ಭಾನುವಾರ, ಮೇ 29, 2011

ಶುಭ ಮುಂಜಾನೆಯ ಮೂವತ್ತು ಗೆಳೆಯರು..!


-ರವಿ ಮುರ್ನಾಡು
ನಿಮಗೆ ಪರಿಚಯಿಸಬೇಕು ನನ್ನ ಗೆಳೆಯರನ್ನು. ನಂಟನ್ನು ಹಾಗೇ ಬದುಕಿನಲ್ಲಿ ಗಂಟು ಹಾಕಬೇಕು. ಲೆಕ್ಕವಿಲ್ಲದ ರಾತ್ರಿಗಳ ಕಳೆದು, ಪ್ರತಿ ಮುಂಜಾನೆಯ ಲೆಕ್ಕ ತೆಗೆಯುವುದು ತುಂಬಾ ಇಷ್ಟದ ಕೆಲಸ. ರಾತ್ರಿಯ ಲೆಕ್ಕವಿಟ್ಟವರದ್ದು  ಕತ್ತಲೆಯ ಕೆಲಸ. ಹಗಲಿನ ಲೆಕ್ಕವಿಟ್ಟವರದ್ದು ಪುಟದ ದಾಖಲೆಯ ಕೆಲಸ. ಹಗಲು-ರಾತ್ರಿಯ ನಡುವೆ ಅಳಿಸಿ ಹೋಗುವ ನಗುವಿನ ಗಳಿಗೆಗಳು ಮತ್ತೆ ಬರಲಿ ಎಂಬುದು ಎಲ್ಲರ ಕನಸು. ಮತ್ತೆ ಮತ್ತೆ ಒತ್ತರಿಸುವ ದುಃಖ್ಖ ಮತ್ತೇ ಬಾರದಿರಲೀ ಎಂಬ ಪ್ರಾರ್ಥನೆ.
ಪ್ರತೀ ನನ್ನ ಮುಂಜಾನೆಗೆ " ಶುಭ" ಮುಂಜಾವಿನ ಭಾಷ್ಯ ಬರೆಯುತ್ತಾರೆ. ಚಿನ್ನದ ಅಕ್ಷರಗಳಲ್ಲಿ ಬರೆದಿಡುವ ಆನಂದ ಅದು.ಅವರು ಮನುಷ್ಯ ಭಾಷೆಗೆ ನಿಲುಕದ ನಕ್ಷತ್ರಗಳು. ನಗು ಕಾಣದೆಯೂ ಇರಬಹುದು...ಮಾತುಗಳು  ಅರ್ಥವಾಗದೆಯೂ ಇರಬಹುದು....ಚಿತ್ತಪಟದಲ್ಲಿ ಭಾವವಾಗಿಸುತ್ತೇನೆ. 
ತುಂಬಾ ಪ್ರೀತಿಸುತ್ತೇನೆ.ಸಿನೇಮಾ ಮಾತಾಗಬಹುದು... ಅವರನ್ನು  ಮೂಕ ಮನಸ್ಸಿನ ಜಗತ್ತಿನಲ್ಲಿ  ಹಾರಲು ಬಿಡುತ್ತೇನೆ. ಯಾರ ಬಂಧನದ  ಹಂಗಿಲ್ಲ. ಭಯವೂ ಇಲ್ಲ.
