ಸೋಮವಾರ, ಅಕ್ಟೋಬರ್ 8, 2012

ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು !

(ನ್ಯೂ ಇಂಗ್ಲೇಂಡ್ (ಬಾಸ್ಟನ್) ಮಂದಾರ ರತ್ನ ಮಹೋತ್ಸದ "ದೀವಿಗೆ" ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಹಾಗಂತ, ಎದೆ ತಟ್ಟಿ ಹೇಳುವ ಮಾತಿದು. ಕನ್ನಡದ ನೆಲ ಸಂಸ್ಕೃತಿಯನ್ನು ಹೊತ್ತೊಯ್ಯುವ ನಡೆದಾಡುವ ಜಾಹೀರಾತುಗಳು. ಅದನ್ನು ಉದ್ಯೋಗಕ್ಕಾಗಿ ಜಗತ್ತಿಗೆ ಅಂಡಲೆದ ಕನ್ನಡಿಗರು ಮಾಡುತ್ತಿದ್ದಾರೆ. ಹುಬ್ಬೇರಿಸುವ ಪ್ರಶ್ನೆಯೂ ಅಲ್ಲ. ಹೊರನಾಡ ಕನ್ನಡಿಗರು ಕನ್ನಡ ನೆಲದ ರಾಯಭಾರಿಗಳು. ಜಗತ್ತಿನ ದಿಕ್ಕು ದಿಕ್ಕುಗಳಿಗೆ ಕನ್ನಡದ ಉಸಿರನ್ನು ಹೊತ್ತೊಯ್ದ ಇವರು, ನಾಡಿನ ಜಾನಪದ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಆಚಾರ-ವಿಚಾರ, ಕ್ರೀಡೆಯ ಸಾರ್ವಭೌಮತ್ವವನ್ನು ನೆಲೆ ನಿಲ್ಲಿಸಿದರು. ಈ ರಾಯಭಾರತ್ವದ ಸವಿಯನ್ನು ಕರ್ನಾಟಕದ ಜನತೆ ಉಣ್ಣುತ್ತಿದೆ.

ಮನುಷ್ಯ ಮನಸ್ಸು ಮತ್ತು ಊರನ್ನು ಖಾಲಿ ಮಾಡಿಕೊಳ್ಳಬಾರದು. ಹೊರನಾಡ ಕನ್ನಡಿಗರ ಬಗ್ಗೆ ಒಂದಿಷ್ಟು ಬರೆಯಿರಿ ಅಂತ ಸಹೃದಯಿಗಳು ಹೇಳಿದರು. ಪ್ರಕೃತಿಯ ಸಿರಿ, ಕರ್ನಾಟಕದ ಸ್ವಿಟ್ಜರ್ಲ್ಯಾಂಡ್, ಕೊಡಗಿನಿಂದ ಅಂಡಲೆದು, ಕನ್ನಡದ ಈ ಮಾತನ್ನು ಆಫ್ರಿಕಾದ ಕ್ಯಾಮರೂನಿನಲ್ಲಿ ಕುಳಿತು ಬರೆಯುತ್ತಿದ್ದೇನೆ. ವ್ಯವಸ್ಥೆಯ ಬಂಧನದಲ್ಲಿ ನೆಲವನ್ನು ಬಿಟ್ಟು ಇನ್ನೊಂದು ನೆಲದಲ್ಲಿ ಮತ್ತೆ ಮತ್ತೆ ಕರೆಯುವ ಆ ನೆನಪುಗಳನ್ನು ಹೊರನಾಡಿನಲ್ಲಿದ್ದವನು ಮಾತ್ರ ಅರಗಿಸಿಕೊಳ್ಳಬಲ್ಲ. ಆ ನೆನಪಿನ ಕ್ಷಣಗಳ ನಿಟ್ಟುಸಿರು ಮನಸ್ಸನ್ನು ಇನ್ನಷ್ಟು ವಿಶಾಲಗೊಳಿಸುವುದು. ಎದೆ ತೆರೆದು ಜಗತ್ತಿಗೆ ನಿಂತು ರೆಪ್ಪೆ ಮಿಟುಕಿಸುವುದು.

