ಸೋಮವಾರ, ಡಿಸೆಂಬರ್ 19, 2011

ಹಗಲು-ರಾತ್ರಿಯ ಪ್ರಶ್ನೆ



ಅವಳು ಗೆಳತಿಗೆ ಹೇಳುತ್ತಿದ್ದಳು
ದಪ್ಪ ಮೀಸೆ- ಉಬ್ಬಿದ ಎದೆಯ
ಕಪ್ಪು ಕಂಗಳ ಹುಡುಗ
ಕನಸ ಚಿಟ್ಟೆಯ ಹಿಡಿದು ಕರೆಯುತ್ತಿದ್ದಾನೆ
ಕತ್ತಲು ತಬ್ಬುವ ಮೊದಲು ಹೋಗಿ ಬಿಡಲೇ?

ಮತ್ತೇರಿಸುವ ಮೈಬೆವರು
ಉಬ್ಬಿ ಅರಳಿದ ಮೂಗು
ಪ್ರತೀ ನೋಟದ ಮಧುರ ಸಾಲು
ಗೆಳತೀ....
ಹೊತ್ತು ಸಾಯುವ ಮೊದಲು
ಅವನೊಳಗೆ ಬಂಧಿಯಾಗಲೇ?

ವಯಸ್ಸಿನ ಕೆರೆತ- ಮೈಯೆಲ್ಲ ಹುತ್ತ
ಸಾಕೆನಿಸದ ಸುರುಳಿ ಬಳ್ಳಿಯ ಕನಸು
ತೃಪಿಯೇ ಇಲ್ಲದ ರಸ್ತೆಗಳಿಗೆ
ರಾತ್ರಿಯಲ್ಲೂ ಪಹರೆ ಕೆಲಸ
ಗೆಳತಿ ಕೇಳುತ್ತಾಳೆ...
ಗೊತ್ತಿದೆಯೇ ಅವನಿಗೆ
ಹಗಲು- ರಾತ್ರಿಯ ವ್ಯತ್ಯಾಸ?

ಇಲ್ಲ, ಇಲ್ಲವೇ ಇಲ್ಲ
ಮನುಷ್ಯ ಸುಖದ ಗುಲಾಮ
ದುಃಖ್ಖವೇ ಅವನ ಚಾಕರಿ
ಜವ್ವನೆಯ ಯೌವ್ವನದ ಬದುಕು
ಬಾಚಿ ತಬ್ಬುವ ಕತ್ತಲು
ಬೊಗೆಸೆಯಷ್ಟು ಬೆಳಕು
ಹಿಂಡಿ ತೆಗೆಯುವಷ್ಟು ನಗು

ಅವಳಿಗೆ ಅವನದೇ ಪ್ರತಿಬಿಂಬ
ಭಾವನೆಗಳು ಒಡೆದ ಗಾಜಿನ ಚೂರು
ಪ್ರೇಮವೇ ಇಲ್ಲದ ಮಾತು
ಕಾಮದ ಇನ್ನೊಂದು ಮನಸ್ಸು
ಜ್ವಾಲಾಮುಖಿ-ದಾಹ-ಹಸಿವು
ಅಲೆಗಳ ಬಡಿತ-ಕರಗುವುದಿಲ್ಲ ಬಂಡೆ
ಕಣ್ಣೀರಿಗೆ ಕಡಲೇ ದಾಖಲೆ

ಹಗಲು-ರಾತ್ರಿಯ ಪ್ರಶ್ನೆಗೆ
ಅವರವರ ಬದುಕು ಉತ್ತರ
ಅವಳಿಗೆ ಇವಳು ಪ್ರಶ್ನೆ
ಬಿರುಗಾಳಿಯೊಂದು ಬೀಸಿದಾಗಲೆಲ್ಲಾ
ಇಬ್ಬರೊಳಗೆ ಚಿಗುರಿದ ಮೋಹದ ಬಳ್ಳಿ
ಗಟ್ಟಿ ಮರವೊಂದನ್ನು ತಬ್ಬಿಕೊಳ್ಳುತ್ತದೆ
--------------------------------
-ರವಿ ಮೂರ್ನಾಡು
 ರೇಖಾ ಚಿತ್ರ: ದಿನೇಶ್ ಕುಕ್ಕುಜಡ್ಕ,ಸುಳ್ಯ.

4 ಕಾಮೆಂಟ್‌ಗಳು:

  1. ಮಾನವನ ಅನಿವಾರ್ಯ ಕರ್ಮ ಜೀವನ ಯಾತ್ರೆ ರವಿಯಣ್ಣ.

    ಪ್ರೇಮರಾಹಿತ್ಯಕ್ಕಿಂತಲೂ ಸಾವೇ ಲೇಸು. ಗೆಳತಿ ಇಲ್ಲಿ ಲಗಾಮು, ಅವನೆಂಬ ಗಮ್ಯದ ಕಡೆ ಓಡಲು ಕಾಯುತ್ತಿರುವ ಅವಳು ಕುದುರೆ! ಈ ಮೂರು ತಂತಿಗಳನ್ನು ಪ್ರೇಮ- ಕಾಮ- ಸಂಯಮ ಬಿಂದುಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದೀರ.

