ಭಾನುವಾರ, ಸೆಪ್ಟೆಂಬರ್ 9, 2012

ಹೀಗೊಂದು ಕನ್ನಡ ರಾಜ್ಯೋತ್ಸವ ನುಡಿ ಪ್ರಶಸ್ತಿ !



ಜಗದಗಲದ ಯಾವುದೋ ಮೂಲೆಯಲ್ಲಿ ಕುಳಿತು ಸದ್ದಿಲ್ಲದೆ ಯಾರೋ ಕವಿತೆ-ಕಥೆ ಬರೆದರು. ತಮ್ಮದೇ ಅನುಭವದ ವಿಶಿಷ್ಟ ಬರಹದ ಸಾಹಿತ್ಯ ಬರೆದು ಪ್ರಕಟಣೆಗೆ ದಿಕ್ಕಿಲ್ಲದೆ ಹತಾಶಾರಾದರು. ಅಂತಹವರ ಸಂಖ್ಯೆ ಸಾವಿರಾರು. ತಾವು ಬರೆದದ್ದು ಸಾಹಿತ್ಯವೇ? ಅಥವ ಪ್ರಕಟಣೆಗೆ ಯೋಗ್ಯವೇ, ಯಾರಾದರೂ ಓದುವರೇ ಅಂತ ಮುಜುಗರ ಪಟ್ಟವರು ಹಲವರು. ಅಂತಹ ಬರಹಗಳನ್ನು ಹುಡುಕಿ ಪ್ರಕಟಿಸಿ "ನಿಮ್ಮ ಬರಹ ಶ್ರೇಷ್ಠವಾದುದು" ಎಂದು ಜಗತ್ತಿನ ಕನ್ನಡಿಗರಿಗೆ ತೋರಿಸಿಕೊಟ್ಟ "ಅವಧಿ ಮಾಗ್", "ಕೆಂಡಸಂಪಿಗೆ" ಅಚ್ಚ ಕನ್ನಡ ಸೃಜನಶೀಲ ಸಾಹಿತ್ಯ ತಾಣಗಳಿಗೆ , ಹೊರನಾಡ ಕನ್ನಡಿಗರ ಅಭಿಮಾನ ’ಗಲ್ಫ್ ಕನ್ನಡಿಗ" ಅಂತರ್ಜಾಲ ಸುದ್ದಿ ಮನೆಗೆ ಕನ್ನಡ ರಾಜ್ಯೋತ್ಸವದ ಸಾವಿರ ಅಭಿನಂದನೆಯ  ಚಪ್ಪಾಳೆಗಳು. ಆ ಮೂಲಕ ಮುಂಬರುವ ರಾಜ್ಯೋತ್ಸವದ ನುಡಿ ಪ್ರಶಸ್ತಿಯನ್ನು ಅಭಿಮಾನ ಪೂರ್ವಕವಾಗಿ ಹೊರನಾಡ ಕನ್ನಡಿಗರು ವಿಶ್ವಕ್ಕೆ ಹಂಚಿಕೊಳ್ಳುತ್ತೇವೆ.

