ಭಾನುವಾರ, ಜನವರಿ 1, 2012

ರಸ್ತೆ..!


ಆ ರಸ್ತೆಗೆ ಗಾಢ ನಿದ್ದೆ
ಡಾಂಬರು ಹೊದಿಕೆಯೊಳಗೆ
ಬಿಟ್ಟ ಕಣ್ಣು ಬಿಟ್ಟಂತೆ
ಬೆಳಕಿನ ನಾಲಗೆ ಇಳಿಸಿವೆ
ಕಾವಲು ನಾಯಿ ವಿದ್ಯುತ್‍ ಕಂಬಗಳು
ತುಟಿಗೆ ಎಂಜಲು ತಿಕ್ಕಿ
ಬೆರಳಾಡಿಸುತ್ತಿದೆ ಗಾಳಿ
ಕಾಲದ ದಿನಚರಿ ಹಾಳೆಗಳು..!

ಇಲ್ಲೆಲ್ಲಾ ಬೆಳಕು ಕಣ್ಬಿಡದ ಕಾಡು
ಹತ್ತು ಆನೆಬಲದ ಡೈನೋಸಾರಸ್‍
ಹೆಜ್ಜೆಯಿಟ್ಟಲ್ಲೆಲ್ಲಾ ಹಳ್ಳ-ಕಣಿವೆ
ಇಟ್ಟ ಸಗಣಿಗೆ ಬೆಳೆದಿದೆ ಬೆಟ್ಟ
ನಡುವೆ ಸೀಳಿದ ನದಿಗೆ
ಅಡ್ಡಲಾಗಿ ಎಲುಬಿನ ಸೇತುವೆ ಹುಟ್ಟಿ
ಈ ರಸ್ತೆಗೆ ದಾರಿ ಬೆಳೆದಿದೆ..!

ಆ‍ಡಂ ಮತ್ತು ಈವ್‌ರ
ನಾಲ್ಕು ಹೆಜ್ಜೆ ಈ ರಸ್ತೆಗೆ
ಇಲ್ಲೆಲ್ಲಾ ನಡೆದು, ಕಾಡು ಕಡಿದು
ಕಟ್ಟಿ ಎಲೆ ಮುಚ್ಚಿದ ಗುಡಿಸಿಲು
ಅವರಿಗೊಂದಷ್ಟು ಮಕ್ಕಳು
ಹೊಸ್ತಿಲಿನಿಂದ ಅಂಬೆಗಾಲಿಕ್ಕಿ
ಅವರದೂ ಸಾವಿರ ಹೆಜ್ಜೆಗಳು !
ಕಲ್ಲುಗಳ ಕುಟ್ಟಿ-ಮರಗಳ ಸಿಗಿದು
ಆನೆ-ಹುಲಿ-ಚಿರತೆಗಳ ಎಲುಬಿನಿಂದ
ಈ ದಾರಿಗೆ ಮಣ್ಣು ಅಗೆದರು
ಹಾಗೆಂದು, ರಸ್ತೆ ದಿನಚರಿ ಬರೆದಿದೆ  !

ಅವರೇ ನಿರ್ಮಿಸಿದ್ದು,
ಹರಪ್ಪ- ಮೊಹಂಜದಾರೋ
ಕಲ್ಲರಳಿದ ಗುಹೆಯ ಚಿತ್ರಗಳು
ಸುದೀರ್ಘ ನಿದ್ದೆಗೆ ಮಲಗಿ
ಪಿರಮಿಡ್ಡಿನೊಳಗೆ ಮಮ್ಮಿಗಳಾದರು
ಅವರಿವರು ನೆಲ ಕೆರೆದಾಗ
ಅಳುತ್ತಿವೆ ಮಾಸ್ತಿ ಕಲ್ಲುಗಳು
ನೀರಾಡಿಸಿದಾಗ ಸಿಗುತ್ತಿವೆ
ಕೆರೆಗೆ ಹಾರವಾದವರ ಕರಿಮಣಿ ಸರಗಳು..!