    ನಮ್ಮ ನಡುವಿನ ಪ್ರಖರ ಕವಿ ನೀವು, ಈ ಕವನ ನಿಮ್ಮ ಪ್ರತಿಭೆಗೆ ಕನ್ನಡಿ. ಭಾಷೆಯನ್ನು ಸಲೀಸಾಗಿ ಬಗ್ಗಿಸಿ ಬಳಸುತ್ತೀರಿ. ಹೇಳ ಬೇಕಾದ್ದನ್ನು ಮನ ಮುಟ್ಟುವಂತೆ ಬರೆದುಕೊಡುತ್ತೀರಿ.

    ಪ್ರತ್ಯುತ್ತರಅಳಿಸಿ
  2. ಮನುಷ್ಯ ಸಹಜ ಗುಣಗಳನ್ನು ಅದೆಷ್ಟು ನಾಜೂಕಾಗಿ ಚಿತ್ರಿಸಿ ಬಿಡುತ್ತಿರಿ ಸರ್...
    ಅವನು-ಇವಳು..ಹಗಲು-ರಾತ್ರಿ ಒಂದಕ್ಕೊಂದು ಬೆಸೆದು ಕೊಂಡು ಸೊಗಸಾಗಿ ಮೂಡಿಬಂದಿದೆ.
    ನೀವು ಕವನಿಸುವ ಪರಿಯೇ ಅದ್ಭುತ ಸರ್..
    ಬಹಳ ಇಷ್ಟವಾಯ್ತು .....

    ಪ್ರತ್ಯುತ್ತರಅಳಿಸಿ
  3. >> " ವಯಸ್ಸಿನ ಕೆರೆತ- ಮೈಯೆಲ್ಲ ಹುತ್ತ
    ಸಾಕೆನಿಸದ ಸುರುಳಿ ಬಳ್ಳಿಯ ಕನಸು
    ತೃಪಿಯೇ ಇಲ್ಲದ ರಸ್ತೆಗಳಿಗೆ
    ರಾತ್ರಿಯಲ್ಲೂ ಪಹರೆ ಕೆಲಸ
    ಗೆಳತಿ ಕೇಳುತ್ತಾಳೆ...
    ಗೊತ್ತಿದೆಯೇ ಅವನಿಗೆ
    ಹಗಲು- ರಾತ್ರಿಯ ವ್ಯತ್ಯಾಸ?" <<
    ತುಂಬಾ ಇಷ್ಟವಾದ ಸಾಲುಗಳು ಮೂರ್ನಾಡರೇ. ಕವಿತೆ ಇಷ್ಟವಾಯಿತು :-)

    ಪ್ರತ್ಯುತ್ತರಅಳಿಸಿ
  4. ರವಿಯಣ್ಣ ಅದ್ಭುತವಾದ ಕವಿತೆ.. ಓದುತ್ತಾ ಹೋದಂತೆ ಸೂಕ್ಷ್ಮವಾಗಿ ಬಿಚ್ಚುಕೊಳ್ಳುತ್ತಾ ಸಾಗುತ್ತದೆ ಕವಿತೆ.. ಸೂಕ್ಷ್ಮವಿಷಯವನ್ನು ವಸ್ತುವಾಗಿ ತೆಗೆದುಕೊಂಡು ಅದಕ್ಕೆ ಅತಿಯೆನಿಸದಂತೆ ಭಾವ ತುಂಬುವಾಗಿನ ನಿಮ್ಮ ನಾಜೂಕಿನ ನಿರೂಪಣೆ ಯುವ ಕವಿಗಳಿಗೆ ಸ್ಪೂರ್ತಿಯನ್ನು ತುಂಬುತ್ತಾ ಸಾವಿರಾರು ಕವಿತೆಗಳ ಉಗಮಕ್ಕೆ ನಾಂದಿಯಾಡಬಲ್ಲದು.. ಮನದಲ್ಲಿ ಮೂಡಿ ನಿಲ್ಲುವ ಭಾವಗಳ ಒಡಲಾಳದ ಅರ್ಥಗಳನ್ನು ಸೂಕ್ಷ್ಮವಾಗಿ ಬಿಡಿಸಿಡುವ ಪ್ರಯತ್ನವಾಗಿದೆ ಈ ಕವಿತೆ.. ಹೆಣ್ಣಿನ ಮನದಲ್ಲಿನ ಕಾಮದ ವಾಂಛೆಯನ್ನು ಓದುಗರ ಹೃದಯಗಳಿಗೆ ಸಹ್ಯವೆನಿಸುವ ಶೈಲಿಯಲ್ಲಿ ಬಿಡಿಸಿಟ್ಟಿರುವ ಬಗೆ ಅದ್ಭುತ.. ಕವಿತೆಯಲ್ಲಿನ ಸೂಕ್ಷ್ಮಾರ್ಥಗಳನ್ನು ಬಿಡಿಸಲು ಪ್ರಯತ್ನಿಸಿದಷ್ಟು ಮತ್ತೆ ಕಗ್ಗಂಟಾಗಿ ಮನದಲ್ಲಿ ಸವಿರಾರು ಪ್ರಶ್ನೆಗಳನ್ನು ಹುಟ್ಟುಹಾಕಬಲ್ಲದು ಕವಿತೆ.. ಉತ್ಕೃಷ್ಟವಾದ ಕವಿತೆ ರವಿಯಣ್ಣ, ನಿಮ್ಮ ನಿರೂಪಣೆಗೆ ಸಿಕ್ಕು ಇನ್ನಷ್ಟು ಹರಿತವಾಗಿ ತೀಕ್ಷ್ಣತೆ ಪಡೆದಿದೆ..

    ಪ್ರತ್ಯುತ್ತರಅಳಿಸಿ