ಮಂಗಳವಾರ, ಮೇ 8, 2012

“ಸಂಗೀತ ಕಲಿಸಿಕೊಡಿ” ಎಂದ ಬಾಲಕ ಧರ್ಮಸ್ಥಳ ಹೆಗ್ಗಡೆಯವರಿಗೆ "ಕಾರ್ಡು" ಹಾಕಿದ್ದ !


ವಯಸ್ಸು 12... ಇಸವಿ 1984 . 5 ನೇ ತರಗತಿ ಪರೀಕ್ಷೆ ಬರೆದು 6 ನೇ ತರಗತಿಗೆ ತೇರ್ಗಡೆ ಹೊಂದಿದ್ದಾನೆ. " ಕಾರ್ಡು’ ಹಾಕಿದ ದಿನದಿಂದ ಧರ್ಮಸ್ಥಳದ ಪತ್ರ ಬರುವುದನ್ನೇ ದಾರಿ ನೋಡುತ್ತಿದ್ದ.  " ನನಗೆ ಒಂದು ಪತ್ರ ಬಂದಿದೇಯೇ?". ಪರಿಚಯಸ್ಥ ಅಂಚೆಯವನು ಪೊನ್ನಪ್ಪ ಇಂದು " ಇಲ್ಲ"  ಎಂದು ಹೇಳದಿದ್ದರೆ ಸಾಕು. ಅವನು ಅದನ್ನೇ ಹೇಳುತ್ತಿದ್ದ. ಶಾಲೆಗೆ ಹೋಗುವ ಮೊದಲು ಆ ಬೆಳಿಗ್ಗೆಗಳ 7.30 ಗಂಟೆಗೆ 5 ತಿಂಗಳವರೆಗೆ ಅಂಚೆ ಕಚೇರಿಗೆ ಹಾಜರಿ ಹಾಕುತ್ತಿದ್ದ ಆ ಬಾಲಕನಿಗೆ ಒಂದು ದಿನ ಪತ್ರ ಬಂತು. ಕಂದು ಬಣ್ಣದ " ಕಾರ್ಡಿನ" ನಾಲ್ಕು ಮೂಲೆಗೆ ದೇವರ ತಿಲಕದ ಕೆಂಪು ಬಣ್ಣವಿದೆ.
" ಶ್ರೀ ಮಂಜುನಾಥೇಶ್ವರ ನಮಃ"
ಪ್ರಣಾಮಗಳು ಬಾಲಕ ರವಿಗೆ. ನಿಮ್ಮಲ್ಲಿರುವ ಕಲೆಯ ಆಸಕ್ತಿಗೆ ದೇವರು ಸದಾ ಇರುವನು. ನಮ್ಮ ಗುರುಕುಲದಲ್ಲಿ ಪ್ರತ್ಯೇಕ ಸಂಗೀತ ಶಾಲೆಯಿಲ್ಲ. ನಿಮ್ಮ ಊರಿನಲ್ಲೇ ಅಥವ ಪಕ್ಕದ ಊರಿನಲ್ಲಿ ಇರುವ ಸಂಗೀತ ಗುರುಗಳಿಂದ ಕಲಿಯಬೇಕಾಗಿ ಸಲಹೆ ನೀಡುತ್ತೇವೆ. ನಿಮ್ಮಲ್ಲಿರುವ ಆಸಕ್ತಿ ಬೆಳೆಯಲಿ . ಮಂಜುನಾಥನ ಆಶೀರ್ವಾದಗಳು..."
-ಇಂತಿ
ಆಡಳಿತಾಧಿಕಾರಿಗಳು, ಧರ್ಮಸ್ಥಳ.
ಹಿರಿಹಿರಿ ಹಿಗ್ಗಿಬಿಟ್ಟ. ಎಷ್ಟು ಸಲ ಓದಿದನೋ ಗೊತ್ತಿಲ್ಲ. ಸಮಾಧಾನವಾಗಲಿಲ್ಲ..... ಕಾರ್ಡಿನಲ್ಲಿರುವ ಪ್ರತಿಯೊಂದು ಪದಗಳನ್ನು ಕಂಠಪಾಠ ಮಾಡಿದ ಮೇಲೇ ಸಮಾಧಾನವಾಯಿತು. ಆ ಬಾಲಕನ ಕಣ್ಣಲ್ಲಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಬರೆದಂತೆ ಇತ್ತು ಆ " ಕಾರ್ಡು" !. ಈಗ  ಸಂಗೀತದ ಶಾಸ್ತ್ರಗಳೇ ಗೊತ್ತಿಲ್ಲದ ಮೂರ್ನಾಡು ಕೇರಿಯಲ್ಲಿ " ಸ..ರಿ..ಗ..ಮ..ಪ..ದ..ನಿ..ಸ.." ತಾಳ ಗುರುತಿಸುವವರನ್ನು ಹುಡುಕತೊಡಗಿತು ಸ್ವರಗಳು.