ನೋಡಿ ಇಕ್ಕೆಲಗಳಲ್ಲಿದೆ,
ಏಸು ಶಿಲುಬೆಗೆ ನಿಂತಾಗ
ಬೈಬಲ್ ಬರೆದವರ ಚರ್ಚು
ಪೈಗಂಬರರು ನಮಾಜು ಮುಗಿಸಿ
ಕುರಾನ್ ಬರೆದ ಮೆಕ್ಕಾ-ಮದೀನ-ಮಸೀದಿ
ರಸ್ತೆಯ ಉದ್ದಗಲಕ್ಕೆ ಕಿರೀಟ ಧರಿಸಿವೆ
ಏಕದೇವ ಮುಕ್ಕೋಟಿ ದೇವರಾಗಿ
ಗೀತೆ ಬರೆದ ಮಂದಿರಗಳು
ಹಾಗೆಂದು ಈ ರಸ್ತೆ
ವ್ಯಾಸ-ವಾಲ್ಮೀಕಿಗೆ ಗರ್ಭ ಧರಿಸಿ
ರಾಮಾಯಾಣದ ಮೈಲುಗಲ್ಲುಗಳಿಗೆ
ಮಹಾಭಾರತದ ಹೆಸರು ಬರೆದಿದೆ..!

ಇಲ್ಲೆಲ್ಲಾ ಕಾಲಾಳುಗಳು-ಆನೆ-ಕುದುರೆ
ರಥದಲ್ಲಿ ಖಡ್ಗ ಹಿಡಿದ ರಾಜರು
ರುಂಡಗಳ ಚೆಂಡಾಡಿದಾಗ
ಅಲ್ಲೊಂದು ರಕ್ತದ ಹಳ್ಳ..!
ಮುಸಲೋನಿ-ಹಿಟ್ಲರ್
ಮಹಾಯುದ್ಧಕ್ಕೆ ಬೆತ್ತಲೆಯಾಗಿ
ಹಿಂಬದಿಗೆ ಬಂದ ನೆಪೋಲಿಯನ್  !
ರುಂಡವಿಲ್ಲದ ಹಿರೋಷಿಮಾ,ಮುಂಡವಿಲ್ಲದ ನಾಗಸಾಕಿ
ರಕ್ತಕ್ಕೆ ಬಾಯ್ತೆರೆದ ಈದಿ ಅಮೀನ್
ಸದ್ದಿಲ್ಲದೆ ಬೂದಿ ಮುಚ್ಚಿದೆ
ಇರಾಕಿನ ದೊರೆಸಾನಿಯ ದುಖಃ
ಹಾಗೆಂದು, ಹಾಳೆಯಲ್ಲಿ ಕಣ್ಣೀರ ಕಲೆಗಳಿವೆ...!

ಈ  ರಸ್ತೆಯುದ್ದಕ್ಕೂ ಧರ್ಮಗಳ ಭಾವುಟ
ಮನೆ-ಮನಗಳಲ್ಲಿ ಮತಾಂಧರ ಸಪ್ಪಳಕ್ಕೆ
ಬೆಚ್ಚಿ ಹಾಲಿಲ್ಲದೆ ಸತ್ತಿವೆ ಮಕ್ಕಳು
ಬಾಂಬುಗಳ ಭಿತ್ತಿ ಬೆಳೆದ ವಿಷದ ಹಣ್ಣು
ಬಿಟ್ಟಿವೆ ಫಲವತ್ತಾದ ದ್ವೇಷದ ಕಣ್ಣು
ಈ ರಸ್ತೆಯ ಅನತಿಯಲ್ಲಿದೆ
ಜಾತಿಗೊಂದು ಚಿರನಿದ್ರೆಯ ಮಸಣ
ಹೆಣಗಳ ಸುಡುವಾಗ
ಧುಮ್ಮಿಕ್ಕಿದ ಕಣ್ಣೀರ ಜಲಪಾತ
ನದಿ ಈಗಲೂ ಕೆಂಪಾಗಿ ಹರಿಯುತ್ತಿದೆ !

