ಶುಕ್ರವಾರ, ಮಾರ್ಚ್ 16, 2012

ವಾರದ ಈ ಸಂತೆ - ೧


ಈ ಸಂತೆಯಲಿ ಎಷ್ಟೊಂದು ಜನರು
ಕೊಳ್ಳುವರು, ಮಾರುವರು
ಅವರಿಗವರಿಗಾಗಿ..!
ಕರೆದು ಪುಸಲಾಯಿಸಿದಷ್ಟು
ಚೌಕಾಸಿ ಇಕ್ಕಳಕೆ ಸಿಕ್ಕಿ
ಚೀಲ ತುಂಬಿಸುವರು !

ತರ ತರ ತರಕಾರಿಗಳಿಗೆ
ಯಾರು ಹಚ್ಚಿದರೋ ಬಣ್ಣ !
ಕಣ್ಣನ್ನೇ ಕೀಳುತ್ತಿವೆ
ಕೆನ್ನೆಗೆಂಪು ಟೊಮ್ಯಾಟೋ
ಆಫ್ರೀಕಾದ ಬೆಡಗಿ ಬದನೆಕಾಯಿ
ಕೊಂಚ ಎಲೆಲೆ ಜುಟ್ಟಿಳಿಸಿ
ಶ್ವೇತ ಚರ್ಮದ ಮೂಲಂಗಿ  !

ಅದೋ ಅದೋ ಸ್ನಾನ ಮುಗಿಸಿ
ಕುಳಿತಿದೆ ತಲೆ ನೀರೊರೆಸದೆ
ಕಹಿಬೇವು- ಸಂ-ಭಾರ ಸೊಪ್ಪು !
ಪಕ್ಕದಲ್ಲೇ ಸಪೂರ ಹುಡುಗಿ ಕ್ಯಾರೆಟ್ಟು
ಅದಕ್ಕೊಂದಷ್ಟು ನೀಳ ಬೆರಳು ಬೆಂಡೆಕಾಯಿ !

ಕಣ್ಣಲ್ಲೇ ಮಾರಿಕೊಳ್ಳುವುದು
ಬಲಿತು ಒಂದರ ಮೇಲೊಂದು ಉಬ್ಬುಬ್ಬಿ
ಸೌತೆ-ಆಲೂಗೆಡ್ಡೆ- ತೆಂಗಿನಕಾಯಿ
ಸವರಿದಷ್ಟು ಕೊನೆ ಸಿಗದ ಸೋರೆಕಾಯಿ  !

ಅವಕಾಶದಾಕಾಶಕೆ ,
ಕಜ್ಜಿ ಚರ್ಮದೊಳಗೆ ಅವಿತಿದೆ ಅನನಾಸು !
ಸಂತೆಗೆ ಜಾಗ ಕೇಳಿ
ಶಿಸ್ತಾಗಿ ಚಿಪ್ಪೊಳಗೆ ನಿಂತ ಬಾಳೆ ಹಣ್ಣು !
ರುಚಿ ನೋಡಿರೋ ಎನ್ನುತ್ತಿದೆ
ಅರ್ಧರ್ಧ ಕತ್ತಸಿಟ್ಟ ಮಾಂಸದ ಹಣ್ಣು ಕಲ್ಲಂಗಡಿ  !

ಇವುಗಳ ಮಧ್ಯೆ  ಸಂಜೆ ಬಾಡುತ್ತಿದೆ
 ಕೊಟ್ಟವರ ನಡುವೆ ಕೊಂಡವರಿಗೆ !
ಶೂನ್ಯಕ್ಕೊಂದು ಅವಕಾಶವಿರಿಸಿದ್ದೇನೆ
ಈ ಸಂತೆಗೆ ಉಳಿದವರಿಗೆ !
-ರವಿ ಮೂರ್ನಾಡು

3 ಕಾಮೆಂಟ್‌ಗಳು:

 1. ಇಲ್ಲಿ ಸಂತೆಯನ್ನು ನೀವು ಜೀವನ ವ್ಯಾಪಾರಕ್ಕೆ ಸಮೀಕರಿಸಿ ನೋಡಿದ್ದೀರ.

  ನಮ್ಮ ಹಳ್ಳಿಯ ಸಂತೆ, ಬತ್ತಾಸು, ಬಣ್ಣದ ಸೋಡಾ ನೀರು, ವಾಚು ರಿಪೇರಿ ಇಮಾಂಮ್ ಸಾಬಿಯ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಭೂತ ಕನ್ನಡಿ, ನನ್ನ ಪದ್ದಿ-ರಮಾ-ಮೀನಾಕ್ಷಿಯರ ಕಾಲ್ಗೆಜ್ಜೆ ಎಲ್ಲವನ್ನೂ ನೆನಪಿಗೆ ತಂದದ್ದು ಖುಷಿಯಾಯಿತು.

  ಪ್ರತ್ಯುತ್ತರಅಳಿಸಿ
 2. ಬಹಳ ದಿನಗಳ ನಂತರ ಒಂದು ಕವನ ಓದಿದ್ದೇನೆ. ಚೆನ್ನಾಗಿದೆ ರವಿ ಸರ್ :)

  ಪ್ರತ್ಯುತ್ತರಅಳಿಸಿ
 3. Eno helutta enneno heluvaa , arthadolagondu arthavanna hudukalu avakaashamaadi kodo nimma kavite, nange yaavaagalu ishta r.m.sir..

  ಪ್ರತ್ಯುತ್ತರಅಳಿಸಿ