ಭಾನುವಾರ, ಮೇ 15, 2011

ನಂಬಿಕೆ ಎಂಬ ಹುತ್ತದೊಳಗೆ …."ಕೂರಿಯರ‍್" ಸಂಸ್ಥೆಗಳೆಂಬ ಹಾವುಗಳು.


-ರವಿ ಮೂರ್ನಾಡು
          ವ್ಯವಸ್ಥೆ ಹೇಗಿರುತ್ತೆ ಅಂದರೆ,ಸತ್ತವನನ್ನು ಹುಡುಕಿಕೊಂಡು ಪತ್ರ ಬರುತ್ತೆ. 2000 ನೇ ಇಸವಿಗೆ ಕಳುಹಿಸಿದ ಪತ್ರ ಹತ್ತು ವರ್ಷಗಳ ನಂತರ 2010 ರಲ್ಲಿ ಮನೆ ಬಾಗಿಲಿನಲ್ಲಿ ಬಂದು ನಗುತ್ತಿರುತ್ತದೆ. ಹಾಗಿದೆ ನಮ್ಮ ಪತ್ರ ವಿಲೇವಾರಿಯ ಸಿನೇಮಾ ಕಾರ್ಯಕ್ರಮ...! ನಗು ಬರಬಹುದು..ಜೊತೆಗೆ ಮಡುಗಟ್ತುತ್ತವೆ ವಿಷಾಧದ ಮೋಡ..!
          ಇದಕ್ಕೆ ಭಾರತೀಯ ಅಂಚೆ ಇಲಾಖೆಯಲ್ಲಿ ಬೇಕಾದಷ್ಟು ಪಟ್ಟಿಗಳು ಸಿಗುತ್ತವೆ.ಹಿಂದಿನ ಕಾಲದಲ್ಲಿ ಹೀಗೆ ಇಂತಹ ಸರಕಾರಿ ಸಾಮ್ಯದ ಇಲಾಖೆಗಳು ಪತ್ರಗಳ ಬಟಾವಾಡೆ ಮಾಡುವಾಗ ಬೆಳಕೇ ಇಲ್ಲದ ಗ್ರಾಮಗಳಲ್ಲಿ ಅಂಚೆ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಒಂದು " ಲಿಂಕ್‍" ಕೊಟ್ಟಿತ್ತು. ಅಂಚೆ ಇಲಾಖೆಯಲ್ಲಿ ಕೆಲವು ದೌರ್ಬಲ್ಯಗಳಿವೆ. ಅದನ್ನು ಸದುಪಯೋಗಿಸಿಕೊಂಡವರು " ಕೂರಿಯರ‍್" ಎಂಬ ಜಗತ್ತನ್ನು ತೆರೆದ ಈ ಹೊಟ್ಟೆಬಾಕ  ಖಾಸಗಿ ಸಂಸ್ಥೆಗಳು.
          ಕೂರಿಯರ‍್ ಸಂಸ್ಥೆಗಳ ಕಣ್ಣು ಕೆಂಪಾಗಬಹುದು.ಯಾಕೆ ಹೀಗೆ ಬರೀತಾ ಇದ್ದಾರೆ ಅಂತ, ಅದು ಒಂದು ಮಗುವಿನ ಹುಟ್ಟುಹಬ್ಬದ "ಕೂರಿಯರ‍್ ಕತೆ ".ಆ ಹಬ್ಬದ ಸುಸಂದರ್ಭವನ್ನು ಕತ್ತಲೆಯಲ್ಲಿ ಮುಳುಗಿಸಿದ್ದು ಈ ಕೂರಿಯರ‍್  ಎಂಬ ಬಹು ಸಂಖ್ಯಾತ ಸಂಸ್ಥೆಗಳು.ಇಂದಿನ ವ್ಯವಹಾರಿಕ ಪ್ರಪಂಚದಲ್ಲಿ ಎಷ್ಟೆಲ್ಲಾ ಕೂರಿಯರ‍್ ಸಂಸ್ಥೆಗಳಿವೆಯೂ ಅಲ್ಲೆಲ್ಲಾ ಇಂತಹ ಸಿನೇಮಾ ಮಾದರಿಯ ಉದಾಹರಣೆಗಳು ಸಿಗುತ್ತವೆ.ಸಿಗಬೇಕಾಗಿದ್ದು ಯಾರಿಗೂ, ಸಿಗೋದು ಯಾರಿಗೂ .. ಹುಚ್ಚರ ಕೂರಿಯರ‍್ ಸಂತೆಯಲಿ ಅಚಾನಕ್‍ ಅದೃಷ್ಟದ ಪಾರ್ಸೆಲ್‍ ಸಿಕ್ಕಿದವನಿಗೆ ಹಬ್ಬ...!