ಆಗಸ ದಿಟ್ಟಿಸಿದ ಹದ್ದಿನ ರೆಕ್ಕೆಗೆ
ಹಾರಿದವು ಉಕ್ಕಿನ ಹಕ್ಕಿಗಳು  !
ನದಿಗೆ ಕಡಲು ಸೇರುವ ಉಮ್ಮಸ್ಸು
ರೈಲು-ಕಾರು-ಬಸ್ಸುಗಳು ಸ್ಪರ್ಧಿಸಿದವು !
ಈಜುವ ಮತ್ಸ್ಯಗಳ ಕಂಡು
ಹಡಗು-ದೋಣಿಗಳು ತೇಲಿದವು !
ಅದ ನೋಡುತ್ತಾ ನಿಂತಿವೆ
ಗಗನ ಚುಂಬಿ ಕಟ್ಟಡಗಳು !
ಪತಿ, ಬಾಗಿಲು ತೆರೆದು ಕಚೇರಿಗೆ
ಮಕ್ಕಳು ಶಾಲೆಗೆ
ತುಟಿಯಿಟ್ಟ ಹಸುಳೆ ಮೊಲೆ ಹಾಲಿಗೆ
ಕಾಪಿಟ್ಟ ಪತ್ನಿಯ ತುಂಬು ಸಂಸಾರಕ್ಕೆ 
ಈ ರಸ್ತೆ ಹಾಜರಿ ಬರೆದಿವೆ ಕನಸುಗಳಿಗೆ !

ಮಲಗಿದೆ ಸುಮ್ಮನೆ
ಸುನಾಮಿ ಅಬ್ಬರ !
ಗುಡುಗಿ ಬಾಯ್ಬಿಟ್ಟ ಭೂಮಿಗೆ
ಸುಕ್ಕು ಚರಂಡಿ-ಗಟಾರ !
ಲೆಕ್ಕವಿಲ್ಲದ ಹೆಜ್ಜೆಗಳಿಗೆ
ಮನಸ್ಸು-ಎದೆ ಭಾರ !
ನಿನ್ನೆ ರಾತ್ರಿಯಷ್ಟೆ
ಕಾರಿನ ಮುಖಕ್ಕೆ ಗುದ್ದಿದ ಲಾರಿ
ಬಿದ್ದಿವೆ ನೆಲಕ್ಕೆ ನಾಲ್ಕಾರು ಹೆಣ
ಬಿದ್ದ ರಕ್ತ ಡಾಂಬರು ಹೊದಿಕೆಗೆ
ಈಗಷ್ಟೆ ಬಿಸಿಲಿಗೆ ಒಣಗಿ-
ಅಲ್ಲೇ ಇವೆ ಇರುವೆಗಳು
ಹಾಗೆಂದು ಹಾಳೆಯಲಿ ನಿಟ್ಟುಸಿರಿದೆ..!

ಅದೋ ಅಲ್ಲೊಂದು ತಳ್ಳುಗಾಡಿ
ಬೆಳಗಾಯಿತೆಂದು ಬರುತ್ತಿದೆ !
ಹಾಳೆ ಒಂದಷ್ಟು  ಖಾಲಿಯಿದೆ ನಾಳೆಗೆ ..!
-----------------------------------------------------------------------
-ರವಿ ಮೂರ್ನಾಡು.





