ಶನಿವಾರ, ಅಕ್ಟೋಬರ್ 13, 2012

ಮರಳುಗಾಡಿನಲಿ "ಬೀಜಿ" ಬರೆದ ಅ ಆ ಇ ಈ ಅಕ್ಷರ !

ಹೌದಲ್ವಾ...! ಇದು ಮರಳುಗಾಡು ದೇಶದಲ್ಲಿ ಕನ್ನಡ ಅಕ್ಷರ ಭಿತ್ತಿದವರ ಮಾತು. ಹಾಗೇ ಹಲವು ವರ್ಷಗಳಿಂದ ಈ "ಗಲ್ಪ್ ಕನ್ನಡಿಗ" ಅಂತರ್ಜಾಲ ಸುದ್ದಿ ಪುಟವನ್ನು(http://gulfkannadiga.com/ )ಓದುತ್ತಲೇ ಇದ್ದೇನೆ. ಇದರ ಕನ್ನಡದ ಅಭಿಮಾನವನ್ನು ಆಸ್ವಾಧಿಸಿದಾಗ ನನಗನ್ನಿಸಿದ್ದು ಇಷ್ಟು. ಮಾರುದ್ದದ ಸಾಧನೆ ಪಟ್ಟಿಯ ದಾಖಲೆಗಳನ್ನು ಒದಗಿಸಿ ಅರ್ಜಿ ಗುಜರಾಯಿಸುವ ಬದಲು ಹೊರದೇಶದ ಏಕೈಕ ಕನ್ನಡದ ಈ ಸುದ್ದಿ ಮಾಧ್ಯಮದ ಕಡೆಗೆ ಕಣ್ಣಾಯಿಸಿದ್ದರೆ, ಪ್ರಶಸ್ತಿಗೆ ತಾಮುಂದು ನಾಮುಂದು ಎನ್ನುವವರ ಸಾಲಿನಲ್ಲಿ ಬಿ.ಜಿ. ಮೋಹನ್ ದಾಸರು ಕರ್ನಾಟಕದಲ್ಲಿ ಕಾಣಿಸದೆ ಹೋದಾರು. ಹಾಗಾಗಿ, ಅನಿವಾಸಿ ಕನ್ನಡಿಗರು ಸಂಭ್ರಮಿಸುವ ರಾಜ್ಯೋತ್ಸವ ಮಾತು ಹೀಗೆ ಬಂತು. ಕನ್ನಡಕ್ಕೆ ನೆಲೆಯೇ ಇಲ್ಲದ ಒಂದು ಪ್ರದೇಶದಿಂದ ಮಾಡಿದ್ದು ಅತಿಶಯೋಕ್ತಿ ಅನ್ನಿಸಿತು. ಎಲ್ಲೆಂದರಲ್ಲಿ ಚದುರಿ ಹೋದ ಹೊರನಾಡ ಕನ್ನಡಿಗರನ್ನು ಅಂತರ್ಜಾಲ ಪುಟವೊಂದರಲ್ಲಿ ದಿನನಿತ್ಯ ಒಂದೆಡೆ ಸೇರಿಸಿ ಕನ್ನಡತನವನ್ನು ಹಂಚಿಕೊಳ್ಳುವ ಸಂಭ್ರಮದ ಹಿಂದಿರುವ ಕೆಲಸ ಸೋಜಿಗವೆನಿಸಿತು."ಬೀಜಿ" ಎಂದರೆ ಮತ್ತೊಂದು ಹೆಸರು ದುಬೈ ಕನ್ನಡವೇ ?! ಇದು ಹೇಗೆ?