ಒಂದೊಂದಾಗಿ ಬಿಚ್ಚ ತೊಡಗಿದವು ಸಂಗೀತದ ಸುರುಳಿಗಳು........
ಆ ಸುತ್ತಲೂ ಹಸಿರು ತುಂಬಿದ ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಲೈನ್‍ ಮನೆಗಳ ಹೊರಾಂಗಣದಲ್ಲಿ ಕುಳಿತು ಆಲಿಸುತ್ತಿದ್ದಾನೆ . ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಬಂದ ಕಾರ್ಮಿಕ ಹೆಂಗಸರ ಅಡುಗೆ ಕೋಣೆಯಲ್ಲಿ " ಉದೋ ಉದೋ" ಒಲೆ ಉರಿಸುವ ಊದು ಕೊಳವೆ ಶಬ್ದ. ಪುಟ್ಟ ಪುಟ್ಟ ಮನೆಗಳ ಸೀಳಿ ಗಗನಚುಂಬಿ ಮರಗಳ ಎಲೆಯೊಳಗೆ ಮರೆಯಾಗಿ ಹೊಗೆಗಳು ಹೊರಗೋಡುತ್ತಿದ್ದವು. ಅದಷ್ಟು ಲೈನ್ ಮನೆಗಳಲ್ಲಿ ರೇಡಿಯೋ ಹಾಡು ಹಾಡುತ್ತಿವೆ...ಸಿಲೋನ್‍ ಸ್ಟೇಷನ್ ,ಬೆಂಗಳೂರು ಸ್ಟೇಷನ್. ವಿವಿಧ ಭಾರತಿ.. ಕನ್ನಡ, ತಮಿಳು, ಮಲಯಾಳಂ, ಹಿಂದಿ....
"ಇದು ಆಕಾಶವಾಣಿ..... ಧಾರವಾಡ ಕೇಂದ್ರ, ಸಮಯ 6 ಗಂಟೆ,  9  ನಿಮಿಷ, 30  ಸೆಕೆಂಡುಗಳಾಗಲಿದೆ . ಇದೀಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು...."  ಕಿವಿ ನಿಮಿರಿಸಿಕೊಳ್ಳುತ್ತಾನೆ ..."ಅಮೃತ ಘಳಿಗೆ" ಚಿತ್ರದ ಗೀತೆ.
"ಹಿಂದೂಸ್ಥಾನವೂ ಎಂದೂ ಮರೆಯದ ಭಾರತ ರತ್ನವೂ ಜನ್ಮಿಸಲಿ......"
" ಹೇ... ಏನೋ ಮಾಡುತ್ತಿದ್ದೀಯಾ... ಓದುವುದಕ್ಕಲ್ಲವೇ ಹೇಳಿದ್ದು.."ಅಯ್ಯೋ ಚಿಕ್ಕಮ್ಮ ವಾರೀಜಳ ಸ್ವರ...! ಭಾರಿಸುವುದೆಂದರೆ ಹಲ್ಲು ಕಡಿದು ಭಾರಿಸುತ್ತಿದ್ದಳು. ಪ್ರೀತಿಯಿಲ್ಲವೇ?!