6 ಕಾಮೆಂಟ್‌ಗಳು:

  1. ಇದು ಕೇವಲ ಕವಿತೆಯೆನ್ನುವುದಕ್ಕಿಂತ ಇತಿಹಾಸ ತಜ್ಞರ ಸ್ಮೃತಿಪಟಲದೊಳಗಿಂದ ಅವರ ಹೃದಯವನ್ನೊಕ್ಕಿ ಅದ್ದಿ ತೆಗೆದ ನೈಜ ಕಲಾಕೃತಿ.. ರವಿಯಣ್ಣ ಅದ್ಭುತವಾದ ಕವಿತೆ, ಎಂದಿನಂತೆ ನಿಮ್ಮ ನಿರೂಪಣೆಯಲ್ಲಿನ ತೀಕ್ಷ್ಣತೆ ಕಾಯ್ದುಕೊಂಡಿದೆ ಕವಿತೆ.. ಹಾಗೆ ಪ್ರತಿಯೊಂದು ಪ್ರತಿಮೆಗಳು ಸ್ಮೃತಿಪಟಲದಲ್ಲಿ ಹಾದುಹೋಗುತ್ತವೆ.. ಭೂಮಿ ಉಗಮಗೊಂಡಂದಿನ ವಿಕಾಸದಿಂದಿಡಿದು ಪ್ರಸ್ತುತ ಯಾಂತ್ರಿಕ ಜೀವನದವರೆಗೂ ರೂಪತಳೆದ ಎಲ್ಲ ಜೀವನದ ಕಾಲಘಟ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ ಕವಿತೆ.. ನೀವು ವಿವರಿಸ ಹೊರಟ ರಸ್ತೆಯ ಉದ್ದಗಲಗಳು ಕಲ್ಪನೆಗೂ ನಿಲಕದ್ದು, ಇತಿಹಾಸದ ಜಾಡಿಡಿದು, ಆಡಂ ಮತ್ತು ಈವ್ ರಿಂದ ಮಾನವನ ಸೃಷ್ಠಿ ನಂತರದಲ್ಲಿ ಅವರಿಂದ ಬಾಲದಂತೆ ಬೆಳೆದ ಮಾನವನ ಸಂತತಿ.. ಇತಿಹಾಸ ಕಂಡ ನಾಗರೀಕತೆಯ ಕುರುಹುಗಳು, ನಾಗರೀಕತೆಯ ಇಂಬಿನಲ್ಲಿ ನಡೆದ ಅರಾಜಕತೆಗಳು, ಅಮಾನವೀಯ ಕೃತ್ಯಗಳು ಎಲ್ಲವನ್ನು ತನ್ನೊಡಲೊಳಗೆ ಬಿಚ್ಚಿಟ್ಟಿದೆ.. ಈ ಅಮಾನವೀಯತೆಯನ್ನು ತಡೆಯಲು ಮನಸ್ಸು ಮಾಡಿದ ಮಹಾನ್ ಮಾನವತಾವಾದಿಗಳನ್ನು ಚಟ್ಟಕ್ಕೇರಿಸಿ, ಯುದ್ಧ ರಾಜ್ಯಭಾರವೆಂದು ಮೆರೆದು ಮಣ್ಣುಸೇರಿದ ರಾಜಮನೆತನಗಳ ಚಿತ್ರಣ, ಧರ್ಮ ಜಾತಿ ಎಂದು ತಮ್ಮ ತಮ್ಮೊಳಗೆ ಬೆಂಕಿಹಚ್ಚಿಕೊಂಡು ಸುಟ್ಟುಹೋಗುತ್ತಿರುವ ಮೂರ್ಖ ತಿಳಿಗೇಡಿಗಳ ಚಿತ್ರಣಗಳು ಮನಮುಟ್ಟುವಂತೆ ಮೂಡಿಬಂದಿದೆ.. ಅಭಿವೃದ್ದಿಯ ಪಥದಲ್ಲಿ ಮಾನವನ ಹೊಸ ಆವಿಷ್ಕಾರಗಳು ಮತ್ತು ಅವುಗಳಿಂದಾಗುವ ಒಳಿತು, ಕೆಡಕುಗಳ ಬಗ್ಗೆಯೂ ಸೂಕ್ಷ್ಮವಾಗಿ ಬೆಳಕು ಚೆಲ್ಲಿದೆ ಕವಿತೆ.. ಎಷ್ಟೆಲ್ಲ ಆವಿಷ್ಕಾರಗಳನ್ನು ಸಾಧಿಸಿಯೂ ಮಾನವ ಪ್ರಕೃತಿಯ ಆಜ್ಞಾನುಸಾರಕನಾಗಿಯೇ ಇರಬೇಕು, ಇಲ್ಲದಿದ್ದರೆ ಮುಂದಿನ ಪರಿಣಾಮಗಳ ಹೊಣೆ ಅವನದೆ ಎಂಬುದನ್ನು ಮಾರ್ಮಿಕವಾಗಿ ತೆರೆದಿಟ್ಟಿದೆ ಕವಿತೆ.. ಎಷ್ಟೆಲ್ಲಾ ಸಂಗತಿಗಳು ಗತಿಸಿ ಇತಿಹಾಸಗಳಾಗಿದ್ದರೂ ಮುಂದೆಯೂ ರಸ್ತೆಯ ಹಾದಿ ಇದೆ ಎಂಬ ಸಾಲುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.. ಕವಿತೆ ಬಿಡಿಸಿದಷ್ಟೂ ಮತ್ತಷ್ಟು ಸತ್ಯಗಳನ್ನು ಬಿಟ್ಟುಕೊಡುತ್ತಾ ಸಾಗುತ್ತದೆ.. ನಿಮ್ಮಲ್ಲಿನ ಸೃಜಶೀಲತೆಗೆ ಈ ಕವಿತೆಯೊಂದು ಕೈಗನ್ನಡಿ.. ತುಂಬಾ ತುಂಬಾ ಇಷ್ಟಪಟ್ಟೆ..