ನನ್ನ ಗೆಳೆಯರ ಸಂಖ್ಯೆ ಮೂವತ್ತು..! ಅದರಲ್ಲಿ ಹತ್ತೊಂಬತ್ತು ಪಾರಿವಾಳಗಳು. ಏಳು ಗುಬ್ಬಚ್ಚಿಗಳು.... ಮೂರು ಕುರುಳಿ ಹಕ್ಕಿಗಳು ಹಾಗು ಒಂದು ಕಾಗೆ....! ಪಾರಿವಾಳಗಳ ಬಣ್ಣ ನೋಡಬೇಕು. ಕಪ್ಪು-ಬಿಳಿ- ಕಂದು. ಕೆಲವುಗಳು ಕಟು ಹಸಿರು. ಅವುಗಳ ಸಂಖ್ಯೆ ಎಂಟಿವೆ. ಕತ್ತಿನಲ್ಲಿ ಗೆರೆಗಳು.... ಚಿನ್ನದ ಸರ ತೊಟ್ಟ ಲಲನಾಮಣಿಯರಂತೆ. ಇನ್ನು ಕೆಲವು ಮೈ ಪೂರ್ತಿ ಬಿಳಿ ಬಣ್ಣಗಳಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕಿ. ಹಾಗೇ ಕಪ್ಪು ಬಣ್ಣಗಳಲ್ಲಿ ಬಿಳಿಯೂ.. ಬಣ್ಣದ "ಫ್ರಾಕ್‍" ತೊಟ್ಟಂತ ಸಣ್ಣ ಹೆಣ್ಣು ಮಕ್ಕಳು.  ಇನ್ನು ಗುಬ್ಬಚ್ಚಿಗಳು ಪುಟ್ಟಪುಟ್ಟವು..ಪಕ್ಕನೆ ನೋಡಿದರೆ ಆಕಾರದಲ್ಲಿ ಪತ್ತೆ ಹಚ್ಚಲು ಕಷ್ಟ ಈ ಗುಬ್ಬಕ್ಕಂದಿರು. ಕುರುಳಿ ಹಕ್ಕಿಗಳು ಕಟುವಾದ ಕೆಂಪು ಬಣ್ಣದಲ್ಲಿವೆ.ಮಧ್ಯೆ ಮಧ್ಯೆ ಕಣ್ಣಿಗೂ ಕಾಣದಂತ ಚುಕ್ಕಿಗಳು. ಸಂಜೆಯ ಸೂರ್ಯನ ಬಣ್ಣವೂ ನಾಚಬೇಕು. ಕಾಗೆ ಭಾರತದ ಕಾಗೆಗಿಂತ ಆಕಾರದಲ್ಲಿ ದೊಡ್ಡವು. ಕತ್ತಿನಲ್ಲಿ ಬಿಳಿ ಬಣ್ಣವಿದೆ. ಮೈಯೆಲ್ಲ ಅಂತಹ ಕಪ್ಪಲ್ಲ. ಆದರೂ ಕಪ್ಪೇ..! ಇವೆಲ್ಲವೂ ನನ್ನ ಆಫ್ರೀಕಾದ ಕ್ಯಾಮರೂನಿನಲ್ಲಿ ನಿತ್ಯದ ಗೆಳೆಯರು. ನಾನು ಕಾಯುತ್ತೇನೆ ಅನ್ನೋದಕ್ಕಿಂತ ಅವರೇ ನನ್ನನ್ನು ಪ್ರತೀ ಮುಂಜಾನೆ ಕಾಯುತ್ತಾರೆ.
