ಭಾನುವಾರ, ನವೆಂಬರ್ 11, 2012

ಮೆಲ್ಲಗೆ ನಡೆ ಮುದ್ದಿನ ಮಗಳೇ ..!


ಮೆಲ್ಲಗೆ ನಡೆ ಮುದ್ದಿನ ಮಗಳೆ
ಎಚ್ಚರವೆದ್ದಿತು ಮಗು ಒಳಗೆ ....

ಎಚ್ಚರವಾಗದಮ್ಮ, ಮಲಗಿಯೇ ಇದೆ
ತೂಗಿದ್ದಾನೆ ದೇವ ಸದಾ ನಡೆಗೆ !

ಮೆಲ್ಲಗೆ ಕುಳಿತುಕೊ ಮಲ್ಲಿಗೆ ಮಗಳೆ
ನೋವೆದ್ದಿತು ಮಗು ಒಳಗೆ....

ನೋವಾಗದಮ್ಮ ಆಡುತ್ತಲೇ ಇದೆ
ಒದೆಯುತ್ತಿದೆ ಹೊಟ್ಟೆಗೆ ಮೇಲೆ ಕೆಳಗೆ!

ತಟ್ಟೆ ತುಂಬಾ ತಿನ್ನು ಅನ್ನದ ಮಗಳೆ
ಹಸಿವೆದ್ದಿತು ಮಗು ಹಾಲಿಗೆ ಒಳಗೆ...

ಹಸಿವಾಗದಮ್ಮ ಕರಳೇ ತಬ್ಬಿದೆ
ದೇವರ ಎದೆಯಲಿ ಹಾಲೇ ಹರಿದಿದೆ!

ಸ್ನಾನ ಬಿಸಿಯಿರಲಿ ತಂಗಾಳಿ ಮಗಳೆ
ಮಳೆ ಕುಡಿಯುತ್ತಿದೆ ಮಣ್ಣು ಹೊರಗೆ...

ಕುಡಿದರೆ ಕುಡಿಯಲಮ್ಮ ಉಸಿರು ಬಿಸಿಯಿದೆ
ಮಳೆ-ಗಾಳಿ ಮಣ್ಣಿಗೆ ಹಸಿರು ಚಿಗುರಿದೆ!

ಮೆಲ್ಲಗೆ ಮಲಗು ಹೂವಿನ ಮಗಳೆ
ಜೀವ ಎರಡಿದೆ ನಿದ್ದೆಯ ಮಂಚಕೆ...

ಜೀವ ಮೂರಿದೆಯಮ್ಮ ಮತ್ತೊಂದು ತಾಳಿಗೆ
ಭುವಿ-ಭಾನು ನಾವು ಚಂದ್ರ ಬಾಳಿಗೆ!

ನೋವ ಸಹಿಸಿಕೊ ಸಹನೆಯ ಮಗಳೆ
ಹಾಸಿಗೆ ಮೆತ್ತಗೆಯಿದೆ ಭುವಿ ಮಡಿಲ ತೆಕ್ಕೆಗೆ ....
 
ನೋವಿದೆಯಮ್ಮ, ತುಟಿ ಏಳು ಸೀಳಿದೆ
ಬಿದ್ದ ಮಣ್ಣಿಗೆ ಬೀಜ ಕಣ್ಣೆರಡು ಬಿಟ್ಟಿದೆ !
-ರವಿ ಮೂರ್ನಾಡು

4 ಕಾಮೆಂಟ್‌ಗಳು:

  1. ತಾಯಿಯ ಅಕ್ಕರೆ, ಮಗಳ ಚತುರತೆಯ ಉತ್ತರದಿ೦ದ ಕೂಡಿದ ಕವನ ಸೊಗಸಾಗಿದೆ, ಅಭಿನ೦ದನೆಗಳು.ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ಪ್ರತ್ಯುತ್ತರಅಳಿಸಿ
  2. ನನಗೆ ಅತ್ಯಂತ ಮುದ ನೀಡಿದ ಕವನವಿದು. ಜಗದೋದ್ಧರನ ಹೊರುವ ಆ ತಾಯಿ ತಣ್ಣಗಿರಲಿ. ಆಕೆಯ ನೋವಿಗೆ ಸ್ಪಂದಿಸಿದ ನಿಮ್ಮ ಮನಸ್ಸು ದೊಡ್ಡದು.

    ಪ್ರತ್ಯುತ್ತರಅಳಿಸಿ
  3. ಮಾತಿನಲ್ಲಿ ಬರುವ ಸಹಜತೆಯ ಜೊತೆಯಲ್ಲಿ ತಾಯಿಯ ಪ್ರೀತಿಯನ್ನು , ಕಾಳಜಿಯನ್ನು , ಅಕ್ಕರೆಯ ನುಡಿಗಳ ಸವಿಯನ್ನು ಮತ್ತು ಜಗತ್ತನ್ನು ವಿಶಾಲವಾಗಿ ನೋಡಬೇಕು ಎನ್ನುವ ಆಲೋಚನೆಯ ವಿಚಾರವೂ ಸೇರಿದಂತೆ ಅದ್ಭುತವಾಗಿ ರೂಪಗೊಂಡಿರುವ ಕವಿತೆ .. ಸೊಗಸಾಗಿದೆ ಸರ್... :)

    ಪ್ರತ್ಯುತ್ತರಅಳಿಸಿ