ಬುಧವಾರ, ಏಪ್ರಿಲ್ 20, 2011

ಜೀಸಸ್‍ ಮತ್ತು ಸೀತೆ..

ಜೀಸಸ್‍ ಬಂದರು
ಜಗನ್ಮಾತೆ ಸೀತೆಯೂ
ಕಾಲದ ಜಟಕಾ ಬಂಡಿಗೆ...!

"ಆಮೇನ್‍" ಎಂದು ಉದ್ಘರಿಸಿದಾಗ
ಬೈಬಲ್‍ನ ಪುಟ ಮಗುಚುತ್ತೇನೆ.....!
ಬೆತ್ಲೆಹೇಮಿನ ಗೋದೂಳಿಯಲ್ಲಿ
ಮುಗಿ ಬಿದ್ದರು ಪಾಪಿಜನ
ದೇವಪುತ್ರ ನಕ್ಷತ್ರವೆಂದು..!
ಅಂಧಾಕಾರದ ದಾರಿಯಲಿ
ಆಧಾರವಾದ ಸಂತನ
ಒಂದು ಕೆನ್ನೆಗೆ ಹೊಡೆದು
"ಹುಚ್ಚ"  ಎಂದರು...!
ಇನ್ನೊಂದು ಕೆನ್ನೆಗೆ ಮತ್ತೊಂದು !
ಶಿಲುಬೆಗೇರಿಸಿ ಕಲ್ಲು ಹೊಡೆದು
ಬೈಬಲ್‍ ಬರೆದರು...!

ರಾಮ ರಾಮ ಎಂದಾಗ
ಕೈಗೆ ಸಿಕ್ಕಿತು ರಾಮಾಯಣ....!
ಕದ್ದೊಯ್ದ ರಾವಣ
ರಾಮನಂತಲ್ಲ ಶಿವಶಿವ...!
ಅಶೋಕವನದ ಬ್ರಹ್ಮಾಂಡದಲ್ಲಿ
ದೇವೀ.. ಎಂದನೋ ಶಿವಭಕ್ತ...!
ಪತಿಯೇ ನಿ ಎನ್ನೊಡೆಯ
ಬೊಬ್ಬಿಟ್ಟ ಮುತ್ತೈದೆಯ
ಮಾಂಗಲ್ಯಕೇ ಬೆಂಕಿ ಬಿದ್ದಿತೋ
ರಾಮ... ರಾಮ...!
ಸಹಗಮನವೆಂದಿತೋ ಲಕ್ಷ್ಮಣ ರೇಖೆ...!

ಓಡುತ್ತಿದೆ....
ಉತ್ತರಕ್ಕೆ ಧರ್ಮ
ದಕ್ಢಿಣಕ್ಕೆ ಬದುಕು
ನೊಗಹೊತ್ತ ಕಾಲದ ಜಟಕಾ ಬಂಡಿ..!
ಋತುಚಕ್ರಗಳ ಉರುಳಿಸುತ್ತಾ
ನಿಲ್ದಾಣವಿಲ್ಲದ ದಾರಿಯಲಿ
ಸತ್ಯಕ್ಕೆ ವಿಳಾಸ ಹುಡುಕುತ್ತಾ....!

ಅದೋ ಅಲ್ಲಿ ಕಾಣಿಸುತ್ತಿದೆ ಚರ್ಚು
ಜೀಸಸ್‍ ಕೆಳಗಿಳಿದು ಒಳ ಹೊಕ್ಕರು..!
ಜಗನ್ಮಾತೆ ಸೀತೆಯೂ
ರಾಮನಿಗೆ ಮಂದಿರದಲಿ ಮೂರ್ತಿಯಾದರು..!
------------
·       ರವಿ ಮೂರ್ನಾಡು


6 ಕಾಮೆಂಟ್‌ಗಳು:

  1. ಅಧ್ಯಾತ್ಮ ಲೋಕದ ಭಾವನೆಯ ಚಿಂತನೆಯಲ್ಲಿ ಹೀಗೊಂದು ಬಗೆಯ ವಿಭಿನ್ನ ಕಲ್ಪನೆ... :)

