ಗುರುವಾರ, ಜುಲೈ 19, 2012

ಕೆಳಗಿಳಿದೇರಿ..!

ಮನೆಯಿಂದ ಮೆಟ್ಟಿಳಿದಿದ್ದೆ
ಈ ಬೆಳಗ್ಗಿನುದ್ದಗಲಕೆ 
ಸಾವಂತ ರಾತ್ರಿಯ ಹುಟ್ಟಿಗೆ !
ತಿರುಗಿ ನೋಡಲೆತ್ನಿಸುತ್ತೇನೆ
ಸುಲಭವಿಲ್ಲ ಮತ್ತೆ ಹತ್ತುವುದು !

ರೆಪ್ಪೆ ತೆರೆದಿದೆ ಬೀದಿ
ಆರತಿ ಎತ್ತಿದ ಶುಭ್ರ ಬೆಳಕಿಗೆ
ನಡೆದಿದ್ದೇನೆ ನಡೆವವರ ಕಣ್ಣೊಳಗೂ
ರೆಕ್ಕೆ ಬಡಿವ ಬೀಸುಗಾಳಿ
ಏರಿ ಕೆಳಗಿಳಿವ ಎದೆಯೊಳಗೂ !

ನಿದ್ದೆಯಿ೦ದೆದ್ದ ಆಕಳಿಕೆಗೆ 
ಮಂದ ಪರದೆಯಿದೆ ಬೆಳಕಿಗೆ
ಗುಡಿಸಿದಷ್ಟೂ...ಧೂಳು ಗಾಳಿ   
ಅರೆಮುಚ್ಚಿದ ರೆಪ್ಪೆಯೊಳಗೂ 
ನೆಕ್ಕುತ್ತಿವೆ ಆಲೋಚನೆಗೆ
ಕೂದಲ ಸರಿಸಿ ತಲೆಯೊಳಗೂ !




ಬೆರಗು ಬಿಚ್ಚಿವೆ ಸುದ್ದಿಗಳು
ಪುಟ ತೆರೆದ ರಸ್ತೆಯೊಳಗೆ  
ನಿನ್ನೆಗಳಿಗೆ ಮಾತಿಗಿಳಿದು !
ತಿರುಗಿಸಿ ಕತ್ತು ಕೆಲವುಗಳು  
ಎಲ್ಲೋ ನೋಡಿ ಅಳೆದು
ಅಲ್ಲೇ ಹೋಗುತ್ತಿವೆ ಯಾತ್ರೆಗಳು
ಮತ್ತೆ ಬರಲಾರರು ಎಂದು  !

ಅರರೇ..ಊರುಗೋಲು
ಆಗಸ ದಿಟ್ಟಿಸಿ ಭೂಮಿ ಅಳೆದಿದೆ
ಅಂಧನ ಬೆಳಕಿನ ಕಂಗಳು !
ಹಿಡಿದ ಕೈಗೆ ರಸ್ತೆ ದಾಟಿದೆ
ಹುಡುಕಿ ಹೆಜ್ಜೆಗೆ ಬೆಳಕುಗಳು !
ಅಲ್ಲೇ ಜೀಕಿ ಗಾಡಿಗೆ ಅಳುತ್ತಿವೆ
ನಗದೆ ನಡೆಯದ ಕೈಕಾಲು
ತರಗುಟ್ಟಿಸಿ ಜಗಕೆ 
ಕರೆದು ಮುಗಿವ ಕರೆಗಳು !