ಆಫ್ರೀಕಾದ ಕ್ಯಾಮರೂನಿನಲ್ಲಿ  ಮೂರು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೂ ಮೊದಲು ಬಾಂಬೆಯಲ್ಲಿದ್ದಾಗಲೂ ಮೂವತ್ತೈದು- ನಲವತ್ತು ಹಕ್ಕಿಗಳು ಇದ್ದವು. ಒಂದೂವರೆ ವರ್ಷಗಳ ಕಾಲ. ರಾತ್ರಿ ಉಳಿಸಿದ ಅನ್ನವೋ- ಒಣಗಿದ ಚಪಾತಿಯೋ ಹಾಕುತ್ತಿದ್ದೆ. ಅಲ್ಲಿ ನನ್ನ ಹೊಟ್ಟೆಯೇ ಅರ್ಧ..! ಒಂದೊಂದು ಬಾರಿ ಎರಡು ತಿಂಗಳವರೆಗೂ ಅನ್ನದ ಅಗಳನ್ನೇ ಕಾಣದ ದಿನಗಳವು. ನಾಲ್ಕೂವರೆ ರೂಪಾಯಿಗೆ ಮೂರು ಚಪಾತಿ ಸಿಗುತ್ತಿತ್ತು. ಬೆಳಿಗ್ಗೆ ಒಂದು, ಮಧ್ಯಾಹ್ನಕ್ಕೆ ಎರಡು. ಸಮಯಕ್ಕೆ ಸರಿಯಾಗಿ ತಿನ್ನದಿದ್ದರೆ ಅದೂ ಒಣಗಿದ್ದೇ....! ರಾತ್ರಿಗೆ ಮೂರು ರೂಪಾಯಿಗೆ ಎರಡು ಚಪಾತಿ. ವಾರಕ್ಕೆ ಒಂದು ಬ್ರೆಡ್‍ ಪೊಟ್ಟಣ ಸಾಕಾಗುತ್ತಿತ್ತು, ಪರಿಮಿತಿಯ ಕತ್ತಲೆಯ ಬದುಕಿಗೆ. ಇದರಲ್ಲಿ ಉಳಿಸಿದ ಬಾಕಿಗಳು ಹಕ್ಕಿಗಳಿಗೆ.. ಅವುಗಳ ಹೊಟ್ಟೆಯೂ ಅರ್ಧವೇ... ಜೊತೆಗೆ ನನ್ನದು...!
ಮನುಷ್ಯರನ್ನು ನೋಡುವುದಕ್ಕೆ ಮೊದಲು ಮುಂಜಾನೆ ಎದುರುಗೊಳ್ಳುವುದೇ ಇವರು. ಭಾರೀ ದೊಡ್ಡ ಕೆಲಸವೂ ಅಲ್ಲ ನನ್ನದು. ಮೂರು ಹಿಡಿ ಅಕ್ಕಿ , ನಾಲ್ಕು ಪೀಸ್‍ ಬ್ರೆಡ್‍ ಹಾಕುವುದು. ಅದು ಲೆಕ್ಕದ್ದೇ ಹಾಕಬೇಕು. ಮನುಷ್ಯನಿಗಿಂತ ಹಕ್ಕಿಗಳ ಆಲೋಚನೆ ನೋಡಿ...ಅಕ್ಕಿಯಲ್ಲಿ ಹೆಚ್ಚಾದರೂ ಕಷ್ಟ... ಬ್ರೆಡ್ ಪೀಸ್‍ ಐದಾದರೂ ಕಷ್ಟ... ಹೆಚ್ಚಿನ ಭಾಗ ಅಲ್ಲೇ ಉಳಿಸುತ್ತವೆ. ಅದನ್ನು ಬೇರೆ ಯಾವುದಾದರೂ ಹಕ್ಕಿಗಳು ತಿನ್ನುತ್ತವೆ. ನಾವು ವಾಸವಿರುವ ಅಪಾರ್ಟಮೆಂಟು  ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿರುವುದು. ಇಲ್ಲಿಯೇ ಇವರ ಭೇಟಿ. ಬೆಳಿಗ್ಗೆ ಆರು ಗಂಟೆಗೆ ಏಳುವುದು ನನ್ನ ಮನಸ್ಸಿನ ಗಡಿಯಾರ. "ಅಲಾರಂ" ಇಟ್ಟಿರುತ್ತೇನೆ. ಅದು ಹೊಡೆಯೋದಕ್ಕೆ ಮೊದಲು ನಾನೇ ಎದ್ದಿರುತ್ತೇನೆ. ಆದರೂ, ಒಂದು ಧೈರ್ಯ..ಮಲಗಿದ ಮೇಲೆ ಮನಸ್ಸು ಒಂಟಿ.. ಗಡಿಯಾರವಾದರೂ  ಜೊತೆಗಿದೆ ಎಂದು ಮುಟ್ಟಿ ನೋಡುವ ಮನಸ್ಸು.