ನವೆಂಬರ್ ಒಂದು ತಿಂಗಳ ಕನ್ನಡದ ಆವೇಶದಲ್ಲಿ ಇಡೀ ಒಂದು ವರ್ಷದ ತಾಕತ್ತು ಪಡೆದುಕೊಳ್ಳುವ ದೌರ್ಬಲ್ಯ ಕನ್ನಡಿಗರದ್ದು. ಅದಕ್ಕಾಗಿ ನಿಜದ ಮುಖವಾಡಗಳನ್ನು ಕಳಚಿ ಛದ್ಮವೇಷದ ಮೇಕಪ್ ಮೆತ್ತಿಕೊಳ್ಳುತ್ತೇವೆ. ಜೀವವಿಲ್ಲದ ಕವೆಡೆ ಕಾಸಿನ ಸಮಾರಂಭಗಳಷ್ಟೋ. ಒಂದೆರಡು ಗಂಟೆಗಳ ನಾಯಕರ ಭಾಷಣದಲ್ಲಿ ಅಭಿಮಾನದ ಪುಣ್ಯ ಕಟ್ಟಿಕೊಂಡವರೆಷ್ಟೋ, ನೆಲದ ಕನ್ನಡಿಗರನ್ನೇ ಬಡವರನ್ನಾಗಿಸಿ, ಕನ್ನಡವನ್ನೇ ಬಂಡವಾಳವಾಗಿಸಿ ಜೀವನ ವ್ಯಾಪಾರ-ವರ್ಚಸ್ಸು ಕುದುರಿಸಿದವರೆಷ್ಟೋ. ಕನ್ನಡ ಕುಸಿಯುತ್ತಿದೆ ಅನ್ನುವ ಅನುಮಾನ ಕಾಡುವಾಗ ಹೋರಾಟ ನಡೆಸಿದ್ದೇವೆ. ಅಲ್ಲಲ್ಲಿ ಭುಗಿಲೆದ್ದ ಕಾರಣಗಳ ವಿರುದ್ದ ದ್ವನಿಯೆತ್ತಿ ಅಸ್ತಿತ್ವಕ್ಕಾಗಿ ಜಗಳಕ್ಕೆ ನಿಂತಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ನೆಲದ ತಾಯಿ ಭಾಷೆಯಲ್ಲಿ ಓದಿ ಆನಂದಪಟ್ಟಿದ್ದೇವೆ. ನೆಲ ಬಿಟ್ಟು ನೆಲದಲ್ಲಿ ಕನ್ನಡವನ್ನು ಆಸ್ವಾಧಿಸಿದ್ದೇವೆ. ಇದು ಲಕ್ಷಾಂತರ ಹೊರನಾಡ ಕನ್ನಡಿಗರ ಎದೆಯಾಳದ ಮಾತು. ಕನ್ನಡದ ಚಿನ್ನದ ಅಕ್ಷರಗಳ ಮಮತೆಯನ್ನು ದುಬೈಯ ಅಪ್ಪಟ ಕನ್ನಡ ಪ್ರೇಮಿ ಬಿ.ಜಿ. ಮೋಹನ್ ದಾಸ್ ಬೀಜೂರು ಕಟ್ಟಿದ "ಗಲ್ಪ್ ಕನ್ನಡಿಗ", ಕಥೆಗಾರ-ಕವಿ ಜಿ.ಎನ್. ಮೋಹನ್ ಸಾರಥ್ಯದ "ಅವಧಿ ಮಾಗ್", ಸೃಜನಶೀಲ ಕಥೆಗಾರ ಅಬ್ದುಲ್ ರಶೀದ್ ಧಾರೆಯೆರೆಯುತ್ತಿರುವ "ಕೆಂಡ ಸಂಪಿಗೆ’ಯ ಅಂತರ್ಜಾಲಗಳನ್ನು ಮತ್ತೆ ಮತ್ತೆ ತೆರೆದು ನಾಡಿನ ಬರಹಗಾರರ ಸಾಹಿತ್ಯ ಮತ್ತು ಸುದ್ಧಿ ಆಸ್ವಾಧನೆಯ ಹಸಿವನ್ನು ಇಂಗಿಸಿಕೊಂಡಿದ್ದು ಸತ್ಯ.