ನೆಲದ ಸಂಸ್ಕೃತಿಯನ್ನು ಜಗತ್ತಿಗೆ ಹೊರನಾಡಿನಿಂದ ತೆರೆದು ತೋರಿಸಿದಾಗ  ಕನ್ನಡಿಗರು "ಬೇಷ್" ಅಂದರು. ಅದು ನಡೆದದ್ದೇ ಹೊರನಾಡಿನಿಂದ. ಹಿಂದೆಯೂ ಹೊರನಾಡಿಗರು ಮಾಡಿದರು, ಮುಂದೆಯೂ ಮಾಡುವರು, ನೆಲ ಬಿಟ್ಟವರು ಅಲ್ಲಿನ ಉಸಿರು ಬಿಡಲಾರರು ಅನ್ನೋದಕ್ಕೆ ಭಾಷ್ಯ ಬರೆದರು. ತನ್ನ ನೆಲದಲ್ಲಿ ರೂಢಿಸಿಕೊಂಡ ಕಲೆ,ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ದಿನ ನಿತ್ಯದ ಬದುಕಿನಂತೆ ಬದುಕಿಸಿದರು,ಬದುಕಿದರು. ಕನ್ನಡ ನಾಡು ಹೊಸ ಜಗತ್ತೊಂದನ್ನು ವಾಸ್ತವಕ್ಕೆ ತೆರೆಯಿತು. ಜಗತ್ತು ಕನ್ನಡದ ಕಣ್ತೆರೆಯಿತು. ನೆಲದ ಸಂಸ್ಕೃತಿ ವಿಶ್ವದ ಸಾಂಸ್ಕೃತಿಕ ಪರದೆಯಲ್ಲಿ ಸದಾ ಜೀವಂತವಾಗಿರುವಂತವು. ಕರ್ನಾಟಕದಿಂದ ಹೊತ್ತು ತಂದು ವಿಶ್ವದ ಪರದೆಯಲ್ಲಿ ಬಣ್ಣ ಹಚ್ಚಿ ತೋರಿಸಿದರು. ನೆಲದ ಪ್ರತಿಭಾ ಹಕ್ಕಿಗಳನ್ನು ಹಿಡಿದು ವಿದೇಶಿಗರ ಹೃದಯ ಮಂದಿರದಲಿ ಹಾರಲು ಬಿಟ್ಟರು. ಅಲ್ಲಿ ಕನ್ನಡದ ಸಂಸ್ಕೃತಿಗೆ ವಿದೇಶಿಗರು ಬೆರಗುಗೊಂಡರು.