        ಬೇಕಾಬಿಟ್ಟಿ ಪರಾಕು ಸಂಸ್ಕೃತಿಯಲ್ಲಿ ನೈಜ ಸಾಧನೆಯ ಸರಕು ಮೂಲೆ ಗುಂಪಾಗುತ್ತಿರುವುದು ಒಂದು ಕಡೆ. ಸಮಾಜ ಸುಧಾರಣೆಯ ಹೆಸರಿನಲ್ಲಿ ನೈಜ ಕಾರ್ಯಗಳಿಗೆ ತಮ್ಮವರಿಂದಲೇ ಕಾಲೆಳೆಸಿಕೊಂಡು ಮೇಲೇಳದಂತೆ ಮುಗ್ಗರಿಸಿ ಬೀಳುವ ಮಂದಿಯ ಉತ್ಸಾಹ ಕುಗ್ಗಿಸುವ ಕಾರ್ಯ ಮತ್ತೊಂದು ಕಡೆ. ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸುವ ಶಿಕ್ಷಕ-ಶಿಕ್ಷಕೀಯರಿಗೆ ಶಿಕ್ಷಣ ಕ್ಷೇತ್ರದ ಪ್ರಶಸ್ತಿ ಕೊಡಲು ಅರ್ಜಿ ಸಂಗ್ರಹಿಸುವ ನಿಯಮದ ಪರಿಪಾಟಲು ನೋಡುವಾಗ ಅಭಿನಂದನೆ ಸಲ್ಲಿಸುವ ಚಪ್ಪಾಳೆಗಿಂತ ಅಳುವೇ ಬರುವುದು. ಇದು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರವನ್ನೂ ಬಿಟ್ಟಿಲ್ಲ.  ಶಂಕೆ ಮೂಡಬಹುದು ! ಇದೇನು ಹೊಗಳಿಕೆಯಂತೂ ಅಲ್ಲವೇ ಅಲ್ಲ . ಬೀಜಿಯವರಿಗೆ ಅದರ ಅಗತ್ಯವೂ ಇಲ್ಲ. ಕನ್ನಡದ ಕೆಲಸ ವಿದೇಶದಿಂದ ಮಾಡುತ್ತಿದ್ದೇನೆ ಅಂತ ಯಾರ ಮುಂದೆಯೂ ಹೇಳಲಿಲ್ಲ. ಅದನ್ನು ಮಾಡಬೇಕಾದವರು ಕನ್ನಡದ ವಿಶಾಲ ಮನಸ್ಸಿನ ತಾಯ್ನೆಲದ ಸಮಾಜ. ಆ ಕೆಲಸ ಈಗ ನಡೆಯುತ್ತಿದೆ. ದಿನ ನಿತ್ಯ ಅಂತರ್ಜಾಲ ಪುಟ ತೆರೆದು ಸುದ್ದಿ, ಸಾಹಿತ್ಯ, ಸ್ವಾರಸ್ಯ ಹುಡುಕಿ ಸಂಭ್ರಮ ಪಟ್ಟ ಓದುಗರೇ ಇವರ ಕನ್ನಡ ಅಭಿಮಾನದ ಶಿಲ್ಪಿಗಳು. ಇವರೇ ಬೀಜಿಯವರ ಕನ್ನಡದ ಜವಾಬ್ದಾರಿಯನ್ನು ಹೆಚ್ಚಿಸಿದರು. ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಈಗ ಈ "ಗಲ್ಪ್ ಕನ್ನಡಿಗ" ಅಂತರ್ಜಾಲ ಪುಟದ ಬಗ್ಗೆ  ಬರೆದು ತಿಳಿಸಿದ್ದೂ ಇದೇ ಕನ್ನಡ ಅಭಿಮಾನದ ಧರ್ಮ.