ಬಹುಷಃ ಕನ್ನಡ ನಾಡಿನ ನೆಲ ರಾಜ್ಯೋತ್ಸವದ ಸಂಭ್ರಮದ ಖುಷಿಯಲ್ಲಿ ಕೆಲವಷ್ಟನ್ನು ಮರೆಯಬಹುದು. ಈ ಒಂದು ವಿಶ್ವಮಾನ್ಯ ಕನ್ನಡ ಹಬ್ಬವನ್ನು ಆಚರಿಸಿ ಮನೆ-ಮನದಲ್ಲಿ ಅಭಿಮಾನದ ಹಣತೆ ಹಚ್ಚಿ ಸಂಭ್ರಮಿಸುತ್ತೇವೆ. ಹಾಗಂತ, ಪಟಾಕಿ ಸಿಡಿಸಿ, ಭಾವುಟ ಹಾರಿಸಿ, ಕೆಲವಷ್ಟನ್ನು ಒಂದೆರಡು ದಿನದ ಸಮಾರಂಭಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಿರಂತರ ಕನ್ನಡ ಸೇವೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳ ಮುಖಾಮುಖಿಯಲ್ಲಿ ಉತ್ತರಕ್ಕಾಗಿ ಹುಡುಕಾಡುವ ಕಾಲ ಇನ್ನೂ ಬಂದಿಲ್ಲ. ಅದರ ಕಾರ್ಯ ಯಾವುದೇ ಚಿಂತೆಯಿಲ್ಲದೆ ನಡೆಯುತ್ತಿದೆ. ಸಂಪೂರ್ಣ ರಾಜಕೀಯಕ್ಕೆ,ಜಾತಿ-ಪಂಥಗಳಿಗೆ, ಎಡಪಂಥೀಯ ನಕರಾತ್ಮಕ ಚಿಂತನೆಗೆ ಬಲಿಯಾಗಿರುವ ಇಂದಿನ ಅವ್ಯವಸ್ಥೆಯಲ್ಲಿ ಕೆಲವಷ್ಟನ್ನು ಅನುಭವದ ಆಳಕ್ಕೆ ಕನ್ನಡದ ನೆಲ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ಜಗದಗಲದ ಕನ್ನಡ ಓದುಗರ ಪರವಾಗಿ ಈ ನುಡಿ ಪ್ರಶಸ್ತಿ. ಕನ್ನಡ ಜನ ಮಾನಸದಲ್ಲಿ "ಗಲ್ಫ್ ಕನ್ನಡಿಗ", "ಅವಧಿ ಮಾಗ್ " ಮತ್ತು "ಕೆಂಡ ಸಂಪಿಗೆ" ತಾಣಗಳ ಅಭಿಮಾನ ಸದಾ ಆಶಾಭಾವನೆ ಚಿಮ್ಮಿಸುವ ಫಲಕವಾಗಿ ನಿಲ್ಲಲಿ.

ಈ ಹಿಂದಿನ ಕನ್ನಡದ ಸ್ಥಿತಿಗಿಂತ ಪ್ರಸಕ್ತ ಸ್ಥಿತಿಯನ್ನು ಈ ಮೂರು ಅಂತರ್ಜಾಲ ತಾಣಗಳು ಸಾಹಿತ್ಯಕ ಅಭಿಮಾನದಲ್ಲಿ ಜಗತ್ತಿನಾದ್ಯಂತ ಬಲಿಷ್ಠಗೊಳಿಸಿರಬಹುದು. ಅದನ್ನು ವಿಶ್ವದ ಕನ್ನಡಿಗರು ಅಂದಾಜಿಗೆ ತೆಗೆದುಕೊಂಡಿದ್ದಾರೆ. ಕನ್ನಡ ನಾಡಿನ ಪತ್ರಿಕಾ ಸಮೂದಾಯಗಳು ಅದಕ್ಕೆ ಬೆಂಬಲ ನೀಡಿದವು. ಸೃಜನಶೀಲ ಸಾಹಿತ್ಯದ ಕನ್ನಡದ ಸವಿ ಯೆತೇಚ್ಚವಾಗಿ ಬೆಳೆದಿರುವುದು ದಿಟವಾಗಿದೆ. ಫೇಸ್ಬುಕ್ಕು ಕನ್ನಡವನ್ನು ಬಲಿಷ್ಠಗೊಳಿಸಿದ್ದು ಇನ್ನೊಂದು ಸಂತಸದ ಸುದ್ಧಿ. ಸಾಹಿತ್ಯವನ್ನು ಹುಡುಕಿ ಗುರುತಿಸಿ ಸದ್ದಿಲ್ಲದೆ ಬೆಳೆಸುವ ಈ ಅಂತರ್ಜಾಲ ತಾಣಗಳ ಕನ್ನಡ ಸೇವೆಗೆ ಹೊರನಾಡ ಕನ್ನಡಿಗರು ಸದಾ ಅಭಾರಿಯಾಗಿದ್ದೇವೆ. ಕಳುಹಿಸಿದ ಬರಹ ಪ್ರಕಟವಾದ ನಂತರ ಅಲ್ಲಿ ಬರಹಗಾರ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಅದರ ಅಡಿಪಾಯ ಕಾಣುವುದೇ ಇಲ್ಲ. ಆ ಸ್ಥಿತಿ ಈ ಮೂರು ಅಂತರ್ಜಾಲ ಸಾಹಿತ್ಯದ ಚಿನ್ನದ ತಟ್ಟೆಗಳದ್ದು. ಅಂತರ್ಜಾಲ ವ್ಯವಸ್ಥೆಗಳಲ್ಲಿ ಕನ್ನಡ ಸಾಹಿತ್ಯದ ರಸದೌತಣವನ್ನು ನೆಲದವರಿಗೆ ಮತ್ತು ಹೊರನಾಡ ಕನ್ನಡಿಗರಿಗೆ ಹೊಟ್ಟೆ ತುಂಬುವಷ್ಟು ಬಡಿಸಿಕೊಟ್ಟಿತು.