          ಮನುಷ್ಯನಿಗೆ ಒಂದು ಆಸೆ ಇರುತ್ತೆ. ತನ್ನವರ ಇಚ್ಚೆಯನ್ನ ಶೀಘ್ರ ಗತಿಯಲ್ಲಿ ತಲುಪಿಸಿಬಿಡಬೇಕೆಂದು.ಈ ವ್ಯವಹಾರಿಕ ಪ್ರಪಂಚದಲ್ಲಿ ಒಂದು ಗಳಿಗೆಯೂ ನಿಶ್ಚಿತವಲ್ಲ ಅಂತ.ಈ ಜಗತ್ತಿನ ಎಲ್ಲೇ ಇದ್ದರೂ ಅದನ್ನು ಶೀಘ್ರಗತಿಯಲ್ಲಿ ಮುಗಿಸಿಬಿಡಬೇಕೆಂದು.ಅವು ಜಗತ್ತಿನ ಜೀವವಿರುವ ಜೀವಿಗಳ ದೌರ್ಬಲ್ಯಗಳು. ಅದರಲ್ಲೂ ಮನಸ್ಸು ಅಂತ ಪಡೆದುಕೊಂಡ  ಮನುಷ್ಯನದು. ಜಗತ್ತೆಲ್ಲಾ ಹಾಗೇ, ದೌರ್ಬಲ್ಯಗಳನ್ನು ದುರುಪಯೋಗ ಪಡಿಸಿಕೊಂಡು ಬೇಳೆ ಬೇಯಿಸಿಕೊಂಡಿದ್ದೆ ಹೆಚ್ಚು. ಅದಕ್ಕೆ " ದಲ್ಲಾಳಿ"ಗಳೆಂಬ ಹೆಸರಿನಲ್ಲಿ ಹಣಕಾಗಿ ಬಾಯ್ದೆರೆದು ಬಂದವರು ಈ ಕೂರಿಯರ್ ಎಂಬ ಸಂಸ್ಥೆಗಳು, ಅಂತರ್ಜಾಲಗಳೆಂಬ ಹೆಸರಿನಲ್ಲಿ  ಕಣ್ಣೆದುರಿಗೇ ಆರಮನೆ ತೋರಿಸುವಂತವು.
ಮಗುವಿನ ಹುಟ್ಟುಹಬ್ಬದ " ಕೂರಿಯರ‍್ ಕತೆ " ಹೀಗೇ ಪ್ರಾರಂಭವಾಗುತ್ತದೆ... ಹುಟ್ಟುಹಬ್ಬ ಬರುತ್ತದೆ ಏಪ್ರೀಲ್‍ 10 ನೇ ತಾರೀಕಿಗೆ.ಇಂಟರ‍್ ನ್ಯಾಷನಲ್‍ ಕೂರಿಯರ‍್ ಅಂದ್ರೆ 4  ದಿನಗಳಲ್ಲಿ  ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಅನ್ನುವ ಜಾಹಿರಾತಿನ ಸ್ಲೋಗನ್‍.ಈ ಒಂದು ವಿಪರ್ಯಾಸಕ್ಕೆ ನನ್ನ ಸ್ವಂತ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ಅದು ಎಲ್ಲರದ್ದು ಆಗಿರುತ್ತದೆ.ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ  ಹೆಚ್ಚೆಂದರೆ ಒಂದು ಲಕ್ಷ ನನ್ನ ಸಹೃದಯರಿಗೆ ಅದರ ಅನುಭವವಾಗಿದೆ.
