ಮಂಗಳವಾರ, ಮಾರ್ಚ್ 27, 2012

ವಾರದ ಆ ಸಂತೆ - ೨


ಆ ಅಂಗಡಿ ಮುಂಗಟ್ಟಿಗೆ
ಈ ಸಂತೆಗೆ ಉಳಿದವರ
ಎಲುಬುಗಳ ನೋಡುತ್ತಿದ್ದೇನೆ !
ಕೇಜಿಗೊಂದಿಷ್ಟು ಮಾಂಸಖಂಡಗಳಿಗೆ
ಅಲ್ಲೇ ಗಟಾರಕೆ ಹನಿದ ರಕ್ತ
ನಿಸ್ತೇಜ ಇವುಗಳ ಅಪ್ಪಿ
ಮೈ ಅದುರಿಸುವುದ ಕಾಯುತ್ತಿದ್ದೇನೆ !

ಯಾರಿಗೂ ಬೇಡದ ಸೊಪ್ಪು
ಒಂದಷ್ಟು ನೆರತ ಹುಲ್ಲು
ತಿನ್ನುತ್ತಾ ಕುರಿ-ಕೋಳಿ- ಆಡು !
ನೋಡುತ್ತಾ ಸುಳಿವ ಈ ಜನರ
ಹಿಡಿದು ತಿಂದು 
ನಾವೊಂದಷ್ಟು ಓಡಾಡಬೇಕು
ಬಂದರೆ ಒಂದು ತೇಗು !

ತರಕಾರಿಗೆ ರುಚಿ ತಪ್ಪಿ
ಅಂಗಡಿಗೆ ಸಾಲುಗಟ್ಟಿದವರ
ನೋಡುತ್ತಿವೆ ಹುಲ್ಲು ತಿನ್ನುತ್ತಾ ಕುರಿಗಳು !
ದೇಹವಿಲ್ಲದ  ತಲೆಯಲಿ 
ಹುಲ್ಲು ಹಾಗೇ ಇದೆ, ಕಚ್ಚಿ ನಾಲಗೆ ಬಾಯಲ್ಲಿ !

ಪೊಟ್ಟಣ ಕಟ್ಟುತ್ತಿದ್ದಾರೆ
ತಾಯಿ ಕುರಿಗಳ ಕೆಚ್ಚಲು
ಬೇಯಿಸುವಾಗ ರುಚಿಗೆ ಕೆನೆ ಹಾಲು !
ಛಂಗನೇ ನೆಗೆದು ಮಂಡಿಯೂರಿ
ಮೊಲೆಯಿಕ್ಕುವ ಕುರಿಮರಿಗಳ
ಕಾಲು ಎರಡೇ ಇವೆ
ಇನ್ನೆರಡು ಭಿಕರಿಯಾಗಿವೆ  !

ಎದೆ ತೆರೆದಿದೆ ತಿನ್ನಿರೋ
ಪಕ್ಕೆಲುಬು ಬಿಚ್ಚಿದೆ ಕುರಿ !
ತೊಡೆಗಳು ಮೂಳೆಯಿಲ್ಲದ ನಾಲಗೆಗೆ !
ಮೂಳೆ ಮೂವತ್ತೆರಡು ಹಲ್ಲಿಗೆ
ತಮ್ಮ ತಮ್ಮಲ್ಲೇ ನೋಡುತ್ತಾ
ನಿದ್ದೆಗೆ ಬಿದ್ದಿದೆ ಆಡು-ಕುರಿ ತಲೆ  !

ಗೂಡೊಳಗೆ ಒಂದಷ್ಟು  ಮೊಟ್ಟೆಗಳು
ಕಾಪಿಟ್ಟ ಬಿಸಿಗೆ ಕರಗಿ
ನೇಣಿನ ಕುಣಿಕೆಯಲ್ಲೆ
ಮುಖ ಮಾಡಿದೆ ಕೋಳಿ !
ಮತ್ತೊಮ್ಮೆ ತರಗುಟ್ಟುತ್ತಿದೆ 
ನೆತ್ತರು ನೆಕ್ಕಿದ ವ್ಯಾಪಾರಿಯ ಕತ್ತಿ !

