ಭಾನುವಾರ, ಡಿಸೆಂಬರ್ 11, 2011

ಆ ಪುಸ್ತಕದ ರಾಶಿಯಲ್ಲಿ ಭಿಕರಿಯಾದ ಕನಸುಗಳು


ಬನ್ನಿ ಸಾರ್  ಬನ್ನಿ...! ಉತ್ತಮ ಪುಸ್ತಕಗಳು ನನ್ನಲ್ಲಿದೆ. 20 ರೂಪಾಯಿಗೆ 30 ಪುಸ್ತಕಗಳು ಕೊಂಡುಕೊಳ್ಳಬಹುದು. ಹಾಗಂತ,ಆ ಹುಡುಗ ಸಾಹಿತ್ಯ ಪುಸ್ತಕ ಕೊಂಡುಕೊಳ್ಳಿ ಅಂತ ಅಂಗಲಾಚಿದ. ಪುಸ್ತಕದ ರಾಶಿಗಳು ಹತ್ತು ಹಲವು ಆ ರಸ್ತೆಯಲ್ಲಿ ಕರೆಯುತ್ತಿವೆ. ಪುಸ್ತಕ ಮಳಿಗೆ -ಗ್ರಂಥಾಲಯಗಳಲ್ಲಿ ಅಚ್ಚುಕಟ್ಟಾದ ಪೆಟ್ಟಿಗೆಯೊಳಗೆ ಕುಳಿತು ಓದುಗರೊಂದಿಗೆ ಮಾತನಾಡಬೇಕಾದ ಕವಿತೆ-ಕಥೆಗಳು ಮೌನವಾಗಿ ಒಂದರ ಮೇಲೊಂದು ತಬ್ಬಿಕೊಂಡಿವೆ. ಬಿರುಬಿಸಿಲಿಗೆ ಮಲಗಿದ್ದ ಭಾವ ಅನಾಥ ಪ್ರಜ್ಞೆಯನ್ನು ಮೂಡಿಸಿತು ಅನ್ನೋದು ಇನ್ನೊಂದು ಮಾತು. ಆ ರಸ್ತೆ ಬದಿಯ ಕೊನೆಯ ಎಂಟನೇ ಪುಸ್ತಕದ ರಾಶಿಗೆ ನನ್ನ ಕಣ್ಣು ಎಟುಕಿತು. ತುಂಬಾ ಎತ್ತರದ ರಾಶಿಯಾಗಿತ್ತು ಅದು. ಪುಸ್ತಕಕ್ಕೆ ತಲೆಕೊಟ್ಟು ಕಿರುನಿದ್ದೆಗೆ ಜಾರಿದ್ದ ಆ ಮಧ್ಯ ವಯಸ್ಸಿನ ಮಾರಾಟದ ವ್ಯಕ್ತಿಯನ್ನು ಸಣ್ಣಗೆ ಎಬ್ಬಿಸಿ, ಪುಸ್ತಕದ ರಾಶಿಗೆ ಕೈ ಹಾಕಿದ್ದೆ.
ನನ್ನ ಕಣ್ಣು ಪಕ್ಕದ್ದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಂದಮಾಮ ಮತ್ತು  ಬಾಲಮಂಗಳ ಪುಸ್ತಕಗಳ ಮೇಲೆ ಹರಿಯಿತು. ಒಂದನೇ ತರಗತಿಯಿಂದಲೇ ವಿಜ್ಞಾನ-ಲೆಕ್ಕ-ಸಮಾಜಶಾಸ್ತ್ರ ಪುಸ್ತಕಗಳೊಂದಿಗೆ ಶಾಲಾ ಪುಸ್ತಕ ಚೀಲದಲ್ಲಿ  ಜೊತೆಯಲ್ಲೇ ಇರುತ್ತಿದ್ದ ಮುಗ್ಧ ಕನಸುಗಳು ಅಲ್ಲೇ ಮಲಗಿದ್ದವು. ಕಿರೀಟ ತೊಟ್ಟ ರಾಜರು, ಅವರ ರಾಣಿಯರು, ರಾಜಕುಮಾರರು-ರಾಜಕುಮಾರಿಯರು,ಮಾತು ಮಾತಿಗೆ ಎದ್ದು ನಿಲ್ಲುತ್ತಿದ್ದ ವಿಕ್ರಮಾಧಿತ್ಯ-ಬೇತಾಳರು ಅದರೊಳಗಿದ್ದರು. ನನ್ನ ನಿದ್ದೆಯ ಕನಸಿನಲ್ಲಿ ಬಂದು ಕೈ ಹಿಡಿದು ಗಾಳಿಯಲ್ಲಿ ತೇಲಿಸುತ್ತಿದ್ದ  ಬಾಲ ಮಂಗಳದ "ಡಿಂಗ" ಅಲ್ಲಿದ್ದರು. ತರಗತಿಯ ಪುಸ್ತಕಗಳನ್ನು ಮರೆತು ಶಾಲೆಯಲ್ಲಿ ಪೆಟ್ಟು ತಿಂದ ನೆನಪುಂಟು. ಕನಸುಗಳ ಒಡನಾಡಿಯಾಗಿದ್ದ ಚಂದಮಾಮ- ಬಾಲಮಂಗಳ ಮರೆತ ದಿನಗಳ ನೆನಪಿಲ್ಲ. ಮೇಷ್ಟ್ರು ಪಾಠ ಮಾಡುತ್ತಿದ್ದಾಗಲೂ ಕದ್ದುಮುಚ್ಚಿ ಓದುತ್ತಿದ್ದ ಆನಂದ ಅಲ್ಲಿದ್ದವು. ಈ ಬಾಲ ಸಾಹಿತ್ಯ ಪುಸ್ತಕಗಳು ಈಗಲೂ ನನ್ನೊಂದಿಗೆ ಇವೆ. ಹಾಗಂತ ಇನ್ನಷ್ಟು ಒಟ್ಟು ಸೇರಿಸಲು ಅಲ್ಲಿದ್ದ  50  ಕ್ಕೂ ಮಿಕ್ಕಿದ ಚಂದಮಾಮ- ಬಾಲಮಂಗಳ ಪುಸ್ತಕಗಳನ್ನು ಬಗಲಿಗೆ ಸೇರಿಸಿದ್ದೆ. ಮತ್ತಷ್ಟು ಪುಸ್ತಕಗಳ ಹುಡುಕಾಟಕ್ಕೆ ಬೆರಳುಗಳು ಮುಂದೆ ಹರಿಯ ತೊಡಗಿದವು.
ಇದು ನಡೆದದ್ದು 2005 ರ ಅಕ್ಟೋಬರ‍್ ತಿಂಗಳಲ್ಲಿ. ಬೆಂಗಳೂರಿನ ಮೆಜೆಸ್ಟಿಕ್‍ನ ಆ ಗಲ್ಲಿಗಳಿಗೆ  ಹೆಜ್ಜೆಗಳು ಸವೆಯುತ್ತಿದ್ದಾಗ, ಈ ರಸ್ತೆ ಬದಿಯ ಪುಸ್ತಕಗಳು ಕರೆದಿದ್ದವು. 50 ಪುಸ್ತಕವನ್ನು ಒಟ್ಟು ಸೇರಿಸುವ ಇರಾದೆ ನನ್ನದು. ಆ ರಾಶಿಯಿಂದ ಒಂದೊಂದೆ ಆಯ್ಕೆ ಮಾಡಿ ಮಡಿಲಿಗಿಟ್ಟೆ. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗರು ಎದೆ ಬಿಚ್ಚಿ ನಕ್ಕ  ಗುರುತು ಹಿಡಿದಿದ್ದೆ. ಮಲ್ಲಿಗೆಯ ಕವಿ ನರಸಿಂಹ ಸ್ವಾಮಿಯವರ ಕಪ್ಪು ಕಾಡಿಗೆಯ ಮಾತುಗಳು ಎದೆ ತುಂಬಿದ್ದವು. ಜಿಎಸ್‍ಎಸ್‍ರವರ ಅಹಂನ್ನು ಮೆಟ್ಟಿ ಬಿರುಕಿಟ್ಟ ಗೋಡೆಗೆ ಹಚ್ಚಿದ ದೀಪಗಳಿದ್ದವು. ಎಲ್ಲವೂ ನನ್ನ ಮಡಿಲಿನಲ್ಲಿ ಸೇರಿಸುತ್ತಿದ್ದಾಗಲೇ ವ್ಯಾಪಾರಿ ಮಾತಿಗಿಳಿದ,
"ಸಾರ್ ! ನನ್ನಲ್ಲಿ ಒಟ್ಟು 800  ಪುಸ್ತಕವಿದೆ. ಒಂದು 500  ರೂಪಾಯಿಗೆ ಎಲ್ಲವನ್ನು ಕೊಟ್ಟು ಬಿಡುತ್ತೇನೆ ಅಂದ.
"ಇಲ್ಲಪ್ಪ, ಇದರಲ್ಲಿ ಬೇರೆ ಬೇರೆ ಪುಸ್ತಕಗಳಿವೆ.ನನಗೆ ಸಾಹಿತ್ಯ ಮಾತ್ರ ಸಾಕು. ಹುಡುಕುತ್ತಿದ್ದೇನೆ. ಮುಗಿದ ಮೇಲೆ ಹೇಳುತ್ತೇನೆ" ಅಂದೆ. ಇನ್ನಷ್ಟು ಪುಸ್ತಕಗಳನ್ನು ತನ್ನ ಇನ್ನೊಂದು ಚೀಲದಿಂದ ತೆಗೆದು ಸುರಿದಿಟ್ಟ.