ನಮ್ಮ ಅಂತಸ್ತಿನ ಮುಂಭಾಗ ವೆರಾಂಡವಿದೆ. ಅಕ್ಕ ಪಕ್ಕ ಮನೆಗಳೂ ಇವೆ.ಬೆಳಗ್ಗಿನ ಆರೂ ಗಂಟೆ ನಲವತ್ತೈದು ನಿಮಿಷಕ್ಕೆ ಇವರೆಲ್ಲಾ ಹಾಜರು. ನನ್ನ ಎಲ್ಲಾ ಚಟುವಟಿಕೆ ಮುಗಿದ ಮೇಲೆ ಸರಿಯಾಗಿ ಏಳು ಗಂಟೆಗೆ ನನ್ನ ಭೇಟಿ. ಆ ಸಂದರ್ಭ ತುಂಬಾ ಆಪ್ತವಾದುದು. ರೆಕ್ಕೆ ಬಡಿಯುತ್ತವೆ ಹಕ್ಕಿಗಳು. ಯಾರೂ ಕೈ ಹಾಕದ ಅವುಗಳ ಕೊರಳ ಗಾನವೂ. ಶುಭಾಶಯ ಹೇಳುತ್ತವೆ ನನಗೆ. ನಮ್ಮಂತೆಯೇ ಕೈಗಳಿದ್ದರೆ ಕೈ ಮುಗಿಯುತ್ತಿದ್ದವೇನೋ. ಅವುಗಳೂ ಹಾಗೇ ಆಲೋಚಿಸಬಹುದು ನನಗೂ ರೆಕ್ಕೆಗಳಿದ್ದರೆ ಬಡಿಯುತ್ತಿದ್ದನೇನೋ ಎಂದು. ರೆಕ್ಕೆ ಬಡಿಯುತ್ತದೆ ನನ್ನ ಮನಸ್ಸು.
ಅಕ್ಕಿ ಕಾಳು ಚೆಲ್ಲುತ್ತಿದ್ದಂತೆ ಪಾರಿವಾಳಗಳು ಒಂದರ ಮೇಲೊಂದರಂತೆ ಬಿದ್ದು ಆಟವಾಡುತ್ತವೆ. ನಡೆದು ಬರುವ ಪರಿ ನೋಡಬೇಕು...ಹದಿನಾರರ ಬಾಲೆಯಂತೆ. ಈ ಪಾರಿವಾಳಗಳು ಅಕ್ಕಿ ಮಾತ್ರ ತಿನ್ನುವುದು. ಬ್ರೆಡ್‍ ಪೀಸು ಹಾಕುವಾಗ ಗುಬ್ಬಚ್ಚಿಗಳು ಮೇಲೆ ಬೀಳುತ್ತವೆ. ಕುರುಳಿ ಹಕ್ಕಿಗಳೂ. ಒಂದು ಮಾತ್ರ ಕಾಗಕ್ಕ. ಅದಕ್ಕೂ ಬ್ರೆಡ್..!. ಸಾದರಾಣವಾಗಿ ಕ್ಯಾಮರೂನಿನಲ್ಲಿ  ಎಲ್ಲರೂ ಬ್ರೆಡ್ ಆಹಾರ ತಿನ್ನುವುದೇ ಹೆಚ್ಚು. ಅದರಲ್ಲೂ ಉದ್ದದ ಬ್ರೆಡ್. ಅದಕ್ಕೆ " ಲಾಂಗ್‍ ಬ್ರೆಡ್" ಅಂತಾರೆ ಇಲ್ಲಿ . ಅದಕ್ಕೆ ಪಾರಿವಾಳ ಬಿಟ್ಟು ಮಿಕ್ಕೆಲ್ಲ ಗೆಳೆಯರು ಅದನ್ನೇ ತಿನ್ನುವುದು.