ಆಶ್ಚರ್ಯವಾಗಬಹುದು. ತಂತ್ರಜ್ಞಾನಕ್ಕೆ ಭಾರತೀಯರಿಗೆ ತಲೆಬಾಗುವಷ್ಟು ಜಗತ್ತಿನ ರಾಷ್ಟ್ರಗಳು ಇನ್ಯಾವ ದೇಶಕ್ಕೂ ಮಂಡಿ ನೆಲಕ್ಕೆ ಮುಟ್ಟಿಸುವುದೇ ಇಲ್ಲ. ಅಷ್ಟೊಂದು ಅಗಾಧವಾಗಿದೆ ಭಾರತದ ಜ್ಞಾನ ಸಂಪತ್ತು. ಅದರಲ್ಲೂ ಭಾರತ ಅರ್ಧ ಜಗತ್ತಾಗಿದೆ. ವಿಶ್ವದ ಯಾವುದೇ ಭಾಷೆಗೆ ಸಡ್ಡು ಹೊಡೆಯುವ ನವೀರು ಭಾವಗಳನ್ನು ಕನ್ನಡದ ಅಕ್ಷರ ಪಡೆದುಕೊಂಡಿದೆ ಅಂತ ಹೆಮ್ಮೆ ಪಡುತ್ತೇವೆ. ಯಾಕೆ ಅಂತ ಪ್ರಶ್ನೆ. ಕನ್ನಡ ಹೃದಯದ ಭಾಷೆ. ಸುಲಲಿತವಾಗಿ, ಅಷ್ಟೇ ಬಲಿಷ್ಠ ಪದಪ್ರಯೋಗದಿಂದ ಪ್ರಸ್ತುತಪಡಿಸುವ ಪದ ಸ್ವಾರಸ್ಯದ ಮನಸ್ಸಿನ ಭಾಷೆ ಜಗತ್ತಿನಲ್ಲಿ ಇನೊಂದಿಲ್ಲ. ಊರು ಬಿಟ್ಟು ಖಾಲಿಯಾದ ಮನಸ್ಸನ್ನು ಅಷ್ಟೇ ಗಂಭೀರವಾಗಿ ಅವುಚಿಕೊಂಡಿದೆ. ನೋಡುವ ಭಾವಗಳಲ್ಲಿ ಸೂಕ್ಷ್ಮಗಳನ್ನು ಅತ್ಯಂತ ಸುಲಭವಾಗಿ ಕನ್ನಡದ ಚಿನ್ನದ ಪದಗಳಲ್ಲಿ ಮಾತನಾಡಿಸಬಹುದು. ಜಗತ್ತಿನ ಹೃದಯ ತೆರೆಯುವುದು ಕನ್ನಡದ ಪದಕ್ಕಿರುವ ಲಾಲಿತ್ಯ. ನೇರವಾಗಿ ಹೃದಯದಿಂದ ಹೃದಯಕ್ಕೆ ಹರಿಯುವ ಮನಸ್ಸು ಮಾತಾಡುವ ಭಾಷೆ. ಬೇಕಾದಷ್ಟು ಸಾಹಿತ್ಯಗಳು ಹೊರನಾಡಿನಿಂದ ಕನ್ನಡ ನಾಡಿಗೆ ಹರಿದು ಬಂದಿದೆ. ಫೇಸ್ಬುಕ್ಕು, ಟ್ವಿಟ್ಟರ‍್ ಸೇರಿದಂತೆ ಹಲವು ಸಾರ್ವಜನಿಕ ಅಂತರ್ಜಾಲ ತಾಣಗಳು ಕನ್ನಡವನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ಇಂತಹ ಅಂತರ್ಜಾಲ ತಾಣಗಳಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ವಿಸ್ತಾರಗೊಳಿಸಿದ ಫೇಸ್ಬುಕ್ಕಿಗೆ ಅನಂತ ನಮನಗಳು ! ಹೊರನಾಡ ಕನ್ನಡಿಗರು ಧನ್ಯರಾದರು. !

ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯಶಿವ... ಅಂತ ಸತ್ತಂತಿಹರನ್ನು ಬಡಿದೆಚ್ಚರಿಸುವ ತಾಕತ್ತು ಹರಿದು ಬಂತು, ಕುವೆಂಪು ತಂದ ನವಿರು ಗಾಳಿಯ ತಂಪು. ಸತ್ತಂತೇ ಬದುಕುವವರೆಲ್ಲರಲ್ಲೂ ಹೊಸ ಚೈತನ್ಯ ತುಂಬಿದ ರಾಗ ಜೀವ ಲಾಲಿತ್ಯವಿದು. ಅದು ಭಾರತ ಸಿಂಧು ರಶ್ಮಿಯ ಗೋಕಾಕರ ಪುಸ್ತಕದಲ್ಲಿ, ಮೌನಕ್ಕೆ ಒಗ್ಗಿಕೊಂಡ ನಾಕು ತಂತಿಯ ಬೇಂದ್ರೆಯಲ್ಲಿ, ಕನ್ನಡದ ಕನಸಿನಲ್ಲಿ ನಿದ್ದೆಗೆ ಜಾರಿದ ಕಾರಂತರ ಮೂಕಜ್ಜಿಯ ಕನಸುಗಳಲ್ಲಿ, ಕಾಡು ಕುದುರೆಯನ್ನು ಕಾಡಿನಿಂದ ನಾಡಿಗೆ ಅಟ್ಟಿದ ಕಂಬಾರರಲ್ಲಿ ಮಿಳಿತವಾಗಿತ್ತು. ಅನಂತ ಮೂರ್ತಿಯವರು ಕನ್ನಡದ ಅಸ್ತಿತ್ವವಿಲ್ಲದ ಭಾರತ ದೇಶದ ಇತರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯವನ್ನು ಹರವಿದ್ದಾರೆ. ಬದುಕು ನಾಟಕ ರಂಗ. ನಾವು ಅದರಲ್ಲಿ ಪಾತ್ರಧಾರಿಗಳು. ಅದನ್ನು ಗಿರೀಶ್ ಕಾರ್ನಾಡರು ಜೀವವಿದ್ದವರ ತಲೆಗೆ ದಂಡವಿದೆ ಎಂದು ತೆರೆದು ತೋರಿಸಿದರು. ಮಾಸ್ತಿ ಕನ್ನಡ ಆಸ್ತಿ ಎಂದು ಬಹಳ ಗೌರವಿಸುವರು ಕನ್ನಡದ ಜನತೆ.