ಅದು ಕಿವಿಗೆ ಬೀಳದಂತೆ ಹಾಡು ಎದೆಗೆ ತುಂಬುತ್ತಿದ್ದವು.  ಈ ಹಾಡನ್ನು ಹೇಗಾದರೂ ಮಾಡಿ ಕಲಿಯಬೇಕು. ಹೇಗೆ ಕಲಿಯುವುದು? ನನಗೆ ಹಾಡು ಕಲಿಯಬೇಕು. ಸುಂಟಿಕೊಪ್ಪ ಪಟ್ಟಣದ ರವಿವಾರದ ಸಂತೆ ದಿನ ಬಂತು. ಅಜ್ಜಿಯನ್ನು ಕಾಡಿಬೇಡಿ ದಾರಿಬದಿ ಪುಸ್ತಕ ವ್ಯಾಪಾರಿಯಿಂದ  25 ಪೈಸೆಗೆ "ಚಲನಚಿತ್ರ ಗೀತೆಗಳು" ಪುಸ್ತಕ ಖರೀದಿಸಿದ. ಹಾಡುಗಳು ಒಂದೊಂದಾಗಿ ಕಂಠಪಾಠವಾತ್ತಿವೆ.  ಯಾರಿಗೂ  ಕಾಣದ ಕಾಫಿ ಗಿಡಗಳ ಬುಡದಲ್ಲಿ , ಲೈನ್ ಮನೆ - ಶಾಲೆಯ ಬಚ್ಚಲು ಮನೆಯಲ್ಲಿ , ಶಾಲೆಗೆ ಹೋಗುವ ದಾರಿಯಲ್ಲಿ  ಒಮ್ಮೆ .. ಮತ್ತೊಮ್ಮೆ....ಮಗದೊಮ್ಮೆ ಹಾಡುತ್ತಲೇ ಇದ್ದ. 3 ನೇ ತರಗತಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಎಲ್ಲರೂ ಹಾಡು ಸ್ಪರ್ಧೆಗೆ ಹೆಸರು ನೋಂದಾಯಿಸಿದರು.  ಇವನೂ ನೋಂದಾಯಿಸಿದ.
ಗೊತ್ತಾಗಿದ್ದೇ ತಡ ಲೈನ್ ಮನೆಯ ಹುಡುಗ- ಹುಡುಗಿಯರ ಪ್ರಶ್ನೆಗಳು. " ಹೇ ಸ್ವಾತಂತ್ರ್ಯೋತ್ಸವಕ್ಕೆ ಏನು ಹಾಡು ಹೇಳುತ್ತೀಯ?!  ಒಮ್ಮೆ ಇಲ್ಲಿ ಹಾಡು"
ನಾಚಿಕೆ ನೆತ್ತಿಗೇರುತ್ತಿದೆ. ಹೇಗೆ ಹಾಡುವುದು ? " ಹೇ ಇವನು ಹಾಡು ಹೇಳುತ್ತಾನಂತೆ... ದೊಡ್ಡ ಹಾಡುಗಾರ" ಕಿಚಾಯಿಸುತ್ತಿದ್ದಾರೆ.... ಎಲ್ಲರೂ ನನ್ನನ್ನೇ ನೋಡುವರಲ್ಲ..?!.ಕೈಕಾಲು ಸಣ್ಣಗೆ ನಡುಗತೊಡಗಿದವು.. ಸ್ವಾತಂತ್ರ್ಯೋತ್ಸವದ ವೇದಿಕೆ ಹತ್ತಲು ಹೆಜ್ಜೆಗಳು ಮರೆತವು. ಅಂದೇ ಸಂಜೆ  ಮತ್ತೊಮ್ಮೆ ಕಾಫಿ ಗಿಡದ ಬುಡದಲ್ಲಿ ಅದೇ ಹಾಡು ಹಾಡಿದ. ಚೆನ್ನಾಗಿದೆಯೇ...ಗೊತ್ತಿಲ್ಲ.... ಕಾಫಿಗಿಡದ ಎಲೆಗಳು ಗಾಳಿಗೆ ತಲೆ ಆಡಿಸಿ ಸುಮ್ಮನಾದವು.
ಸಣ್ಣ ಮಾವ ಒಮ್ಮೆ ಎಷ್ಟೇಟಿಗೆ ಬಂದಿದ್ದಾರೆ.
" ಇವನು 3 ನೇ ಕ್ಲಾಸಿನಲ್ಲಿ ಒಳ್ಳೆ ಅಂಕ ಗಳಿಸಿದ್ದಾನೆ"
"ಹೌದಾ?"  ಮತ್ತೊಮ್ಮೆ ಅಜ್ಜಿ ಸ್ವರ ಸೇರಿಸಿದರು. " 4 ನೇ ತರಗತಿಗೆ ಬೇಕಾದ ಪುಸ್ತಕಗಳನ್ನು ಶಾಲೆಯಿಂದ ಉಚಿತವಾಗಿ ಬಹುಮಾನ ನೀಡಿದ್ದಾರೆ"
