ಮಂಗಳವಾರ, ಏಪ್ರಿಲ್ 17, 2012

ಅವಳಿಗೊಂದಿಷ್ಟು ನಾಳೆಗಳು..!


ನಟ್ಟ ನಡುರಾತ್ರಿಯಲಿ
ಬೆಚ್ಚಿ ಬಿದ್ದಿದ್ದಾಳೆ ಹುಡುಗಿ
ಶೂನ್ಯಕೆ ಲಗ್ಗೆಯಿಟ್ಟ
ಭೀಕರ ಕನಸು ...!

ಮಂಚವನಪ್ಪಿದ ರಾತ್ರಿ
ಮತ್ತೆ ಮತ್ತೆ ಖಾತ್ರಿಯಾಗುತ್ತಿದೆ
ಒಂಟಿ ... ಒಂಟಿ... ಒಂಟಿ...!
ಸಾಂತ್ವನದ ಮಾತೆರಡು
ಬೆನ್ನ ತೀಡುತ್ತಿವೆ ..

ಅವಳಿಗೊಂದಿಷ್ಟು ಮಾತು...
ಸೌಂದರ್ಯ ಮೆಚ್ಚಿದವರು
ಸೌಮ್ಯತೆಯ ನೆಚ್ಚಿದವರು
ಮೌನಕೆ ಗದ್ದಲವೆದ್ದರು  !
ನೋವೇನೆಂದು ಅರಿಯಲಿಲ್ಲ

ಕಿಲಕಿಲ ನಕ್ಕ ಗೆಳತಿಯರು
ವಕ್ರದೃಷ್ಟಿಯ ಕಣ್ಣುಗಳು
ಅನುಮಾನಿಸಿ ಪಿಸುಗುಟ್ಟಿದರು !
ಕಣ್ಣೀರು ಏಕೆಂದು ಕೇಳುವುದಿಲ್ಲ

ಅಬ್ಬಾ .. ಬೆರಳ ಸ್ಪರ್ಶವೇ !
ಝಲ್ಲೆನಿಸಿದ ಸ್ವಾರ್ಥಕೆ
ನರನಾಡಿ ಪಲ್ಲಟಗಳು !
ನೆನಪು ತುಣುಕಿನೊಳಗೆ
ನೀನು ಮೆಚ್ಚಿದ ಹುಡುಗ
ಕನಸು ಏನೆಂದು ಅರ್ಥೈಸುವುದಿಲ್ಲ...!

ಗಲ್ಲವೆತ್ತುತ್ತೇನೆ ಹುಡುಗಿ...!
ಈ ಮಂದಿ ಕಿವುಡರಾಗಿದ್ದಾರೆ
ರೋಧನ ಕೇಳುವುದಿಲ್ಲ...!
ಕಣ್ಣಿದ್ದು ಕುರುಡರಾಗಿದ್ದಾರೆ
ಕಣ್ಣೀರು ಕಾಣುವುದಿಲ್ಲ  !
ಈ ಜಗತ್ತಿನ ಜನ ಹುಚ್ಚರಾಗಿದ್ದಾರೆ
ನೀನು ಯಾರೆಂದು ಗೊತ್ತಾಗುವುದಿಲ್ಲ...!

ಕ್ಷಮಿಸಿ ಬಿಡು.. ಮಾಯೇ...
ನಿನ್ನನ್ನು ನೀನೇ ಸಂತೈಸಿಕೋ
ನಾಳೆಗಳು ಸುಂದರವಾಗುತ್ತವೆ !
ನಿನ್ನನ್ನು ನೀನೇ ಅರ್ಥೈಸಿಕೋ
ನಾಳೆಗಳು ಅರ್ಥವಾಗುತ್ತವೆ
ನಾಳೆಗಳು ಹಿತವಾಗುತ್ತವೆ. !
-----------------------------------------------------------------------------------------------------------------
-ರವಿ ಮೂರ್ನಾಡು

5 ಕಾಮೆಂಟ್‌ಗಳು:

  1. ನಕ್ಕ ನಗುವಿನ ಹಿಂದೆ ಅಡಗಿ ಕುಳಿತ ಒಂಟಿತನವ ಗುರುತಿಸದ ಜಗತ್ತಿನ ನಡುವೆ ನರಳಿದ ಹೆಂಗರುಳಿಗೆ ಮಿಡಿದ ಹೃದಯದ ಸಾಂತ್ವನದ ಮಾತುಗಳು ಮನ ಹೊಕ್ಕುತ್ತದೆ..
    ಕಾವ್ಯ ಯಾನ ಸಾಗುತ್ತಿರಲಿ ಅನವರತ..