ಭಾಷೆ ನಾಡಿನ ತಾಯಿಬೇರು. ಸಾಹಿತಿಗಳು ಮತ್ತು ಬರಹಗಾರರು ಅದರ ಪ್ರವಾದಿಗಳು. ಅದನ್ನು ಉಳಿಸುವವರು ಓದುಗರು ಮತ್ತು ಉತ್ತೇಜಕರು. ವಿದೇಶಕ್ಕೆ ಬಂದಾಕ್ಷಣ ನಮ್ಮನ್ನು ಬಾಧಿಸುವ ಮೊದಲ ದೌರ್ಬಲ್ಯ ಭಾಷೆಕೊಲ್ಲಿ ರಾಷ್ಟ್ರದಲ್ಲಿ ಮಲೆಯಾಳಂ,ಹಿಂದಿ, ಅರೆಬಿಕ್, ತಮಿಳು, ಆಂಗ್ಲ ಮಾಧ್ಯಮಕ್ಕೆ ಮುಖ ಮಾಡುವಾಗ ಒಂದಿಷ್ಟು ಕನ್ನಡದ ಪರದೆಯನ್ನು ಸರಿಸಿ ಕಂಪನ್ನು ಬೀರಿದವರು ಇದ್ದಾರೆ. ಅದು ವಿವಿಧ ಸಂಘಟನೆಗಳು ಮಾಡಿದರೂ, ಕೊಲ್ಲಿ ರಾಷ್ಟ್ರದ ಮತ್ತು ಕನ್ನಡಿಗರ ಸುದ್ದಿಗಳನ್ನು, ಕನ್ನಡ ಸಾಹಿತ್ಯವನ್ನು ನಾಡಿಗೆ ತೆರೆದು ತೋರಿಸಿದ್ದು ಕೆಲವರು ಮಾತ್ರ. ಅವರ ಸಾಹಿತ್ಯಕ್ಕೆ ನೀರೆರೆದವರು ಹಲವರು. ಕೊಲ್ಲಿ ರಾಷ್ಟ್ರದಲ್ಲಿ, ಆಫ್ರಿಕಾದ ನೈಜೀರಿಯಾ, ಸೌತ್ ಆಫ್ರಿಕಾದಲ್ಲಿ ಕನ್ನಡ ಸೊಗಸಾಗಿದೆ. ಇವು ಜಾತಿ-ಮತ-ಬೇಧ ಮರೆತ ಕನ್ನಡದ ನೆಲದಿಂದ ಹೊತ್ತು ತಂದಂತಹ ಸಾಂಸ್ಕೃತಿಕ ಚಿಲುಮೆಗಳು.

