ಸೋಮವಾರ, ಮೇ 16, 2011

ಗ್ಲೋರಿಯಾ.... ಒಂದು ನೆನಪು


ಹೀಗೆಯೆ ಇದ್ದಳು ಗ್ಲೋರಿಯಾ
ಒಂಟಿ ಮೇಣದ ಬತ್ತಿಗೆ
ಉರಿವ ಸುಡುವ ಕಿಡಿಯಾಗಿ
ಬಾಚಿ ತಬ್ಬುವ ಕತ್ತಲೆಗೆ
ಒಂದು ಹಿಡಿ ಬೆಳಕಾಗಿ..

ದೇಶ-ಕಾಲ-ವರ್ತಮಾನದ ಹಕ್ಕಿ
ಚಿಲಿಪಿಲಿಗುಟ್ಟಿದ ಒಂದು ದಿನ
ಹಗಲು-ರಾತ್ರಿಗೆ ಹುಟ್ಟುಹಬ್ಬ
ಉಕ್ಕಿದ ನದಿಗೆ- ಬಿಕ್ಕಿದ ಕಡಲಿಗೆ
ಇಥಿಯೋಫಿಯಾದ ನಾಡಲ್ಲಿ ಸಂಭ್ರಮ

ಇಂದು- ನಾಳೆಯ ರಥಕ್ಕೆ
ಸೆರಗ ನೆಯ್ದವಳು ಗ್ಲೋರಿಯಾ
ದುಂಡಗಿನ ದೇಹ- ಜಿನುಗುವ ಯೌವ್ವನ
ಬೀಜದ ಹಣ್ಣಿಗೆ ಚಿಗುರು ಕೆರತ
ಬಿಗಿತ- ಸುಗಂಧ ಲೇಪ
ನೆರತ ಕೂದಲಿಗೆ ಸಾವೇ ಭೂತ

ಬಾ ಎಂದು ಕುದಿಯುವ ಹರೆಯ
ತೊರೆ ನದಿಯಾಗಿ- ಉಕ್ಕಿ ಜಲಪಾತವಾಗಿ
ಮುಸ್ಸಂಜೆಗೆ ಮುಡಿದ ಮಲ್ಲಿಗೆಯಾಗಿ
ಕರೆದ ಹುಡುಗನಿಗೆ ಉರಿದ ಮೇಣವಾಗಿ
ಸುಕ್ಕು ಅಲೆಗಳಿಗೆ - ಸಿಕ್ಕು ಬಂಡೆಗಳಿಗೆ
ಈಜುವ ಮೀನಾಗುತ್ತಾಳೆ ಗ್ಲೋರಿಯಾ..

ಕತೆ ಹೇಳುತ್ತವೆ ನಿಲ್ದಾಣಗಳು
ಮೈಲುಗಲ್ಲುಗಳು- ಮಲಗಿದ ಮಂಚಗಳು
ಮಮ್ಮಲ ಮರುಗಿದ ಕನಸುಗಳು
ಹೀಗೆಯೇ ಇದ್ದಳು ಗ್ಲೋರಿಯಾ
ನಗುವ- ಅಳುವ ಭಾವಚಿತ್ರವಾಗಿ
ಬಿರುಕು ಗೋಡೆಗೆ ಜೇಡರ ಬಲೆಯಾಗಿ.
-----------------------------------------------------
-ರವಿ ಮೂರ್ನಾಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