          ಕನ್ನಡದ ಹಬ್ಬದಲ್ಲಿ ನೆನಪಿಸಿಕೊಳ್ಳದಿದ್ದರೆ ತುಂಬಾ ದೊಡ್ಡ ದ್ರೋಹವಾದೀತು ಅಂತ ಅನ್ನಿಸಿತು. ನೆಲದ ನಾಡಿಗೆ ಒಂದಷ್ಟು ಋಣಭಾರದ ಪದಗಳೇ ವಿಜೃಂಭಿಸಬಹುದು.ಮತ್ತೆ ಮತ್ತೆ ಆ ಅಭಿಮಾನದ ಭಾರಕ್ಕೆ ನೆಲವೂ ಭಾರವಾಗಿದೆ ಅನ್ನಿಸುವುದು. ಕನ್ನಡ ನೆಲದಲ್ಲಿದ್ದು ಸೇವೆ ಮಾಡುವುದು ಕರ್ತವ್ಯ ಮತ್ತು ಧರ್ಮ. ನೆಲ ಬಿಟ್ಟು ಜೀವನ ವ್ಯಾಪಾರಕ್ಕಾಗಿ ಹೋದವರು ಸೇವೆ ಸಲ್ಲಿಸುತ್ತಾರೆ ಅಂದರೆ ಅದು ಅತಿಶಯೋಕ್ತಿಯೂ ಹೌದು. ತನ್ನ ಬದುಕಿಗಾಗಿ ದುಬೈ ಸೇರಿದ ಮೋಹನ್ ದಾಸ್ ಅವರು ತಮ್ಮ ಜೀವನವನ್ನೇ ಭದ್ರಪಡಿಸಿಕೊಳ್ಳಬಹುದಿತ್ತು. ವೃತ್ತಿಯಲ್ಲಿ ವೈದ್ಯರಾದ ಇವರಿಗೆ ಅದು ಕಷ್ಟವಲ್ಲ. ಆದರೆ, ಕನ್ನಡ ಅವರನ್ನು ಹೋದಲ್ಲಿಯೂ ಕಾಡದೇ ಬಿಡಲಿಲ್ಲ ಏಕೆ ಎಂಬ ಪ್ರಶ್ನೆ. ಸಮಾಜ ಸುಧಾರಣೆ  ಅನ್ನೋದು ಸಮಾಜದಲ್ಲಿ ಒಂದಾದ ಹಲವು ಮನೆಗಳಿಂದ ಸಾಧ್ಯ. ಅದು ಸಮಾಜದ ಆಸ್ತಿ. ಅಂತಹ ಕನ್ನಡದ ಆಸ್ತಿಯೊಂದನ್ನು "ಗಲ್ಪ್ ಕನ್ನಡಿಗ" ಹುಟ್ಟು ಹಾಕುವ ಮೂಲಕ ಕನ್ನಡ ನಾಡಿಗೆ ಸಮರ್ಪಿಸಿದ್ದಾರೆ ಕರ್ನಾಟಕದ ಅಭಿಮಾನ ಬೀಜಿ. ಅಂದಾಜು ದಿನವೊಂದಕ್ಕೆ 1೦ ಸಾವಿರಕ್ಕೂ ಮಿಕ್ಕಿ ಓದುಗರು "ಗಲ್ಪ್ ಕನ್ನಡಿಗ" ಅಂತರ್ಜಾಲ ಪುಟಕ್ಕೆ ಲಗ್ಗೆ ಹಾಕುವಾಗ ಅದು ನಿಜವಾಯಿತು. 