ಕನ್ನಡದ ವಿಷಯದಲ್ಲಿ ಮನಸ್ಸಿನ ಮಾತಿಗೆ ಒಗ್ಗಿಸಿಕೊಂಡ ವಿಚಾರದಲ್ಲಿ ಕೊಲ್ಲಿ ರಾಷ್ಟ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಗಲ್ಲಿಗಲ್ಲಿಗಳಲ್ಲಿ ಸಿಗುವ ಕನ್ನಡಿಗರು, ಅಂಗಡಿ ಮುಂಗಟ್ಟುಗಳಲ್ಲಿ  ನಕ್ಕವರು, ಹೋಟೆಲ್ ಉದ್ಯಮದಲ್ಲಿ ಕ್ಷೇಮ ವಿಚಾರಿಸಿದವರು, ಬ್ಯಾಂಕ್, ವಾಣಿಜ್ಯ ವಿನಿಮಯ ಕೇಂದ್ರಗಳಲ್ಲಿ ಕೈ ಕುಲುಕಿದ ಕನ್ನಡಿಗರು ಅಚ್ಚರಿಗೆ ಕಾರಣರಾಗುತ್ತಾರೆ. ಬಹ್ರೈನಿನಲ್ಲಿ ಐದು ತಿಂಗಳ ಕಾಲ ಹೊರನಾಡ ಕನ್ನಡಿಗನಾಗಿ ಅಲೆದಾಡಿದ ದಿನಗಳುಂಟು.  ಬಹುಮುಖ್ಯವಾಗಿ ಗಮನ ಸೆಳೆದದ್ದು, "ತುಳಸಿ ಗಿಡ". ಬಹ್ರೈನಿನ ಮನಾಮ, ಹೂರಾ, ಗುದಾಬಿಯಾ, ಸಲ್ಮಾನಿಯಾ ಗಲ್ಲಿಗಳಲ್ಲಿ ಸಂಚರಿಸಿದಾಗ ಕೆಲ ಹೊರನಾಡಿಗರ ವಸತಿಗೃಹದಲ್ಲಿ ಈ ಬಹುಮಾನ್ಯ ಭಕ್ತಿ ಭಾವಪ್ರಧಾನ ಗಿಡಗಳನ್ನು ಕಂಡು ಖುಷಿಪಟ್ಟ ಕ್ಷಣಗಳಿವೆ. ಆ ಗಿಡಗಳಲ್ಲಿ ಪೂಜೆ ಸಲ್ಲಿಸಿದ ಕುರುಹಾಗಿ ಊದುಬತ್ತಿಯ ಕಡ್ಡಿಗಳು, ಅದೀಗ ತಾನೆ ಗಿಡದ ಮಡಿಲಿಗೆ ಮಲಗಿದ ಹೂವುಗಳು ಈಗಲೂ ನೆನಪಿನ ಪರದೆಯಲ್ಲಿ ದಳಗಳರಳಿಸುತ್ತಿವೆ. ಈ ಅಪೂರ್ವ ಸನ್ನಿವೇಶಗಳನ್ನು, ಆಚರಣೆಯನ್ನು ಸಾವಿರಾರು ಮೈಲು ದೂರದ ಕೊಲ್ಲಿ ರಾಷ್ಟ್ರದಲ್ಲಿ ನೋಡುವಾಗ ಮನೆ ಕೈಗೆ ಬಂದಷ್ಟು ಅಳತೆಯಲ್ಲಿರುತ್ತದೆ. ಕನ್ನಡ ನಾಡಿನ ನಾಡಿ ಮಿಡಿಯುವ ಆಚಾರಕ್ಕೆ ಮನೆ-ಮನಗಳು ಅರಳುತ್ತವೆ .

ಅಂತರ್ಜಾಲ-ವೃತ್ತ ಪತ್ರಿಕೆಗಳು ಇಡೀ ಕೊಲ್ಲಿ ರಾಷ್ಟ್ರಗಳ ಜನತೆಯನ್ನು ಪದಗಳಲ್ಲಿ ಮಾತನಾಡಿಸಿದ್ದು ದೊಡ್ಡ ಉಪಕಾರವೇ ಸರಿ. ಅದರಲ್ಲಿ ಅಂತರ್ಜಾಲದ ಅಪ್ಪಟ ಕನ್ನಡದ ಸುದ್ದಿ ಮಾಧ್ಯಮ "ಗಲ್ಫ್ ಕನ್ನಡಿಗ". ದುಬೈ, ಒಮಾನ್, ಕುವೈತ್, ಕತಾರ್ ರಾಷ್ಟ್ರಗಳಲ್ಲಿ ತಮ್ಮದೇ ಆದ ಗುರುತರ ಜವಾಬ್ದಾರಿಗೆ ಕನ್ನಡದ ಸಮಾರಂಭಗಳನ್ನು ಆಯೋಜಿಸುವ ಅನಿವಾಸಿ ಕನ್ನಡಿಗರ ಮುತುವರ್ಜಿಗಳು ಸದಾ ನೆಲದ ನೆನಪನ್ನು ಹಚ್ಚ ಹಸಿರಾಗಿಸಿದೆ. ಕನ್ನಡದ ಹಲವು ಸಮೂದಾಯಗಳ ಒಕ್ಕೂಟ ತಮ್ಮದೇ ಆದ ಕಾರ್ಯ ಯೋಜನೆಗಳು, ತಮ್ಮ ನೆಲದಲ್ಲಿ ಕುಟುಂಬ ಬಾಂಧವರೊಂದಿಗಿನ ಕ್ಷಣಗಳ ನೆನಪುಗಳನ್ನು ಕೆದಕಿ ಕಳೆಯುತ್ತಿರುವುದನ್ನು ಕಾಣಬಹುದು. ಸಾಹಿತ್ಯ, ಕಲೆ, ಜಾನಪದ ಸೊಗಡುಗಳು ಇಲ್ಲಿ ಮೈನೆರೆಯುತ್ತವೆ. ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕತಿಕ ರಾಯಭಾರಿಗಳು ಅನ್ನೋದಕ್ಕೆ ಅಪ್ಪಟ ಸಾಕ್ಷಿಗಳು..!

