚರ, ನಮ್ಮ ಬದುಕಲ್ಲಿ ಮುಳ್ಳುಗಳೇ ಅಗೋಚರ.

    ನನ್ನ ಮನೋ ತರಂಗಾಂತರಕ್ಕೆ ಅತೀ ಹತ್ತಿರದ ಕಂಪನ ಹೊಂದಿರುವ ಕವಿ ನೀವು. ನನ್ನ ತುಮಲಗಳೆಲ್ಲ ನಿಮ್ಮ ಸಾಲುಗಳು.

    ಸಲಾಂ ಸಲಾಂ...

    ಪ್ರತ್ಯುತ್ತರಅಳಿಸಿ
  2. ಗಡಿಯಾರದಂತಹ ಬದುಕು ನಮ್ಮದು .ಆಹಾ ಎಂಥ ಕಲ್ಪನೆ ರವಿಯಣ್ಣ .

    ಪ್ರತ್ಯುತ್ತರಅಳಿಸಿ
  3. ಗಡಿಯಾರದ ಕಥೆ ಸೊಗಸಾಗಿದೆ !, ಹನಿಹನಿ ಯಾಗಿ ಕಾಲದ ತೆಕ್ಕೆಗೆ ಬೀಳುವ ತಾಳ್ಮೆ ,ಸುತ್ತುವ ಮುಳ್ಳುಗಳ ಯಾನ , ಕ್ಷಣ ಗಳೆಲ್ಲ ಘಂಟೆಗಳಾಗಿ ಬುದುಕಿಗೆ ತಿರುವು ನೀಡುತ್ತ , ರಾತ್ರಿ ಹಗಲೆನ್ನದೆ ನಿಂತಲ್ಲೇ ನಿಂತ ಆಚರಿ !, ಇದರಲ್ಲೊ ಏನೂ ನಿಗೂಡತೆಯೇ ತೆರೆದು ಕೊಳ್ಳುತ್ತದೆ ! ಅದ್ಭುತ ಕವನ ರವಿ ಅವರೇ!
    arathi ghatikaar

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ ಕವನ ರವಿಯವರೇ. ಒಳ್ಳೆಯ ಅನುಭವ.,


    ನೋಟ್ :-ಬಿಂಧು ಬಿಂಧುಗಳ (ಬಿಂದು ಬಿಂದುಗಳ ಆಗಬೇಕು)

    ಪ್ರತ್ಯುತ್ತರಅಳಿಸಿ
  5. ನಿಮ್ಮ ಕವಿತೆಗಳಿಗೆ ನನ್ನ ಟಿಪ್ಪಣಿಯ ನಾಡಿ ಮಿಡಿಯುವುದಿಲ್ಲ. ಅದು ಒಂದು ಗಳಿಗೆ ನಿಂತು ಬಿಡುತ್ತದೆ. ನಿಮ್ಮ ಗಡಿಯಾರದ ನಿಮಿಷದ ಮುಳ್ಳಿನ ಜೊತೆ ನನ್ನ ಮನಸು ಕೂಡ ಟಿಕ್ ಟಿಕ್ ಅನ್ನುತ್ತಿರುವಂತೆ ಭಾಸ, ಅದರ ಜತೆ ದನಿಗೂಡಿಸುವಾಸೆ!

    ಪ್ರತ್ಯುತ್ತರಅಳಿಸಿ
  6. ಜೀವನ ಮತ್ತು ಗಡಿಯಾರ ಎಂಬ ಎರಡು ಪ್ರತಿಮೆಗಳನ್ನು ಸಮರ್ಥವಾಗಿ ಸಮ್ಮಿಳಿಸಿದ್ದೀರಿ ರವಿಯಣ್ಣ.. ಕವಿತೆ ಕೇವಲ ಜೀವನದ ಅವ್ಯಕ್ತ ಸತ್ಯಗಳನ್ನಷ್ಟೇ ತೆರೆದಿಡದೆ ಮತ್ತೇನನ್ನೋ ಹುಡುಕುತ್ತಿದೆ ಎನಿಸುತ್ತದೆ.. ಅಸಂಪೂರ್ಣತೆಯಲ್ಲೂ ಸಂಪೂರ್ಣತೆ ಹುಡುಕುವ ಪ್ರಯತ್ನದಂತೆ ಈ ಜೀವನ.. ಒಂದು ಮೈಲಿಗಲ್ಲನ್ನು ಮುಟ್ಟಿಬಿಟ್ಟರೆ ಬದುಕು ಸಂಪೂರ್ಣ ಎಂದುಕೊಳ್ಳುತ್ತೇವೆ, ಆದರೆ ಆ ಮೈಲಿಗಲ್ಲನ್ನು ಮುಟ್ಟಿದ ನಂತರ ಮತ್ತೆ ಜೀವನ ತೆರೆದುಕೊಳ್ಳುತ್ತದೆ ಅಂತೆಯೇ ಗಡಿಯಾರವೂ.. ಒಂದು ಗಂಟೆ ಕ್ರಮಿಸಿದ ನಂತರ ಮತ್ತೊಂದು ಗಂಟೆ, ನಂತರ ಮಗದೊಂದು ಗಂಟೆ ಹೀಗೇ ನಿರಂತರ ಪ್ರಯಾಣ ಕೀಲಿ ಕೊಡುವ ಕೈಗಳು ಕಟ್ಟಿ ಕೂರುವ ತನಕ..
    ಎಂಥ ಮಗುತನದ ಘಳಿಗೆ..!
    ನಿಮಿಷದಲ್ಲೇ ಬದುಕೋಡಿ
    ಸುಕ್ಕು ತೊಡೆಗಳಿಗೆ ಬಲವಿಟ್ಟು
    ಮೇಲೇಳಲೆತ್ನಿಸುವುದು ಘಂಟೆ !
    ಈ ಸಾಲುಗಳು ಮನಸ್ಸಿನಲ್ಲುಳಿದವು..

    ಪ್ರತ್ಯುತ್ತರಅಳಿಸಿ