    ಪ್ರತ್ಯುತ್ತರಅಳಿಸಿ
  2. ಒಂದು ವಿಶೇಷ ಇಲ್ಲಿ ನಿಮ್ಮ ಈ ರಸ್ತೆ ತುಂಬಾ ಉದ್ದವಾಗಿದೆ.. ಇಲ್ಲಿ ಒಂದು ನಾಲ್ಕು ಸಾರಿ ಪ್ರಯಾಣ ಮಾಡಿದಾಗ ಯಾವ ರಸ್ತೆ ಅನ್ನುವುದು ತಿಳಿಯಿತು.. ಮೊದಲ ಮೇಲ್ನೋಟಕ್ಕೆ ಮನದಲ್ಲಿ ಅಲ್ಲೋಲ ಕಲ್ಲೋಲ.. ಒಂದು ಕ್ಷಣ ಈ ರಸ್ತೆಯಲ್ಲಿ ಸಂಚಾರ ಮಾಡಿದಾಗ ಮೂಡಿದ ಅನುಭವ ಮೊದಲ ಭಾರಿ... ಈ ಸಾಲುಗಳನ್ನು ಓದಿದಾಗ.... ಆ ರಸ್ತೆಗೆ ಗಾಢ ನಿದ್ದೆ .. ಡಾಂಬರು ಹೊದಿಕೆಯೊಳಗೆ .. ಈ ಆರಂಭದ ಸಾಲುಗಳಿಂದ .. ಅಡ್ಡಲಾಗಿ ಎಲುಬಿನ ಸೇತುವೆ ಹುಟ್ಟಿ .. ಈ ರಸ್ತೆಗೆ ದಾರಿ ಬೆಳೆದಿದೆ ..ಎನ್ನುವ ಸಾಲುಗಳ ಅರ್ಥ ವರ್ಣನೆಯನ್ನು ಮಾನವನ ದೇಹಕ್ಕೆ ಹೋಲಿಕೆ ಮಾಡಿ ಓದುತ್ತಿದ್ದೆವು.. ಆದರೆ ಎರಡು ಕವನಗಳು ಆದ ಮೇಲೆ ಆ ಹೊಲಿಕೆಗಳೆಲ್ಲಾ ದಿಕ್ಕಾಪಾಲಾಯಿತು... ಅದನ್ನು ಇಲ್ಲಿ ಹೇಳುವುದು ಬೇಡ .. ಆಮೇಲೆ ನೀವು ನಮ್ಮನು ನೋಡಿ ಏನೋ ವಿಚಿತ್ರ ಅಂದುಕೊಂಡು ನಗುವುದು ನೆನೆದರೆ ನಮಗಿಲ್ಲಿ ಮನದಲ್ಲೇ ಏನೋ ಒಂತರಹಾ (ಒಂಥರಾ) ಮಂದಹಾಸ.. :)
    ನಂತರದಲ್ಲಿ ಆಡಂ ಅಂಡ್ ಈವ್ ಕಥೆಯು ಪ್ರಸ್ತಾಪವಾಗಿ.. ಅಲ್ಲಿಂದ ಕೊನೆವರೆಗೂ ಓದುತ್ತ.. ಇದು ಭೂಮಿಯು ಬೆಳೆದು ಬಂದ ಹಾದಿ ಎಂದು ಅರಿವಾಯಿತು... ಆಗ ಮತ್ತೊಮ್ಮೆ ಸಂಪೂರ್ಣ ಕವಿತೆ ಓದಿಕೊಂಡು ಹೊಸ ವರ್ಷದ ಸಂಭ್ರಮದಲ್ಲಿ ಕೇವಲ ಕಳೆದು ಹೋದ ಒಂದು ವರ್ಷದ ನೆನಪಷ್ಟೇ ಅಲ್ಲಾ ಇಡೀ ಇತಿಹಾಸ ಪುಟಗಳನ್ನೇ ತಿರುವಿ ಹಾಕಿ ಅಲ್ಲಲ್ಲಿ ಸಿಕ್ಕ ಸಿಕ್ಕ ಮುಖ್ಯಾಂಶಗಳ ಒಂದು ಪಟ್ಟಿ ಮಾಡಿ ಹೇಳಿದಂತಿದೆ.. ನಾವು ಹೇಗೆ ಏನು ಎಲ್ಲಿ ಯಾರು ಯಾವಾಗ ಎನ್ನುವ ಅನೇಕ ಪ್ರಶ್ನೆ ಮತ್ತು ಉತ್ತರಗಳಂತೆ ಈ ಒಂದು ಮಹಾ ಕಾವ್ಯ ರಚನೆ.. ಒಟ್ಟಾರೆ ಮಾಹಿತಿಪೂರ್ಣ ಮತ್ತು ನೆನಪುಗಳ ಸಮ್ಮಿಲನ .... ಸೊಗಸಾದ ಕವನ ರವಿಯಣ್ಣ.. :)

