ಸೋಮವಾರ, ಏಪ್ರಿಲ್ 18, 2011

ಕೃಷ್ಣನ ಹೆಂಡತಿಯರು...


·       ರವಿ ಮೂರ್ನಾಡ್‍

ಕೃಷ್ಣಾ ...
ನಿನ್ನೊಡನಿದ್ದ ಹದಿನಾರು ಸಾವಿರ ಹೆಂಡತಿಯರು
ಏನಾದರು ಗೊತ್ತಾ ?

ನಿನ್ನಲಂಕೃತ ಶಯ್ಯಾಗಾರದಲ್ಲಿ
ಒಬ್ಬರಿಗೊಬ್ಬರು ಮೈಮರೆತಿದ್ದವರು
ಸದ್ದಿಲ್ಲದೆ ಮುಂಜಾನೆ ಮಂಚದಿಂದೆದ್ದು
ನದಿಯ ಸ್ನಾನಕ್ಕೆಂದು ಹೋದವರು
ಹಿಂತಿರುಗಿ ಬರಲಿಲ್ಲ ಎಂಬುವುದು
ಈಗ ದೊಡ್ಡ ಸುದ್ದಿ ..!

ಅವರೆಲ್ಲಾ ಈ ವಿಶಾಲ
ಶಾಡ್ವಲದಡಿಯಲ್ಲಿ
ಎದುರಿಗಿದ್ದ ಬೆಟ್ಟದ ತಪ್ಪಲಿನಲಿ
ಕಾನನದ ಕವಲು ದಾರಿಯಲಿ
ವೈಯ್ಯಾರದಲಿ ಹೂ ಕುಯ್ಯಲು ಹೋಗಿ
ದಿಕ್ಕು ತಪ್ಪಿದ್ದಾರೆ !
ದಿಕ್ಕು ತಪ್ಪಿದವರೆಲ್ಲಾ
ಶಹರಿನ ಒಳ ಹೊಕ್ಕು
ಮಹಡಿ ಮನೆಗಳ ಕೋಣೆ ಕೋಣೆಯಲಿ
ಹಂಚಿ ಹೋಗಿದ್ದಾರೆ ಕೃಷ್ಣಾ... !

ಒಂದಷ್ಟು ಜನ
ಗಲ್ಲಿ ಗಲ್ಲಿಯಲಿ ಕಣ್ಣು ಹಾಯಿಸಿ
ಹರಕು ಚಿಂದಿಯಾಳಗೆ ಕೈ ಬೀಸಿ
ಮುರುಕು ಛಾವಡಿ ಕೆಳಗೆ ಚಾಪೆಯಾಗಿ
ಕತ್ತಲೆಯ ಮುಸುಕಿನೊಳಗೆ
ನಿದ್ರಿಸುತ್ತಿದ್ದಾರೆ ಕೃಷ್ಣಾ ...
ತುಳಿದು ಬಿಟ್ಟವರ ಕಾಲಿನಡಿ ಧೂಳಾಗಿದ್ದಾರೆ...!

ಇನ್ನೊಂದಷ್ಟು ಜನ..
ನಿನ್ನ ಸೇವಕರ ಅಡಿಯಾಳಾಗಿ ಬಿಕ್ಕಳಿಸಿ
ಅದುಮಿಟ್ಟ ಆಸೆಗಳಿಗೆ ಬಣ್ಣ ಹಚ್ಚಿ
ಬೂದಿ ಮುಚ್ಚಿದ ನೋವಿನ ಕೆಂಡಕ್ಕೆ
ಗಾಳಿ ಹಾಯಿಸುತ್ತಿದ್ದಾರೆ ಕೃಷ್ಣಾ ...
ಮನೆ- ಮನಗಳ ಮೂಲೆಯಲಿ
ಉರಿವ ಬೆಂಕಿ ಒಲೆಯಾಗಿದ್ದಾರೆ...!

ಅಳಿದುಳಿದ ಅಷ್ಟೊಂದು ಜನ...
ಪರದೆಯ ಮೇಲೆ ಪರದೆಯೆತ್ತಿ
ನರ್ತಕಿಯರಾಗಿ ಬೆತ್ತಲೆಯಾಗುತ್ತಿದ್ದಾರೆ ಕೃಷ್ಣಾ ...
ಕೆಂಪು ದೀಪದ ಮಂದ ಬೆಳಕಿನಡಿ
ಮಿಣುಕು ಬೆಳಕುಗಳಾಗಿ ಉರಿಯುತ್ತಿದ್ದಾರೆ...!

ಕೃಷ್ಣಾ ... ನಿನ್ನ ಹೆಂಡತಿಯರೆಲ್ಲಾ
ಕೆಲವರು ಬ್ರಾಹ್ಮಣರಾದರು !
ಕೆಲವರು ಹೊಲತಿಯರಾದರು !
ಕೆಲವರು ಜಾತಿ-ಜಾತಿಯ ಹಣೆಪಟ್ಟಿಯಲಿ
ಅವರಿವರಿಗೆ ಭಾರವಾದರು !
ಕಾಮದ ಜಿಡ್ಡಿಗೆ ಜಡ್ಡುಗಟ್ಟಿ
ಜಾತಿಯನು ಮೀರಿ
ಎಲ್ಲರಿಗೂ ಬೇಕಾದರು ...!
Global poetry competition organized by Thatskannada and Sapna Book House-2003

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