ಕನ್ನಡದ ಉಳಿವಿಗಾಗಿ, ಅದರ ಪ್ರಗತಿಯನ್ನು ಕೊಲ್ಲಿ ರಾಷ್ಟ್ರ ಮಾತ್ರವಲ್ಲ ಆಫ್ರಿಕಾ ಖಂಡದ ಸೌತ್ ಆಫ್ರಿಕಾ, ನೈಜೀರಿಯಾ ತಮ್ಮದೇ ಆದ ಕೊಡುಗೆ ಸಲ್ಲಿಸುತ್ತಿವೆ ಅಂತ ದಾಖಲೆ ಬರೆಯಬೇಕಾಗುವುದು. ಮೊದಲೇ ಕಗ್ಗತ್ತಲ ಖಂಡವೆಂಬ ಖ್ಯಾತಿ ಪಡೆದ ಆಫ್ರಿಕಾದಲ್ಲಿ ಈ ಎರಡು ರಾಷ್ಟ್ರಗಳಲ್ಲಿನ ಕನ್ನಡದ ಚಟುವಟಿಕೆ ಕೊಲ್ಲಿಯ ಮತ್ತು ವಿಶ್ವದ ಇತರ ರಾಷ್ಟ್ರಗಳಷ್ಟೇ ವಿಸ್ತಾರವನ್ನು ಪಡೆದಂತವು. ಅಲ್ಲಿ ವಾರಕ್ಕೊಮ್ಮೆ ಸಿಗುವ ಭಾನುವಾರವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿರುವುದು ಕಗ್ಗತ್ತಲೆಯಲ್ಲಿ ಕನ್ನಡದ ಹಣತೆ ಬೆಳಗಿರುವುದಕ್ಕೆ ಸಾಕ್ಷಿ. ಇದರಲ್ಲಿ ಕನ್ನಡದ ಸಂಸ್ಕೃತಿ, ಜಾನಪದದ ಸೊಗಡನ್ನು ಅಚ್ಚುಕಟ್ಟಾಗಿ ಪಾಲಿಸುವ ನೈಜೀರಿಯಾದ ಕನ್ನಡದ ಸಂಘಗಳು ಮೇಲು ಪಂಕ್ತಿಯಲ್ಲಿ ನಿಲ್ಲುತ್ತವೆ. ಮುಕ್ತ ಮಾರುಕಟ್ಟೆಗೆ ಯಥೇಚ್ಛವಾಗಿ ಜಗತ್ತನ್ನು ತೆರೆದಿಟ್ಟಿರುವ ನೈಜೀರಿಯಾ ಮತ್ತು ಸೌತ್ ಆಫ್ರಿಕಾಗಳಲ್ಲಿ ಕನ್ನಡಿಗರ ಚಟುವಟಿಕೆ ಮತ್ತು ಸೌಹಾರ್ದ ಕೂಟ ಬೆಳಕಿಗೆ ಬಂದಿದೆ.
           