          ಕುವೈತ್ತಿನಿಂದ ನನ್ನ ತಂಗಿ ಮಗುವಿನ ಹುಟ್ಟುಹಬ್ಬಕ್ಕೆಂದು ಸ್ವಲ್ಪ ಬೆಲೆಯ ಉಡುಗೆ ಕಳುಹಿಸುತ್ತಾಳೆ.ಅದು ಕೊಡಗಿನ ಮಡಿಕೇರಿಗೆ .ಅವಳ ಹೆಸರು ಸುನೀತಾ ಅಂತ. ಉಡುಗೆ ಕಳುಹಿಸುವಾಗ ಮಗುವಿನ ತಾಯಿಗೂ ಒಂದು ಸೀರೆ.ಅಲ್ಲಿಂದ  31/03/2011 ನೇ ತಾರೀಕು "ಗ್ಲೋಬಲ್‍ ಎಕ್ಷ್‍ಪ್ರೆಸ್‍" ಅಂತರ‍್ ರಾಷ್ಟ್ರೀಯ ಸಂಸ್ಥೆಯ ಮೂಲಕ ಡಿ.ಹೆಚ್‍.ಎಲ್‍. ಇಂಟರ‍್ ನ್ಯಾಷನಲ್‍ ಕೂರಿಯರ್ ಸಂಸ್ಥೆ ಮುಂಬೈಗೆ ತಂದಿತು. ಅದು ತಾರೀಕು  01/04/2011.ಅದರ ಏರ‍್ ವೇ ಬಿಲ್‍ ನಂ. 00529436.
          ಈ ಮುಂಬೈಯ ಡಿ.ಹೆಚ್‍.ಎಲ್‍. ಕೂರಿಯರ‍್ ಸಂಸ್ಥೆ ಕಚೇರಿ ಇದೆಯಲ್ಲಾ, ಅದು ನಮ್ಮ ದೇಶದ  " ಪ್ರೋಫೆಷನಲ್‍ ಕೂರಿಯರ‍್" ಅನ್ನುವ ಸಂಸ್ಥೆಗೆ ಹಸ್ತಾಂತರಿಸಿತು.ಅಲ್ಲಿಂದ ಪಾರ್ಸೆಲ್‍ ನಂ. 111066907 ಅಂತ ಸಿಕ್ಕಿದೆ.ಇದು ಪ್ರೋಫೆಷನಲ್‍ ಕೂರಿಯರ‍್ ಸಂಸ್ಥೆ ನಂಬರು.ಅದಕ್ಕೆ " ಟ್ರ್ಯಾಕಿಂಗ್‍ ನಂಬರ‍್" ಅಂತ ಅದು ಹೇಳುತ್ತದೆ. ಈ ಪಾರ್ಸೆಲ್‍ ಮುಂಬೈಯಿಂದ ಬೆಂಗಳೂರಿಗೆ ಬರುತ್ತದೆ ತಾರೀಕು 05/04/2011 ರಂದು.ಕಡಿಮೆ ಪಕ್ಷ ಅಂದ್ರೆ,ಎರಡು ದಿನದಲ್ಲಿ ಈ ಪಾರ್ಸೆಲ್‍ ಕೊಡಗಿನ ಮಡಿಕೇರಿಗೆ ತಲುಪಿ,ಮಗು ಮತ್ತು ತಾಯಿಯ ಕೈ ಸೇರಬೇಕಿತ್ತು. ಅದಕ್ಕಿರುವ ಎಲ್ಲಾ ಏರ್ಪಾಡು ಬೆಂಗಳೂರಿನ ಪ್ರೋಫೆಷನಲ್‍ ಕೂರಿಯರ್ ಆಫೀಸ್ಸಿನಲ್ಲಿ ನಡೆದಿದೆ. ಪಾರ್ಸೆಲ್‍ನ ಮಂಗಮಾಯ ಕತೆ ನಿಜವಾಗಿ ಇಲ್ಲಿಂದ ಪ್ರಾರಂಭವಾಗುತ್ತದೆ. ಹಾಗಂತ, ಅಲ್ಲಿಯ ಕಸ್ಟಮರ‍್ ಕೇರ‍್ ವ್ಯವಸ್ಥಾಪಕ ದಿನೇಶ್‍ ಎಂಬವರು ಹೇಳುತ್ತಾರೆ.ಅದು ನಡೆದದ್ದು ತಾರೀಕು  06/04/2011 ರಂದು.ಬೆಂಗಳೂರಿನಿಂದ ಮಡಿಕೇರಿಗೆ ಈ ಪಾರ್ಸಲ್‍ ರವಾನೆಯಾಗಿದೆ ಅಂತ ಮಾಹಿತಿ ಸಿಗುತ್ತದೆ.ಅದರ ಬಗ್ಗೆ " ಮೈಲ್‌" ಸಂದೇಶ ಕೂಡ ಬಂದಿದೆ ಬೆಂಗಳೂರು ಕಚೇರಿಯಿಂದ. ತದನಂತರ ಈ ಪಾರ್ಸೆಲ್‍ ಬಗ್ಗೆ ಯಾರಿಗೂ ಮಾಹಿತಿಯಿಲ್ಲ.ಮಡಿಕೇರಿಯವರನ್ನು ವಿಚಾರಿಸಿದರೂ ಮಾಹಿತಿಯಿಲ್ಲ.ಬೆಂಗಳೂರಿನವರಿಗೂ ಮಾಹಿತಿಯಿಲ್ಲ. ಪಾರ್ಸೆಲ್‍ ಕೈಸೇರುವವರಿಗೆ ಸೇರಲೂ ಇಲ್ಲ. ಹಾಗಾದರೆ ಏನಾಯಿತು.? ಈಗ ನಾವೇನು ಮಾಡಬೇಕು. ?