ಮೂರ್ನಾಡಿಗೆ ಹೋಗುವಾಗ ಲೈನ್ ಮನೆಗಳು, ಬುಗುರಿ-ಚಿನ್ನಿ ದಾಂಡು, ಅದಷ್ಟು ಚಡ್ದಿ ಜೇಬಿನಲ್ಲಿ ತುಂಬಿಸಿಟ್ಟಿದ್ದ ಬಣ್ಣ ಬಣ್ಣದ ಗೋಲಿಗಳ "ಜಿಗಿಜಿಗಿ" ಶಬ್ಧಗಳು ಮತ್ತೆ ಮತ್ತೆ ಕೇಳುತ್ತಿವೆ. ಮತ್ತಷ್ಟು ಗೆಜ್ಜೆ ಕಟ್ಟಿ ಮಾವನ ಮನೆಯಿಂದ ಶಾಲೆಗೆ ಹೆಜ್ಜೆಯಿಟ್ಟಿದ್ದಾನೆ ಹುಡುಗ. ಹಾಡು ಕೇಳುತ್ತಿದ್ದ ಕಾಫಿಗಿಡಗಳು, ಬಚ್ಚಲು ಮನೆ, ಶಾಲೆಗೆ ಹೋದ ದಾರಿಗಳು ಮೌನದ ಕದ ತಟ್ಟಿ ಮಾರ್ಧನಿಸಿದವು. ರಾಮ ಮಂದಿರದಲ್ಲಿ ಬೆಳಿಗ್ಗೆ ಭಕ್ತಿ ಶ್ಲೋಕಗಳು ಕೇಳುತ್ತಿವೆ.......ಮಸೀದಿಯಲ್ಲಿ ಲಯಬದ್ದ ಪ್ರಾರ್ಥನೆ .....!   ಪಟ್ಟಣದ ಬೀದಿಯನ್ನು ಎಚ್ಚರಿಸುವಾಗ ಮನೆಯ ಮುಂದಿನ ಪಂಚಾಯಿತಿ ನಲ್ಲಿಯಲ್ಲಿ ಉಗುಳುವ ನೀರಿನ ರಭಸಕ್ಕೆ ಚಂಡೆ ಮದ್ದಳೆ ಸ್ವರವನ್ನು ಆಲಿಸಿದ್ದ . ಬಿಂದಿಗೆಯೊಳಗೆ ನೀರು ತುಂಬುತ್ತಿದೆ.... ಮತ್ತೊಂದು ಮೃದಂಗ ನಾಧ..!
" ಇವತ್ತು ಸಂಜೆ ಪಳನಿ ಸ್ವಾಮಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯಿದೆ ಬರುತ್ತೀಯಾ?"
ವೃತಾಧಾರಿಗಳ ನಿತ್ಯ ಭಜನೆ ಕಾರ್ಯಕ್ರಮಕ್ಕೆ ಬೀದಿಯ ಹುಡುಗರು ಕನಸು ಬಿಚ್ಚುತ್ತಿದ್ದಾರೆ.
" ಪೂಜೆ ಮುಗಿದ ಮೇಲೆ ಪ್ರಸಾದ ಕೊಡುತ್ತಾರೆ"
"ಹೌದಾ..! ಬರುತ್ತೇನೆ" .
ಒಂದಷ್ಟು ಅಯ್ಯಪ್ಪಾ ಸ್ವಾಮಿ ಭಜನಾವಳಿಗಳು .. ಕೆ.ಜೆ.ಏಸುದಾಸ್, ಡಾ. ರಾಜ್‍ ಕುಮಾರ‍್, ಕೆ. ವೀರಮಣಿ, ಜಯಚಂದ್ರನ್‍ ನಾಲಗೆಯಲ್ಲಿ ನಲಿದಾಡ ತೊಡಗಿದವು, ಪಟ್ಟಣ ತುಂಬಾ ಭಜನಾವಳಿಗೆ ಗೊತ್ತಿಲ್ಲದ ಆರಾಧಕರು ಕರೆಯುತ್ತಲೇ ಇದ್ದಾರೆ.  ಭಕ್ತರು ಹಾಡಿಸಿ ಹಾಡಿಸಿ ರಾಗ ಹೆಚ್ಚಿಸಿದ್ದು ಗೊತ್ತಾಗಲೇ ಇಲ್ಲ .! ಮತ್ತಷ್ಟು ಹಾಡಿದ... ರಾಮ ಮಂದಿರ, ಗಣೇಶೊತ್ಸವ , ಅವರಿವರ ಮನೆಯಲ್ಲಿ ಹಾಡುತ್ತಾ ತಾಳ ಹಾಕುತ್ತಿದ್ದ. ತಲೆ ಕಂಡದ್ದೇ ತಡ   " ಒಂದು ಹಾಡು ಹೇಳೋ" . ತಲೆಯಾಡಿಸುತ್ತಾ... ಕಣ್ಣು ಮುಚ್ಚಿ ಲೀನನಾದವನಿಗೆ ......