ಜಗತ್ತಿನ ಮೂಲೆ ಮೂಲೆಗಳಿಂದ ಉದಯೋನ್ಮುಖ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಕೊಲ್ಲಿ ರಾಷ್ಟ್ರಗಳಲ್ಲಿ ನಡೆದಿದೆ. ಆಶ್ಚರ್ಯವಾಗಬಹುದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ದುಡಿತದ ವೇತನದಲ್ಲಿ ಗಲ್ಫ್ ಕನ್ನಡಿಗ" ಅಂತರ್ಜಾಲದ ಮೂಲಕ ಕನ್ನಡದ ಸವಿಯನ್ನು ಕರುಣಿಸುತ್ತಿರುವ, ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಪಾದಕರಾಗಿ, ಕನ್ನಡಾಭಿಮಾನ ಮೆರೆದವರು ಅಲ್ಲಿದ್ದಾರೆ. ಕತಾರಿನಲ್ಲಿರುವ ತಮ್ಮದೇ ಸಂಸ್ಥೆಯಲ್ಲಿ ಸುಮಾರು 200ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಬದುಕು ಕರುಣಿಸಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಇತಿಹಾಸ ಬರೆದ ಯಕ್ಷಗಾನ ರಂಗ ಪ್ರದರ್ಶನವೇರ್ಪಡಿಸಿದ್ದ ಹಿರಿಮೆ ಗಳಿಸಿದವರೂ ಇದ್ದಾರೆ. ಇವರೊಂದಿಗೆ ಇನ್ನೋರ್ವ ಕನ್ನಡಿಗ ಹಿಂದಿ ಸಂಗೀತ ಮತ್ತು ಸುದ್ದಿ ಲೋಕದಲ್ಲಿ ಯುಎಇ ಸುತ್ತಮುತ್ತ ಮನೆ ಮಾತಾಗಿರುವ 105.4 ಎಫ್.ಎಂ.ರೇಡಿಯೋ ಸ್ಪೈಸ್ ಮೂಲಕ ಕನ್ನಡವನ್ನೂ ಬೆಳಗಿಸಿದರು. ವಾರದ ಪ್ರಮುಖ ಒಂದು ದಿನದ ಒಂದಿಷ್ಟು ಸಮಯವನ್ನು ಕನ್ನಡಕ್ಕಾಗಿ ಮೀಸಲಿಟ್ಟು ಕನ್ನಡ ಶ್ರೋತೃಗಳ ಕನ್ನಡದ ಹಸಿವನ್ನು ನೀಗಿಸುತ್ತಿದ್ದಾರೆ.

ಅಬುಧಾಬಿ ಕನ್ನಡ ಸಂಘ, ನಮ್ಮ ತುಳುವೆರೆ ಸಂಸ್ಥೆ, ಯುಎಇ ಕನ್ನಡ, ಬಹ್ರೈನ್ ಕನ್ನಡ ಸೇರಿದಂತೆ ಕರ್ನಾಟಕ ಸಂಘ ಶಾರ್ಜಾ, ಅಜ್ಮನ್ ಕರ್ನಾಟಕ ಸಂಘ, ಒಮಾನ್ ಕನ್ನಡಿಗರ ಸಂಘಗಳು ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದು ಹೊರನಾಡ ಕನ್ನಡಿಗರು ನಡೆದ ಕನ್ನಡದ ಹಾದಿ. ಇದು ಕನ್ನಡಿಗರ ಎದೆಯಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿರಬಹುದು.

