ಬುಧವಾರ, ಜುಲೈ 25, 2012

ಕನ್ನಡಿ ಮತ್ತು ಹುಡುಗಿ


ಆ ತುಂಡು ಫ್ರಾಕು
ಗಾಢ ರಾತ್ರಿಗದ್ದಿದ  
ಕಪ್ಪಿಗಿ೦ತ ಕಪ್ಪು ಕೂದಲು 
ಒಂದು ಪುಟ್ಟ ಗುಲಾಬಿ
ಕೆನ್ನೆ,ಮೈಗೆ ಪೌಡರು ಬಳಿದು
ಮೊದಲು ನೋಡಿದ್ದೇ
ಕನ್ನಡಿ ಅಮ್ಮನ ಕಂಗಳು!

ಮೆಟ್ಟಿಲಿಳಿದು ಅ೦ಗಳಕ್ಕೆಳೆದು
ಮೊದಲು ಮೋಹಗೊ೦ಡಿದ್ದೆ
ಈ ಬೆಳಕು !

ಆ ದಾರಿ, ಈ ಭಾನು
ನಗರ-ಪಟ್ಟಣ-ಶಾಲೆಗೆ
ರಿ೦ಗಣಿಸಿ ಗೆಜ್ಜೆ ಕಾಲು
ನೋಡಿದೆ ಆನಂದದ ಬೆರಗು
ಸಾವಿರಾರು ಕನ್ನಡಿ ಕಂಗಳು !

ಮೈ ಪೂರ ಹರಿದು ಕಣ್ಣುಗಳು
ಬಾಲೆ ಬೆಳೆದಿದ್ದಾಳೆ
ನೋಡುಗರ ಕನ್ನಡಿಯಲಿ ನಕ್ಕು
ನಾಚಿ ನೋಡುತ್ತಿದ್ದವರಿಗೆ ನಡೆದು
ಎದೆಗೆ ಪುಸ್ತಕ ಹಿಡಿದು !

ಅಪ್ಪ ಬಾಚಿದ ಕ್ರಾಪು
ಅಣ್ಣ ತೀಡಿದ ಮೀಸೆ
ಅಮ್ಮ ಹಣೆಗಿಟ್ಟ ಬಿಂದಿ ಕನ್ನಡಿ
ಆಹಾ..! ಈಗ ಸಂಗಾತಿ

ಇಲ್ಲೆರಡು ಕಣ್ಣುಗಳು ಅಲ್ಲೆರಡು
ಲೆಕ್ಕಕ್ಕೆ ಕನ್ನಡಿ ಐದು !
ನೋಡಿದಷ್ಟು ಸಿಕ್ಕಿಲ್ಲ ತೃಪ್ತಿಗೆ
ಇಟ್ಟವು ಕಚಗುಳಿ ಬೀದಿ ಕಣ್ಣುಗಳು !

ಕಾಲೇಜು-ಕಚೇರಿ-ಮಾರುಕಟ್ಟೆಗೆ
ತೆರೆದಿದೆ ವ್ಯಾನಿಟಿ ಬ್ಯಾಗಿಗೆ 
ಪುಟ್ಟ ನವಿಲುಗರಿ ಕನ್ನಡಿ ಕಣ್ಣು !
ಛೇ... ಬೆರಗು ಬೆಚ್ಚಿದೆ ಸೆರಗು
ತುಂಟ ಗಾಳಿಗೆಷ್ಟು ಪೊಗರು ?!
ನಾಚಿ ಹಣೆ ನೆಕ್ಕಿ ಮುಂಗುರುಳು !



ಅದೇಷ್ಟು ಜನರು ಮನೆಗೆ
ಹೂವ ಚೆಲ್ಲಿದರು ಹಸೆಮಣೆಗೆ
ಹೊರಡುವಾಗ... ಅಮ್ಮನ ಕನ್ನಡಿಗೆ
ಹೂವಿನ ಮಗಳದ್ದೇ ಕಣ್ಣೀರು..!

ಮಾಂಗಲ್ಯದ ಕಣ್ಣ ಕನ್ನಡಿಯಲಿ 
ಅವನು ಕ್ರಾಪು ಬಾಚುತ್ತಲೇ ಇದ್ದ
ತನ್ನದೇ ಫ್ರಾಕಿನ ಬಾಲೆಗೆ
ಇವಳು ಮುಡಿಸುತ್ತಿದ್ದಳು ಗುಲಾಬಿ 
ಅವಳದೇ ಕನ್ನಡಿ ಕಣ್ಣಲಿ !
-ರವಿ ಮೂರ್ನಾಡು.

2 ಕಾಮೆಂಟ್‌ಗಳು:

  1. ಹೆಣ್ಣು ಮಗಳ ಬಾಲ್ಯಾವಸ್ಥೆಯಿಂದ ವಿವಾಹದವರೆಗೂ ಎಂತ ಸೊಗಸದ ಚಿತ್ರ ಕಟ್ಟಿಕೊಟ್ಟಿದ್ದೀರ ಸಾರ್.

    ಆಕೆ ಕೆಲವು ಹೇಳಿಕೊಳ್ಳ ಬಲ್ಲಳು ಕೆಲವು ಇಲ್ಲ. ಅವೆಲ್ಲ ಕ್ರೋಡೀಕರಿಸಿದಂತಿದೆ ಈ ಕವನ.

    ವಸ್ತುವಿನ ಆಯ್ಕೆ, ಪ್ರಸ್ತುತಿ ಮತ್ತು ಭಾಷಾ ಬಳಕೆ ಎಲ್ಲವೂ ಅಮೋಘ.

    ಪ್ರತ್ಯುತ್ತರಅಳಿಸಿ
  2. ಅಮ್ಮನ ಕಣ್ಣಲ್ಲಿ ಹವಳವಾಗಿ ಹೊಳೆದ ಹೆಣ್ಣುಮಗಳು ತನ್ನಂತಹ ಮತ್ತೊಂದು ಹವಳಕ್ಕೆ ಜನ್ಮ ನೀಡಿ ನಕ್ಕ ಮನ ಮಿಡಿಯುವ ವಸ್ತುವನ್ನು ಚೆನ್ನಾಗಿ ಒಪ್ಪ ಓರಣಗೊಳಿಸಿದ್ದೀರಿ ರವಿಯಣ್ಣ.. ಉಪಮೆಗಳು ನಿಸ್ವಾರ್ಥ ಹೆಣ್ಣಿನ ಜನುಮದ ಸಾರ್ಥಕತೆಯ ಸ್ಥೂಲ ಚಿತ್ರಣ ನೀಡಿದೆ.. ಮನಗೆದ್ದ ಕವಿತೆ..:)))

    ಪ್ರತ್ಯುತ್ತರಅಳಿಸಿ