ನನ್ನ ಮತ್ತು ನಮ್ಮೆಲ್ಲರ ಒಂದು ಕೂಟ ಅದು.ಮಾತು ಬಾರದ ಜಗತ್ತಿನ ಭಾವಗಳು. ಅವುಗಳಿಗೂ ಒಂದು ಭಾಷೆಯಿದೆ. ಮನುಷ್ಯರಿಗೆ ಅರ್ಥವಾಗದ ಭಾಷೆ. ಅವುಗಳೂ ಹಾಗೇ ಆಲೋಚಿಸಬಹುದು ಈ ಮನುಷ್ಯರಿಗೆ ಭಾಷೆಯೇ ಇಲ್ಲ ಎಂದು. ನಿಜ...! ಮನುಷ್ಯರಿಗೆ ಭಾಷೆಯೇ ಇಲ್ಲ. ಇದ್ದಿದ್ದರೆ ಅವುಗಳ ಭಾಷೆ ಅರ್ಥವಾಗುತ್ತಿತ್ತು. ಜಗತ್ತನ್ನು " ಕಂಪ್ಯೂಟರ‍್ ಸ್ವಿಚ್‍" ಅದುಮಿ ಆಳುವ ಮನುಷ್ಯರಿಗೆ ಇನ್ನೂ ಬುಧ್ಧಿ ಬಂದಿಲ್ಲ. ಮುಗ್ಧತೆಯ ಮಹಾಗ್ರಂಥಗಳನ್ನು ನಾವು ಆವುಗಳಲ್ಲಿ ನೋಡಬಹುದು. ಮುಗ್ಧತೆ ಅಂದರೆ, ಸರಿ- ತಪ್ಫುಗಳನ್ನು ತಿಳಿಯದ ನಕ್ಶತ್ರಗಳು. ಅದಕ್ಕೆ ನಾವು ದೇವರೆನ್ನುತ್ತೇವೆ. ಮಕ್ಕಳು ಹಾಗೆ.
ಕೆಲವೊಮ್ಮೆ ನನ್ನ ಗೈರು ಹಾಜರಿಯ ದಿನಗಳು ಬರುತ್ತವೆ. ಇವರ ಭೇಟಿಯಂತೂ ತಪ್ಪುವುದಿಲ್ಲ. ಒಂದು ದಿನ ಹಾಗೆಯೇ ಆಯಿತು. ತುಂಬಾ ಹುಷಾರಿರಲಿಲ್ಲ.ನಾನೂ ಮನುಷ್ಯನಲ್ಲವೇ? ಕಣ್ಣು ಬಿಡುವುದಕ್ಕೂ ಆಗದ ಸಂದರ್ಭ ಅದು. ನನಗಂತೂ ಅಂತಹ ದಿನಗಳು ಬಾರದಿರಲಿ ಅನ್ನಿಸುತ್ತದೆ. ಬೆಳಿಗ್ಗೆ ಏಳು ಗಂಟೆಯಾದರೂ ನಾನು ಏಳಲೇ ಇಲ್ಲ. ಹಕ್ಕಿಗಳು ಆಗಲೇ ಬಂದು ಕಾಯುತ್ತಿದ್ದವು. ನಾನು ಬರದೇ ಇರುವ ಸಂದರ್ಭ ಮುಗಿದ ನಂತರ ವೆರಾಂಡ ಬಿಟ್ಟು ಕಟ್ಟಡದ ಸುತ್ತೆಲ್ಲಾ ಹಾರಾಡ ತೊಡಗಿದವು. ಕೆಲವು ನಾನು ಮಲಗುವ ಕೋಣೆಯ ಕಿಟಕಿಗೂ ಬಂದು  ಅವುಗಳ ಭಾಷೆಯಲ್ಲೇ ಚಿಲಿಪಿಲಿಗುಟ್ಟ ತೊಡಗಿದವು. ಹಕ್ಕಿಗಳು ಬೆವರ ವಾಸನೆಯಿಂದ ನಿಕಟವರ್ತಿಗಳ ಪರಿಚಯ ಹುಡುಕುತ್ತವೆ ಅಂತ ಆಗಲೇ ಗೊತ್ತಾದುದು ನನಗೆ. ನನ್ನ ಓಗರೆಯ ಕೆಲಸದ ಬಂಧುಗಳು ಏಳುವುದು ಏಳು ಅಥವಾ ಏಳೂವರೆ ಗಂಟೆಗೆ. ಈ ಹಕ್ಕಿಗಳ ಕಲರವಕ್ಕೆ  ಎಲ್ಲರೂ ಅಂದು ಬೇಗ ಎದ್ದುಬಿಟ್ಟರು. ಏನೀದು ಗಲಾಟೆ ಅಂತ. ಕೆಲವರು ಶಾಪ ಹಾಕುವುದಕ್ಕೂ ಸರಿಯಾಯ್ತು..! ಓಡಿಸಲು ಹವಣಿಸಿದರು. ನನ್ನ ಕಣ್ಣು ಮುಚ್ಚಿದ್ದು ಬಿಡಲಾಗಲಿಲ್ಲ. ಹಕ್ಕಿ ಚಿಲಿಪಿಲಿಗೆ ನಾನು ಮಂಚದಲ್ಲೇ ಎಚ್ಚರವಾದೆ. ನನ್ನ ಒಬ್ಬ ಆಪ್ತನಿದ್ದಾನೆ. ಅವನಿಗೆ ಅಕ್ಕಿ ಮತ್ತು ಬ್ರೆಡ್‍ ಹಾಕಲು ವಿನಂತಿಸಿದೆ.
ಕೆಲವು ನಿಮಿಷಗಳ ನಂತರ ಅವನು ಬಂದ. ಅಕ್ಕಿ, ಬ್ರೆಡ್‍ಗಳ ಸುತ್ತ ಹಕ್ಕಿಗಳು ಹಾರಾಡಿದವು, ಆದರೆ ಅವು ತಿನ್ನಲಿಲ್ಲ, ಅವು ಹಾಗೆಯೇ ಇವೆ ಎಂದ. ನಾನು ಸುಮ್ಮನಾದೆ. ಕಣ್ಣು ಪುನಃ ಮುಚ್ಚಿಕೊಂಡೆ. ಒಂದರ್ಧ ಗಂಟೆಯ ನಂತರ ಎದ್ದು ಹೋದೆ. ಹೌದು..! ಅಕ್ಕಿ  ಮತ್ತು ಬ್ರೆಡ್‍ ಹಾಗೆಯೇ ಇದ್ದವು... ಗೆಳೆಯರು ಇರಲಿಲ್ಲ. ನಾನು ಒಂಟಿ.. ಈ ಮುಗ್ಧ ಮನಸ್ಸುಗಳು ಹೆಜ್ಜೆಯಿಕ್ಕಿದ ಸುತ್ತ ಬಂಜರು ಪ್ರದೇಶದ ಚಿತ್ರಣ. ಒಂದು ವ್ಯರ್ಥ ಸಂದರ್ಭದ ವೇದನೆಯ ಚಿಂತೆ ಕಾಡ ತೊಡಗಿತು. ಮಾನಸೀಕವಾಗಿ ಗೈರು ಹಾಜರಿಯ ಕರಾಳ ದರ್ಶನ. ಈ ಮುಗ್ಧ ಮನಸ್ಸುಗಳು ಮತ್ತು ಮನುಷ್ಯರ ನಡುವಿನ ವೆತ್ಯಾಸವೇನು ಅಂತ. ಭಾರವಾದ ಮನಸ್ಸು ... ಒಂದು ಜಡಿಮಳೆಗೆ ಮಿಂಚುಂಡ ಆಗಸದ ಕಾರ್ಮೋಡದಂತೆ...! ತೇವಗೊಂಡ ಕಣ್ಣುಗಳು ಸುತ್ತಲೂ ಹುಡುಕ ತೊಡಗಿದವು.... ಎಲ್ಲಿ ನನ್ನ ಮುಗ್ದತೆಗಳು...?!!!!!
