ಶನಿವಾರ, ಏಪ್ರಿಲ್ 16, 2011

ಬಾ... ಒಲವೆ...


-ರವಿ ಮೂರ್ನಾಡ್‍

ಸೇರು ಬಾ ಎನ್ನೆದೆಗೆ
ಮುಗಿಲ ಚುಂಬಿಸಿ ಹಾರುವ
ಬೆಳ್ಳಕ್ಕಿ ಹಿಂಡಾಗಿ ಒಲವೇ...
ಅಲ್ಲಲ್ಲಿ ಕಪ್ಪು ಮೆತ್ತಿದ
ಹೃದಯದ ಮೋಡವೆಲ್ಲ
ಮಳೆಯಾಗಿ ಸುರಿಯಲಿ
ನನ್ನ ಜೀವನವೆಲ್ಲ..!

ಅರಳು ಬಾ ಬಾಂದಳದಲ್ಲಿ
ನಲಿವ ಚೆಂಗುಲಾಬಿಯಾಗಿ
ಪ್ರೀತಿಯ ಕಣ್ಣಾಗಿ ಒಲವೇ..
ಅಲ್ಲಲ್ಲಿ ಚಿವುಟಿ ಬಿಟ್ಟ
ಬರಡು ಬೃಂದಾವನದಲ್ಲಿ
ನೀ ನೆಟ್ಟ ಪ್ರೀತಿಯ ಬೀಜ
ಸೊಗಸಾಗಿ ಚಿಗುರಲಿ
ನನ್ನ ಒಲುಮೆ ಹೀರಿ..!

ಹರಿದು ಬಾ ಎದೆಯೊಳಗೆ
ಗುಪ್ತಗಾಮಿನಿಯಾಗಿ
ಹೃದಯ ಗರ್ಭವ ಸೀಳಿ ಒಲವೇ...
ಕಡಲೊಳಗೆ ಹುಟ್ಟಿ ಬಾ
ಬಿರಿದ ಹೃದಯವ ತಣಿಸಿ
ಬರಡು ಬೇರನು ಬೆಳೆಸಿ
ಉಕ್ಕಿ ಹರಿಯಲಿ
ನನ್ನ ಬದುಕ ಜಲ..!

ಬೆಳಗು ಬಾ ಬದುಕಿನಲಿ
ಪುಟ್ಟ ಹಣತೆಯಾಗಿ
ದಟ್ಟ ಕತ್ತಲ ದೂಡಲು ಒಲವೇ...
ಎಲ್ಲೆಲ್ಲೊ ಅವಿತು ಕುಳಿತ
ಅಂತರಂಗದ ಕವಿಯ ಭಾವ
ಹಾಡುತ್ತಿರಲಿ ನಿತ್ಯ ಕವಿತೆಯಾಗಿ
ಇರದಿರಲಿ ಬಾಳ ಪುಟ
ಶೂನ್ಯವಾಗಿ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