          ಕನ್ನಡ ನೆಲದಲ್ಲೇ ಇತರ ಭಾಷೆಗಳ ಕಿರಿಕಿರಿ ಇದೆ. ಅವಹೇಳನ ಮಾಡುತ್ತಾರೆ. ಕನ್ನಡಿಗರೇ ಕನ್ನಡಿಗರ ಕೆಲಸಕ್ಕೆ ಕಾಲೇಳೆಯುವ ಸಂದರ್ಭಗಳಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರ ಮುಖ ಹುಬ್ಬು ಗಂಟಿಕ್ಕುವುದು. ಒಬ್ಬರನ್ನು ಪ್ರೋತ್ಸಾಹಿಸಿದರೆ ಒಂದಷ್ಟು ಕಿಚ್ಚು ಹಚ್ಚುವ ಸಾವಿರ ಶಂಕೆಯ ಸಂಕೋಲೆಯಲ್ಲಿ ಸಿಲುಕಿಸುವವರಿದ್ದಾರೆ. ಜಾತಿ,ರಾಜಕೀಯ,ಪಂಥ ಅನ್ನುವಾಗ ಕನ್ನಡಿಗರಲ್ಲೇ ಒಡಕುಂಟಾಗಿ ಇತರ ಭಾಷಿಗರಿಗೆ ದೌರ್ಬಲ್ಯ ಹೀನರಾಗಿ ನಾವು ಕಾಣುತ್ತೇವೆ. ಇಂತಹ ಸ್ಥಿತಿ ತಾಯಿ ನೆಲದಲ್ಲೇ ಇರುವಾಗ, ಭಾಷೆಯ ಮಾನ್ಯತೆಯೇ ಇಲ್ಲದ ನಾಡಿನಿಂದ ಕನ್ನಡದ ಕೆಲಸ ಕಷ್ಟ ಸಾಧ್ಯ. ಅಂತಹದ್ದರಲ್ಲಿ ದಿನನಿತ್ಯ ತೆರೆದುಕೊಳ್ಳುವ ಈ "ಗಲ್ಪ್ ಕನ್ನಡಿಗ" ಎಂಬ ಕನ್ನಡತನ ಅಂತಹ ಬಾಧೆಯಿಂದ ದೂರ ಉಳಿಸಿಕೊಂಡಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ನನ್ನ ಸಂವಾದಕ್ಕೆ ಸಿಕ್ಕಿದ ಅಮೇರಿಕ,ಇಂಗ್ಲೇಂಡ್, ನೈಜಿರಿಯಾ, ಆಸ್ಟ್ರೇಲಿಯಾ ಮುಂತಾದ ಹೊರನಾಡ ಕನ್ನಡಿಗರು "ಗಲ್ಪ್ ಕನ್ನಡಿಗ"ದ  ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಅವಲೋಕಿಸುವಾಗ ಬಿ.ಜಿ. ಮೋಹನ್ ದಾಸರು ಕೈ ಹಾಕಿದ ಕನ್ನಡ ಕೆಲಸ ಅಷ್ಟು ಸುಲಭದ್ದಲ್ಲ ಅನ್ನಿಸಿತು.

           ರಾಜ್ಯದ ರಾಜಕೀಯ, ಅರ್ಥಿಕ , ವಿಮಾನ ಯಾನ, ಆಮದು-ರಫ್ತು ಉದ್ಯಮ, ಶಿಕ್ಷಣ, ವೈದ್ಯಕೀಯ, ಉದ್ಯೋಗ, ಸಾಂಸ್ಕೃತಿಕ ವರ್ಚಸ್ಸು ಮತ್ತು ಸಮಾಜ ಕಲ್ಯಾಣ ಮುಂತಾದ ಕ್ಷೇತ್ರಗಳಿಗೆ ಅನಿವಾಸಿಗರ ಸಹಕಾರ ಹಸ್ತಗಳಿವೆ. ಕನ್ನಡದ ಸುದ್ದಿ ಸಂಸ್ಕೃತಿಯ ಕನ್ನಡ ಪುಟವೊಂದು ವಿದೇಶದಲ್ಲಿ ತೆರೆಯಬೇಕಾದರೆ ಅದರ ಶ್ರಮದ ಏಕೈಕ ಭಾಜನಸ್ಥ ಬೀಜಿ. ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ರಾಯಭಾರತ್ವದ ಮುಂಚೋಣಿಯಲ್ಲಿ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುವ ಅನಿವಾಸಿ ಕನ್ನಡಿಗರ ಪ್ರತಿನಿಧಿ. ಹೀಗಾಗಿ ನ್ಯಾಯ,ಸಂಭ್ರಮ,ಬದ್ದತೆ ಮತ್ತು ಜೀವನದ ದಾರಿಯ ಸಮಸ್ಥಿತಿಯನ್ನು ಪರಿಚಯಿಸಿದ್ದಾರೆ. ಇಷ್ಟೆಲ್ಲಾ ಏಕೆ ಪೀಠಿಕೆ ಬಂತು ಅಂದರೆ, ನಮ್ಮದು ನವೆಂಬರ್ ಕನ್ನಡಿಗರ ಹಬ್ಬ. ರಾಜ್ಯ ಸರಕಾರ ಕನ್ನಡದ ಏಳಿಗೆಗಾಗಿಯೇ ಇದೇ ತಿಂಗಳಲ್ಲಿ ಕೈಯಾಡಿಸುತ್ತದೆ. ಕೆಲವಷ್ಟು ಮಂದಿಯನ್ನು ಈ ಸಂದರ್ಭದಲ್ಲಿ ಗುರುತಿಸುವುದಕ್ಕೆ ಪ್ರತ್ಯೇಕ ಸಮಿತಿಯನ್ನು ರಚಿಸುತ್ತದೆ. ಅಂತಹ ಸಮಿತಿಗೆ "ಗಲ್ಪ್ ಕನ್ನಡಿಗ"ದ ಸಾಧನೆಯ ಪುಟ ತೆರೆಯಲು ಹೊರನಾಡ ಲಕ್ಷಾಂತರ ಕನ್ನಡಿಗರು ಸರಕಾರಕ್ಕೆ ಒಕ್ಕೊರಲಿನ ಸಹಮತ ಸೂಚಿಸುವರು ಅನ್ನುವ ಪರೋಕ್ಷ ಮಾತಿದು. ಹಾಗಂತ, ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರ ಸಾಲಿನಲ್ಲಿ ನಿಲ್ಲುವುದು ತ್ರಾಸದಾಯಕ ಮತ್ತು ಅದು ಸಾಧನೆಯ ಸಂಸ್ಕೃತಿಯೂ ಅಲ್ಲ.  