ಅರರೇ....ನಾಯಿ ಏಕೆ
ಮಾಂಸ ಕೊಂಡವನ  ಚೀಲಕೆ
ಮೂಗನ್ನಿಟ್ಟು ಓಡುತ್ತಿದೆ  ?
ಮಾ೦ಸವೀಗ ಹುಲಿಯಾಗಬೇಕು !
-ರವಿ ಮೂರ್ನಾಡು


4 ಕಾಮೆಂಟ್‌ಗಳು:

 1. ವಾರದ ಸಂತೆಯ ವಿವಿಧ ಮುಖಗಳು..
  ಚಂದದ ಕವನ....

  ಪ್ರತ್ಯುತ್ತರಅಳಿಸಿ
 2. ತರಕಾರಿಗೆ ರುಚಿ ತಪ್ಪಿ
  ಅಂಗಡಿಗೆ ಸಾಲುಗಟ್ಟಿದವರ
  ಹುಲ್ಲು ತಿನ್ನುತ್ತಿದ್ದ ಕುರಿಗಳು ನೋಡುತ್ತಿವೆ !
  ದೇಹವಿಲ್ಲದ ತಲೆಯಲಿ
  ಹುಲ್ಲು ಹಾಗೇ ಇದೆ, ಕಚ್ಚಿ ನಾಲಗೆ ಬಾಯಲ್ಲಿ !
  ಈ ಸಾಲಂತೂ ತುಂಬಾ ಮಾರ್ಮಿಕವಾಗಿದೆ ರವಿಯಣ್ಣ,
  ನಿಮ್ಮ ವಾರದ ಸಂತೆಯಲಿ ಒಂದು ಪ್ರಾಣಿ ಹತ್ಯೆ ಎಂಬ ಚಿಂತೆ ತುಂಬಾ ಸುಂದರವಾಗಿ ಮೂಡಿಬಂದಿದೆ

  ಪ್ರತ್ಯುತ್ತರಅಳಿಸಿ
 3. ವಾರದ ಸಂತೆ -೨ ರಲ್ಲಿ ಮನುಜನ ಸ್ವಾರ್ಥತೆ ಮತ್ತು ಅವನ ಕಬಳಿಕೆಯ ಅಗಾಧತೆ ಗೋಚರಿಸಿತು.

  ಜಗತ್ತಿನ ಬಹುಪಾಲು ಜನ ಇದೀಗ ಸಸ್ಯಾಹಾರದ ಕಡೆ ವಾಲುತ್ತಿದ್ದಾಗ, ನಾವಿನ್ನೂ ಮಾಂಸಾಹಾರಕ್ಕೆ ಜೋತು ಬಿದ್ದಿರುವುದು ವಿಷಾದನೀಯ.

  ಮನಸ್ಸಿನ ಹಲ ಪದರಗಳಲ್ಲಿ ನನಗೆ ಅನಿಸಿದ್ದು ನಿಮಗೆ ಹೇಳುವುದಾದರೇ, ಒಟ್ಟಾರೆ ಕವನದ ಆಶಯದ ಆಳದಲ್ಲಿ ತೀವ್ರ ವಿಷಾದ ಮತ್ತು ತಿದ್ದುವಿಕೆಯ ತೀವ್ರ ಆಸಕ್ತಿ ಇದೆ.

  ಒಂದು ಉತ್ತಮ ಕವನ ಓದಿಸಿದ್ದಕ್ಕಾಗಿ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 4. ಭಯಂಕರ ಸಂತೆ !! ಮನುಜನ ನಗುಮೊಗದ ಹಿಂದಿನ ವಾಸ್ತವವನ್ನ, ಕ್ರೌರ್ಯವನ್ನು ಚೆನ್ನಾಗಿ ಬರೆದಿದ್ದೀರ

  ಪ್ರತ್ಯುತ್ತರಅಳಿಸಿ