ಬುಧವಾರ, ಸೆಪ್ಟೆಂಬರ್ 12, 2012

ಹಕ್ಕಿ ಹಾರುತ್ತಲಿದೆ ...!


ಅದೋ ಹಕ್ಕಿ ಹಾರುತ್ತಲೇ ಇದೆ
ರೆಕ್ಕೆ ಸೋತಾಗ ಹಸಿದು
ಹಣ್ಣಿರುವ ಮರದಿ ಕೂರಬಹುದು !
ಬೀದಿ ಕಾಳನು ಹೆಕ್ಕಿ
ಸಂಜೆ ಗೂಡಿಗೆ ಮರಳಬಹುದು  !

ಹದ್ದಾದರೋ.. !?
ವರ್ತಮಾನಗಳ ಸುತ್ತಾ ಹಿಗ್ಗಿ
ಸತ್ತವರ ಹೆಣದ ಹುತ್ತ ಕೆದಕಬಹುದು !
ಹ್ಞೂಂ...ಕರಿಸಬಹುದು
ಭಯ ಉಕ್ಕಿ ಗೂಬೆ
ಶುಭ ಶಕುನದ ಹಕ್ಕಿಗಳು
ಸಂಜೆಗೆ ಮರಳಬಹುದು !
ಕೊಕ್ಕಿಗೆ ಹಲ್ಲಿ ಲೊಗುಟ್ಟಬಹುದು !

ಕಾಗೆಯಾದರೋ ...!?
ಕಪ್ಪೆ೦ದು ಬಿಳಿ ಕನಸಿರಬಹುದು
ಅವರಿವರ ಕಣ್ಣೀರ ಕೊಳದಲಿ
ಸ್ನಾನಕ್ಕಿಳಿಯಬಹುದು !
ಓಡುವ ಇಲಿ- ಕತ್ತೆತ್ತುವ ಮರಿ ಕೋಳಿ
ಕಾಲಡಿ ಸರಿವ ಉರಗಗಳ
ಉದರ ತುಂಬಿಸಿ ತೇಗಬಹುದು
ಸಂಜೆಗೆ ಅವುಗಳೂ ಮರಳಬಹುದು !

ನಾನೀಗ ಕೋಗಿಲೆಯಾಗುತ್ತೇನೆ...
ಶ್....ಸುಮ್ಮನಿರಿ
ಮಾಮರದ ಚಿಗುರೆಲೆ ಮೋಹಿಸಿ
ತತ್ತಿಯಿಡುತ್ತೇನೆ...ಗೂಡಿಗೆ
ಕಾಗೆ ಬರುವುದರೊಳಗೆ ಹಾರಿ !

ಇದೋ ಇದೋ ಮಾಮರ
ಅರೆ...! ಮತ್ತೊಂದಿದೆ ಕೋಗಿಲೆ
ಯಾವ ಕಾಗೆ ಗೂಡಿನ ತ್ತತ್ತಿಯೋ ?!
ಜೊತೆ ಸೇರಿ ಕುಹೂ ಸ್ವರ ಸೇರುತ್ತೇನೆ !
-ರವಿ ಮೂರ್ನಾಡು

1 ಕಾಮೆಂಟ್‌:

  1. ಮನಸ್ಸಿನ ನಿಜ ಹಾರಾಟದ ದರ್ಶನ. ಇಲ್ಲಿ ಕಾಗೆಕೋಗಿಲೆ ಕಲ್ಪನೆಯೇ ನಮ್ಮೊಳಗಿನ ವೈರುಧ್ಯಗಳ ಮನೋಸ್ಥಿತಿ.

    ರಣ ಹದ್ದುಗಳಂತಹ ಮಾನವರ ನರಭಕ್ಷಕತೆಯೂ ಇಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗಿದೆ.

    ಪ್ರತ್ಯುತ್ತರಅಳಿಸಿ