ಒಂದೊಂದೇ ಪುಸ್ತಕಗಳನ್ನು ಆಯ್ದು ಪರಿಶೀಲಿಸಿದಾಗ ನನ್ನ ಪರಿಚಯಸ್ಥ ಮುಖಗಳ ಹೆಸರುಗಳೇಷ್ಟೋ ನನ್ನ ಬೆರಳಿಗೆ ಸ್ಪರ್ಶಿಸಿದವು. ನಾಡಿನಾದ್ಯಂತ ಕವಿಗೋಷ್ಠಿ, ಸಾಹಿತ್ಯಗೋಷ್ಠಿಯಲ್ಲಿ ಪರಿಚಯವಾದ ಅದೆಷ್ಟೋ ಕವಿ-ಕವಯತ್ರಿಯರ ಪುಸ್ತಕಗಳನ್ನು ಅಲ್ಲಿ ನೋಡುವಾಗ, ಬೀದಿಯಲ್ಲಿ ಅವರನ್ನು ಮಾತಾಡಿಸಿದಂತೆ ಅನ್ನಿಸಿತು. ಕೆಲವರು ಬದುಕನ್ನೇ ಪದವಾಗಿಸಿದವರು, ಕೆಲವರು ಕನಸುಗಳನ್ನೇ ಮಾಲೆ ಕಟ್ಟಿದವರು ಅಲ್ಲಿ ಆ ರಸ್ತೆ ಬದಿಯ ರಾಶಿಯಲ್ಲಿ ಬಿದ್ದಿದ್ದರು. ಒಂದಷ್ಟು ಅವರುಗಳ ಪುಸ್ತಕಗಳನ್ನು ಆಯ್ದುಕೊಂಡೆ. ವ್ಯಾಪಾರಿ ಸುರಿದ ಇನ್ನೊಂದು ಚೀಲದ ಸುಮಾರು 200 ರಷ್ಟಿದ್ದ ಪುಸ್ತಕದ ರಾಶಿಗೆ ಕೈ ಹಾಕಿದ್ದೆ. ಒಂದು 50 ಪುಸ್ತಕಗಳನ್ನು ಮಗುಚಿದ ನಂತರ ಸಿಕ್ಕಿದ್ದೆ ಬೇರೆ ಪುಸ್ತಕ. ಬದುಕಿನಲ್ಲಿ ಮರೆಯಲಾಗದ ಪುಸ್ತಕ ಅದು..!
ಅಲ್ಲಿ ನಾನೇ ಮಲಗಿದ್ದೆ. ಸವಿದ ಹಲವು ಕ್ಷಣಗಳನ್ನು ಪದಗಳ ಕುಂಚದಲ್ಲಿ ಅದ್ದಿದ್ದ ನನ್ನ ಕನಸುಗಳು. ನಾನೇ ಬೆಳೆಸಿದ ಮಗು. ಅಲ್ಲಿ ನನಗಾಗಿ ಹಸಿದಂತೆ ಮಲಗಿತ್ತು. ಹೌದು..! ಅದು " ಹಗಲು-ರಾತ್ರಿಯ ರೆಕ್ಕೆ". ನನ್ನದೇ ದಿನಗಳಿಗೆ ಹಗಲಿಗೊಂದು ರೆಕ್ಕೆ, ರಾತ್ರಿಗೊಂದು ರೆಕ್ಕೆ ಬೆಳೆಸಿ ಈ ಕನಸಿನ ಲೋಕದಲ್ಲಿ ಮೂಕವಾಗಿ ಹಾರಿದ ಹಕ್ಕಿ. ನನ್ನ ಕೈಗೆ ಬಂದೊಡನೆ ಪಟಪಟ ರೆಕ್ಕೆ ಬಡಿದಂತೆ ಭಾಸವಾಯಿತು. ಪಕ್ಕನೇ ಎಳೆದು ಅದರ ಮೈ ಸವರ ತೊಡಗಿದೆ. ಅಲ್ಲಲ್ಲಿ ಮಾಸಿತ್ತು. ಏನೋ ಸಿಕ್ಕಿದ ಜೀವ  ಒಂದೇ ಸಾರಿಗೆ ಪುಟಗಳನ್ನು ಮಗುಚಿದೆ. ಅಲ್ಲಿ ಚಿಂದಿ ಆಯುವ ಹುಡುಗ ನಿಂತಿದ್ದ, ಗಡ್ಡ ಬಿಟ್ಟ ಭಿಕ್ಷುಕ ಅಲ್ಲಿದ್ದ, ಯಾರೋ  ಕಸದ ತೊಟ್ಟಿಗೆ ಬಿಸುಟ ಅನಾಥ ಮಗು ಬೆಳೆದು ದೊಡ್ಡವಳಾದ ಕುರುಹು ಇತ್ತು. ಕೃಷ್ಣನ ಹದಿನಾರು ಸಾವಿರ ಹೆಂಡತಿಯರನ್ನು ಜಾತಿ-ಜಾತಿಯ ಹೆಸರಿನಲ್ಲಿ ದೇಶದ ಗಲ್ಲಿ ಗಲ್ಲಿಗಳಲ್ಲಿ ಕುಳ್ಳಿರಿಸಿದ್ದು ಅಲ್ಲಿ ಸತ್ಯ ಅನ್ನುತ್ತಿತ್ತು. ನನ್ನದೇ ಪುಸ್ತಕ. ಬೊಗಸೆಯಲ್ಲಿ ಹಿಡಿದು ಎದೆಗೆ ಅವುಚಿಕೊಂಡೆ. ಎಷ್ಟೋ ವರ್ಷಗಳಿಂದ ತಪ್ಪಿಸಿಕೊಂಡ ಮಗು ಸಿಕ್ಕಿದ ಸಂತಸ. ಅದು ಅಚಾನಕ್ಕಾಗಿ ಯಾವುದೋ ದಿಕ್ಕಿಲ್ಲ ರಸ್ತೆ ಬದಿಯಲ್ಲಿ. ಕಣ್ಣೀರು ಬಳಬಳನೇ ಸುರಿಯ ತೊಡಗಿತು.