            ಕನ್ನಡದ ನೆಲದ ಬಗ್ಗೆ, ಭಾಷೆಯ ಬಗ್ಗೆ ಏಕೆ ಅಲ್ಲಲ್ಲಿ, ಆಗಾಗ್ಗೆ ಚಳವಳಿಗಳು, ಹೋರಾಟಗಳು ನಡೆಯುತ್ತಲೇ ಇರುತ್ತವೆ ಅನ್ನುವ ನೋವು ಗಂಭೀರವಾದುದು. ಕಾರಣಗಳಿಲ್ಲದೆ ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲ. ನಮ್ಮ ಭಾಷೆಯನ್ನ, ನೆಲವನ್ನ ಕಡೆಗಣಿಸಿದರು ಅನ್ನುವ ಒಳ ಬೇಗುಧಿ ಇಲ್ಲಿದೆ. ಅಲ್ಲಿ ಬೀದಿಗೆ ಬಂದು ನ್ಯಾಯ ಕೇಳುತ್ತಿದೆ. ಇದಕ್ಕೆ ಕಾರಣವೇನು? ಸಂಖ್ಯೆಯಲ್ಲಿ ಅತಿಯಾದರೂ , ಅಭಿಮಾನದಲ್ಲಿ ಎತ್ತರದಲ್ಲಿರುವ  ಇತರ ಭಾಷಿಗರ ಭಾಷೆಯ ಹಮ್ಮು ಕನ್ನಡದಲ್ಲಿ ಯಾಕಿಲ್ಲ ಅಂತ ಪ್ರಶ್ನೆಗಳಿವೆ. ನಾವು ಅಭಿಮಾನ ಶೂನ್ಯರಂತೂ ಅಲ್ಲವೇ ಅಲ್ಲ.  ಇವತ್ತು ನವೆಂಬರ್ ತಿಂಗಳಲ್ಲಿ ನಾವು ಕನ್ನಡಿಗರು ಅಂತ ಬೀದಿಗಿಳಿದು ನ್ಯಾಯಕ್ಕಾಗಿ ಬೊಬ್ಬೆ ಹೊಡೆದು, ದಣಿವಾರಿಸಿಕೊಳ್ಳಲು ಮಿಕ್ಕ 11 ತಿಂಗಳು ನಿದ್ದೆಗೆ ಜಾರುವ ಪ್ರವೃತ್ತಿ ಉಂಟು. ಕನ್ನಡಿಗರೆಂದರೆ ಹಾಗೇ ಉದಾರಿಗಳು. ಎಲ್ಲವನ್ನೂ ಬಿಟ್ಟು ಕೊಡುವುದು,ಎಲ್ಲರೂ ಎಲ್ಲವನ್ನೂ ಹೊಡೆದುಕೊಂಡು ಹೋದ ನಂತರ ಬಡವರಾದೆವು ಎಂದು ಬೊಬ್ಬೆ ಹೊಡೆಯುವುದು. ಇತರ ಭಾಷಿಗರ ಅಭಿಮಾನದ ಮುಂದೆ ಕನ್ನಡಿಗರ ಅಭಿಮಾನದ ವೀರಾವೇಶವನ್ನು ತೋರಿಸುವುದು ನಮ್ಮ ಕನ್ನಡ ಹಬ್ಬ. 
         ಇಂತಹ ಹಬ್ಬದಲ್ಲಿ ಒಂದಷ್ಟು ಮಹನೀಯರನ್ನು ಗೌರವಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಭಾಷೆಯನ್ನು ವಿದೇಶದಿಂದ ಅಭಿಮಾನಿಸಿ, ಶ್ರಮ ವಹಿಸಿ ಮೊತ್ತ ಮೊದಲ ಬಾರಿಗೆ ಅನಿವಾಸಿ ಕನ್ನಡಿಗರಿಗೆ ಅಕ್ಷರ ಸಂಪತ್ತನ್ನು ಉಣ ಬಡಿಸಿದ ಕೀರ್ತಿ ಬಿ. ಜಿ. ಮೋಹನ್ ದಾಸರಿಗೆ ಸಲ್ಲಿಕೆಯಾಗುವುದು. ಉದ್ಯೋಗಕ್ಕಾಗಿ ನೆಲ ಬಿಟ್ಟು ಬಂದ ಅಸಂಖ್ಯ ಅನಿವಾಸಿ ಕನ್ನಡಿಗರು ವಿಶ್ವದಾದ್ಯಂತ ಇದರ ಸವಿ ಸವಿಯು ವುದಕ್ಕೆ ಕಾರಣವಿದೆ. ಇದನ್ನು ಇದುವರೆಗೆ ಯಾರೂ ಗಮನಿಸಲಿಲ್ಲವೇ ಅನ್ನುವ ಮಾತು ಇಲ್ಲಿಲ್ಲ. ಕನ್ನಡದ ಭಾಷಾ ಬೆಳವಣಿಗೆಯಲ್ಲಿ "ಗಲ್ಪ್ ಕನ್ನಡಿಗ" ವಿದೇಶದ ನೆಲದಲ್ಲಿ ಮಾಡಿದ ಸಾಧನೆ ಅಭೂತ ಪೂರ್ವ ಅಲ್ಲವೇ ಅನ್ನುವ ಪ್ರಶ್ನೆಯೂ ಇಲ್ಲಿಲ್ಲ. ಇದರ ಸಾಧನೆಗೆ ಇಷ್ಟುದ್ದದ ಸಾಧನೆಯ ಪಟ್ಟಿಗಿಂತ ಇದರ ಪುಟ ತೆರೆದುಕೊಂಡರೆ ಅದೇ ಉತ್ತರವಾದೀತು.

