ಭಾನುವಾರ, ಮೇ 1, 2011

ಗೆಳತಿ ನಿನ್ನದೇ ನೆನಪು...


ಈ ದಿನ ನಿನ್ನದೇ ನೆನಪು
ಹಗಲು ಸಾಯುವ ಹೊತ್ತು
ಕತ್ತೆಲೆಗೆ ಹೆದರಿ ಉರಿಯುವ ದೀಪಕೆ
ಮತ್ತೆ ಬಾ ಹಗಲೆಂದ ಕನಸು..!

ನೀ ನಡೆದ ದಾರಿಯಲಿ
ತಲೆದೂಗಿದ ಗಿಡಗಂಟಿಗಳು
ಮರವಾಗಿ ಆಗಸಕೆ ಬೆಳೆದ ಸೊಗಸು..!
ಸಾಲು ಬೇಲಿಯ ಬಳ್ಳಿಗೂ
ನೀನುಟ್ಟ ಉಡುಗೆಯದ್ದೇ ಬಣ್ಣಗಳು
ಅಲ್ಲಲ್ಲಿ ಚುಕ್ಕಿಟ್ಟ ಕಾಡು ಹೂವುಗಳಿಗೂ
ನೀ ಮುಡಿದ ಮಲ್ಲಿಗೆಯ ಕಂಪು..!

ಮಾತು ಹಿಡಿಗಂಟಾಗಿ
ನಿಂತಿದ್ದ ಮರದ ಕೆಳಗೆ
ನಗುವಿಗೂ ಬೆಚ್ಚಿದ ಎಲೆಗಳು..!
ಜೀವ ತುಂಬಿವೆ ಸುತ್ತಲ ನೆರಳುಗಳು
ಚಿಲಿಪಿಲಿ ಚಪ್ಪಾಳೆ ತಟ್ಟಿ ಹಕ್ಕಿಗಳು
ಪ್ರೀತಿಗೆ ಸಾಕ್ಷಿಯದ ಅದರ ಮರಿಗಳು.!
ಗೆಳತಿ.. ಈ ದಿನ ನಿನ್ನದೇ ನೆನಪು...!

ಈ ಸಂಜೆ ರಾತ್ರಿಯಲಿ
ಕೋಣೆಗೂ ನಿನ್ನದೇ ಮಾತು
ಕಿಟಕಿ ಸರಳನು ಸೀಳಿ
ಬಂದ ಬೀಸಣಿಕೆ ಗಾಳಿಗೂ
ನಿನ್ನದೇ ಹೊಗಳಿಕೆಯ ಹಾಡು !
ಕನಸು ಬಚ್ಚಿಟ್ಟ ಮೋಡ
ಕಣ್‍ ರೆಪ್ಪೆ ಬೇಲಿಯ ದಾಟಿ
ಮಳೆ ಸುರಿದು ತಿಳಿಯಾದ ತಳುಕು..!

ಈ ರಾತ್ರಿ ಹಗಲಿನದೇ ಕನಸು
ಕತ್ತಲು ಸಾಯುವ ಹೊತ್ತು
ಸೂರ್ಯನಿಗೆ ಹೆದರಿ ನಂದಿದ ದೀಪಕೆ
ಮತ್ತೆ ಬಾ ನೆನಪೆಂದ ಮನಸು..!
-------------------------------------------
-ರವಿ ಮೂರ್ನಾಡು
ನಿಲುಮೆ | May 8, 2011 at 12:08 am | Categories: ಕವನಗಳು | 

2 ಕಾಮೆಂಟ್‌ಗಳು:

 1. ನಿಮ್ಮ ಮನಸ್ಸಿನ ಕನಸು ಭಾರಿ ಸೊಗಸಾಗಿದೆ..
  ಆ ನೆರಳು , ಚಿಲಿಪಿಲಿ ಹಕ್ಕಿಗಳ ಚಪ್ಪಾಳೆ
  ಕೋಣೆಯ ಮಾತು, ಕಿಟಕಿಯ ತಂಗಾಳಿ
  ಕನಸಿನ ಮೋಡ, ಹನಿ ಹನಿ ಮಳೆಯ
  ವರ್ಣನೆಗಳು ಬಹಳಾ ಇಷ್ಟವಾಯಿತು.. :)

  ಪ್ರತ್ಯುತ್ತರಅಳಿಸಿ
 2. ಎಲ್ಲೋ ಮೀಟಿ ಮತ್ತೇನನ್ನೋ ಕೆದಕಿ ಅಟಮಟಿಸಿ ಹೋಗುವಂತೆ ಕವಿತೆ ಬರೆದು ಕೊಡುವ ಶಕ್ತ ಕವಿ ನೀವು.

  ಜಾಯಮಾನಕೆ ಒಗ್ಗೋ ಸಿಟ್ಟಿಗೂ ಮೀರಿ, ಒಳ ಕವಿ ಪ್ರೇಮ ಉತ್ಖಲನಕ್ಕೆ ಮನಸು ಇಂಕಿಸುತ್ತಾನಲ್ಲ, ಆತನು ಮನಃ ಕವಿ.

  ಇಂತಹ ಕವನ ನಿಮ್ಮಿಂದಲಷ್ಟೇ ಸಾಧ್ಯ. ಇದಂತೂ ಕಾಲ ಕಾಲಕೂ ಹೃದಯ ಹಿಂಡೋ ಕವನ ಸೃಷ್ಟಿ.

  ಪ್ರತ್ಯುತ್ತರಅಳಿಸಿ