ಒಂದು ಮುಂಜಾವು ಕಳೆದರೆ ಇನ್ನೊಂದು ಮುಂಜಾವಿನವರೆಗೆ ಕಾಯಬೇಕು ನಾನು. ಅವರು ಪಟ್ಟಣದ ಸುತ್ತಾ ಓಡಾಡುವ ಗೆಳೆಯರು. ಪ್ರತೀ ಮುಂಜಾನೆಗೆ ಬಂದೇ ಬರುತ್ತಾರೆ. ಮಾರನೇ ದಿನವೂ ಬಂದರು.ನಾನು ಬರುವ ಸೂಚನೆ ಸಿಕ್ಕಿದ್ದೇ ತಡ ಪಟಪಟನೆ ರೆಕ್ಕೆ ಬಡಿಯ ತೊಡಗಿದರು. ವೆರಾಂಡದ ಸುತ್ತಾ ಹಾರಾಡಿ ಆನಂದಿಸ ತೊಡಗಿದರು. ಜೊತೆಗೆ ಸುಶ್ರಾವ್ಯ ಗಾನದ ಸ್ವಾಗತ ನನಗೆ...!  "ನಿನ್ನೆ ಯಾಕೆ ಬರಲಿಲ್ಲ? ಅಂತ ಕೇಳುವ ಸ್ವರವೂ ಏನೋ?  " ಶುಭ ಮುಂಜಾವು" ನಿಮಗೆ ಗೆಳೆಯರೆ...! ಮನಸ್ಸಿನ ವಂದನೆ. ಅಕ್ಕಿ ಮತ್ತು ಬ್ರೆಡ್‍ ಹಾಕಿದಂತೆ ಗಬಗಬನೇ ತಿನ್ನತೊಡಗಿದರು. ಮೂರು ದಿನಗಳಿಂದ ಆಹಾರ ಸಿಗದವರ ಹಾಗೆ... ಅವುಗಳು ತಿನ್ನುತ್ತಿದ್ದಂತೆ ನನ್ನೊಳಗೆ ಏನೋ ಇಳಿದು ಹೋದಂತೆ..ಪರಿಪೂರ್ಣವಾಯಿತು ಮನಸ್ಸು....ಯಾವಾಗಲೂ ಅಕ್ಕಿ, ಬ್ರೆಡ್‍ ಹಾಕಿ ತಿನ್ನುತ್ತಿದ್ದಂತೆ ಅರ್ಧದಲ್ಲಿ ಬರುವ ಅಭ್ಯಾಸ ನನ್ನದು. ಅಂದು ಅವುಗಳು ಮುಗಿಸುವವರೆಗೆ ಅಲ್ಲೇ ನಿಂತಿದ್ದೆ. ಒಂದು ಆನಂದದ ಭಾಷ್ಪದೊಂದಿಗೆ. " ಶುಭ ಮುಂಜಾವು"  ಗೆಳೆಯರೆ ನಿಮಗೆ...! ಮತ್ತೊಮ್ಮೆ ಮನಸ್ಸಿನ ವಂದನೆ.