ನನ್ನ ಮುಖ ನೋಡಿ ಗಲಿಬಿಲಿಗೊಂಡವನಂತೆ ವ್ಯಾಪಾರಿ ಕೇಳಿದ " ಏಕೆ ಸಾರ್ ಅಳುತ್ತಿದ್ದೀರ?" ಅದು ಯಾರ ಪುಸ್ತಕ?".
ಒಂದು ನಿಮಿಷ ಸುಮ್ಮನಿದ್ದು ಅವನಲ್ಲಿ ಪ್ರಶ್ನಿಸಿದ್ದೆ. ಈ ಪುಸ್ತಕವನ್ನು ಯಾರು ಇಲ್ಲಿ  ನಿಮಗೆ ಕೊಟ್ಟರು?.
"ಇದನ್ನು 4  ತಿಂಗಳ ಹಿಂದೆ ಯಾರೋ ತಂದು ಮಾರಿದರು ಸಾರ್. ಒಟ್ಟು ಹತ್ತು ಪುಸ್ತಕಗಳನ್ನು ಅವರಿಂದ 50 ರೂಪಾಯಿಗೆ ಕೊಂಡುಕೊಂಡೆ" ಅಂದ.
ಆ ಪುಸ್ತಕದಲ್ಲಿ ಅಲ್ಲಲ್ಲಿ ಕೆಲವು ಟಿಪ್ಪಣಿಗಳಿದ್ದವು.ಕೆಲವು ಕಡೆ ಪೂರ್ತಿ ಕವಿತೆಗೇ ಬರೆದಿತ್ತು. ಕೆಲವು ಕಡೆ ಸಾಲುಗಳನ್ನು ಗುರುತಿಸಲಾಗಿತ್ತು.ಏನೇ ಆದರೂ, ಕೆಲವು ಪದಗಳು ಅವರುಗಳ ಎದೆಗೆ ಕುಳಿತಿದೆ ಅಂತ ಸಮಾಧಾನಿಸಿಕೊಂಡೆ.
ಸಧ್ಯ..! ಪುಸ್ತಕ ನನಗೇ ಸಿಕ್ಕಿದ್ದು ಅದೃಷ್ಟ. ಇದು ನಾನು ಬರೆದ ಪುಸ್ತಕ ಅಂತ ವ್ಯಾಪಾರಿಗೆ ತಿಳಿಸಿದೆ. ಅವನು ಅಲ್ಲಿಯವರೆ ಹಲ್ಲು ತೋರಿಸದವನು, ಹಲ್ಕಿರಿದು ನಕ್ಕ.
ಈ ಪುಸ್ತಕಗಳು ಮಾರಾಟವಾಗದಿದ್ದರೆ ಏನು ಮಾಡುತ್ತೀರಿ? ಅಂತ ಮರುಪ್ರಶ್ನೆ ಹಾಕಿದ್ದೆ.
ದಿನಕ್ಕೆ 50 ರೂಪಾಯಿಯ ವ್ಯಾಪಾರ ಆಗೋದೇ ಕಷ್ಟ ಸಾರ್. ಯಾರಾದರೂ ಪುಸ್ತಕಗಳನ್ನು ನಮಗೆ ಮಾರೋದೇ ಹೆಚ್ಚು. ತಿಂಗಳಿಗೊಮ್ಮೆ ದಿನಸಿ ಅಂಗಡಿಗಳಿಗೆ  ಕೇಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತೇವೆ. ಅದರ ಲಾಭದಲ್ಲೇ ನಮ್ಮ ಜೀವನ. ಹೀಗೆ ರಸ್ತೆ ಬದಿಯ ಮಾರಾಟದಲ್ಲಿ ನಮಗೆ ಲಾಭವಿಲ್ಲ. ನಿಮ್ಮಂತವರು ವರ್ಷಕ್ಕೆ ಒಬ್ಬರು ಹೀಗೆ 100-150 ಪುಸ್ತಕಗಳನ್ನು  ಕೊಂಡುಕೊಳ್ಳುತ್ತಾರೆ ಅಂದ.
ಅಬ್ಬಾ..! ದಿನಸಿ ಅಂಗಡಿಗೆ ಕೇಜಿಗೊಂದರಂತೆ ಮಾರಾಟ ಆಗುತ್ತವೆ ಅಂದಾಗ ಏನೋ ದಿಗಿಲು ಪ್ರಾರಂಭವಾಯಿತು. ಆ ವ್ಯಾಪಾರಿಯಿಂದ ಒಟ್ಟು 150 ಪುಸ್ತಕಗಳನ್ನು ಕೊಂಡು ಅಲ್ಲಿಂದ ಕಾಲ್ಕಿತ್ತೆ...
-ರವಿ ಮೂರ್ನಾಡು.
-------------------------------------------------