ಅಚ್ಚ ಕನ್ನಡ  ಅಂತರ್ಜಾಲ ಸಾಹಿತ್ಯ ಪುಟಗಳಾದ "ಕೆಂಡ ಸಂಪಿಗೆ",  "ಅವಧಿ ಮಾಗ್", "ನಿಲುಮೆ", ಕನ್ನಡ ಸಾಹಿತ್ಯ ಸಾರಕ್ಕೆಂದೇ ಕನ್ನಡಿಗರೇ ಒಗ್ಗಟ್ಟಾಗಿ ಹುಟ್ಟು ಹಾಕಿರುವ ಫೇಸ್ಬುಕ್ ಅಂತರ್ಜಾಲ ಸಮೂದಾಯ "ಕನ್ನಡ ಬ್ಲಾಗ್" ,ಕನ್ನಡ ಸಾಹಿತ್ಯ”,  “ಚುಟುಕು ಸೇರಿದಂತೆ ಇನ್ನೂ ಹತ್ತು ಹಲವಾರು ತಾಣಗಳು ಅನಿರ್ವಚನೀಯ ಆನಂದವನ್ನು ಜಗತ್ತಿನಾದ್ಯಂತ ತೆರೆದಿದೆ. ಸಂಪೂರ್ಣತೆಯ ಕನ್ನಡದ ಸವಿಯೂಟವನ್ನು ಸಾಹಿತ್ಯಕ್ಕೆ, ಕನ್ನಡಿಗರಿಗೆ, ಹೊರನಾಡ ಕನ್ನಡಿಗರಿಗೆ ಕೊಡುಗೆಯನ್ನಾಗಿ ನೀಡುತ್ತಿದೆ ಎಂಬುದು ಹೊರನಾಡಿನಲ್ಲಿ ಕನ್ನಡದ ಇತಿಹಾಸ ಪುಟ ಮಗುಚಿದಷ್ಟೇ ಸತ್ಯ. ಜಗತ್ತಿನ ವಿವಿಧ ಭಾಗದಲ್ಲಿ ಬೇರು ಬಿಟ್ಟಿರುವ ಕನ್ನಡಿಗರನ್ನು ಸಾಹಿತ್ಯ ಸಾಗರಕ್ಕೆ ಧುಮುಕಿಸುತ್ತಿರುವುದು ಮಾತ್ರವಲ್ಲ, ಅದರ ಆನಂದವನ್ನು ದಿನನಿತ್ಯ ಉಣ ಬಡಿಸುತ್ತಿದೆ. ಅದು ಕಗ್ಗತ್ತಲೆ ಖಂಡ ಆಫ್ರಿಕಾದ ರಾಷ್ಟ್ರಗಳನ್ನೂ ಬಿಟ್ಟಿಲ್ಲ.

          ಹಾಗೆಯೇ, ನಾವು ಕನ್ನಡಿಗರು, ಕನ್ನಡಿಗರಂತೆ ಇತರರನ್ನೂ ಪ್ರೀತಿಸುವವರು, ವಿಶ್ವಕ್ಕೆ ಮಾನವತೆಯ ಸಾಂಸ್ಕೃತಿಕ ರಾಯಭಾರಿಗಳು.
-ರವಿ ಮೂರ್ನಾಡುಕ್ಯಾಮರೂನ್.

1 ಕಾಮೆಂಟ್‌:

  1. ಹೊರ ನಾಡ ಕನ್ನಡಿಗರು, ಇಲ್ಲಿನ ಕನ್ನಡಿಗರ ಅಭಿಮಾನವನ್ನು ಬಡಿದೆಚ್ಚರಿಸುತ್ತಿದ್ದಾರೆ.

    ಹೊರನಾಡ ಕನ್ನಡಿಗರ ಕನ್ನಡ ಸೇವೆಯ ಬಗ್ಗೆ ನನ್ನ ಅಣ್ಣ ಒಮ್ಮೆ ಹೇಳಿದ್ದರು, ಅಮೇರಿಕದ ಕೆಲವು ಕನ್ನಡ ದೇವಸ್ಥಾನಗಳಲ್ಲಿ ಕನ್ನಡದಲ್ಲೇ ದೇವರ ಪೂಜೆ ಮತ್ತು ಕೆಲವು ಕಛೇರಿಗಳಲ್ಲಿ ಕನ್ನಡ ಉಕ್ತಿಗಳು ಗೋಡೆ ಬರಹಗಳಾಗಿ ರಾರಾಜಿಸುತ್ತಿವೆಯಂತೆ.

    ಇನ್ನು ಈ ಪತ್ರಿಕೆಗಳು ಕನ್ನಡ ಸೇವೆಯನ್ನು ದಿನವಹಿ ನಿರ್ವಹಿಸುತ್ತಿವೆ.

    ಕನ್ನಡತನವನ್ನು ಉತ್ತೇಜಿಸುವ ಇಂತಹ ಬರಹಗಳಿಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