" ಚೆನ್ನಾಗಿ ಹಾಡುತ್ತೀಯಾ"..... ತುಟಿ ಸೀಳಿ ಕಿವಿ ನಿಮಿರಿಸಿದ ನಗುವಿಗೆ ಒಸರುತ್ತಿವೆ ನಾಚಿಕೆ ಬೆವರ ಹನಿಗಳು !.. ಮುಖ ಒರೆಸಿಕೊಂಡ.... ಯಾರಿಗೂ ಕಾಣದಂತೆ ಓಡಿ ಕಣ್ಮರೆಯಾದ..! ಈಗ ಕಾರೆಕೊಲ್ಲಿ ಕಾಫಿ ಎಷ್ಟೇಟಿನ ಲೈನ್ ಮನೆಯ ಹುಡುಗ- ಹುಡುಗಿಯರು ನೆನಪಾದರು...!
" ಹೇ... ಹುಡುಗ ಇಲ್ಲಿ ಬಾ.... ಈ ಹಾಜರಿ ಪುಸ್ತಕವನ್ನು 2 ನೇ ಕ್ಲಾಸಿಗೆ ಕೊಟ್ಟು ಬಾ" ಭೋಜಮ್ಮ ಟೀಚರ‍್ ಕಳುಹಿಸಿದರು.
ಹಾಜರಿ ಪುಸ್ತಕ ಹಿಡಿದು ಹೆದರುತ್ತಲೇ ಒಳ ನುಗ್ಗಿದವನಿಗೆ ತಂಗಮ್ಮ ಟೀಚರ್  " ಒಂದು ಹಾಡು ಹೇಳು ಮಗು"
" ಹೇ.. ಮಕ್ಕಳೇ ಸುಮ್ಮನಿರಿ "
ಪುಟಾಣಿಗಳು ಮೌನ ವಹಿಸಿದ್ದಾರೆ.. ಏನು ಹಾಡುತ್ತಾನೆ ಇವನು? ಸ್ವರಗಳು ಗಂಟಲು ತೆರೆದು ತುಟಿ ಅದುರಿಸಿದವು....." ಹಿಂದೂಸ್ಥಾನವೂ ಎಂದೂ ಮರೆಯದ ಭಾರತ ರತ್ನವೂ ನೀನಾಗು..."
"ಟೀಚರ್ ... ಹಾಡು  ಮುಗಿಯಿತು".... ಕಣ್ಣು ಮುಚ್ಚಿದ್ದ ಟೀಚರ್ ಕಣ್ಣು ತೆರೆದರು. " ಮಗು.. ಚೆಂದ ಸಂಗೀತ ಕಲಿಯಬೇಕು.. ದೊಡ್ಡವನಾದ ಮೇಲೆ ಹಾಡು ಹಾಡುವುದನ್ನು ಮರೆಯಬೇಡ." 
"ಆಯಿತು ಟೀಚರ್.... ಬರುತ್ತೇನೆ", ಹೇಳಿ ಮುಗಿಸುವುದರೊಳಗೆ ತರಗತಿಯ ಹೊರಗೆ ಓಡುತ್ತಿದ್ದ ಹೆಜ್ಜೆಗಳು ಹಾಡುಗಾರನ ತಾಳ ಹುಡುಕುತ್ತಿದ್ದವು....!
" ಎಲ್ಲಿಗೆ ಓಡುತ್ತಿದ್ದೀಯಾ?"
"ಸಂಗೀತ ಕಲಿಯಲು ಓಡುತ್ತಿದ್ದೇನೆ.."
ಓಡುತ್ತಿದ್ದವನನ್ನು ಯಾರೋ  ಒಮ್ಮೆ ಕರೆದರು. ಹೆಸರು ಪರಿಚಯ ಅರಿಯದ ಭಾವಗೀತೆಗಳು...
 " ಯಾವುದೀ...ಪ್ರವಾಹವೂ...! ಯಾವುದೀ...ಪ್ರವಾಹವೂ....!"