    ಪ್ರತ್ಯುತ್ತರಅಳಿಸಿ
  2. ಚೆನ್ನಾಗಿದೆ ರವಿಯಣ್ಣ .. ಒಮ್ಮೆ ಕೆಂಪುದೀಪದ ಹುಡುಗಿಯ ಕತೆಯಾ ಅನಿಸಿತು. ಮತ್ತೊಮ್ಮೆ ಬಾಳಲ್ಲಿ ಪ್ರೀತಿಯಲ್ಲೋ , ಇನ್ಯಾವುದರಲ್ಲೋ ಸೋತ ಹುಡುಗಿಯ ವ್ಯಥೆಯಾ ಅನಿಸಿತು. ಆಮೇಲೆ ಇದು ನೊಂದ ಜೀವಗಳ, ಪ್ರೀತಿ ಬಯಸಿ ದಕ್ಕದ ಧ್ವನಿಗಳ ರೋದನವಾ ಅನಿಸಿತು.. ಚೆನ್ನಾಗಿದೆ :-)

    ಪ್ರತ್ಯುತ್ತರಅಳಿಸಿ
  3. ಯಾರೋ ಎದೆಯೊಳಗಿನ ಮಾತುಗಳನ್ನು ಕೇಳಿಸಿ ಸಂತೈಸಿದ ಅನುಭವ..
    ಅದು ಹೇಗೆ ಸೂಕ್ಷ್ಮತೆಗಳ ಕದವ ತೆರೆದು, ಆಯ್ದು, ಹಾಗೆ ಕವನದೊಳಗೆ ಇರಿಸುತ್ತಿರಿ ಸರ್...
    ಯಾರಿಗೆ ಯಾರೂ ಇಲ್ಲವೆಂದು ದುಃಖವಾಗಿರುವಾಗ ನಿಮ್ಮ ಈ ಕವಿತೆ ಅವರಿಗೊಮ್ಮೆ ಓದಿಸಬೇಕು...ಮತ್ತೇ ಚಿಗುರೋಡೆಯುತ್ತಾರೆ, ಹೊಸ ಗಾಳಿ ಬೆಳಕಿಗೆ ಹಂಬಲಿಸುತ್ತಾರೆ....
    ಈ ಕವಿತೆ ಇಷ್ಟವಾಯ್ತು ಎಂದು ಹೇಳುವುದಿಕ್ಕಿಂತಲೂ ಮಿಗಿಲಾದ ಶಬ್ದಕ್ಕೆ ಹುಡುಕುತ್ತಿದ್ದೇನೆ....
    ಮತ್ತೊಂದು ಅಚ್ಚರಿಯ , ಸೊಗಸಾದ ಕವಿತೆಯ ನಿರೀಕ್ಷೆಯಲ್ಲಿ,
    -ಸುಷ್ಮಾ....

    ಪ್ರತ್ಯುತ್ತರಅಳಿಸಿ
  4. ಯಾಕೋ ಏನೇನೋ ನೆನಪಿಸಿ ಮೀಟಿ ಮೀಟಿ ಹಾಕಿದ ಕವನ. ಆಯಾಮಗಳು ಗ್ರಹಿಕೆಗೂ ಮತ್ತು ಅರ್ಥವಾಗುವಿಕೆಗೂ ನಡುವೆ ಹುಯ್ದಾಡಿಸಿದ ಕವನ. ವಾರೇವ್ಹಾ!!!

    ಪ್ರತ್ಯುತ್ತರಅಳಿಸಿ
  5. ಅಂತರಂಗದ ಭಾವನೆಗಳ ತುಮುಲವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕವನ, ಬಹುದಿನಗಳ ನಂತರ ನಿಮ್ಮ ಬ್ಲಾಗ್ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ... ಶುಭವಾಗಲಿ

    ಪ್ರತ್ಯುತ್ತರಅಳಿಸಿ