    ಪ್ರತ್ಯುತ್ತರಅಳಿಸಿ
  3. "ರಸ್ತೆ" ಪ್ರತಿಮೆಯಾಗಿ ಅನ್ವರ್ಥವಾಗಿ ಇಲ್ಲಿ ತನ್ನ ಆತ್ಮ ಚರಿತ್ರೆ ಬರೆದುಕೊಂಡಿದೆ.

    ಮನುಕುಲದ ಚರಿತ್ರೆಯ ನಿರಂತರ ಆಧುನಿಕ ಪ್ರಕ್ರಿಯೆಯ ಕರಾಳ ದರ್ಶನ ಇಲ್ಲಿದೆ.

    ನಿಸರ್ಗವನ್ನು ಮಾನವ ಹಂತ ಹಂತವಾಗಿ ಅತ್ಯಾಚಾರಕ್ಕೆ ಹೇಗೆಲ್ಲ ಈಡು ಮಾಡಿದ ಎನ್ನುವುದಕ್ಕೆ ರಸ್ತೆಯ ನ್ನೇ ಸಾಕ್ಷೀಕರಿಸಿ ಮಾಸ್ತಿ ಕಲ್ಲು ಮಮ್ಮಿಗಳನ್ನು ಅಗೆದು ತೋರಿದ್ದೀರ.

