ಭಾನುವಾರ, ಮೇ 22, 2011

ಅವರು ಮಾತನಾಡುತ್ತಾರೆ...!


ನಾನು ನಿನ್ನ ಪ್ರೀತಿಸುತ್ತೇನೆಂದು
ಅವರಿಬ್ಬರೂ ಮಾತಾಡಿದರು
ದಟ್ಟ ಕಗ್ಗತ್ತಲ ಮಳೆ-ಚಳಿಗೆ
ಪಿಸುಗುಟ್ಟೋದು ತುಂಬಾ ಚೆಂದ
ಅನ್ನ ಪಾತ್ರೆಗೆ- ಪ್ರೀತಿ ಹೃದಯಕೆ...!

ಹಾಸಿಗೆ- ಕೋಣೆ-ರಸ್ತೆ-ಪಾರ್ಕು
ಹಗಲು-ರಾತ್ರಿ ಕಿಚಾಯಿಸಿದರು
ಸದ್ದಿಲ್ಲದ ಒಂಟಿ ರಾತ್ರಿಗೆ
ನಾಲ್ಕು ಕೈಗಳು ದೇಹದ ಅಳತೆಗೆ
ನಡು-ನಡುವೆ ಅವರು ಹೇಳಿದರು
ನನಗೆ ನಿನ್ನ ತುಂಬಾ .. ಇಷ್ಟ...!

ಲೈಲಾ- ಮಜ್ನು ಹಾಡಿದ ಹಾಡಿಗೆ
ಅವನು ನದಿಯಂತೆ ಹರಿಯುತ್ತಾನೆ
ಅವಳು ಸಾಗರದಂತೆ ತುಂಬುತ್ತಾಳೆ
ಹಗಲಿನ ರಸಿಕತೆಗೆ ರಾತ್ರಿ ಮುಲುಗುಟ್ಟುತ್ತದೆ
ಭೂಮಿ- ಸೂರ್ಯ- ಅಜ್ಜ- ಅಜ್ಜಿ
ನಿದ್ದೆಯ ಮಂಪರಿನಲಿ ಮಾತಾಡಿದರು
ಬೆವರು ಸುರಿದರೆ ಆಯಾಸವಾಗೋದು ಸಹಜ...!

ಹರೆಯದ ಹುಡುಗರನು ಹುಚ್ಚೆಬ್ಬಿಸಿದ ಹುಡುಗಿಗೆ
ಕನಸ ತುಂಬಿದ ಪ್ರಿಯಕರನ ಮುಖ
ಅದೇ ಹಾಸಿಗೆ- ಅದೇ ಹಾಸುಗಲ್ಲು
ಅದೇ ಬೆವರ ವಾಸನೆ- ಸ್ಪರ್ಶಕೆ ಹೆಸರಿಲ್ಲ
ಅವನು ಕೇಳುವುದಿಲ್ಲ- ಅವಳು ಹೇಳುವುದಿಲ್ಲ
ಅವರಿಬ್ಬರಿಗೂ ಮೌನವೇ ಬಂಗಾರ
ತಾಳಿ ಕಟ್ಟಿದ ಮೇಲೆ ಜೀವನವೇ ವ್ಯಾಪಾರ...!

ಅರೆಬರೆಯ ಕನಸಿನಲಿ
ಹರೆಯವ ಜಾಡಿಸಿ ಎದ್ದವಳಿಗೆ
ಗೊತ್ತಿರಲಿಲ್ಲ..ಅವನು ಕಾಮ-ಅವಳು ಪ್ರೇಮ
ಕಾಮವೇ ಪ್ರೇಮದ ಶತ್ರು..!
ಆಟದ ಗುರಿ ಗೆಲುವು..!
ಹಕ್ಕಿ-ದುಂಬಿ-ಕಾಮನಬಿಲ್ಲು ಮಾತಾಡುತ್ತದೆ
ಗುಡುಗು-ಮಿಂಚು-ಮೋಡದ ಘರ್ಷಣೆಗೆ
ಆಗಸಕೆ ಸಹಿಸಲಾಗದ ಬೆವರು
ಭೂಮಿಗೆ ಬಿದ್ದರೆ, ಮಳೆಯೆಂಬ ಹೆಸರು.

ಗೊತ್ತೇ.. ಇರಲಿಲ್ಲ
ಕಾಮ ಜೀವ ಬೆಳೆಸುವ ಬೇರು
ಒಂದೇ ಒಂದು ಮಳೆಗೆ
ರೆಂಬೆ-ಕೊಂಬೆ- ಹೂವು-ಹಣ್ಣು
ಮಾಗುವುದು ಪ್ರೇಮದ ಹಣ್ಣು..!

ಗಂಡಸರು-ಹೆಂಗಸರು-ನಾವು-ನೀವು
ಎಲ್ಲರೂ ಮಾತಾಡಿದರು..
ಬೇರಿನಿಂದ ಮರ- ಮರದಿಂದ ಹಣ್ಣು
ಹಣ್ಣಿನ ಗುರಿ ಚಿಗುರುವ ಬೀಜ..!
ಮೋಹದಿಂದ ಪ್ರೇಮ- ಪ್ರೇಮದಿಂದ ಕಾಮ
ಗಂಡು-ಹೇಣ್ಣಿನ ಗುರಿ ಸೃಷ್ಠಿ...!
-ರವಿ ಮೂರ್ನಾಡು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