ಭಾನುವಾರ, ಜುಲೈ 8, 2012

ಆ ಕಲೆಗಾರ....



ರೇಖೆ ಎಳೆದಿದೆ
ನಗುವಿದ್ದರೆ….
ಕಣ್ಣ ತುಂಬಿಸಿ ಬಣ್ಣ !
ಇಲ್ಲದಿರೆ….
ಹನಿ ತುಂಬಿಸಿ
ಕಪ್ಪು-ಬಿಳುಪೇ ಚೆನ್ನ..!

ಗೀಚಿ ಎದೆಗೆ
ಆಳದಷ್ಟಗಲ ಒಳಗೆ
ತಿಕ್ಕಿ ಜೀವದ ಬೆನ್ನಿಗೆ
ಅದ್ದಿ ಕುಂಚಕೆ ಬಿಕ್ಕಿಸಿ ನೀರಿಗೆ
ಹಾಳೆ ಚಪ್ಪರಿಸಿದೆ ನಾಲಗೆ
ಉಪ್ಪಿದೆ ಎಂದಿದೆ !

ಸತ್ತಿಲ್ಲವೋ ಸತ್ತಂತೆ
ಬಿಟ್ಟ ಜೀವ ರೇಖೆಯ ಹೆಜ್ಜೆಗೆ
ಚಿತ್ರಣ…..
ಹೋದ ಯಾತ್ರೆಯ
ಮೇಲೂ ಗೀಚುಗಳ
ನಿಲ್ಲದ ಎಳೆತಗಳ ಗಾಯನ !

ಕನಸು ಅವುಚಿದ ಚಿತ್ರಕೆ
ಬಣ್ಣ ಎದ್ದಿದೆ ಆರ್ಭಟ
ಎಚ್ಚರಕೆಕುಂಚ ಕೇಳಿದೆ
ಮೆಲ್ಲಗೇ….
ರೇಖೆ ಮಲಗಿದೆಯೋ ..!?

ಮತ್ತಷ್ಟು ಮೆತ್ತಗೆ ಚಿಕ್ಕೆ
ಖಾಲಿ ಚುಕ್ಕಿ ಹಾಳೆಗೆ
ಸಾಕೇ…….?!!
ನಾನಿನ್ನು ಹೊರಟಿದ್ದೇನೆ
ಕನಸು ಬೆಚ್ಚಗಿದೆ ರೇಖೆಗೆ !
----------------------------------
-ರವಿ ಮೂರ್ನಾಡು.

3 ಕಾಮೆಂಟ್‌ಗಳು:

  1. ಕವನದ ಅರಂಭವೇ ರಸ ಭಾವಕ್ಕೆ ತಕ್ಕ ವರ್ಣಾಲಂಕಾರ. ಹರುಷದಲಿ ತುಂಬುದ ಬಣ್ಣದೋಕುಳಿ, ಅತ್ತಾಗ ಉಳಿವುದದೇ ನಿಜ ಕಪ್ಪು ಬಿಳುಪು!

    ನಿಜ ಹೋದ ಮೇಲೂ ಎಲ್ಲಿ ನಿಲ್ಲುತ್ತವೆ ಎಳೆತಗಲ ಗಾಯ? ಬೇಜಿದ್ದರೂ, ಬೇಡದಿದ್ದರೂ. ಅಸಲು ತಡೆಯುವವರ್ಯಾರು ಹೋದ ಮೇಲೆ?

    ಒಂದು ಅದ್ಭುತ ಕವಿತೆ ತೆರೆದುಕೊಳ್ಳುತ್ತಾ ತೆರೆದುಕೊಳ್ಳುತ ಮನಸ್ಸನ್ನು ಆವರಿಸುವ ಪರಿ ಇದೆಯಲ್ಲ ಅದೇ ಅದರ ಮೂರ್ತತೆ. ಒಳ್ಳೆಯ ಕವನ ಸಾರ್.

    ಪ್ರತ್ಯುತ್ತರಅಳಿಸಿ
  2. ನಾನಿನ್ನು ಹೊರಟಿದ್ದೇನೆ,ಕನಸು ಬೆಚ್ಚಗಿದೆ ರೇಖೆಗೆ.........ಸುಂದರ ಸಾಲುಗಳು,ವಿನೂತನ ಪ್ರಯೋಗ.ನಿಮ್ಮ ಕವಿತೆಗಳನ್ನು ಓದಿದಷ್ಟು ಮನಸಿನ ಜ್ಞಾನ,ಚಿಂತನೆಯ ಹರವು ಹೆಚ್ಚಾಗುವುದು.

    ಪ್ರತ್ಯುತ್ತರಅಳಿಸಿ
  3. ಹೋದ ಯಾತ್ರೆಯ ಮೇಲೂ ಗೀಚುಗಳ ನಿಲ್ಲದ ಎಳೆತ ಗಳ ಗಾಯನ ...ಅಧ್ಭುತವಾದ ಸಾಲುಗಳು .ಹಾರ್ದಿಕ ಅಭಿನಂದನೆಗಳು .

    ಪ್ರತ್ಯುತ್ತರಅಳಿಸಿ