5 ಕಾಮೆಂಟ್‌ಗಳು:

 1. ನಿಮಗೂ ಸಹ ಬೆಳಗಿನ ವಂದನೆಗಳು..."ನಮ್ಮಂತೆಯೇ ಕೈಗಳಿದ್ದರೆ ಕೈ ಮುಗಿಯುತ್ತಿದ್ದವೇನೋ. ಅವುಗಳೂ ಹಾಗೇ ಆಲೋಚಿಸಬಹುದು ನನಗೂ ರೆಕ್ಕೆಗಳಿದ್ದರೆ ಬಡಿಯುತ್ತಿದ್ದನೇನೋ ಎಂದು." ನಿಮ್ಮ ಮೂಕ ಕಲ್ಪನೆಯ ಮಾತು ಹಕ್ಕಿಯಾಗಿ ಸ್ವಲ್ಪ ಹೊತ್ತು ನನ್ನ ಮನದಲ್ಲಿ ಮತ್ತಷ್ಟು ಕಲ್ಪನೆಗಳಿಗೆ ಹಾರಾಟ ಕಲಿಸಿತು. ಸಂಬಂಧಗಳ ನಡುವೆ ಅವಿತಿರುವ ಸೂಕ್ಷ್ಮಗಳಿಗೆ ಮಸೂರ ಹಚ್ಚಿದಂತಿತ್ತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  ಪ್ರತ್ಯುತ್ತರಅಳಿಸಿ
 2. ನಿಮಗೂ ಸಹ ಬೆಳಗಿನ ವಂದನೆಗಳು..."ನಮ್ಮಂತೆಯೇ ಕೈಗಳಿದ್ದರೆ ಕೈ ಮುಗಿಯುತ್ತಿದ್ದವೇನೋ. ಅವುಗಳೂ ಹಾಗೇ ಆಲೋಚಿಸಬಹುದು ನನಗೂ ರೆಕ್ಕೆಗಳಿದ್ದರೆ ಬಡಿಯುತ್ತಿದ್ದನೇನೋ ಎಂದು." ನಿಮ್ಮ ಮೂಕ ಕಲ್ಪನೆಯ ಮಾತು ಹಕ್ಕಿಯಾಗಿ ಸ್ವಲ್ಪ ಹೊತ್ತು ನನ್ನ ಮನದಲ್ಲಿ ಮತ್ತಷ್ಟು ಕಲ್ಪನೆಗಳಿಗೆ ಹಾರಾಟ ಕಲಿಸಿತು. ಸಂಬಂಧಗಳ ನಡುವೆ ಅವಿತಿರುವ ಸೂಕ್ಷ್ಮಗಳಿಗೆ ಮಸೂರ ಹಚ್ಚಿದಂತಿತ್ತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  ಪ್ರತ್ಯುತ್ತರಅಳಿಸಿ
 3. ಗೆಳೆಯ ರವಿ,
  ಮನಸ್ಸಿಗೆ ಮುಟ್ಟುವಂತಹ ಲೇಖನ. ನಿಸ್ವಾರ್ಥ ಮನುಷ್ಯನ ಪ್ರತಿಬಿಂಬ.
  ರಾಜು ವಿನಯ್ ದಾವಣಗೆರೆ

  ಪ್ರತ್ಯುತ್ತರಅಳಿಸಿ
 4. ಹಕ್ಕಿ ಮತ್ತು ಅಕ್ಕಿ, ಒಂದ್ ಪೀಸ್ ಬ್ರೆಡ್ಡು ಮುಂಜಾವಿನ ಅರ್ಧ ತಾಸಿನ ನಂಟು, ಸುಖಿಮನುಷ್ಯನಾಗುವುದು ಹೀಗೆ.

  ಪ್ರತ್ಯುತ್ತರಅಳಿಸಿ
 5. ನಮ್ಮೂರಲ್ಲಿ ಈ ರೀತಿಯಲ್ಲಿ ಆಗೋಲ್ಲ...
  ಆದರೆ ನಾವು ಬೆಂಗಳೂರಲ್ಲಿ ಇರುವಾಗ ಮನೆ ಸುತ್ತ ಬರುವ ಹಕ್ಕಿಗಳನ್ನು ನೋಡೋದೇ ಚೆಂದ..
  ಹೆಚ್ಚು ಹೆಚ್ಚು ಪಾರಿವಾಳಗಳು... ಆದರೆ ಅವುಗಳು ಕಿಟಕಿ ಬಳಿ ಬಂದು ಸದ್ದು ಮಾಡಿದಾಗ ಸ್ವಲ್ಪ ಕಿರಿ ಕಿರಿ ಮನಸ್ಸಿಗೆ...

  ನಿಮ್ಮ ಈ ಕಥೆಯು ... ವಿವರಿಸಿದ ಭಾವನೆಯೂ ಬಹಳಾ ಚೆನ್ನಾಗಿದೆ.. :)

  ಪ್ರತ್ಯುತ್ತರಅಳಿಸಿ