7 ಕಾಮೆಂಟ್‌ಗಳು:

  1. ರವಿ ಸಾರ್,

    ನೀವು ಒಳ್ಳೆಯ ಹಾಡುಗಾರರೆಂದು ಈಗಷ್ಟೇ ನನಗೆ ಗೊತ್ತಾಯಿತು. ಅಂದಹಾಗೆ ನೀವು ಮತ್ತೆ ಎಲ್ಲಾದರೂ ಸಂಗೀತ ಶಾಲೆಗೆ ಸೇರಿದಿರಾ?

    ಧರ್ಮಸ್ಥಳ ವೀರೇಂದ್ರ ಹೆಗಡೆಯವರು ಬೃಹದ್ ಜವಾಬ್ದಾರಿಗಳನ್ನು ಹೊತ್ತ ಅತೀ ಸರಳ ಮನಸ್ಸಿನ ಮಹಾ ವ್ಯಕ್ತಿ. ಅವರಿಂದ ನಿಮಗೆ ಬಂದ ಕಾರ್ಡನ್ನು ಈಗಲೂ ನೀವು ಜೋಪಾನವಾಗಿ ಇಟ್ಟಿರುವುದು ನಿಮ್ಮೊಳಗಿನ ಗಾನ ಸರಸ್ವತಿಗೆ ಮೊದಲ ಸರ್ಟಿಫಿಕೇಟು.

    ನಿಮ್ಮ ಬಾಯಲ್ಲಿ ಹಾಡಿಸುವ ಉಮ್ಮೇದಿನಿಂದಲಾದರೂ ನಾನೂ ಒಂದು ಭಾವಗೀತೆ ಬರೆಯಲು ಪ್ರಯತ್ನಿಸುತ್ತೇನೆ.

    ಮೂರ್ನಾಡಿನ ಪರಿಸರವನ್ನೂ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದೀರ.