ಅಧುನಿಕ ವ್ಯವಹಾರಿಕ ಬದುಕಿನಲ್ಲಿ ಜಾಹೀರಾತುಗಳೇ ಪತ್ರಿಕೆಗಳ ಜೀವನಾಧಾರ. ದಿನ ಬೆಳಗಾದಲ್ಲಿ ಪತ್ರಿಕೆಗಳು ರವಾನಿಸುವ ಸುದ್ದಿಗಳಿಗಿಂತ ಅಂತರ್ಜಾಲಗಳು ಭಿತ್ತರಿಸಿ ಓದುಗರಿಗೆ ತಲಪಿಸುತ್ತವೆ. ಅದರಲ್ಲಿ ಫೇಸ್ಬುಕ್ಕು-ಟ್ವಿಟ್ಟರ‍್ ಜಾಲಗಳಿಗೆ ಮೊದಲ ಸ್ಥಾನ. ಆದಾಗ್ಯೂ ಅಂತರ್ಜಾಲದ ಪ್ರಭಲ ಸ್ಪರ್ಧೆಯ ನಡುವೆ ಪತ್ರಿಕೆಗಳ ಅಭಿಮಾನ ಕಡಿಮೆಯಾಗಿಲ್ಲ. ಸಾಹಿತ್ಯ ಅಭಿವೃದ್ಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಹಲವು ಸಾಹಿತ್ಯ ಪುಟಗಳು ಎದೆಯೊಳಗೆ ಪಿಸುಮಾತಿಗಿಳಿದಿವೆ. ಇದರ ಇನ್ನೊಂದು ಮಗ್ಗುಲಿನಲ್ಲಿ ಹೊಸ ಅಂದಾಜಿನ ಸಾಹಿತ್ಯ ಅಭಿರುಚಿಯ ಅಂತರ್ಜಾಲ ತಾಣಗಳನ್ನು ಕಾಣುತ್ತಿದ್ದೇವೆ. ಯಾವುದೇ ವಾಣಿಜ್ಯಕರಣಕ್ಕೆ ಸೊಪ್ಪು ಹಾಕದೆ ಕನ್ನಡವನ್ನು ಬೆಳೆಸುವ ಪರಿ ಹುಬ್ಬೇರಿಸುವಂತಹದ್ದು. ಅದನ್ನು "ಅವಧಿ ಮಾಗ್", "ಗಲ್ಫ್ ಕನ್ನಡಿಗ" ಮತ್ತು " ಕೆಂಡ ಸಂಪಿಗೆ" ಮುಂತಾದ ಮಾಹಿತಿಗೆ ಸಿಗದ ಸಾಹಿತ್ಯ ತಾಣಗಳು ಮಾಡುತ್ತಿವೆ. ಅವರ ಕನ್ನಡ ಸೇವೆಗೆ ಸಾಹಿತ್ಯ ಅಭಿಮಾನಿಗಳ ಅಸಂಖ್ಯ ಸಲಾಮು...! ಅರ್ಥಗರ್ಭೀತ ವಿಶ್ವಮಾನ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮಕೆ ಈ ಮೂಲಕ ಸಾಹಿತ್ಯದ ಮಾನ್ಯತೆ ಓದುಗರ ಮನದಲ್ಲಿ ಶಾಶ್ವತವಾಗಲಿ.
-ರವಿ ಮೂರ್ನಾಡು, ಕ್ಯಾಮರೂನ್, ಮಧ್ಯ ಆಫ್ರೀಕಾ.