ಅದೆಷ್ಟು ನಗುವ ಹೂಗಳು..?!
ನಡೆವವರ ಮುಖದಲ್ಲೂ
ಹೆಜ್ಜೆ ಹಿಡಿದ ಭುವಿ ಹೆಣ್ಣು
ಕಾವಲಿದೆ ಭಾನು ಗಂಡಿನ ಕಣ್ಣು
ಹಾರುತಾ ಚಿಲಿಪಿಲಿ ಮಕ್ಕಳು !
ಸೆಳಕು ಲಲನೆಯ ಬಳುಕು 
ರಸ್ತೆಗಿದೆ ಏರು-ತಗ್ಗು   
ತುಂಟ ಗಾಳಿಗೆ ಬೆಚ್ಚಿ ಸೆರಗು
ನಾಚಿ ಹಣೆ ನೆಕ್ಕಿದ ಮುಂಗುರುಳು 
ದಿನಕ್ಕೀಗ ರಾತ್ರಿ ಪಟ್ಟಿಯ ಕನಸು !

ಅದೋ .. ಬದುಕು ಕಚೇರಿ
ಹುಟ್ಟು ಕುರ್ಚಿಗೆ ಕರೆದು
ಲೆಕ್ಕ ಬರೆದಿದೆ ಕಡತಗಳು !
ಆ ಮಾಲೀಕ ಕೊಟ್ಟಷ್ಟು ಸುಖಿಸಿ
ಇಷ್ಟಿಷ್ಟೇ ಗೀಚಿ ಗೊಜಲುಗಳು
ಬರೆದು ತಿದ್ದಿದಷ್ಟು ತಪ್ಪು  
ಸಿಕ್ಕಷ್ಟು ತುಂಬಿವೆ ಜೇಬು 
ಕೈಯೊಡ್ಡಿ ಬೇಡಿ ಮಿಕ್ಕವರಿಗೆ 
ಸಿಕ್ಕವರಿಗೆ ಮರೆತಿದೆ ಏನೋ  !

ಮತ್ತೊಮ್ಮೆ ಇಳಿದಿದ್ದೇನೆ
ಸವೆದಷ್ಟು ಮರೆಯದ ರಸ್ತೆಗೆ 
ಹೆಜ್ಜೆ ತಪ್ಪದ ಸಂಜೆಯೊಳು !
ಒಂದೊಂದೇ ಮೆಟ್ಟಿಲು 
ಉಸಿರಿದೆ ಮನೆಯೊಳು
ಇಳಿದಷ್ಟು ಸುಲಭವಿಲ್ಲ ಹತ್ತುವುದು  !
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. ಚೆನ್ನಾಗಿದೆ ರವಿಯವರೆ.. ಕೆಲವೆಡೆ ಉಪಮೆಗಳಲ್ಲೇ ಹೂತುಹೋಗಿ ಜೀರ್ಣಿಸುಕೊಳ್ಳಲು ಕಷ್ಟವಾಯಿತು..

    ಪ್ರತ್ಯುತ್ತರಅಳಿಸಿ
  2. ಇಲ್ಲಿ ಇಳಿಯುವ ಪ್ರಕ್ರಿಯೆ ಎರಡು ವೈರುದ್ಧ್ಯಗಳ ವಿವೇಚನೆ. ಒಂದು ನೇರಾ ನೇರ ವಿಚಾರದಾಳ ಇಳಿಯುವಿಕೆ ಮತ್ತೋಂದು ನಿಮ್ಮ ಮನದಾಳದಲ್ಲಿ ಕಾಡುತ್ತಿರುವ ಯಾವುದೋ ಅವ್ಯಕ್ತ ನೋವು!

    ನಿಮ್ಮ ವೃತ್ತಿ ಪರಿಚಯವಂತೂ ಚೆನ್ನಾಗಿದೆ. ಮುಂಚೆ ಬರುವ ಕುರುಡನ ಸಾಲುಗಳು ತೀವ್ರವಾಗಿ ತಟ್ಟುತ್ತವೆ.

    ಇಲ್ಲಿ ಏರುವಿಕೆ ನಿಮ್ಮ ಯಾವ ಏರುವಿಕೆಯ ಸಂಕೇತವಾಗಿ ಬಳಸಿದ್ದೀರೋ ಅದು ಶೀಘ್ರ ನೆರವೇರಲಿ.

    ಪ್ರತ್ಯುತ್ತರಅಳಿಸಿ