          ಮುಕ್ಕೋಟಿ ಕನ್ನಡಿಗರಿದ್ದ ನವೋದಯ ಕಾಲದ ಕರ್ನಾಟಕ ಏಕೀಕರಣದ ಸಂದರ್ಭದಿಂದ ನವ್ಯ ಕಾಲಕ್ಕೆ ಮುಂದಡಿಯಿಟ್ಟ ಕನ್ನಡಿಗರು ಹತ್ತು ಕೋಟಿಗೂ ಮೀರಿದ್ದಾರೆ. ಕನ್ನಡದ ಭಾಷಾ ಉಳಿವು, ಜಾಗೃತಿ ಹಲವು ಗೊಜಲುಗಳ ಹಂತವನ್ನು ಮುಟ್ಟಿವೆ.ಆದರೂ ದೌರ್ಬಲ್ಯಗಳು ಮರೆಯಾಗಿಲ್ಲ. ಗೊಜಲುಗಳ ಸಿಕ್ಕುಗಳಲ್ಲಿ ಕಗ್ಗಂಟಾಗುತ್ತಿದ್ದೇವೆ. ಸಂಘ-ಸಂಸ್ಥೆಗಳಿಗೆ ದೇಣಿಗೆ ಕೊಟ್ಟು ಪ್ರಶಸ್ತಿ ಪಡೆದುಕೊಳ್ಳುವ ಸಂಸ್ಕೃತಿ ಉಂಟು. ಪ್ರಶಸ್ತಿಗಾಗಿ ಅರ್ಜಿ ಕರೆದು, ಅರ್ಜಿದಾರರಿಂದಲೇ ಪ್ರಶಸ್ತಿಯ ಮೊತ್ತ ಸಂಗ್ರಹಿಸಿ ಫಲಕ ಕೊಡುವ ದಾರಿಯೂ ಉಂಟು. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು, ಜಿಲ್ಲಾ ಪಂಚಾಯಿತಿ, ರಾಜ್ಯ ಸರಕಾರ, ರಾಷ್ಟ್ರದ ಮಟ್ಟ ಪ್ರಶಸ್ತಿಯವರೆಗೆ ಪ್ರಶಸ್ತಿಗಾಗಿ  ಅರ್ಜಿ ದಾಖಲಿಸುವ ಪರಿಪಾಠ ಬಂದಾಗ ಸಾಧನೆ ಅಂದರೇನು ಎಂಬ ಅನುಮಾನ ಕಾಡುತ್ತದೆ. ಇಂತಹ ಸಾಧನೆಯ ಅವಲೋಕನದಲ್ಲಿ ನವೆಂಬರ್ ತಿಂಗಳ ಕನ್ನಡ ಹಬ್ಬದಲ್ಲಿ "ಗಲ್ಫ್ ಕನ್ನಡಿಗ" ಸುದ್ದಿ ಪುಟವನ್ನು ಓದಿ... ಮತ್ತೊಮ್ಮೆ ಓದಿ ನೆಲದ ಅಭಿಮಾನವನ್ನು ಎದೆಯಲ್ಲಿ ತುಂಬಿಸಿಕೊಳ್ಳುತ್ತೇವೆ. ಇದು ಅನಿವಾಸಿ ಕನ್ನಡಗರ ಹೃದಯ ವಿಶಾಲತೆಯ ಸತ್ಯ. ಹಾಗಾಗಿ  ಅನಿವಾಸಿ ಕನ್ನಡಿಗರು ಬೀಜಿ ಅನ್ನುವ ಹೆಸರಿನಲ್ಲಿ ಅಪ್ಪಟ ದುಬೈ ಕನ್ನಡವನ್ನು ಓದುತ್ತಿದ್ದಾರೆ. ಅದು ನಿರಂತರ. -ಜೈ ಕನ್ನಡ ಭುವನೇಶ್ವರಿ..!
-ರವಿ ಮೂರ್ನಾಡು.

