ಸೋಮವಾರ, ಸೆಪ್ಟೆಂಬರ್ 24, 2012

ಕವಿತೆ ಹೀಗೆ ಇರುವುದು !

ಕವಿತೆ ಹೇಗೆ ಹುಟ್ಟುವುದು
ನವಜಾತ ಶಿಶು ಉತ್ತರವಾಗುವುದು
ಕಣ್ಣಿದ್ದೆಡೆ ಬೆರಗು ತೆರೆದು
ಲೋಕ ಓದುವುದು !

ಕೈಯಿದ್ದೆಡೆ ಕಾಲಿದ್ದರೆ 
ಹೇಗೆ ನಡೆವುದು ?
ಮೂಗಿದ್ದೆಡೆ ಗಾಳಿ ಹೃದಯಕೆ
ಲಯ ಸುರಿವುದು !

ಕವಿತೆ ಹೀಗೇ ಇರುವುದು
ಅರಿವಿಗೆ ಜಾರುವುದು

ಗ೦ಟಲಿದ್ದೆಡೆ ಸ್ವರ ಸಿಡಿದರೆ  
ಅಮ್ಮಾ ಎನುವುದು !
ಉದರವಿದ್ದೆಡೆ ಹಸಿವಿದ್ದರೆ 
ಹಾಲು ಕುಡಿವುದು !

ದ್ವಾರವಿದ್ದೆಡೆ ಕರಗಿ ಕೆಳಮುಖ
ಅಮೇಧ್ಯ ಪಲ್ಲಟವಾಗುವುದು !
ಅರಿವಿಲ್ಲದೆಡೆ ಉಕ್ಕಿ ಮೇಲ್ಮುಖ
ನಾಲಗೆ ನಾರುವುದು !

ಕವಿತೆ ಹೀಗೇ ಇರುವುದು
ಬದುಕಿಗೆ ಓಡುವುದು

ತೆವಳುತ್ತಿದ್ದೆಡೆ ಎಡವಿ ನಡೆದರೆ
ಓಟ ಕಲಿವುದು !
ಕನಸು ಕರೆದೆಡೆ ಓಡುತ್ತಿದ್ದರೆ  
ಗುರಿ ಜಗವಾಗುವುದು !

ಹೃದಯವಿದ್ದೆಡೆ ಮನಸ್ಸಿದ್ದರೆ 
ತುಟಿ ಮಲ್ಲಿಗೆ ನಗುವುದು !
ಅಳುತ್ತಿದ್ದೆಡೆ ಹೃದಯ ಬಿಂದಿಗೆ
ಕಣ್ಣ ಬಾಯಿಗೆ ತುಳುಕುವುದು !

ಕವಿತೆ ಹೀಗೇ ಇರುವುದು...

ಮು೦ಡವಿದ್ದೆಡೆ ರು೦ಡವಿದ್ದರೆ  
ಪ್ರತಿಮೆ ನೇರ ನಿಲುವುದು !
ಓದುತ್ತಿದ್ದೆಡೆ ನಡೆವುದು !
-ರವಿ ಮುರ್ನಾಡು

2 ಕಾಮೆಂಟ್‌ಗಳು:

 1. ಕವಿತೆ ಹೇಗೆ ಇರಬೇಕು. ಅದು ಏನನ್ನು ಒಳಗೊಂಡಿರಬೇಕು ಮತ್ತು ಅದರ ಆಳ ಅಗಲಗಳು ಹೇಗಿರಬೇಕು ಎನ್ನುವ ಪಠ್ಯ ಇಲ್ಲಿದೆ.

  ಕವಿತೆ ಬರೆಯುತ್ತೇನೆ ಎಂದ ಮಾತ್ರಕ್ಕೆ ನಾನು ಕಾವ್ಯ ಮೀಮಾಂಸೆಯ ಪಂಡಿತನಲ್ಲ, ಆದರೆ ಕವಿತೆಯ ಹೂರಣ ಮತ್ತು ಅದು ತೆರೆದಿಡಲು ಬೇಕಾದ ಪ್ರತಿಮೆಯನ್ನು ಅನಾವರಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತದೆ.

  ಹುಟ್ಟಿದ ಮಕ್ಕಳೆಲ್ಲ ನೆಟ್ಟಗಿದ್ದರೆ ರವಿ ಸಾರ್, ಜಗತ್ತು ಹೀಗೇಕೆ ಇರುತ್ತಿತ್ತು? ಅಂತೆಯೇ ಬರೆವ ಕವಿಗಳೆಲ್ಲ ನಿಮ್ಮಷ್ಟು ಬಲ್ಲವರಾದರೆ ನಮ್ಮಂತಹ ಅಷ್ಟಾವಕ್ರ ಕವಿಗಳಿಗೆ ತಾವೆಲ್ಲಿ?

  ಅತ್ಯುತ್ತಮ ಕವಿತಾ ವಿನ್ಯಾಸ ಕವನ.

  ಪ್ರತ್ಯುತ್ತರಅಳಿಸಿ
 2. ಅದ್ಬುತ ತುಲನೆ ಸರ್ ಬದುಕು ಮತ್ತು ಕವಿತೆಗೆ..

  ಪ್ರತ್ಯುತ್ತರಅಳಿಸಿ