    ಪ್ರತ್ಯುತ್ತರಅಳಿಸಿ
  2. ಅದೋ ಅಲ್ಲಿ ಕಾಣಿಸುತ್ತಿದೆ ಚರ್ಚು
    ಜೀಸಸ್‍ ಕೆಳಗಿಳಿದು ಒಳ ಹೊಕ್ಕರು..!
    ಜಗನ್ಮಾತೆ ಸೀತೆಯೂ
    ರಾಮನಿಗೆ ಮಂದಿರದಲಿ ಮೂರ್ತಿಯಾದರು..!
    ಕಾಲದಲ್ಲಿ ಹಿಂದಕ್ಕೆ ಪ್ರಯಾಣ ಅದ್ಭುತ
    ಕೋಟಲೆಯ ಹಿನ್ನೆಲೆ ಬದುಕಿಗೆ ಪಾಠವೇ
    ಸಹಿಷ್ಟ್ಣುತೆಗೆ ಮಾದರಿಯೇ..??
    ಕಲ್ಲು ಹೊಡೆದೂ ಬೈಬಲ್ ಬರೆವ ಮಂದಿಗೆ
    ಮನೋಜ್ಞವಾಗಿದೆ ರವಿವರೇ ತೆರೆದ ಟೋಪಿಯ ನಮನ

    ಪ್ರತ್ಯುತ್ತರಅಳಿಸಿ
  3. ನಂಬಿಕೆ ಮತ್ತು ದೇವ ಪಾತ್ರಗಳ ವಿಮರ್ಷಾತ್ಮಕ ಕವನ. ಯಾವುದೇ ಧರ್ಮದ ಉಧ್ಗ್ರಂತದ ಓದಿನಲ್ಲೂ ಕಾಡುವ ಪ್ರಶ್ನೆಗಳು ಅನೇಕ!

    ಬಹು ಪತ್ನಿತ್ವ, ಸ್ತ್ರೀ ಶೋಷಣೆ, ರಾಜ ಭೋಗ, ಭಕ್ತರಿಗೇ ಕಷ್ಟ ಹೀಗೆ ಯಾವುದು ಸರಿ ಯಾವುದು ಧರ್ಮ ನಿರಾಕರಣ? ಒಂದು ಧರ್ಮ ಮಾಂಸಾಹಾರ ಒಪ್ಪುವುದಾದರೆ, ಮತ್ತೊಂದು ಧರ್ಮ ಶುದ್ಧ ಸಸ್ಯಾಹಾರಿ!

    ಅತ್ಯುತ್ತಮ ಕವನ.

    ಪ್ರತ್ಯುತ್ತರಅಳಿಸಿ
  4. ಜೀಸಸ್ ಗೂ,ಸೀತೆಗೂ ಇರುವ ಹೋಲಿಕೆ, ಇಲ್ಲಿ ನಿಜವಾದ ಧರ್ಮ ಕವನದ ಸತ್ವದಲ್ಲಿ ಅಡಗಿದರೂ,ಅಂಧಾಭಿಮಾನದ ಬೆಡ್ ಶೀಟನ್ನು ಹೊದ್ದುಕೊಂಡು ಮಲಗಿರುವ ಕೆಲವರಿಗೆ ಇದು ಇಂದಿಗೂ ಏಕೆ ಅರ್ಥವಾಗುತ್ತಿಲ್ಲ ಎಂಬುದು ಒಂದು ಕಡೆ ನೋವಿನಿಂದ ಹೇಳಿದ ಹಾಗೆ ಅನಿಸುತ್ತದೆ. ಮಾನವಧರ್ಮಕ್ಕಿಂತ ದೊಡ್ಡದು ಯಾವುದಿಲ್ಲ ಎಂದು ಹೇಳಿದ ದಾಸವಾಣಿ ಕ್ಲೈಮ್ಯಾಕ್ಸ್ ನಲ್ಲಿ ಬೇಕೆನಿಸುತ್ತದೆ.

    ಪ್ರತ್ಯುತ್ತರಅಳಿಸಿ
  5. ಅಂತಃಕರಣವನ್ನು ಹೊಕ್ಕು ಮನವನ್ನು ಚಿಂತನೆಗೆ ಹಚ್ಚುವ ಸುಂದರ ಸೃಷ್ಟಿ ಈ ಕವಿತೆ.ಬದುಕಿನ ಕಾಲಘಟ್ಟಗಳಿಗೂ ಉತ್ತರವಾಗುವ ಸ್ಥಿತ್ಯಂತರ ಕವಿತೆ ಇದು.ಕವಿಭಾವ ವಿಭಿನ್ನ ಮತ್ತು ವಿಸ್ಮಯಗಳಿಗೆ ಜೀವ ತುಂಬುವ ಪರಿಯೇ ಅತ್ಯಂತ ಸೋಜಿಗದ್ದು.ಅಜ್ಞಾನ,ಅನೀತಿ,ಅಂಧಕಾರಗಳ ಕತ್ತಲೆಯಲ್ಲಿನ ಮನಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಿದ ಕವಿತೆ.ತುಂಬಾ ಇಷ್ಟವಾಗುವುದು ಮತ್ತು ಮನಸ್ಸು ವಿಮರ್ಷೆಗೆ ಒಡ್ಡುವುದು.

    ಪ್ರತ್ಯುತ್ತರಅಳಿಸಿ
  6. ಕವಿತೆಯನ್ನು ಜೀರ್ಣಿಸಿಕೊಳ್ಳಲು ಒಂದು ದಿನ ತೆಗೆದುಕೊಂಡಿದ್ದೇನೆ ಆದ್ದರಿಂದ ಪ್ರತಿಕ್ರಿಯೆ ತಡವಾಗುತ್ತಿದೆ..! ಮನಸ್ಸನ್ನು ತಟ್ಟುವ ಮೈಲಿಕ ಚೌಕಟ್ಟನ್ನು ಹೊಂದಿರುವ ಕವಿತೆ ರವಿಯಣ್ಣ, ಅದ್ಭುತವಾದ ಕವಿತೆ.. ತುಂಬಾ ಅರ್ಥಗರ್ಭಿತವೆನಿಸುವಂತೆ ಮೂಡಿಬಂದಿದೆ.. ದೇವರು ಧರ್ಮ ಎಂಬುದು ಕೇವಲ ಬೂಟಾಟಿಕೆಯ ಆಚರಣೆಗಳಿಗೆ ಸೀಮಿತವಾಗುತ್ತಿವೆ, ಧರ್ಮದ ನೆಲೆಗಟ್ಟು ಮಾನವೀಯತೆ ಎಂಬುದರ ಅರಿವೂ ಕೂಡ ಜನರಿಗಿದ್ದಂತಿಲ್ಲ.. ಇಂತಹ ಸಂದರ್ಭದಲ್ಲಿ ಬಸವಣ್ಣನರ ’ದಯವಿಲ್ಲದ ಧರ್ಮವಾವುದಯ್ಯ’ ಎಂಬ ಮಾತುಗಳು ನೆನಪಿಗೆ ಬರುತ್ತವೆ.. ಜೀಸಸ್ ನಿಂದ ಅಷ್ಟೆಲ್ಲಾ ಉದಾತ್ತ ಚಿಂತನೆಗಳು ಮತ್ತು ಅನುಕೂಲವನ್ನು ಪಡೆದ ಜನ ಅವರನ್ನೇ ಶಿಲುಬೆಗೇರಿಸಿ ಬೈಬಲ್ ಬರೆದರು ಎಂಬ ವಿಡಂಬನೆ ಅದ್ಭುತವೆನಿಸುವಂತೆ ಮೂಡಿ ಬಂದಿದೆ.. ಇನ್ನು ಸೀತೆಯ ವಿಚಾರಕ್ಕೆ ಬಂದರೆ ಆಕೆ ಅನುಭವಿಸಿದ ಕಷ್ಟಗಳಿಗೆ ಲೆಕ್ಕವೇ ಇಲ್ಲ, ಅವಳು ಜೀವಿತವಿದ್ದಾಗ ರಾಮನೊಂದಿಗೆ ಜೀವಿಸಲು ಆ ರಾಮನೂ ಬಿಡಲಿಲ್ಲ.. ಈಗ ರಾಮ ಮಂದಿರದಲ್ಲಿ ಸೀತೆಯ ಪ್ರತಿಷ್ಠಾಪನೆ ಮಾಡಿ ಧರ್ಮ ಉಳಿಸಿದ ಸೋಗು ಹಾಕಿದ್ದಾರೆ ಈ ಮೂರ್ಖ ಜನ.. ತೀಕ್ಷ್ಣವಾದ ವಿಡಂಬನಾ ಲಹರಿ ರವಿಯಣ್ಣ, ನನಗೇ ತುಂಬಾ ಹಿಡಿಸಿತು..
    ಶಿಲುಬೆಗೇರಿಸಿ ಕಲ್ಲು ಹೊಡೆದು
    ಬೈಬಲ್‍ ಬರೆದರು...!
    ಈ ಸಾಲು ತುಂಬಾ ಕಾಡುತ್ತಿದೆ..

    ಪ್ರತ್ಯುತ್ತರಅಳಿಸಿ