ಅಂತರ್ಜಾಲ ಸಾಹಿತ್ಯ ಪುಟಗಳ ಕೊಂಡಿಗಳು:
ಅವಧಿ ಮಾಗ್ : http://avadhimag.com/
ಗಲ್ಫ್ ಕನ್ನಡಿಗ : http://gulfkannadiga.com/  
ಕೆಂಡ ಸಂಪಿಗೆ : http://www.kendasampige.com/

4 ಕಾಮೆಂಟ್‌ಗಳು:

  1. ನಿಸ್ವಾರ್ಥವಾಗಿ ಕನ್ನಡ ಸೇವೆ ಮಾಡುತ್ತಿರುವ ಈ ತಾಣಗಳ ಅನನ್ಯ ಸೇವೆ ನಮಗೆ ಮಾದರಿ. ಈ ತಾಣಗಳು ಮತ್ತು ನಮ್ಮ ಕನ್ನಡ ಬ್ಲಾಗ್ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತದೆ.

    ನನ್ನಂತಹ ಹಲವಾರು ಅಜ್ಞಾತ ಕವಿಗಳನ್ನು ಪರಿಚಯಿಸಿ ಬೆನ್ನುತಟ್ಟಿದ ಈ ತಾಣಗಳಿಗೆ ನಾನು ಚಿರ ಋಣಿ. ಅಂತೆಯೇ ಈ ತಾಣಗಳಿಗೆ ನನ್ನನ್ನು ಪರಿಚಯಿಸಿದ, ನನ್ನ ಕವನಗಳನ್ನು ಪ್ರಕಟಣೆಗೆ ಅನುವು ಮಾಡಿಕೊಟ್ಟ ರವಿಯವರಿಗೂ ಕೃತಜ್ಞ.

    ಪ್ರತ್ಯುತ್ತರಅಳಿಸಿ
  2. ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಹಂಗಿಲ್ಲದೇ, ತಮ್ಮ ಪಾಡಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರೋ ಆನ್ಲೈನ್ ಸಾಹಿತಿ ಮಿತ್ರರ ಬಗೆಗಿನ, ಅವರಿಗೆ ವೇದಿಕೆ ಕಲ್ಪಿಸಿಕೊಟ್ಟ ತಾಣಗಳ ಬಗೆಗಿನ ಉತ್ತಮ ಲೇಖನ

    ಪ್ರತ್ಯುತ್ತರಅಳಿಸಿ
  3. ಕನ್ನಡ ಸೇವೆ ಅಂದರೆ ಇದು ,ಭಾಷೆ ,ಬರವಣಿಗೆ ಉಳಿದರೆ ನಾಡು ಉಳಿದೀತು.ಜಗತ್ತಿನ ಉದ್ದಗಲ್ಲಕ್ಕೂ ಅಂತರ್ ಜಾಲದ ಮೂಲಕ ಕನ್ನಡವನ್ನು ಪಸರಿಸುತ್ತಿರುವ ಈ ಮೂವರು ಮಹನೀಯರಿಗೆ ನನ್ನದೊಂದು ಉದ್ದಂಡ ನಮಸ್ಕಾರ .ಒಳ್ಳೆಯ ಲೇಖನ ರವಿಯಣ್ಣ

    ಪ್ರತ್ಯುತ್ತರಅಳಿಸಿ
  4. ಯಾವುದೇ ಹಂಗಿಲ್ಲದೆ ಕೇವಲ ಕನ್ನಡ ಪ್ರೇಮ,ಆತ್ಮ ತೃಪ್ತಿ ಗೋಸ್ಕರ ಬರೆಯುವ ಅಸಂಖ್ಯ ಲೇಖಕರಿಗೆ ನನ್ನ ಸಲಾಮು .....ನಿಜವಾದ ಕನ್ನಡ ಭಾಷಾ ಪ್ರೇಮಿ ಅವರೇ , ರವಿ ಸರ್ ನಿಮ್ಮ ಈ ಲೇಖನ ಇಂಥ ಲೇಖಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ತಿಕ್ಕಿಂತ ಕಡಿಮೆ ಅಲ್ಲ , ತುಂಬಾ ಧನ್ಯವಾದಗಳು ಹಾಗು ಅಭಿನಂದನೆಗಳು ನಿಮಗೆ ಇಂಥ ಉತ್ತಮ ಲೇಖನ ಬರೆದಕ್ಕೆ .

    ಪ್ರತ್ಯುತ್ತರಅಳಿಸಿ