          ಮಡಿಕೇರಿಯವರಿಗೂ ಗೊತ್ತಿಲ್ಲ. ಬೆಂಗಳೂರಿನವರಿಗೂ ಮಾಹಿತಿಯಿಲ್ಲ ಅಂದರೆ ಮಗುವಿಗೆ ಏನು ಉತ್ತರ ಕೊಡುವುದು? ಇಂದಿಗೂ ಮಗು ಕೇಳುತ್ತಿದೆ, ಹೇಗೆಂದರೆ," ಕುವೈತ್ತಿನಿಂದ ಆಂಟಿ ಬಟ್ಟೆ ಕಳುಹಿಸಿದ್ದಾರೆ ನೀವು ಕೊಡಲಿಲ್ಲ.ಅಮ್ಮ ನೀನು ಸುಳ್ಳು ಹೇಳುತ್ತಿ" ಅಂತ. ಹೌದು..! ಮಗು ಹೇಳುತ್ತಿರುವ ಮಾತು ಸರಿಯಾಗಿಯೇ ಇದೆ.ಆಂಟಿ ಬಟ್ಟೆ ಕಳುಹಿಸಿದ್ದಾರೆ ಪ್ರೋಫೆಷನಲ್‍ ಕೂರಿಯರ‍್ ನವರು ಕೊಡಲಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ.ಇಲ್ಲಿ ಸತ್ಯ ಉಂಟು.ಇದು ಪ್ರೊಫೇಷನಲ್‍ ಕೂರಿಯರ‍್ ಮಂದಿಗೆ ಗೊತ್ತಿದೆಯೇ? ಮಗುವಿನ ಭಾವನೆಗೆ ತಣ್ಣೀರೆರಚಿದ  ಈ ಮಂದಿಗೆ ಹೇಗೆ ವಿವರಿಸುವುದು?
          ಇದರ ಜಾಡನ್ನರಸಿದಾಗ ಸಿಕ್ಕಿದ  ಮಾಹಿತಿ ವಿಚಿತ್ರವಾಗಿದೆ. ಇದಕ್ಕಿಂತ ಮೊದಲು ಬೆಂಗಳೂರಿನವರಿಗೂ ಮತ್ತು ಮಡಿಕೇರಿಯವರಿಗೂ ದೂರವಾಣಿ ಕರೆ ಮಾಡಿ ಮಾಡಿ ಕಳುಹಿಸಿದ ಪಾರ್ಸೆಲ್‍ ಹಣದಷ್ಟು ಖರ್ಚಾಗಿತ್ತು..ಏಕೆಂದರೆ,ಈ ಪಾರ್ಸೆಲ್‍ ವಿಷಯವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿತ್ತು. ಅದೂ ಬೆಂಗಳೂರು ಮತ್ತು ಮಡಿಕೇರಿಯಿಂದಲೂ ಲಭಿಸಿದ್ದಲ್ಲ. ಮಾಹಿತಿ ಜಾಲಾಡಿದ್ದು, ಕುವೈತ್ತಿನ ಗ್ಲೋಬಲ್‍ ಏಕ್ಷ್‍ಪ್ರೆಸ್‍ ಕೂರಿಯರ್ ಸಂಸ್ಥೆ.ತಾರೀಕು 06/04/11  ರಂದು ಪಾರ್ಸೆಲ್‍ ವಿಲೇವಾರಿ ವಿಭಾಗದಿಂದ ಮಡಿಕೇರಿಗೆ ರವಾನೆ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಹಾಗಂತ ದಾಖಲೆಯಿದೆ.ಆದರೆ,ವಿಲೇವಾರಿ ವಾಹನ ಮೇಲುಸ್ತುವಾರಿ ಮಂದಿಗಳು ಬೇರೊಬ್ಬ ವಿಳಾಸದಾರರಿಗೆ ತಪ್ಪಾಗಿ ತಲುಪಿಸಿದೆ ಅಂತ ಹೇಳುತ್ತಿದೆ.