ಅವಧಿ ಮಾಗ್:
ಹಗಲು-ರಾತ್ರಿಯ ರೆಕ್ಕೆ
-ರವಿ ಮೂರ್ನಾಡು.

4 ಕಾಮೆಂಟ್‌ಗಳು:

 1. ರವಿ ಸರ್;ಮನ ಮಿಡಿಯುವ ಅನುಭವ ಕಥನ.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

  ಪ್ರತ್ಯುತ್ತರಅಳಿಸಿ
 2. ಮನ ಮುಟ್ಟಿತು ಲೇಖನ.. ನಿಮ್ಮ ಪುಸ್ತಕ ಓದುವ ಆಸೆಯಾಗಿದೆ ಈಗ..

  ಪ್ರತ್ಯುತ್ತರಅಳಿಸಿ
 3. ಕನ್ನಡ ಪುಸ್ತಕಗಳ ದುರವಸ್ಥೆಯ ಮನಮುಟ್ಟುವ ಬರಹ. ಯಾರಿಗೋ ಹಂಚಲು ಕೊಟ್ಟ ಪುಸ್ತಕಗಳೂ ಹೀಗೆ ಬೀದಿ ಬದಿಯಲ್ಲೇ ಅರಕಾಸಿಗೆ ಮಾರಾಟವಾಗಿ, ಅದೂ ನಿಮ್ಮ ಕೈಗೆ ಸಿಕ್ಕಿದ್ದು ನನಗೂ ನೋವು ಕೊಟ್ಟಿತು.

  ಪ್ರತ್ಯುತ್ತರಅಳಿಸಿ
 4. ಅಯ್ಯಪ್ಪಾ.. ಮನಮುಟ್ಟುವ ಲೇಖನ ರವಿ ಸರ್.. ಕಣ್ಣಾಲಿಗಳಲ್ಲಿ ನೀರು ಮೂಡಿದವು .. ನಾನೂ ಒಂದು ಪುಸ್ತಕ ಬರೆಯಬೇಕು ಎಂಬ ಭ್ರಮೆಯಲ್ಲಿದ್ದೆ ಇಷ್ಟು ದಿನ. ಆದರೆ ಇಂದಿನ ವಾಸ್ತವದ ಅರಿವಾಗುವಂತೆ ಮಾಡಿದಿರಿ . ಧನ್ಯವಾದಗಳು :-)

  ಪ್ರತ್ಯುತ್ತರಅಳಿಸಿ