    ಒಟ್ಟಾರೆಯಾಗಿ ಹೊಸ ವರ್ಷ ದಿನದ ಈ ರಚನೆಯಲ್ಲಿ ಮನು ಕುಲದ ದಾಹಿ ಶೋಷಣೆ ಸಮರ್ಥವಾಗಿ ಚಿತ್ರಿತವಾಗಿದೆ.

    ನಿಮ್ಮ ಈ ಸಾಲು :
    "ನದಿ ಈಗಲೂ ಕೆಂಪಾಗಿ ಹರಿಯುತ್ತಿದೆ"
    ಕಾಡುಗಳ್ಳ ವೀರಪ್ಪನ್ ಪಾಲಾರ್ ಸೇತುವೆ ಹತ್ತಿರ ಸ್ಫೋಟಿಸಿ ಪೊಲೀಸರನ್ನು ಕೊಂದಾಗ ಪಾಲರ್ ನದಿ ರಕ್ತ ಸಿಕ್ತವಾಗಿದ್ದು ನೆನಪಿಗೆ ಬಂತು!

    ಪ್ರತ್ಯುತ್ತರಅಳಿಸಿ
  4. ಈ ರಸ್ತೆಯ ದೂರ ಬಹಳ ವಿಸ್ತಾರವಾದದ್ದು. ತುಂಬ ಘನವಾದದ್ದು, ಇತಿಹಾಸವಾದದ್ದು ಹಾಗೂ ವಾಸ್ತವಕ್ಕೆ ಹತ್ತಿರವಾದ್ದು. ರಸ್ತೆ ಕೇವಲ ಎರಡೇ ಅಕ್ಷರವಾಗದರೂ ಅದರೊಳಗಿನ ಗಾಂಭೀರ್ಯತೆ ಸವಿಸ್ತಾರ ಅರ್ಥವನ್ನೊಳಗೊಂಡಿದೆ ಈ ಕಾವ್ಯಕ್ಕೆ ನನ್ನದೊಂದು ತುಂಬು ಮನಸ್ಸಿನ ಧನ್ಯವಾದ....

    ಪ್ರತ್ಯುತ್ತರಅಳಿಸಿ
  5. ಕಾಲವಾದ ಕಹಿ ಇತಿಹಾಸ, ನಶಿಸಿದ ಗತ ವೈಭವಗಳಿಗೆ ಮೂಕಸಾಕ್ಷಿಯಾಗಿ ಪ್ರತಿಮೆಯಾಗಿ ನಿಂತದ್ದು 'ರಸ್ತೆ'. ಉಗ್ರತೆಯೂ ಕೆಲವೊಮ್ಮೆ ಲಾಸ್ಯವಾಡಿ ಯಾರದೋ ಹಿತಾಸಕ್ತಿಗೆ ಯಾರನ್ನೋ ಸಮಾಧಿ ಮಾಡಿ, ಅದರ ಮೇಲೆಯೇ ಗಹಗಹಿಸಿ ಬೆಳೆದು ನಿಂತದ್ದು ಕೂಡ ಚರಿತ್ರೆಯ ಪುಟಗಳಲ್ಲಿ ಅಡಗಿದೆ. ಇದರ ಜೊತೆಗೆ ಬಲಿಷ್ಟತೆಗಳು ಮೆರೆದು ನಿಂತದ್ದು, ಸಂಶೋಧನೆ, ಆವಿಷ್ಕಾರಗಳ ತೆಕ್ಕೆಗಳಲ್ಲಿ ಜನಜೀವನ ಎಲ್ಲೇ ಮೀರಿ ಬೆಳೆದ ಪರಿ, ಸರ್ವ ಹಿತ ಸಮಾಜದ ಉದ್ಧಾರಕ್ಕಾಗಿ ತ್ಯಾಗಮಯಿ ಜೀವಗಳು ತಮ್ಮನ್ನೇ ತಾವು ಅರ್ಪಿಸಿಕೊಂಡ ಸುಂದರತೆಗಳು ಎಲ್ಲೋ ಹುದುಗಿ ಹೋಗಿ ಹೃದಯ ಮರುಗಿದ ಕಥಾನಕ.

    ಧರ್ಮ, ಸಂಪ್ರದಾಯ, ಕಟ್ಟುಕಟ್ಟಳೆ ಇವು ಸಮಾಜಕ್ಕೊಂದು ಬೆಳಕಾಗಿ, ಭವಭಕ್ತಿಗಳು ಪೃಕ್ರತಿಯ ಒಂದು ಶಕ್ತಿಗೆ ಭಗವಂತನ ರೂಪ ಕೊಟ್ಟು ನಿಲ್ಲಿಸಿ, ಅದೂ ಮುಕ್ಕೋಟಿಯಾಗಿದ್ದು ಕೂಡ ಪುರಾಣವಾಗಿದೆ. ಪ್ರೀತಿ ಪ್ರೇಮಗಳ ತೊಟ್ಟಿಲಲ್ಲಿ ತೂಗಿ, ಸಮಾಜಮುಖಿಯಾಗಿ ಜಗತ್ತು ಹೊರಳಿದರೂ ಅಲ್ಲಲ್ಲಿ ಸಾಮ್ರಾಜ್ಯಶಾಹಿ ದರ್ಪಗಳು ರುಂಡಗಳ ಚೆಂಡಾಡಿ ಇತಿಹಾಸವನ್ನೂ ರಕ್ತಮಯಗೊಳಿಸಿದ ಭಯಾನಕತೆ.

    ಇವೆಲ್ಲದರ ಮಧ್ಯೆ, ತೀವ್ರಗೊಂಡ ಆಧುನಿಕತೆ ಪ್ರಸ್ತುತಕ್ಕೆ ಹೊಸ ಭಾಷ್ಯ ಬರೆವತ್ತ ಮುಖ ಮಾಡಿ, ನವ್ಯ ಕನಸುಗಳಿಗೆ ಅಡಿಯಿಡುತ್ತಿರುವುದು ನಿಜ. ಆದರೆ ಪ್ರಶಾಂತತೆಗಳಿಗೆ ಇರುವೆ ಚುಚ್ಚಿದಂತೆ ಅಲ್ಲಲ್ಲಿ ನೋವ ಸಿಂಚನ, ಬದುಕಿನ ಜಂಜಡಗಳು, ಪ್ರಕೃತಿಯ ಮುನಿಸುಗಳಿಗೂ ಕಿವಿಗೊಡುತಿದೆಯೇನೋ ಅನಿಸಿತ್ತು.

    ಇಂದು ಇಷ್ಟಕ್ಕೆ ಮುಗಿದಿಲ್ಲ. ನಾಳೆ ಎಂಬುದು ರಸ್ತೆಯ ಪುಟಗಳಲ್ಲಿ ಅವಿತುಕೊಳ್ಳುತ್ತದೆ, ಇಂದಿನಂತೆಯೇ. ಅನುದಿನದ ಪಯಣವೂ ಇತಿಹಾಸದ ಪುಟ ಸೇರುತ್ತವೆ. ಇದಕ್ಕೆ ನಿಮ್ಮ "ರಸ್ತೆ"ಯೇ ಮೂಕ ಸಾಕ್ಷಿ.

    ಆರು ಸಲ ಒದಿದರೂ ಮತ್ತಷ್ಟೂ ಕವಿತೆಯ ಒಳಹೊಕ್ಕು ಆಸ್ವಾದಿಸಬೇಕೆಂಬ ತುಡಿತ ನನ್ನ ಮನಸಿಗೆ.

    ಪ್ರತ್ಯುತ್ತರಅಳಿಸಿ