ಹಾಗಾದರೆ, ಪಡೆದುಕೊಂಡವರ ಹೆಸರು, ಸಹಿಯ ಮಾಹಿತಿ ಕೊಡಿ ಅಂದರೆ , ಉತ್ತರ ಇಲ್ಲ.ನಂಬಿಕೆ ಏನಾಯಿತು? . ಈ ಪ್ರೋಫೆಷನಲ್‍ ಕೂರಿಯರ‍್ ಬೆಂಗಳೂರು ಕಚೇರಿ ಕುವೈತ್ತಿನ ಗ್ಲೋಬಲ್‍ ಎಕ್ಷ್‍ಪ್ರೆಸ್‍ ಸಂಸ್ಥೆಗೆ ತಪ್ಪು ಮಾಹಿತಿ ನೀಡಿದೆ.ಅಂದರೆ, ಈ ಪಾರ್ಸೆಲನ್ನು ಪ್ರೋಫೆಷನಲ್‍ ಕೂರಿಯರ‍್ ಸಂಸ್ಥೆಯ ಮಂದಿಯೇ  ಸ್ವತಃ ಮನೆಗೆ ತೆಗೆದುಕೊಂಡು ಹೋದರು ಅಂತ ಸಂಶಯ ಸೃ ಷ್ಠಿ ಸಿಕೊಳ್ಳಬಹುದಲ್ಲವೇ? ಏಕೆಂದರೆ ಅದು ತುಂಬಾ ಚೆಂದದ ಮಗುವಿನ ಬಟ್ಟೆಗಳು ಮತ್ತು ಮಗುವಿನ ತಾಯಿಯ ಸೀರೆಯೂ.ತಂಗಿಯ ಬಣ್ಣಗಳ ಸೆಲೆಕ್ಶನ್ ಅಂದರೆ ಎಲ್ಲರಿಗೂ ಇಷ್ಟ...!
          ಇದೊಂದು ಸಣ್ಣ ಅನುಭವವಷ್ಟೇ.ಇಂತಹ ಸಾವಿರಾರು ನಂಬಿಕೆ ದ್ರೋಹ ಘಟನೆಗಳನ್ನು ಇಂತಹ ಸಂಸ್ಥೆಗಳು ಸೃಷ್ಠಿಸುತ್ತವೆ.ಅಂಚೆ ಇಲಾಖೆಯ ಕಥೆಯೇ ಬೇರೆ. ಕಡಿಮೆ ವೆಚ್ಚದಲ್ಲಿ  ಸೇವೆಯನ್ನು ಒದಗಿಸುವುದು ಅಂತ  ಅದರ ಹೆಸರು.ಕೆಲಸಕ್ಕೆಂದು ಕಂಪೆನಿಯವರೋ ಅಥವಾ ಸರಕಾರಿ ಇಲಾಖೆಗಳೋ ಪತ್ರ ಕಳುಹಿಸಿದರೆ,ಕೆಲಸಕ್ಕೆಂದು ಇನ್ನೊಂದು ಜಾಹಿರಾತು ಪ್ರಕಟಣೆಯನ್ನು ಪತ್ರಿಕೆಯಲ್ಲಿ ನೋಡುವಾಗ ಈ ಪತ್ರ ಕೈ ಸೇರುತ್ತವೆ.ಮರಣದ ಸುದ್ದಿಯ ಸಂದೇಶವೂ ಅಷ್ಟೆ, ತಿಥಿಯ ದಿನ ಸಂದೇಶ ಬರುತ್ತದೆ. ತಿಥಿಗೆ ಪತ್ರ ಕಳುಹಿಸಿದರೆ ಪುಣ್ಯತಿಥಿಗೆ ಪತ್ರ ಸಿಗುತ್ತದೆ. ಅಂತಹ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತಹ ಸಿನೇಮಾ ಮಾದರಿಯ ಘಟನೆಗಳು ಅಂಚೆ ಇಲಾಖೆ ಮತ್ತು ಈ ಖಾಸಾಗಿ ಕೂರಿಯರ‍್ ಸಂಸ್ಥೆಗಳಿಂದ ದಾಖಲೆಯಾಗುತ್ತವೆ.