1 ಕಾಮೆಂಟ್‌:

  1. ಇಂದು ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಎಂದರೆ, ಅದು ಕಾಸು ಕೊಟ್ಟು ಅಥವ ರಾಜಕೀಯ ಮುಲಾಜಿಗೆ ಪಡೆದುಕೊಂಡ ಪ್ರಶಸ್ತಿ ಎನ್ನುವ ಮಾತು ಜನಜನಿತವಾಗಿದೆ.

    ಹೊರ ನಾಡಿನಲ್ಲಿ ಕನ್ನಡದ ಕೆಲಸವನ್ನು ಅನುಕ್ಷಣ ಮಾಡುತ್ತಿರುವ ಬಿ.ಜಿ. ಮೋಹನ್ ದಾಸರು ಇನ್ನಾದರೂ ನಮ್ಮ ಸರ್ಕಾರದ ಗಮನಕ್ಕೆ, ಸಾಹಿತ್ಯ ಪರಿಷತ್ತಿನ ಗಣನೆಗೆ ಮತ್ತು ಖಾಸಗೀ ಪ್ರತಿಷ್ಟಾನಗಳ ಮೆಚ್ಚುಗೆಗೆ ಪಾತ್ರರಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.

    ನನ್ನಂತಹ ಅನಾಮಿಕನನ್ನೂ ಅಂಕಣಕಾರರಾಗಿಸಿದ ಅವರ ಸಹೃದಯತೆಗೆ ನನ್ನ ಶರಣು.

    ಪ್ರತ್ಯುತ್ತರಅಳಿಸಿ