    ಪ್ರತ್ಯುತ್ತರಅಳಿಸಿ
  2. ಬಾಲ್ಯದ ಸಂಗೀತ ಕಲಿಯುವಿಕೆಯ ತುಮುಲವನ್ನು ಪರಿಣಾಮಕಾರಿಯಾಗಿ ಬಿಚ್ಚಿಟ್ಟಿದ್ದೀರಿ. ಇದು ನಮ್ಮ ಬಾಲ್ಯದ ಅನುಭವಗಳನ್ನೂ ಎಳೆಎಳೆಯಾಗಿ ನೆನಪಿಸಿತು. ಈ ಬರಹದ ಶೈಲಿ ವೈವಿಧ್ಯಮಯವಾಗಿ ಮೂಡಿ ಬಂದಿದೆ...

    ಪ್ರತ್ಯುತ್ತರಅಳಿಸಿ
  3. ಹಿಂದುಸ್ಥಾನವು ಎಂದೂ ಮರೆಯದ
    ಭಾರತರತ್ನವು ಜನ್ಮಿಸಲಿ
    ಈ ಕನ್ನಡ ಮಾತೆಯ ಮಡಿಲಲ್ಲಿ
    ಈ ಕನ್ನಡ ನುಡಿಯಾ ಗುಡಿಯಲ್ಲಿ

    ದೇಶಭಕ್ತಿಯ ಬಿಸಿಬಿಸಿ ನೆತ್ತರು
    ಧಮನಿಧಮನಿಯಲಿ ತುಂಬಿರಲಿ - (2)
    ವಿಶ್ವಪ್ರೇಮದಾ ಶಾಂತಿಮಂತ್ರದ
    ಘೋಷವ ಎಲ್ಲೆಡೆ ಮೊಳಗಿಸಲಿ
    ಸಕಲಧರ್ಮದ ಸತ್ವಸಮನ್ವಯ
    ತತ್ವಜ್ಯೋತಿಯ ಬೆಳಗಿಸಲಿ

    ಕನ್ನಡತಾಯಿಯ ಕೋಮಲ ಹೃದಯದ
    ಭವ್ಯ ಶಾಸನ ಬರೆಯಿಸಲಿ - (2)
    ಕನ್ನಡನಾಡಿನ ಎದೆಎದೆಯಲ್ಲೂ
    ಕನ್ನಡವಾಣಿಯ ಸ್ಥಾಪಿಸಲಿ
    ಈ ಮಣ್ಣಿನ ಪುಣ್ಯದ ದಿವ್ಯಚರಿತ್ರೆಯ
    ಕಲ್ಲುಕಲ್ಲಿನಲು ಕೆತ್ತಿಸಲಿ

    ಹಿಂದುಸ್ಥಾನವು....

    ....wow! what a song! had it memorized when i too was a kid. however, i was fortunate enough to have the time and equipment to listen to the song whenever i wanted. can never forget the image of Shaheed Bhagat Singh being shown at the end of 'ದೇಶಭಕ್ತಿಯ ಬಿಸಿಬಿಸಿ ನೆತ್ತರು ಧಮನಿಧಮನಿಯಲಿ ತುಂಬಿರಲಿ...' it is just so befitting! thanks for bringing back the memories associated with an amazing song! and eagerly awaiting for part-2...

    regs,
    -R

    ಪ್ರತ್ಯುತ್ತರಅಳಿಸಿ
  4. ಕಾಯುತ್ತಿರುತ್ತೇನೆ ರವಿಯಣ್ಣ ಮುಂದಿನ ಭಾಗಕ್ಕೆ. ಬಾಲ್ಯದ ಈ ತುಣುಕುಗಳನ್ನು ಬಿಚ್ಚಿಟ್ಟದಕ್ಕೆ ಧನ್ಯವಾದ ನಿಮಗೆ.

    ಪ್ರತ್ಯುತ್ತರಅಳಿಸಿ
  5. ತುಂಬ ಚೆನ್ನಾಗಿದೆ, ಮುಂದಿನ ಭಾಗದ ನಿರೀಕ್ಷೆಯಲ್ಲಿ...
    -suraj b hegde

    ಪ್ರತ್ಯುತ್ತರಅಳಿಸಿ