          ಈ ಕೂರಿಯರ‍್ ಸಂಸ್ಥೆಗಳು ಅಂತರ್ಜಾಲಗಳಲ್ಲಿ ತಮ್ಮ  ಅಕೌಂಟ್‍ ತೆರೆದಿರುತ್ತವೆ. ಅದರಲ್ಲಿ " ಕಸ್ಟಮರ‍್ ಕೇರ‍್" ಅಂತ ಬ್ರೌಸರ‍್  ಬೇರೆ. ನಮ್ಮ ಸಮಸ್ಯೆಗಳ ಬಗ್ಗೆ ಬರೆದು ಕಳುಹಿಸಿದರೆ, ಸತ್ತೇ ಹೋಗಿರುತ್ತದೆ. ಅದೇ ರೀತಿ " ಟ್ರ್ಯಾಕೀಂಗ್‍ ನಂಬರ‍್" ಅಂತ. ಅವರು ಕೊಟ್ಟ ಟ್ರ್ಯಾಕ್ಕಿಂಗ್‍ ನಂಬರಿಂದ ನಮ್ಮ ಸೇವೆ ಹುಡುಕಿದರೆ " ನಿಮ್ಮ  ನಂಬರ‍್ ತಪ್ಪಾಗಿದೆ" ಅಂತ ಇಂಗ್ಲೀಷಿನಲ್ಲಿ ಒದರುತ್ತದೆ. ಅದು ಕಂಪ್ಯೂಟರು....! ಉಗಿಯುವಂತೆಯೂ ಇಲ್ಲ. ನುಂಗುವಂತೆಯೂ ಇಲ್ಲ.
          ಪ್ರಾಣಿಗಳು ಮನುಷ್ಯನಿಗಿಂತ ಮೇಲು. ಇತಿಹಾಸದಲ್ಲಿ ಓದಿದಂತೆ. ಪಾರಿವಾಳಗಳು, ಹಂಸಗಳು ಪತ್ರ ರವಾನಿಸುವ " ಪೋಸ್ಟ ಮಾಸ್ಟರ‍್’ ಕೆಲಸ ಮಾಡುತ್ತಿದ್ದವು.ಇತಿಹಾಸದಲ್ಲಿ ಇದರ ತಪ್ಪು ಬಟವಾಡೆಯ ಬಗ್ಗೆ ಅಂಕಿ ಅಂಶಗಳು ದಾಖಲೆಯಾಗಿಲ್ಲ.ಅದು ಕಾಳಿದಾಸನ ಕೆಲವು ಕವಿತೆಗಳಲ್ಲಿ ಓದಿದ್ದೇವೆ.ವಿಶ್ವಾಸ  ಅಂದರೆ" ನಂಬಿಕೆ’ಗೆ ನಿಜವಾದ ಬೆಲೆ ಸಿಗುತ್ತಿತ್ತು. ಅದೇ ರೀತಿ ನಾಯಿ ಕೂಡ.ನಾಯಿಯ ನಿಯತ್ತು ಹಣ ತೆಗೆದುಕೊಂಡು ಸೇವೆ ಸಲ್ಲಿಸುತ್ತೇವೆ ಎಂಬ "ಡ್ರಾಮ" ಮಾಡುವ ಕೂರಿಯರ‍್ ಸಂಸ್ಥೆಗಳಿಗೂ ಇಲ್ಲ. ಮನುಷ್ಯನ  ಮನಸ್ಸನ್ನು ಮತ್ತು  ಅವನ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತವೆ. ಹಣ ಸಂಪಾದನೆ ಮಾಡಬಹುದು, ಅದರೆ ನಂಬಿಕೆ ?!. ಪಾರ್ಸೆಲ್‍ ಸಿಗಲಿಲ್ಲ ಅಂದರೆ, ಹಣಕೊಟ್ಟು ಇನ್ನೊಂದು ಪಾರ್ಸೆಲ್‍ ಕಳುಹಿಸಬಹುದು, ಅಂದರೆ ಆ ಪಾರ್ಸೆಲ್‍ನ ಮೇಲೆ ಇಟ್ಟಿರುವ ನಂಬಿಕೆಯ ಬೆಲೆ ಏನು?, ಅದನ್ನು ಪಡೆದುಕೊಳ್ಳುವವರ ಪ್ರೀತಿಯ ವಿಶಾಲತೆ ಏನು? ಕೂರಿಯರ‍್ ಸಂಸ್ಥೆ ಅರ್ಥ್ಯಯಿಸಿಕೊಳ್ಳಬೇಕು,

1 ಕಾಮೆಂಟ್‌: